ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಡಾ. ಕೆ. ಶಿವರಾಮ ಕಾರಂತ ಲೇಔಟ್‌ನ ನಿವೇಶನಗಳ ದರವನ್ನು ಪ್ರತಿ ಚದರಡಿಗೆ ₹6,000ಕ್ಕೆ ಹೆಚ್ಚಿಸಿದೆ. ಈ ದರ ಏರಿಕೆಯಿಂದ 30x40 ಅಡಿ ನಿವೇಶನದ ಬೆಲೆ ₹72 ಲಕ್ಷಕ್ಕೆ ತಲುಪಿದ್ದು, ಇದು ಮಧ್ಯಮ ವರ್ಗದ ಮನೆ ಆಕಾಂಕ್ಷಿಗಳಿಗೆ ದೊಡ್ಡ ಆರ್ಥಿಕ ಹೊರೆಯಾಗಿದೆ.

ಬೆಂಗಳೂರು (ಜು.28): ರಾಜಧಾನಿಯ ನಿವಾಸಿಗಳು ಕಾತರದಿಂದ ಕಾಯುತ್ತಿದ್ದ ಡಾ. ಕೆ. ಶಿವರಾಮ ಕಾರಂತ ಲೇಔಟ್‌ನ ವಸತಿ ನಿವೇಶನಗಳ (ಸೈಟ್) ದರವನ್ನು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಚದರಡಿಗೆ ₹6,000ಕ್ಕೆ ಹೆಚ್ಚಿಸಿದೆ. ಇದು ಸುಮಾರು ಮೂರು ವರ್ಷಗಳ ಹಿಂದೆ ಪ್ರಸ್ತಾಪಿಸಲಾಗಿದ್ದ ದರಕ್ಕಿಂತ ಚದರಡಿಗೆ ₹1,000ದಷ್ಟು ಏರಿಕೆಯಾಗಿದೆ. ಸದ್ಯ ಈ ಪ್ರದೇಶದಲ್ಲಿರುವ ಮಾರುಕಟ್ಟೆ ದರಕ್ಕಿಂತ ಬಿಡಿಎ ನಿಗದಿಪಡಿಸಿರುವ ಪರಿಷ್ಕೃತ ದರ ಕಡಿಮೆಯಿದ್ದರೂ ಸಹ, ಈ ಭಾರಿ ಬೆಲೆ ಏರಿಕೆಯು ಮಧ್ಯಮ ವರ್ಗದ ಮನೆ ನಿರ್ಮಾಣ ಆಕಾಂಕ್ಷಿಗಳಿಗೆ ಜೇಬು ಸುಡುವಂತೆ ಮಾಡಲಿದೆ. ಮಧ್ಯಮ ವರ್ಗದ ಜನರಿಗೆ ಕಡಿಮೆ ದರದಲ್ಲಿ ನಿವೇಶನ ಒದಗಿಸುವ ಉದ್ದೇಶದಿಂದಲೇ ಸ್ಥಾಪಿತವಾಗಿರುವ ಬಿಡಿಎಯ ಈ ನಿರ್ಧಾರ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

30x40 ಸೈಟ್ ಬೆಲೆ ₹72 ಲಕ್ಷಕ್ಕೆ ಏರಿಕೆ!

ದರ ಪರಿಷ್ಕರಣೆಯ ಪರಿಣಾಮವಾಗಿ, ಸಾಮಾನ್ಯ 30x40 ಅಡಿ (1,200 ಚದರಡಿ) ಅಳತೆಯ ನಿವೇಶನದ ಬೆಲೆ ಈಗ ಸುಮಾರು ₹72 ಲಕ್ಷ ತಲುಪಲಿದೆ. 2023ರ ಕೊನೆಯಲ್ಲಿ ಬಿಡಿಎ ಈ ದರವನ್ನು ಚದರಡಿಗೆ ₹4,900 ನಿಗದಿಪಡಿಸಿದ್ದಾಗ ಇದೇ ಅಳತೆಯ ಸೈಟ್‌ಗೆ ಸುಮಾರು ₹59 ಲಕ್ಷ ವೆಚ್ಚವಾಗುತ್ತಿತ್ತು. ಅಂದರೆ ಒಂದೇ ಅಳತೆಯ ಸೈಟ್ ಬೆಲೆಯಲ್ಲಿ ಬರೋಬ್ಬರಿ ₹13 ಲಕ್ಷ ಏರಿಕೆಯಾಗಿದೆ.

ಈ ಲೇಔಟ್‌ನಲ್ಲಿ 20x30, 40x60 ಅಥವಾ 50x80 ಅಳತೆಯ ನಿವೇಶನಗಳಿಗಿಂತ 30x40 ಅಳತೆಯ ನಿವೇಶನಗಳ ಸಂಖ್ಯೆಯೇ ಹೆಚ್ಚಾಗಿದೆ ಎಂದು ತಿಳಿದುಬಂದಿದೆ. ಕಾರಂತ ಲೇಔಟ್‌ನಲ್ಲಿ ನಿವೇಶನ ಹಂಚಿಕೆಗೆ ಅರ್ಜಿ ಆಹ್ವಾನಿಸಲು ಕರ್ನಾಟಕ ಹೈಕೋರ್ಟ್ ಬಿಡಿಎಗೆ ಅನುಮತಿ ನೀಡಿದ ಕೆಲವೇ ವಾರಗಳಲ್ಲಿ ಈ ಬೆಲೆ ಏರಿಕೆ ನಿರ್ಧಾರ ಹೊರಬಿದ್ದಿದೆ.

