ಬೆಳಗ್ಗಿನವರೆಗೆ ನಡೆದ ಹಸೀ ಕರಗ ಉತ್ಸವ ತಾಯಿ ದ್ರೌಪದಮ್ಮನ ದರ್ಶನ ಪಡೆದು ಪುನೀತರಾದ ಭಕ್ತರು
ಬೆಂಗಳೂರು ಕರಗ ಮಹೋತ್ಸವದ ಆಚರಣೆಯಲ್ಲಿ ಮುಖ್ಯವಾದ ‘ಹಸೀ ಕರಗ’ ಉತ್ಸವವು ಗುರುವಾರ ತಡರಾತ್ರಿಯಿಂದ ಶುಕ್ರವಾರ ಬೆಳಗ್ಗೆವರೆಗೆ ವಿಜೃಂಭಣೆಯಿಂದ ನೆರವೇರಿತು. ಸಾವಿರಾರು ಭಕ್ತರು ಬೆಳಗ್ಗೆ ತಾಯಿ ದ್ರೌಪದಮ್ಮನ ದರ್ಶನ ಪಡೆದು ಪುನೀತರಾದರು.
ಇದಕ್ಕೂ ಮುನ್ನ ಗುರುವಾರ ರಾತ್ರಿ ಧರ್ಮರಾಯ ಸ್ವಾಮಿ ದೇವಸ್ಥಾನ (Dharmaraya swami Temple) ಆವರಣದಲ್ಲಿ ಪೂಜಾರಿ ಮನೆತನದವರು ದೊಡ್ಡ ತೇರಿನ ಕಳಸಕ್ಕೆ ವಿಶೇಷ ಪೂಜೆ ಮಾಡಿದರು. ನಂತರ ದೇಗುಲದ ದೇವರ ಮೂರ್ತಿಗಳಿಗೆ ಅಲಂಕಾರ, ಸಾಂಪ್ರದಾಯಿಕ ಪದ್ಧತಿಯಂತೆ ಪೂಜೆ (ಗಾವನ್) ನೆರವೇರಿಸಿ ಕಬ್ಬನ್ ಉದ್ಯಾನದಲ್ಲಿನ (Cubbon Park) ಸಂಪಂಗಿ ಅಂಗಳ ಶಕ್ತಿ ಪೀಠಕ್ಕೆ ತೆರಳಿದರು.
ಮುಸ್ಲಿಮರ ಸಹಭಾಗಿತ್ವದಲ್ಲೇ ನಡೆಯಲಿದೆ ಬೆಂಗಳೂರು ಕರಗ ಮಹೋತ್ಸವ
ಸಂಪಂಗಿ ಅಂಗಳ ಶಕ್ತಿ ಪೀಠದಿಂದ ತಡರಾತ್ರಿ 3ಗಂಟೆಗೆ ದ್ರೌಪದಮ್ಮನ ಮೂರ್ತಿ ಕಂಕುಳಲ್ಲಿ ಇಟ್ಟುಕೊಂಡ ಮೆರವಣಿಗೆಯು ನೇರವಾಗಿ ಸಾಗಿ ಬಿಬಿಎಂಪಿ ಕೇಂದ್ರ ಕಚೇರಿ ಆವರಣದಲ್ಲಿರುವ ಆದಿಶಕ್ತಿ ದೇವಸ್ಥಾನ ತಲುಪಿತು. ಅಲ್ಲಿಂದ ಪ್ರಮುಖ ರಸ್ತೆಗಳ ಮೂಲಕ ಹಾದು ಬೆಳಗ್ಗೆ 6ಗಂಟೆ ವೇಳೆಗೆ ಧರ್ಮರಾಸ್ವಾಮಿ ದೇವಸ್ಥಾನ ಮೂರ್ತಿ ತರಲಾಯಿತು. ಆಗ ದ್ರೌಪದಮ್ಮ ದೇವಸ್ಥಾನದ ಒಳಾಂಗಣ (ಗರ್ಭಗುಡಿ) ಮತ್ತು ಹೊರಾಂಗಣವನ್ನು ಒಂದು ಗಂಟೆಗೂ ಅಧಿಕ ಕಾಲ ಅಂದರೆ ಸುಮಾರು 10-12 ಸುತ್ತು ಸುತ್ತುವರಿಯಿತು. ಈ ವೇಳೆ ಸಾವಿರಾರು ಭಕ್ತರು ತಾಯಿ ದರ್ಶನ ಪಡೆದರು, ಪ್ರಾರ್ಥನೆ ಸಲ್ಲಿಸಿದರು. ಅಲ್ಲಿಗೆ 'ಹಸೀ ಕರಗ' ಆಚರಣೆ ಸಂಪನ್ನಗೊಂಡಿತು.
