ಗರುಡ ಪುರಾಣದ ಪ್ರಕಾರ, ಮರಣದ ನಂತರ ಹಣ, ಆಸ್ತಿಗಳು ನಮ್ಮ ಜೊತೆಗೆ ಬರುವುದಿಲ್ಲ. ಆಗ ನಮ್ಮ ಆತ್ಮದ ಜೊತೆಗೆ ಸಾಗಿ ಬರುವ ಸಂಗತಿಗಳು ಬೇರೆಯೇ. ಅವೇ ನಮ್ಮ ಮುಂದಿನ ಗತಿಯನ್ನು ನಿರ್ಧರಿಸುವ ನಿಜವಾದ ಸಂಪತ್ತು.

ಜನರು ಸಾಮಾನ್ಯವಾಗಿ ಹಣ, ಕುಟುಂಬ, ಆಸ್ತಿ, ಹೆಸರು ಎಲ್ಲವೂ ನಮ್ಮ ಜೊತೆಯಲ್ಲೇ ಇರುತ್ತವೆ ಎಂದು ಭಾವಿಸುತ್ತಾರೆ. ಆದರೆ ಗರುಡ ಪುರಾಣ ಒಂದು ಸರಳ ಆದರೆ ಆಳವಾದ ಸತ್ಯವನ್ನು ಹೇಳುತ್ತದೆ. ಜೀವನ ಮುಗಿದ ನಂತರ ನಮ್ಮ ಜೊತೆ ಬರುವುದೇನು ಎಂಬುದನ್ನು ಇದು ಸ್ಪಷ್ಟವಾಗಿ ವಿವರಿಸುತ್ತದೆ. ಮರಣದ ನಂತರ ದೇಹ, ಸಂಪತ್ತು, ಸಂಬಂಧಗಳು ಇಲ್ಲಿಯೇ ಉಳಿಯುತ್ತವೆ. ಆದರೆ ಕೆಲವು ಅದೃಶ್ಯ ಸಂಗತಿಗಳು ಮಾತ್ರ ಆತ್ಮದ ಜೊತೆ ಸಾಗುತ್ತವೆ. ಅವೇ ನಮ್ಮ ಶಾಂತಿ, ಗೌರವ ಮತ್ತು ಗತಿಯನ್ನು ನಿರ್ಧರಿಸುತ್ತವೆ.

ಪ್ರಜ್ಞೆ ಎಂದಿಗೂ ದೂರವಾಗುವುದಿಲ್ಲ

ಗರುಡ ಪುರಾಣದ ಪ್ರಕಾರ, ಮಾನವನ ಮೊದಲ ಮತ್ತು ಶಾಶ್ವತ ಸಂಗಾತಿ ಪ್ರಜ್ಞೆ. ಜೀವನದಲ್ಲಿ ಯಾರೂ ನೆರವಾಗದ ಸಂದರ್ಭದಲ್ಲೂ ವಿವೇಕ ನಮ್ಮನ್ನು ರಕ್ಷಿಸುತ್ತದೆ. ಹಣ ಕಳೆದುಕೊಳ್ಳಬಹುದು, ಸ್ಥಾನಮಾನ ಹೋಗಬಹುದು. ಆದರೆ ಜ್ಞಾನ ಮತ್ತು ವಿವೇಕ ಎಂದಿಗೂ ಕೈ ಬಿಡುವುದಿಲ್ಲ. ಸರಿಯಾದ ನಿರ್ಧಾರ, ಧೈರ್ಯ ಮತ್ತು ಮನಸ್ಸಿನ ಶಾಂತಿಯನ್ನು ಪ್ರಜ್ಞೆಯೇ ಕೊಡುತ್ತದೆ. ಒಮ್ಮೆ ಬೆಳೆದ ಬುದ್ಧಿಯನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ.

ವಿದ್ಯೆ ಶಾಶ್ವತ ಸಂಪತ್ತು

ವಿದ್ಯೆಯೇ ಜನ್ಮದಿಂದ ಮರಣದವರೆಗೆ ಜೊತೆಯಲ್ಲಿರುವ ಏಕೈಕ ಸಂಪತ್ತು ಎಂದು ಗರುಡ ಪುರಾಣ ಹೇಳುತ್ತದೆ. ವಿದ್ಯೆ ಜೀವನದ ಕತ್ತಲ ದಾರಿಗಳಲ್ಲಿ ಬೆಳಕಾಗುತ್ತದೆ. ಪ್ರಾಮಾಣಿಕವಾಗಿ ಬದುಕಲು, ಸರಿಯಾಗಿ ಯೋಚಿಸಲು ಮತ್ತು ಸಮಾಜಕ್ಕೆ ಉಪಕಾರ ಮಾಡಲು ಜ್ಞಾನ ಸಹಾಯ ಮಾಡುತ್ತದೆ. ಕಲಿಕೆ ಮತ್ತು ಅನುಭವ ವ್ಯಕ್ತಿತ್ವವನ್ನು ಗಟ್ಟಿಗೊಳಿಸುತ್ತವೆ. ಕಲಿತ ಜ್ಞಾನವನ್ನು ಇತರರಿಗೆ ಹಂಚಿದಾಗ ಅದು ಮುಂದಿನ ಪೀಳಿಗೆಗಳಿಗೂ ದಾರಿದೀಪವಾಗುತ್ತದೆ.

