ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಚಾಲಕ 'ಕನ್ನಡಿಗ' ಎಂದು ಸ್ಟಿಕರ್ ಹಾಕಿದ್ದಕ್ಕೆ ಡಿಪೋ ಮ್ಯಾನೇಜರ್ ಅದನ್ನು ತೆಗೆಸಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕನ್ನಡಪರ ಸಂಘಟನೆಗಳು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು (ಜು.28) ಬಿಎಂಟಿಸಿ ಬಸ್ ಮೇಲೆ ಚಾಲಕ 'ಕನ್ನಡಿಗ' ಎಂದು ಸ್ಟಿಕರ್ ಹಾಕಿಸಿದ್ದಕ್ಕೆ ಡಿಪೋ ಮ್ಯಾನೇಜರ್ ಅದನ್ನ ತೆಗೆಸಿದ ಘಟನೆ ನಡೆದಿದ್ದು ಕನ್ನಡ ಸಂಘಟನೆಗಳು, ಕಾರ್ಯರ್ತರ ಆಕ್ರೋಶಕ್ಕೆ ವ್ಯಕ್ತಪಡಿಸಿದ್ದಾರೆ.

ಡಿಪೋ 35 ಕನ್ನಹಳ್ಳಿ ಮ್ಯಾನೇಜರ್ ವಿರುದ್ಧ ಇಂಥ ಆರೋಪ ಕೇಳಿಬಂದಿದೆ. ಬಿಎಂಟಿಸಿ ಹೊರಗುತ್ತಿಗೆ ಆಧಾರದ ಮೇಲೆ ಇರುವ ಎಲೆಕ್ಟ್ರಿಕ್ ಬಸ್‌ನ ಹಿಂಬದಿ ಕಿಟಕಿ ಮೇಲೆ 'ಕನ್ನಡಿಗ' ಎಂದು ಸ್ಟಿಕರ್ ಹಾಕಿಸಿದ್ದ ಬಸ್ ಚಾಲಕ. ಇದು ವ್ಯವಸ್ಥಾಪಕ ಗಮನಿಸಿ ಸ್ಟೀಕರ್ ತೆಗೆಯಲು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ. 'ಇಂಥವೆಲ್ಲ ಸ್ಟಿಕರ್ ಡಿಪೋದಿಂದ ಆಚೆ ಇಟ್ಕೊಳ್ಳಿ, ಸ್ಟಿಕರ್ ತೆಗೆಯದಿದ್ದರೆ ಬಸ್ ರಸ್ತೆಗಿಳಿಯಲು ಬಿಡೋಲ್ಲ' ಎಂದು ದರ್ಪ ತೋರಿಸಿದ್ದಾರೆಂಬ ಆರೋಪ ಕೇಳಿಬಂದಿದೆ.

ವಿಡಿಯೋ ವೈರಲ್:

'ಕನ್ನಡಿಗ' ಎಂಬ ಸ್ಟಿಕರ್ ತೆರವುಗೊಳಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕನ್ನಡ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿವೆ. ಕರ್ನಾಟಕದಲ್ಲೇ ಕನ್ನಡಕ್ಕೆ ಇದೆಂಥ ಅನ್ಯಾಯ? ಕರ್ನಾಟಕದಲ್ಲಿ ಕನ್ನಡಿಗ ಎಂದು ಬರೆಸಿದರೆ ತಪ್ಪೇನು. ನಾವು ಯಾವ ರಾಜ್ಯದಲ್ಲಿದ್ದೇವೆ ಎಂದು ಡಿಪೋ ಮ್ಯಾನೇಜರ್ ವಿರುದ್ಧ ಕಿಡಿಕಾರಿದ್ದಾರೆ.

ಬಸ್ ಮೇಲೆ ಇಂಗ್ಲಿಷ್ ಹಿಂದಿ ಜಾಹೀರಾತು ಏಕೆ?

ಮ್ಯಾನೇಜರ್ ನಡೆಗೆ ಕನ್ನಡಿಗರೊಬ್ಬರ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, 'ಕನ್ನಡಿಗ' ಸ್ಟಿಕರ್ ಇದ್ದರೆ ತಪ್ಪೇನು? ಬಸ್ ಗಳ ಮೇಲೆಲ್ಲಾ ಅನ್ಯಭಾಷೆ ಜಾಹೀರಾತುಗಳನ್ನ ಹಾಕ್ತೀರಿ, ಕನ್ನಡಿಗ ಹಾಕಬಾರದೆ, ಇನ್ಮುಂದೆ ಬಸ್‌ ಮೇಲೆ ಹಿಂದಿ ಇಂಗ್ಲಿಷ್ ಜಾಹೀರಾತುಗಳು ಕಂಡರೆ ಕನ್ನಡಿಗರು ಸುಮ್ನಿರಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ, ಇನ್ನೊಬ್ಬ ಕನ್ನಡಿಗ, ಇದು ತಮಿಳನಾಡೋ ಆಂಧ್ರಪ್ರದೇಶೋ ಅಲ್ಲ, ಇದು ಕರ್ನಾಟಕ, ಬಿಎಂಟಿಸಿ ಕನ್ನಡಿಗರ ವಾಹನ, ಕನ್ನಡಿಗ ಅಂತಾ ಬರೆದರೆ ಯಾವ ರೀತಿ ತಪ್ಪು ಕಾಣಿತು? ಆ ಬೆವರ್ಸಿ ವ್ಯವಸ್ಥಾಪಕರು ಕನ್ನಡಿಗರೋ ಅಥವಾ ಅನ್ಯರಾಜ್ಯದವರೋ ಎಂದು ಪ್ರಶ್ನಿಸಿದ್ದಾರೆ. ಇನ್ನೋರ್ವ ಕನ್ನಡಿಗರ 'ಸರ್ಕಾರ ಆ ಡಿಪೋ ಮ್ಯಾನೇಜರ್‌ ಮೇಲೆ ಕ್ರಮ ಕೈಗೊಳ್ಳುವವರೆಗೆ ಈ ವಿಡಿಯೋ ಶೇರ್ ಮಾಡಿ' ಎಂದು ಪ್ರತಿಕ್ರಿಯಿಸಿದ್ದಾರೆ.

ಒಟ್ಟಾರೆ, ನೆರೆ ರಾಜ್ಯದ ತಮಿಳುನಾಡಿನಲ್ಲಿ ಕನ್ನಡ ಧ್ವಜ ಕಂಡರೆ ಹಲ್ಲೆ ಮಾಡ್ತಾರೆ, ನಮ್ಮದೇ ರಾಜ್ಯದಲ್ಲಿ ಕನ್ನಡಿಗ ಸ್ಟೀಕರ್ ಕಂಡ್ರೂ ನಮ್ಮದೇ ಅಧಿಕಾರಿಗಳು ತೆಗೆಸ್ತಾರೆ. ಇವರಿಗೆ ಭಾಷಾಭಿಮಾನ ಇಲ್ವ? 'ಕನ್ನಡಿಗ' ಸ್ಟಿಕರ್ ಬಸ್‌ಗೆ ಭಾರವಾಯಿತೇ?