ವಿವಾದದ ಮಧ್ಯೆ ಇತಿಹಾಸ ಪ್ರಸಿದ್ಧ ಬೆಂಗಳೂರು ಕರಗಕ್ಕೆ ಸಿದ್ಧತೆ
ವಿಶೇಷ ಪೂಜೆ: ಶುಕ್ರವಾರ ಬೆಳಗ್ಗೆ ಕಲಾಸಿಪಾಳ್ಯ (Kalasipalya) ಮರಿಸ್ವಾಮಪ್ಪ ಮಠದಲ್ಲಿ ಮಧ್ಯಾಹ್ನ 12 ಗಂಟೆಯಿಂದ ಸಂಜೆವರೆಗೆ ವಿಶೇಷ ಪೂಜೆಗಳು ಜರುಗಲಿವೆ. ಬಳಿಕ ರಾತ್ರಿ 12ಗಂಟೆಯಿಂದ (ಶನಿವಾರ) ಬೆಳಗ್ಗೆ 4ರವರೆಗೆ ದ್ರೌಪದಮ್ಮನಿಗೆ ಪೊಂಗಲ್ ಸೇವೆ, ತಾಯಿ ಕುರಿತ ಗೀತ ವಾಚನ ಮತ್ತು ಪುರಾಣ ಕಥನ ಸೇವೆ ನಡೆಯಲಿದೆ. ಈ ವೇಳೆ ದೇವಸ್ಥಾನ ಆವರಣದಲ್ಲೇ ಮಾಡುವ ಪೊಂಗಲ್‌ನಲ್ಲಿ ಒಟ್ಟು ಮೂರು ತಟ್ಟೆಗಳಲ್ಲಿ ಪೊಂಗಲ್ ತೆಗೆದಿಟ್ಟು ಅದನ್ನು ದೇವರಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಲಾಗುತ್ತದೆ. ನಂತರ ಮಹಾಮಂಗಳಾರತಿ ನಡೆಯಲಿದೆ.
ಶನಿವಾರವು ಸಹ ವಿವಿಧ ಪೂಜೆಗಳು ನೆರವೇರಲಿದ್ದು, ಅಂದು ಭಕ್ತರು ಇಷ್ಟಾರ್ಥ ನೆರವೇರಿಸುವಂತೆ ದೇವರಲ್ಲಿ ಪ್ರಾರ್ಥನೆ ಸಲ್ಲಿಸುತ್ತಾರೆ. ದೇಗುಲ ಆವರಣದಲ್ಲಿ ಸ್ವಸ್ತಿಕ್, ಓಂ ಆಕಾರದಲ್ಲಿ ಕೇಜಿಗಟ್ಟಲೆ ಕರ್ಪೂರ ಹಚ್ಚಿ ಬೆಳಗಿಸುತ್ತಾರೆ ಎಂದು ದೇವಸ್ಥಾನ ಉತ್ಸವ ಸಮಿತಿ ಅಧ್ಯಕ್ಷ ಸತೀಶ್ ಮಾಹಿತಿ ನೀಡಿದರು.
