ವಿಶ್ವೇಶ್ವರಯ್ಯ ಬಡಾವಣೆಯಲ್ಲಿ, ಅನುಮೋದಿತ ನಕ್ಷೆಯನ್ನು ಬದಲಿಸಿ ನಿವೇಶನ ಹರಾಜು ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಹರಾಜಿನಲ್ಲಿ ಮಾರಾಟವಾದ ಮೂಲೆ ನಿವೇಶನದ ಅಳತೆ ತಪ್ಪಾಗಿದ್ದು, ಇದನ್ನು ಸರಿಪಡಿಸಲು ಎಂಜಿನಿಯರ್‌ಗಳು ಪಕ್ಕದ ನಿವೇಶನದಾರರಿಗೆ ಕಿರುಕುಳ ನೀಡುತ್ತಿದ್ದಾರೆ. ಈ ಅಕ್ರಮದ ಕುರಿತು ಶಾಸಕ ಎಸ್.ಟಿ. ಸೋಮಶೇಖರ್ ಅವರು ಬಿಡಿಎ ಆಯುಕ್ತರಿಗೆ ದೂರು ನೀಡಿದ್ದಾರೆ.
ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ನಿವೇಶನಗಳ ಹರಾಜಿನ ನೆಪದಲ್ಲಿ ಅನುಮೋದಿತ ನಕ್ಷೆಯನ್ನೇ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧವಾಗಿ ಬದಲಾಯಿಸಿರುವ ಮತ್ತು ಸ್ವಾಧೀನದಲ್ಲಿರುವ ನಿವೇಶನದಾರರಿಗೆ ಎಂಜಿನಿಯರ್‌ಗಳು ಕಿರುಕುಳ ನೀಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ನಿವೇಶನಗಳ ಮಾಲೀಕರ ಅಕ್ರೋಶ
ಬಿಡಿಎ ನಿರ್ಮಾಣದ ಯಶವಂತಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಡಿಎ ನಿರ್ಮಾಣದ ಸರ್ ಎಂ.ವಿಶ್ವೇಶ್ವರಯ್ಯ 5ನೇ ಹಂತದ ಬಡಾವಣೆಯಲ್ಲಿ ಮೂಲ ಅನುಮೋದಿತ ನಕ್ಷೆಯನ್ನೇ ಬದಲಿಸಿ ಹರಾಜು ಹಾಕಲಾಗಿದೆ. ಮೂಲೆ ನಿವೇಶನವನ್ನು ಹಿಗ್ಗಿಸಲು ಯತ್ನಿಸಿದ ಬಿಡಿಎ ಎಂಜಿನಿಯರ್‌ಗಳು ವಿರುದ್ಧ ನಿವೇಶನಗಳ ಮಾಲೀಕರು ಅಕ್ರೋಶ ವ್ಯಕ್ತಪಡಿಸಿರುವ ಘಟನೆಯೂ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ವಿಶ್ವೇಶ್ವರಯ್ಯ 5ನೇ ಹಂತದ ಬಡಾವಣೆಯಲ್ಲಿ 559/ಎ ಹಾಗೂ 559/ಬಿ ಮೂಲೆ ನಿವೇಶನಗಳ (ಕಾರ್ನರ್ ಸೈಟ್) ಹರಾಜು ಪ್ರಕ್ರಿಯೆ ನಡೆಸಲಾಗಿತ್ತು. ಸಿ.ಡಿ.ರಿಪೋರ್ಟ್ ಪ್ರಕಾರ 559/ಎ ಸೈಟ್ 367.20 ಚದರ ಮೀಟರ್ ಅಳತೆ ಹೊಂದಿದ್ದು, ಇದನ್ನಾಧರಿಸಿ ಬಿಡ್‌ದಾರರೊಬ್ಬರು ಹರಾಜಿನಲ್ಲಿ ಸೈಟ್ ಪಡೆದುಕೊಂಡಿದ್ದರು. ಆದರೆ, ಸ್ಥಳ ಪರಿಶೀಲನೆ ನಡೆಸಿದಾಗ ಅಳತೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಇದರಿಂದ ಕಂಗಾಲಾದ ಬಿಡ್‌ದಾರರು