ಬಿಡದಿ ಸ್ಮಾರ್ಟ್ ಸಿಟಿ ಯೋಜನೆಗೆ ಭೂಸ್ವಾಧೀನ ವಿರೋಧಿಸಿ ನಡೆಯುತ್ತಿರುವ ರೈತರ ಹೋರಾಟಕ್ಕೆ ಈಗ ಯುವ ಶಕ್ತಿ ಸೇರ್ಪಡೆಯಾಗಿದೆ. "ಇಂದು ನಮ್ಮ ಭೂಮಿಗಾಗಿ, ನಾಳೆ ನಿಮ್ಮ ಭವಿಷ್ಯಕ್ಕಾಗಿ" ಎಂಬ ಘೋಷವಾಕ್ಯದೊಂದಿಗೆ ರೈತ ಮಕ್ಕಳು ಹೋರಾಟದ ಕಣಕ್ಕಿಳಿಯುತ್ತಿದ್ದು, ಇದು ಸರ್ಕಾರಕ್ಕೆ ಹೊಸ ಸವಾಲಾಗಿ ಪರಿಣಮಿಸಿದೆ.

ರಾಮನಗರ: ಬಿಡದಿ ಸ್ಮಾರ್ಟ್ ಸಿಟಿ ಅಥವಾ ಗ್ರೇಟರ್ ಬೆಂಗಳೂರು ಇಂಟಿಗ್ರೇಟೆಡ್ ಟೌನ್‌ಶಿಪ್ (GBIT) ಯೋಜನೆಗೆ ಈಗ ಹೊಸ ವಿಘ್ನ ಎದುರಾಗಿದೆ. ಇಷ್ಟು ದಿನ ಹಿರಿಯ ರೈತರಷ್ಟೇ ನಡೆಸುತ್ತಿದ್ದ ಈ ಹೋರಾಟಕ್ಕೆ ಈಗ ಯುವ ಶಕ್ತಿ ಅಥವಾ 'ಜೆನ್-ಜಿ' (Generation Z) ಎಂಟ್ರಿ ಕೊಡಲು ಸಜ್ಜಾಗಿದೆ. "ಇಂದು ನಮ್ಮ ಭೂಮಿಗಾಗಿ, ನಾಳೆ ನಿಮ್ಮ ಭವಿಷ್ಯಕ್ಕಾಗಿ" ಎಂಬ ಘೋಷವಾಕ್ಯದೊಂದಿಗೆ ರೈತ ಮಕ್ಕಳು ಹೋರಾಟದ ಕಣಕ್ಕಿಳಿಯುತ್ತಿರುವುದು ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಬಿಡದಿಯ ಫಲವತ್ತಾದ ಕೃಷಿ ಭೂಮಿಯನ್ನು ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಮುಂದಾಗಿರುವುದನ್ನು ವಿರೋಧಿಸಿ ಈಗಾಗಲೇ ಬಿಡದಿ ಭಾಗದ ರೈತರು ಬೀದಿಗಿಳಿದಿದ್ದಾರೆ. ಈ ಹೋರಾಟವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯಲು ರೈತರು ಈಗ ತಮ್ಮ ಮನೆಯ ಯುವಕರನ್ನು, ಅಂದರೆ 'ಜೆನ್-ಜಿ' ಮಕ್ಕಳನ್ನು ಹೋರಾಟಕ್ಕೆ ಆಹ್ವಾನಿಸುತ್ತಿದ್ದಾರೆ. ಈಗಾಗಲೇ ಬಿಡದಿಯಲ್ಲಿ ಸೋಷಿಯಲ್ ಮೀಡಿಯಾ ಮತ್ತು ಪೋಸ್ಟರ್‌ಗಳ ಮೂಲಕ ಅಭಿಯಾನವೊಂದು ತೀವ್ರಗೊಂಡಿದೆ.

GEN Z-ರೈತ ಮಕ್ಕಳೇ ನಿಮ್ಮ ಸಮಯ ಈಗ ಬಂದಿದೆ

ನೀವೂ ಬರದಿದ್ದರೆ ನಾಳೆ ನಿಮ್ಮ ಭವಿಷ್ಯ ಇರಲ್ಲ

ಇಂದು ನಮ್ಮ ಭೂಮಿಗಾಗಿ, ನಾಳೆ ನಿಮ್ಮ ಭವಿಷ್ಯಕ್ಕಾಗಿ ಹೋರಾಡೋಣ

ಎಂಬ ಬರಹಗಳಿರುವ ಪೋಸ್ಟರ್‌ಗಳು ಈಗ ಎಲ್ಲೆಡೆ ಸದ್ದು ಮಾಡುತ್ತಿವೆ.

ದೆಹಲಿ ಮಾದರಿಯ ಹೋರಾಟಕ್ಕೆ ಸಿದ್ಧತೆ?