ಎರಡು ಹಂತಗಳಲ್ಲಿ ನಿವೇಶನ ಹಂಚಿಕೆ

"ಭೂಮಿ ನೀಡಿದ ರೈತರಿಗೆ 'ರಾಂಡಮೈಸೇಶನ್' (Randomization) ಆಧಾರದ ಮೇಲೆ ಸುಮಾರು 18,000 ನಿವೇಶನಗಳನ್ನು ಹಂಚಿಕೆ ಮಾಡಲಾಗುವುದು. ಇದಕ್ಕೆ ಅಗತ್ಯವಾದ ತಂತ್ರಜ್ಞಾನ ಸಿದ್ಧವಾಗಿದೆ. ಇನ್ನು ಸಾರ್ವಜನಿಕರಿಗೆ ಸುಮಾರು 6,000 ನಿವೇಶನಗಳು ಲಭ್ಯವಾಗಲಿದ್ದು, ಕೆಲವು ಸೈಟ್‌ಗಳು ಕಾನೂನು ವ್ಯಾಜ್ಯದಲ್ಲಿರುವುದರಿಂದ ಹಂಚಿಕೆ ಪ್ರಕ್ರಿಯೆಯು ಎರಡು ಹಂತಗಳಲ್ಲಿ ನಡೆಯಲಿದೆ," ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಲೇಔಟ್ ಸಂಪೂರ್ಣ ಸಿದ್ಧವಾಗಿದ್ದರೂ ಸಹ, ಜಮೀನು ಬಿಟ್ಟುಕೊಟ್ಟ ರೈತರಿಗೆ ಹಾಗೂ ಸಾರ್ವಜನಿಕರಿಗೆ ನಿವೇಶನ ಹಂಚಿಕೆ ಮಾಡುವ ಪ್ರಕ್ರಿಯೆಯನ್ನು ಕಳೆದ ಮೂರು ವರ್ಷಗಳಿಂದ ತಡೆಹಿಡಿಯಲಾಗಿತ್ತು. ಅರ್ಜಿ ಆಹ್ವಾನಿಸುವಲ್ಲಿ ಆದ ವಿಳಂಬದಿಂದಾಗಿ ಪ್ರಾಧಿಕಾರಕ್ಕೆ ಭಾರಿ ಆರ್ಥಿಕ ಹೊರೆ ಉಂಟಾಗಿದೆ ಎಂದು ಕಳೆದ ತಿಂಗಳು ಬಿಡಿಎ ನ್ಯಾಯಾಲಯದ ಮುಂದೆ ವಾದಿಸಿತ್ತು.

3,069 ಎಕರೆ ವಿಸ್ತೀರ್ಣ, 34,000 ಸೈಟ್‌ಗಳು

ಉತ್ತರ ಬೆಂಗಳೂರಿನಲ್ಲಿ ಬರೋಬ್ಬರಿ 3,069 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಡಾ. ಕೆ. ಶಿವರಾಮ ಕಾರಂತ ಲೇಔಟ್, ಸರ್ ಎಂ. ವಿಶ್ವೇಶ್ವರಯ್ಯ ಲೇಔಟ್ ನಂತರ ಬಿಡಿಎ ನಿರ್ಮಿಸಿರುವ ಅತ್ಯಂತ ದೊಡ್ಡ ವಸತಿ ವಿನ್ಯಾಸಗಳಲ್ಲಿ ಒಂದಾಗಿದೆ. ಈ ಬೃಹತ್ ಯೋಜನೆಯಲ್ಲಿ ಒಟ್ಟಾರೆಯಾಗಿ ಸುಮಾರು 34,000 ನಿವೇಶನಗಳು ನಿರ್ಮಾಣವಾಗುವ ನಿರೀಕ್ಷೆಯಿದೆ.

ಹಾರೋಹಳ್ಳಿ, ಅವಲಹಳ್ಳಿ, ರಾಮಗೊಂಡನಹಳ್ಳಿ, ಜಾರಕಬಂಡೆ ಕಾವಲ್ ಸೇರಿದಂತೆ 17 ಹಳ್ಳಿಗಳ ವ್ಯಾಪ್ತಿಯನ್ನು ಒಳಗೊಂಡಿರುವ ಈ ಲೇಔಟ್ ಅನ್ನು ಸುಪ್ರೀಂ ಕೋರ್ಟ್ ನಿರ್ದೇಶನದಂತೆ ರಚಿಸಲಾದ ತ್ರಿಸದಸ್ಯ ಸಮಿತಿಯ ಉಸ್ತುವಾರಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಈ ಸಮಿತಿಯಲ್ಲಿ ಹೈಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಎ.ವಿ. ಚಂದ್ರಶೇಖರ್, ಮಾಜಿ ಪೊಲೀಸ್ ಮಹಾನಿರ್ದೇಶಕ ಎಸ್.ಟಿ. ರಮೇಶ್ ಹಾಗೂ ಬಿಡಿಎ ಮಾಜಿ ಆಯುಕ್ತ ಜಯಕರ್ ಜೆರೋಮ್ ಇದ್ದರು. ಈ ಯೋಜನೆಯು ದಶಕಕ್ಕೂ ಹೆಚ್ಚು ಕಾಲ ನ್ಯಾಯಾಲಯದ ಕಾನೂನು ಸಂಕಷ್ಟಗಳಲ್ಲಿ ಸಿಲುಕಿಕೊಂಡಿತ್ತು. ಬಳಿಕ ಸುಪ್ರೀಂ ಕೋರ್ಟ್ ಈ ಸಮಿತಿಯನ್ನು ರಚಿಸಿ ಯೋಜನೆಯ ಜಾರಿಯ ಉಸ್ತುವಾರಿಯನ್ನು ವಹಿಸಿತ್ತು.