ಪಾವತಿಸಿದ ಹಣಕ್ಕೆ ತಕ್ಕಂತೆ ಪೂರ್ಣ ವಿಸ್ತೀರ್ಣದ ಸೈಟ್ ನೋಂದಾಯಿಸಿ ಕೊಡುವಂತೆ ಎಂಜಿನಿಯರ್‌ಗಳ ಮೇಲೆ ಒತ್ತಡ ಹೇರಿದ್ದಾರೆ. ಇದಕ್ಕೆ ಮಣಿದಿರುವ ಎಂಜಿನಿಯರ್‌ಗಳು, ಪಕ್ಕದ ಸೈಟ್‌ಗಳಿಂದ ಜಾಗ ಕತ್ತರಿಸಿ ಕೊಡಲು ಕಾನೂನಿನಲ್ಲಿ ಅವಕಾಶವಿಲ್ಲದಿದ್ದರೂ, ಆ ಸಾಲಿನಲ್ಲಿರುವ ನಿವೇಶನಗಳ ಮೂಲ ಅಳತೆಯನ್ನೇ ಬದಲಾಯಿಸಲು ಮುಂದಾಗಿದ್ದರು. ಸದರಿ ಪ್ರಕರಣದಲ್ಲಿ 559/ಎ ಮೂಲೆ ನಿವೇಶನವನ್ನು ಹಿಗ್ಗಿಸಲು ಬಿಡಿಎ ಇಂಜಿನಿಯರ್‌ಗಳು ಸ್ಥಳಪರಿಶೀಲನೆ ನಡೆಸಿದ್ದು. ಹೊಸದಾಗಿ ಅಳತೆಯನ್ನು ಬದಲಿಸಲು ಹೊರಟಿದ್ದಾರೆ ಎಂಬ ಆರೋಪಗಳು ಹೇಳಿಬಂದಿವೆ.
ನಿಯಮಗಳ ಪ್ರಕಾರ ಇಂಜಿನಿಯರ್‌ಗಳು ಸ್ಥಳಕ್ಕೆ ತೆರಳಿ ನಿಖರವಾದ ಚಕ್ಕುಬಂದಿ ಹಾಗೂ ವಿಸ್ತೀರ್ಣ ಅಳೆದು ಖಚಿತ ಅಳತೆ ವರದಿ (ಸಿ.ಡಿ. ರಿಪೋರ್ಟ್) ಸಿದ್ಧಪಡಿಸಬೇಕು. ಆದರೆ, ಇಂಜಿನಿಯರ್‌ಗಳು ಕಚೇರಿಯಲ್ಲೇ ಕುಳಿತು ವರದಿ ತಯಾರಿಸುತ್ತಿರುವುದು ಮತ್ತು ಹಿರಿಯ ಅಧಿಕಾರಿಗಳು ಇದನ್ನು ಸಮರ್ಪಕವಾಗಿ ಮೇಲ್ವಿಚಾರಣೆ ಮಾಡಿಲ್ಲ. ಹೀಗಾಗಿ 559/ಎ ಎಂಬ ಕೋಚೆಯ ಸಣ್ಣ ಮೂಲೆ ನಿವೇಶವನ್ನು ಬೃಹತ್ ಆಗಿ ಅಗಲೀಕರಿಸಿ ಹರಾಜು ಮಾಡಲಾಗಿದೆ ಎನ್ನಲಾಗಿದೆ.
ಬಿಡಿಎ ಆಯುಕ್ತರಿಗೆ ದೂರು ನೀಡಿದ ಯಶವಂತಪುರ ಕ್ಷೇತ್ರದ ಶಾಸಕ ಸೋಮಶೇಖರ್
ಯಶವಂತಪುರ ಕ್ಷೇತ್ರದ ಶಾಸಕ ಎಸ್.ಟಿ.ಸೋಮಶೇಖರ್ ಅವರು ಈ ಕುರಿತು ಬಿಡಿಎ ಆಯುಕ್ತರಿಗೆ ದಾಖಲೆಗಳ ಸಮೇತ ದೂರು ನೀಡಿದ್ದಾರೆ. ಬಿಡಿಎ ನಿವೇಶನಗಳ ಹರಾಜಿನ ನೆಪದಲ್ಲಿ ಬಿಡಿಎನ ಅನುಮೋದಿತ ನಕ್ಷೆಯನ್ನೇ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧವಾಗಿ ಬದಲಾಯಿಸಲಾಗಿದೆ. ತಮ್ಮ ಚಕ್ಕುಬಂದಿಯಲ್ಲಿ ನಿಯಮಾವಳಿಯ ನಕ್ಷೆಯಂತೆ ಸ್ವಾಧೀನದಲ್ಲಿರುವ ಮಧ್ಯಂತರ ನಿವೇಶನದಾರರಿಗೆ ಬಿಡಿಎ ಪಶ್ಚಿಮ ವಿಭಾಗದ ಎಂಜಿನಿಯರ್‌ಗಲು, ಆರ್ಥಿಕ ಸದಸ್ಯರು ಮತ್ತು ಸಂಬಂಧಿಸಿದವರು ಹಾಗೂ ನಗರ ಯೋಜನಾ ಸದಸ್ಯರು ಕಿರುಕುಳ ನೀಡುತ್ತಿದ್ದು ಅವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
ಏನೆಲ್ಲಾ ಬದಲಾವಣೆ?
