ದೀಪಾವಳಿ ಹಬ್ಬದ ಸರಣಿ ರಜೆಗಳ ಹಿನ್ನೆಲೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನವು ಮಂಗಳವಾರದ ರಜೆಯನ್ನು ರದ್ದುಗೊಳಿಸಿ ಪ್ರವಾಸಿಗರಿಗೆ ಮುಕ್ತವಾಗಿದೆ. ಮೃಗಾಲಯ, ಸಫಾರಿ ಮತ್ತು ಚಿಟ್ಟೆ ಪಾರ್ಕ್ ತೆರೆದಿರಲಿದ್ದು, ಜನದಟ್ಟಣೆ ತಪ್ಪಿಸಲು ಆನ್‌ಲೈನ್ ಟಿಕೆಟ್ ಬುಕ್ ಮಾಡಲು ಸೂಚಿಸಲಾಗಿದೆ.

ಬೆಂಗಳೂರು (ನ.05): ದೀಪಾವಳಿ ಹಬ್ಬದ ರಜಾದಿನಗಳ ಹಿನ್ನೆಲೆಯಲ್ಲಿ ಬೆಂಗಳೂರು ಹೊರವಲಯದ ಪ್ರಸಿದ್ಧ ಬನ್ನೇರುಘಟ್ಟ ಜೈವಿಕ ಉದ್ಯಾನವನ (Bannerghatta Biological Park) ವೀಕ್ಷಣೆಗೆ ಆಗಮಿಸುವ ಪ್ರವಾಸಿಗರಿಗೆ ಉದ್ಯಾನವನ ಆಡಳಿತ ಮಂಡಳಿ ಬಿಗ್ ರಿಲೀಫ್ ಹಾಗೂ ಸಿಹಿಸುದ್ದಿ ನೀಡಿದೆ. ಪ್ರತಿ ಮಂಗಳವಾರ ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಸಾಪ್ತಾಹಿಕ ರಜೆ ಇರುತ್ತದೆ ಹಾಗೂ ಸಾರ್ವಜನಿಕರ ವೀಕ್ಷಣೆಗೆ ಅನುಮತಿ ಇರುವುದಿಲ್ಲ. ಆದರೆ, ಈ ಬಾರಿ ದೀಪಾವಳಿ ಹಬ್ಬದ ಸರಣಿ ರಜೆಗಳಿರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುವ ನಿರೀಕ್ಷೆಯಿದ್ದು, ಬರುವ ಮಂಗಳವಾರ ಉದ್ಯಾನವನವನ್ನು ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲು ನಿರ್ಧರಿಸಲಾಗಿದೆ.

ಮೃಗಾಲಯ, ಸಫಾರಿ ಹಾಗೂ ಚಿಟ್ಟೆ ಪಾರ್ಕ್ ಓಪನ್

ಹಬ್ಬದ ರಜೆಯನ್ನು ಕುಟುಂಬ ಮತ್ತು ಮಕ್ಕಳೊಂದಿಗೆ ಕಳೆಯಲು ಬಯಸುವ ಪ್ರವಾಸಿಗರ ಅನುಕೂಲಕ್ಕಾಗಿ ಉದ್ಯಾನವನದ ಎಲ್ಲಾ ಮುಖ್ಯ ವಿಭಾಗಗಳು ಕಾರ್ಯನಿರ್ವಹಿಸಲಿವೆ.

  • - ಮೃಗಾಲಯ (Zoo): ವಿವಿಧ ತಳಿಯ ವನ್ಯಜೀವಿಗಳು ಮತ್ತು ಪಕ್ಷಿಗಳ ವೀಕ್ಷಣೆ.
  • - ಕಾಡಿನ ಸಫಾರಿ (Safari): ಸಿಂಹ, ಹುಲಿ, ಕರಡಿ ಹಾಗೂ ಸಸ್ಯಹಾರಿ ಪ್ರಾಣಿಗಳ ಸಫಾರಿ ಸವಾರಿ.
  • - ಚಿಟ್ಟೆ ಪಾರ್ಕ್ (Butterfly Park): ದೇಶದ ಮೊದಲ ವರ್ಣರಂಜಿತ ಚಿಟ್ಟೆಗಳ ಸಂರಕ್ಷಣಾ ಪಾರ್ಕ್ ವೀಕ್ಷಣೆ.

ಮಕ್ಕಳೊಂದಿಗೆ ಬರುವ ಕುಟುಂಬಗಳು ಹಾಗೂ ಪ್ರವಾಸಿಗರು ಯಾವುದೇ ಗೊಂದಲವಿಲ್ಲದೆ ನಿಧಾನವಾಗಿ ಪ್ರಾಣಿ-ಪಕ್ಷಿಗಳನ್ನು ವೀಕ್ಷಿಸಿ ಆನಂದಿಸಬಹುದಾಗಿದೆ.

ಆನ್‌ಲೈನ್‌ನಲ್ಲೇ ಟಿಕೆಟ್ ಬುಕ್ ಮಾಡಿ

ಹಬ್ಬದ ದಿನಗಳಲ್ಲಿ ಉದ್ಯಾನವನದ ಟಿಕೆಟ್ ಕೌಂಟರ್‌ಗಳಲ್ಲಿ ಭಾರಿ ಜನದಟ್ಟಣೆ ಉಂಟಾಗುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕರು ಆನ್‌ಲೈನ್ ಮೂಲಕವೇ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಲು ಆಡಳಿತ ಮಂಡಳಿ ಮನವಿ ಮಾಡಿದೆ. ಪ್ರವಾಸಿಗರು ಸಂಸ್ಥೆಯ ಅಧಿಕೃತ ವೆಬ್‌ಸೈಟ್ bannerughattabiopark.org ಗೆ ಭೇಟಿ ನೀಡಿ ಟಿಕೆಟ್‌ಗಳನ್ನು ಸುಲಭವಾಗಿ ಬುಕ್ ಮಾಡಿಕೊಳ್ಳಬಹುದು.

ದೀಪಾವಳಿ ಹಬ್ಬದ ರಜೆಯ ಮೋಜನ್ನು ವನ್ಯಜೀವಿಗಳ ಮಡಿಲಲ್ಲಿ ಕಳೆಯಲು ಬಯಸುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದು ಎಂದು ಬನ್ನೇರುಘಟ್ಟ ಜೈವಿಕ ಉದ್ಯಾನವನದ ಅಧಿಕಾರಿಗಳು ತಿಳಿಸಿದ್ದಾರೆ.