ಇತ್ತೀಚೆಗೆ ನೀಟ್ ಅಕ್ರಮ ವಿರುದ್ಧ ಕೇಂದ್ರ ಸರ್ಕಾರದ ವಿರುದ್ಧ ದೆಹಲಿಯಲ್ಲಿ ತೀವ್ರ ಹೋರಾಟ ನಡೆದಿತ್ತು. ಅದೇ ಮಾದರಿಯನ್ನು ಬಿಡದಿಯಲ್ಲೂ ಅಳವಡಿಸಲು ಪ್ಲ್ಯಾನ್ ರೂಪಿಸಲಾಗುತ್ತಿದೆ. ರೈತ ಮಕ್ಕಳೇ ಮುಂದಾಳತ್ವ ವಹಿಸಿಕೊಂಡು 'ಸೇವ್ ಬಿಡದಿ' (Save Bidadi) ಹ್ಯಾಶ್‌ಟ್ಯಾಗ್ ಮೂಲಕ ಆನ್‌ಲೈನ್ ಆಂದೋಲನವನ್ನೂ ತೀವ್ರಗೊಳಿಸುತ್ತಿದ್ದಾರೆ.

ಏನಿದು ಬಿಡದಿ ಟೌನ್‌ಶಿಪ್ ಯೋಜನೆ?

ಬೆಂಗಳೂರು-ಮೈಸೂರು ಕಾರಿಡಾರ್‌ನಲ್ಲಿ ಕರ್ನಾಟಕ ಸರ್ಕಾರ ಪ್ರಸ್ತಾಪಿಸಿರುವ ಈ ಮಹತ್ವಾಕಾಂಕ್ಷೆಯ ಯೋಜನೆಯ ಮುಖ್ಯಾಂಶಗಳು ಹೀಗಿವೆ. ಸುಮಾರು 7,400 ರಿಂದ 9,000 ಎಕರೆ ಪ್ರದೇಶದಲ್ಲಿ ಸುಮಾರು ₹18,133 ಕೋಟಿ ವೆಚ್ಚದಲ್ಲಿ ಟೌನ್‌ಶಿಪ್ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಪ್ಲಾನ್ ಮಾಡಿದೆ. ಇದು ಭಾರತದ ಮೊದಲ ಕೃತಕ ಬುದ್ಧಿಮತ್ತೆ (AI) ಆಧಾರಿತ ಸ್ಮಾರ್ಟ್ ಸಿಟಿ. ತಂತ್ರಜ್ಞಾನ, ಕೈಗಾರಿಕೆಗಳು ಮತ್ತು ವಸತಿ ಸಮುಚ್ಚಯಗಳನ್ನು ಒಳಗೊಂಡ ಇಂಟಿಗ್ರೇಟೆಡ್ ಟೌನ್‌ಶಿಪ್ ಇದಾಗಿದೆ.

ರೈತರ ಆಕ್ರೋಶಕ್ಕೆ ಕಾರಣವೇನು?

ಸರ್ಕಾರವು ಅಭಿವೃದ್ಧಿ ಮತ್ತು AI ನಗರ ಎಂಬ ಹೆಸರಿನಲ್ಲಿ ಬಿಡದಿ ಸುತ್ತಮುತ್ತಲಿನ ಸಾವಿರಾರು ಎಕರೆ ಫಲವತ್ತಾದ ಕೃಷಿ ಭೂಮಿಯನ್ನು ಕಬಳಿಸುತ್ತಿದೆ ಎಂಬುದು ರೈತರ ನೇರ ಆರೋಪ. ನಮಗೆ ಸ್ಮಾರ್ಟ್ ಸಿಟಿಗಿಂತ ಭೂಮಿ ಮುಖ್ಯ. ಭೂಮಿ ಹೋದರೆ ಮುಂದಿನ ತಲೆಮಾರಿಗೆ ಅನ್ನ ಕೊಡುವವರಾರು? ಎಂಬ ಪ್ರಶ್ನೆ ರೈತ ಮಕ್ಕಳದ್ದಾಗಿದೆ. ಹೈಕೋರ್ಟ್‌ನಲ್ಲಿ ಸಲ್ಲಿಸಲಾಗಿದ್ದ ಪಿಐಎಲ್ (PIL) ತಿರಸ್ಕೃತಗೊಂಡಿದ್ದರೂ, ರೈತರು ಮಾತ್ರ ತಮ್ಮ ಪಟ್ಟು ಸಡಿಲಿಸಿಲ್ಲ. ಈಗ ಜೆನ್-ಜಿ ಯುವಕರ ಸೇರ್ಪಡೆಯೊಂದಿಗೆ ಬಿಡದಿ ಹೋರಾಟ ಮತ್ತಷ್ಟು ಬಲಗೊಳ್ಳುವ ಲಕ್ಷಣಗಳು ಕಾಣುತ್ತಿವೆ. ಒಂದು ವೇಳೆ ರೈತ ಮಕ್ಕಳು ಪೂರ್ಣ ಪ್ರಮಾಣದಲ್ಲಿ ಬೀದಿಗಿಳಿದರೆ, ಇದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗುವುದರಲ್ಲಿ ಸಂಶಯವಿಲ್ಲ. ಒಟ್ಟಿನಲ್ಲಿ ಬಿಡದಿಯಲ್ಲಿ ಟೌನ್‌ಶಿಪ್ ನಿರ್ಮಾಣವಾಗುತ್ತೋ ಅಥವಾ ರೈತರ ಭೂಮಿ ಉಳಿಯುತ್ತೋ ಎಂಬುದು ಈಗ ಯುವ ಶಕ್ತಿಯ ಹೋರಾಟದ ಮೇಲೆ ನಿಂತಿದೆ.