ಬಿಡಿಎ ಅನುಮೋದಿತ ಬಡಾವಣೆಯ ನಕ್ಷೆಯ ಪ್ರಕಾರ ನಿವೇಶನ ಸಂಖ್ಯೆ 559/ಬಿ ಅನ್ನು ಕೋಚೆ ವಿಸ್ತೀರ್ಣದ ನಿವೇಶನ ಎಂದು ಚಿತ್ರಿಸಿದ್ದು, ಸದರಿ 559/ಬಿ ನಿವೇಶನವು ಅದರ ಪಕ್ಕದಲ್ಲಿ ಅಂದರೆ ಪಶ್ಚಿಮ ದಿಕ್ಕಿನಲ್ಲಿ ಬರುವ ಕೋಚೆ ವಿಸ್ತೀರ್ಣದ ನಿವೇಶನ ಸಂಖ್ಯೆ 559/ಎ ಗಿಂತ ದೊಡ್ಡದು ಎಂದು ಚಿತ್ರಿಸಲಾಗಿದೆ. ಸದರಿ 559/ಬಿ ಕೋಚೆ ವಿಸ್ತೀರ್ಣದ ಮೂಲೆ ನಿವೇಶನವನ್ನು ಇತ್ತೀಚೆಗೆ 2026ರ ಫೆಬ್ರವರಿಯಲ್ಲಿ ಹರಾಜು ನೋಟಿಫಿಕೇಷನ್ ಮಾಡಿ ಕರೆಕ್ಟ್ ಡೈಮೆನ್ಷನ್ ರಿಪೋರ್ಟ್ ಸಹ ಹಾಕಲಾಗಿದೆ. ಈ ಪ್ರಕಾರ ಈ ನಿವೇಶನದ ಒಟ್ಟು ವಿಸ್ತೀರ್ಣ ಕೇವಲ 84 ಚದರ ಮೀಟರ್‌ಗಳು. ಸದರಿ ಸಿ.ಡಿ.ಯ ಚಕ್ಕುಬಂದಿಯಂತೆ ಪಶ್ಚಿಮಕ್ಕೆ 559/ಎ ಮತ್ತು 559/1 ಎಂಬ ಎರಡು ನಿವೇಶನಗಳು ಬರುತ್ತವೆ.
ವಸ್ತುಸ್ಥಿತಿ ಹೀಗಿರುವಾಗ ಬಿಡಿಎ ಅನುಮೋದಿತ ಬಡಾವಣೆಯ ನಕ್ಷೆಯ ಪ್ರಕಾರ 559/ಬಿ ಅಳತೆಗೆ ಸರಿಹೊಂದುವಂತೆ ಕೋಚಿ ಇರುವ ಕಾರಣ, ಸ್ವಲ್ಪ ಮಾತ್ರ (ಒಂದೆರಡು ಮೀಟರ್) ಅಳತೆಯಲ್ಲಿ ವ್ಯತ್ಯಾಸವಿರಬೇಕಾದ, ಕೋಚಿಯ ಮೂಲೆ ನಿವೇಶನ 559/ಎ ದಿಢೀರ್ 50*80 ಅಡಿ (367.20 ಚದರ ಮೀಟರ್) ಅಳತೆಯಷ್ಟು ಬೆಳೆದಿರುವುದು ಹೇಗೆ ಎಂಬುದು ಸಂಶಯಕ್ಕೆ ಕಾರಣವಾಗಿದೆ.