ದಾನ ಮರಣದ ನಂತರವೂ ಜೊತೆಯಾಗುತ್ತದೆ

ದಾನವನ್ನು ಗರುಡ ಪುರಾಣ ಪವಿತ್ರ ಸಂಗಾತಿಯೆಂದು ಪರಿಗಣಿಸುತ್ತದೆ. ಹಸಿದವರಿಗೆ ಆಹಾರ ನೀಡುವುದು, ಬಡವರಿಗೆ ನೆರವಾಗುವುದು, ಶ್ರಮದಿಂದ ಗಳಿಸಿದ ಸಂಪತ್ತನ್ನು ಹಂಚಿಕೊಳ್ಳುವುದು ಪುಣ್ಯವನ್ನು ತಂದಿಡುತ್ತದೆ. ದಾನ ಅಹಂಕಾರವನ್ನು ಕಡಿಮೆ ಮಾಡುತ್ತದೆ, ಮನಸ್ಸಿನಲ್ಲಿ ಕರುಣೆ ಬೆಳೆಸುತ್ತದೆ. ದೇಹ ನಾಶವಾದರೂ ದಾನದ ಪರಿಣಾಮ ಜೀವಂತವಾಗಿರುತ್ತದೆ. ಅದು ಆತ್ಮಯಾನದ ವೇಳೆ ಶಕ್ತಿ ಮತ್ತು ಧೈರ್ಯ ನೀಡುತ್ತದೆ.

ಸತ್ಕರ್ಮಗಳು ನಮ್ಮನ್ನು ಮರೆಯುವುದಿಲ್ಲ

ಮಾನವನ ಕರ್ಮಗಳು ಅವನನ್ನು ಎಂದಿಗೂ ಬಿಡುವುದಿಲ್ಲ ಎಂದು ಗರುಡ ಪುರಾಣ ಸ್ಪಷ್ಟವಾಗಿ ಹೇಳುತ್ತದೆ. ಒಳ್ಳೆಯ ಕರ್ಮಗಳು ಜೀವನದಲ್ಲಿ ಮನಸ್ಸಿನ ಶಾಂತಿ, ಸಮಾಜದಲ್ಲಿ ಗೌರವ ಮತ್ತು ಆತ್ಮಬಲ ನೀಡುತ್ತವೆ. ಮರಣದ ನಂತರವೂ ಅವು ಉತ್ತಮ ಪರಂಪರೆಯಾಗಿ ಉಳಿಯುತ್ತವೆ. ಕೆಟ್ಟ ಕರ್ಮಗಳು ಮೌನವಾಗಿ ನೋವು, ಭಯ ಮತ್ತು ಪಶ್ಚಾತ್ತಾಪವನ್ನು ನೀಡುತ್ತವೆ. ಕರ್ಮದ ನಿಯಮ ಶಬ್ದವಿಲ್ಲದೆ ಕೆಲಸ ಮಾಡುತ್ತದೆ.

ಗರುಡ ಪುರಾಣದ ಸತ್ಯ

ಎಲ್ಲವೂ ಕೈ ತಪ್ಪಿದಾಗ, ನಾವು ಏನಾಗಿದ್ದೇವೆ ಎಂಬುದೇ ನಮ್ಮ ಜೊತೆಯಾಗುತ್ತದೆ. ಬುದ್ಧಿ, ವಿದ್ಯೆ, ದಾನ ಮತ್ತು ಸತ್ಕರ್ಮಗಳೇ ಮರಣದವರೆಗೆ ನಿಜವಾದ ಸಂಗಾತಿಗಳು. ಅನುಭವವೂ ಪುರಾತನ ಜ್ಞಾನವೂ ಒಂದೇ ಮಾತು ಹೇಳುತ್ತವೆ- ಉದಾರತೆ ಸಂಪತ್ತನ್ನು ಶುದ್ಧಗೊಳಿಸುತ್ತದೆ, ಒಳ್ಳೆಯ ಕರ್ಮಗಳು ಶಾಶ್ವತ ಗೌರವ ನೀಡುತ್ತವೆ. ನಿಜವಾದ ಸಂಪತ್ತು ನಾವು ಸಂಗ್ರಹಿಸಿಟ್ಟಿರುವುದಲ್ಲ. ಮೌನವಾಗಿ ನಮ್ಮ ಜೊತೆ ನಡೆದು, ಆತ್ಮವನ್ನು ತಲುಪಿಸಿ, ನಮ್ಮ ಪರಂಪರೆಯನ್ನು ನಿರ್ಧರಿಸುವುದೇ ನಿಜವಾದ ಸಂಪತ್ತು.