ಜೀವನದಲ್ಲಿ ಶತ್ರುಬಾಧೆ ಮತ್ತು ಇತರರ ಅಸೂಯೆಯಿಂದ ಅನೇಕ ಸಮಸ್ಯೆಗಳು ಎದುರಾಗುತ್ತವೆ. ವಾಸ್ತುಶಾಸ್ತ್ರದಲ್ಲಿ ಈ ಶತ್ರುಕಾಟವನ್ನು ನಿವಾರಿಸಲು ಒಂದು ಸುಲಭವಾದ ಪರಿಹಾರವನ್ನು ಸೂಚಿಸಲಾಗಿದೆ. ಇದನ್ನು ಜಾಗರೂಕತೆಯಿಂದ ಪಾಲಿಸುವ ಮೂಲಕ ಶತ್ರುಗಳ ಕಾಟದಿಂದ ಮುಕ್ತಿ ಪಡೆಯಬಹುದು.

ಜೀವನ ಎಂದ ಮೇಲೆ ಅದರಲ್ಲಿ ನೂರೊಂದು ಸಮಸ್ಯೆಗಳು ಇದ್ದೇ ಇರುತ್ತವೆ. ಅದೇ ರೀತಿ ನಮ್ಮ ಹಿರಿಯರು ಈ ಸಮಸ್ಯೆಗಳಿಗೆ ಅಷ್ಟೇ ರೀತಿಯ ಪರಿಹಾರವನ್ನೂ ನೀಡಿದ್ದಾರೆ. ಜ್ಯೋತಿಷ ಶಾಸ್ತ್ರ, ವಾಸ್ತುಶಾಸ್ತ್ರದಲ್ಲಿಯೂ ಸಮಸ್ಯೆಗೆ ಪರಿಹಾರಗಳನ್ನು ಕಂಡುಕೊಳ್ಳುವುದು ಇದೆ. ಅದರಲ್ಲಿ ಅತಿಮುಖ್ಯವಾಗಿ ಇರುವುದು ಶತ್ರುಕಾಟ ಅಥವಾ ಶತ್ರುಬಾಧೆ. ಇದು ಬಹುತೇಕ ಯಾರನ್ನೂ ಬಿಟ್ಟಿಲ್ಲ. ಒಬ್ಬರ ಏಳಿಗೆಯನ್ನು ಸಹಿಸದೇ ಹೊಟ್ಟೆಕಿಚ್ಚು ಪಡುವುದು, ಕುಟುಂಬದಲ್ಲಿ ಕಲಹವಿದ್ದಾಗ ಸಮಸ್ಯೆಯನ್ನು ತಂದೊಡ್ಡುವುದು, ನಮಗೆ ಪರಿಚಯವೇ ಇಲ್ಲದಿದ್ದರೂ ಅವರು ದೊಡ್ಡ ಸ್ಥಾನಕ್ಕೆ ಏರಿದ ಮಾತ್ರಕ್ಕೆ ಸಂಕಟ ಪಡುವುದು, ಇನ್ನೊಬ್ಬರ ಬದುಕಿನಲ್ಲಿ ಏನಾದರೂ ಸಮಸ್ಯೆ ಬಂದರೆ ಅದನ್ನೇ ಖುಷಿ ಪಡುವ ವಿಕೃತ ಮನಸ್ಸುಗಳು ಸಾಕಷ್ಟು ಇವೆ.

ಮನಸ್ಸುಗಳ ಮಾತು

ಕೆಲವೊಮ್ಮೆ ಹೀಗೆ ಕೆಟ್ಟದ್ದನ್ನು ಬಯಸುವವರು ಕೆಟ್ಟವರೇ ಆಗಿರಬೇಕೆಂದೇನೂ ಇಲ್ಲ. ಹೊಟ್ಟೆಕಿಚ್ಚು, ಅಸೂಯೆ ಎನ್ನುವುದು ಯಾರನ್ನೂ ಬಿಟ್ಟಿಲ್ಲ. ಕೆಲವರಿಗೆ ಇದು ಸಣ್ಣ ಪ್ರಮಾಣದಲ್ಲಿ ಇದ್ದರೆ, ಮತ್ತೆ ಕೆಲವರ ಮೈತುಂಬಾ ಇದೇ ಇರುತ್ತದೆ ಅಷ್ಟೇ. ಕೆಲವರು ತಮಗೆ ಆಗದವರ ಏಳಿಗೆ ಸಹಿಸದೇ ಹೋದರೆ, ಮತ್ತೆ ಕೆಲವರಿಗೆ ಇಂಥವರೇ ಆಗಬೇಕೆಂದೇನೂ ಇಲ್ಲ, ಒಟ್ಟಿನಲ್ಲಿ ತಮ್ಮನ್ನು ಬಿಟ್ಟು ಯಾರೂ ಚೆನ್ನಾಗಿ ಇರಬಾರದು, ದೊಡ್ಡ ಮಟ್ಟಕ್ಕೆ ಹೋಗಬಾರದು ಎನ್ನುವುದೇ ಇರುತ್ತದೆ.

ಹೀಗೆ ಶತ್ರುಬಾಧೆ, ಶತ್ರುಗಳ ಕಾಟ ಇದ್ದೇ ಇರುತ್ತದೆ. ಕೆಲವೊಮ್ಮೆ ಸೂಕ್ಷ್ಮ ಮನಸ್ಸಿನವರ ಮೇಲೆ ಇದು ಅಗಾಧ ಪರಿಣಾಮ ಬೀರುತ್ತದೆ ಎನ್ನುತ್ತದೆ ವಾಸ್ತುಶಾಸ್ತ್ರ. ಅದರಲ್ಲಿಯೂ ಎಲ್ಲರ ಜಾತಕದಲ್ಲಿಯೂ ಜೀವನದ ಒಂದಷ್ಟು ಗಳಿಗೆ ಕೆಟ್ಟದ್ದಾಗಿರುತ್ತದೆ. ಆ ಸಮಯದಲ್ಲಿ ಬೇರೆಯವರು ಪಡುವ ಅಸೂಯೆ, ಕೆಡುಕುತನ, ಹಾಕುವ ಶಾಪ ಎಲ್ಲವೂ ತಗುಲಿ ಅವರಿಗೆ ಅರಿವಿಲ್ಲದೆಯೇ ಏನಾದರೂ ಸಮಸ್ಯೆ ಆಗುತ್ತದೆ ಎನ್ನುವ ಮಾತಿದೆ.

ವಾಸ್ತುಶಾಸ್ತ್ರದಲ್ಲಿ ಪರಿಹಾರ

ಇದಕ್ಕೆ ಒಂದು ಸುಲಭದ ಪರಿಹಾರವನ್ನು ವಾಸ್ತು ಶಾಸ್ತ್ರದಲ್ಲಿ ಹೇಳಲಾಗಿದೆ. ಅದೇನೆಂದರೆ, ಒಂದು ಈರುಳ್ಳಿಗೆ ಮೊಳೆಯನ್ನು ಚುಚ್ಚಿ ಅದನ್ನು ನಿಮ್ಮ ಮನೆಯ ಉತ್ತರ ಅಥವಾ ಪೂರ್ವ ದಿಕ್ಕಿನಿಂದ ಹೊರಕ್ಕೆ ಎಸೆಯಬೇಕು ಎನ್ನುವ ಮಾತಿದೆ. ಹೀಗೆ ಮಾಡಿದರೆ, ಶತ್ರುಬಾಧೆ, ಶತ್ರುಕಾಟ ತಪ್ಪುತ್ತದೆ ಎನ್ನಲಾಗುತ್ತದೆ. ಇದರಲ್ಲಿ ಎಷ್ಟು ಸತ್ಯಾಂಶ ಇದೆ ಎನ್ನುವುದು ಅವರವರಿಗೆ ಬಿಟ್ಟ ವಿಷಯ. ಆದರೆ ಇದನ್ನು ಹಲವರು ಪಾಲಿಸಿಕೊಂಡು ಬರುತ್ತಿದ್ದಾರೆ. ಹಾಗೆಯೇಒಂದು ಮಾತು. ಇಲ್ಲಿ ಮೊಳೆ ಇರುವ ಕಾರಣ ಬೇಕಾಬಿಟ್ಟೆಯಲ್ಲಿ ರಸ್ತೆಯ ಮೇಲೆ ಎಸೆಯಬೇಡಿ. ಇದು ಯಾರಿಗಾದರೂ ತಗುಲಿ ಮತ್ತೊಂದಿಷ್ಟು ಶಾಪ ಹಾಕಿಸಿಕೊಳ್ಳಬೇಕಾಗಬಹುದು. ಆದ್ದರಿಂದ ಜಾಗ್ರತೆಯಿಂದ ಈ ಕೆಲಸವನ್ನು ಯಾರಿಗೂ ತೊಂದರೆಯಾಗದಂತೆ ಮಾಡಿ.