ಗರುಡ ಪುರಾಣದ ಪ್ರಕಾರ, ಪತ್ನಿಯನ್ನು ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗಿದ್ದು, ಆಕೆಯನ್ನು ಶೋಷಿಸುವ ಪತಿ ಈ ಜನ್ಮದಲ್ಲಿ ಬಡತನ ಮತ್ತು ಮರಣದ ನಂತರ ‘ಕುಂಭೀಪಾಕ’ದಂತಹ ನರಕದಲ್ಲಿ ಹಿಂಸೆ ಅನುಭವಿಸುತ್ತಾನೆ. ಯಾವುದೆಲ್ಲ ಪಾಪ? ತಿಳಿಯೋಣ.
ಹಿಂದೂ ಧರ್ಮದಲ್ಲಿ, ಹೆಂಡತಿಯನ್ನು ಪುರುಷನ ʼಅರ್ಧಾಂಗಿʼ ಎಂದು ಪರಿಗಣಿಸಲಾಗುತ್ತದೆ. ಅಂದರೆ ಅವಳು ಗಂಡನ ದೇಹದ ಅರ್ಧ. ಆದರೂ ಸಾಮಾನ್ಯವಾಗಿ ಪುರುಷರು ತಮ್ಮ ಅಧಿಕಾರದ ದುರಹಂಕಾರದಿಂದ ತಮ್ಮ ಹೆಂಡತಿಯರನ್ನು ಶೋಷಿಸುವ ಅಥವಾ ಕ್ರೂರವಾಗಿ ನಡೆಸುವ ಸಂದರ್ಭಗಳು ಬಹಳ ಇವೆ. ಗರುಡ ಪುರಾಣದ ಪ್ರಕಾರ, ಅಂತಹ ಪುರುಷರು ಈ ಜನ್ಮದಲ್ಲಿ ಸಾಮಾಜಿಕ ತಿರಸ್ಕಾರವನ್ನು ಎದುರಿಸುವುದಲ್ಲದೆ, ಮರಣದ ನಂತರ ಯಮಲೋಕದಲ್ಲಿ ಭಯಾನಕ ಚಿತ್ರಹಿಂಸೆಗಳನ್ನು ಸಹ ಎದುರಿಸುತ್ತಾರೆ.
ಮಾನಸಿಕ, ದೈಹಿಕ ನೋವು
ತಮ್ಮ ಹೆಂಡತಿಯರಿಗೆ ಅವಿವೇಕದಿಂದ ಮಾನಸಿಕ ಅಥವಾ ದೈಹಿಕ ನೋವನ್ನುಂಟುಮಾಡುವ ಗಂಡಂದಿರನ್ನು ಯಮಲೋಕದಲ್ಲಿ ʼಕುಂಭೀಪಾಕʼ ಎಂಬ ನರಕಕ್ಕೆ ದೂಡಲಾಗುತ್ತದೆ ಎಂದು ಗರುಡ ಪುರಾಣ ಹೇಳುತ್ತದೆ. ಅಲ್ಲಿ, ಪಾಪಿಯನ್ನು ಕುದಿಯುವ ಎಣ್ಣೆಯ ಕಡಾಯಿಗಳಲ್ಲಿ ಎಸೆಯಲಾಗುತ್ತದೆ. ತಮ್ಮ ಹೆಂಡತಿಯರ ಗೌರವವನ್ನು ರಕ್ಷಿಸುವ ಬದಲು ಸಮಾಜದಲ್ಲಿ ಅವರನ್ನು ಕಡೆಗಣಿಸುವವರಿಗೆ ಈ ಶಿಕ್ಷೆ.
ಅನೈತಿಕ ಸಂಬಂಧ
ಪತ್ನಿಯನ್ನು ಕಡೆಗಣಿಸಿ ಇನ್ನೊಬ್ಬ ಮಹಿಳೆಯೊಂದಿಗೆ ಹೋಗುವ, ಆಕೆಯೊಂದಿಗೆ ಅನೈತಿಕ ಸಂಬಂಧ ಹೊಂದುವ, ಹೆಂಡತಿಗೆ ದ್ರೋಹ ಮಾಡುವ, ಅವಳನ್ನು ತ್ಯಜಿಸುವ, ಅದಕ್ಕಾಗಿ ಪತ್ನಿಯನ್ನು ನಿಂದಿಸುವ ಪುರುಷನು ರೌರವ ನರಕದಲ್ಲಿ ಬಹುಕಾಲ ಶಿಕ್ಷೆ ಅನುಭವಿಸುತ್ತಾನೆ. ನಂತರ ತನ್ನ ಮುಂದಿನ ಜನ್ಮದಲ್ಲಿ ಭೀಕರ ಕಾಯಿಲೆಗಳು ಮತ್ತು ಬಡತನವನ್ನು ಎದುರಿಸುತ್ತಾನೆ. ಗರುಡ ಪುರಾಣವು ಹೆಂಡತಿಗೆ ದ್ರೋಹ ಮಾಡುವುದನ್ನು ಅತ್ಯಂತ ದೊಡ್ಡ ಪಾಪವೆಂದು ಪರಿಗಣಿಸುತ್ತದೆ .
ಹಸಿವಿನಿಂದ ಬಳಲಿಸುವಿಕೆ
ತನ್ನ ಹೆಂಡತಿಯನ್ನು ನಿಂದಿಸುವ ಅಥವಾ ಹಸಿವಿನಿಂದ ಬಳಲಿಸು ಪುರುಷನು ತನ್ನ ದಾನ ಕಾರ್ಯಗಳು, ಧಾರ್ಮಿಕ ಆಚರಣೆಗಳು ಮತ್ತು ತೀರ್ಥಯಾತ್ರೆಗಳ ಪ್ರತಿಫಲವನ್ನು ಪಡೆಯುವುದಿಲ್ಲ. ದೇವರು ಅಂತಹ ವ್ಯಕ್ತಿಯ ಪ್ರಾರ್ಥನೆಗಳನ್ನು ಎಂದಿಗೂ ಸ್ವೀಕರಿಸುವುದಿಲ್ಲ. ಗೃಹಸ್ಥ ಜೀವನದಲ್ಲಿ, ಹೆಂಡತಿಯನ್ನು ಲಕ್ಷ್ಮಿಯ ರೂಪವೆಂದು ಪರಿಗಣಿಸಲಾಗುತ್ತದೆ. ಲಕ್ಷ್ಮಿಯನ್ನು ಅಗೌರವಿಸುವಲ್ಲಿ ಬಡತನ ಮತ್ತು ಅಶಾಂತಿ ಮೇಲುಗೈ ಸಾಧಿಸುತ್ತದೆ. ಅಂಥವನು ಈ ಜೀವನದಲ್ಲೇ ಬಡವನಾಗುತ್ತಾನೆ. ಸತ್ತ ಮೇಲೆ ಶಿಕ್ಷೆ ಪಡೆಯುತ್ತಾನೆ.
ಕಿರುಕುಳ ನೀಡುವವನು
ತವರಿನಿಂದ ವರದಕ್ಷಿಣೆ ತಾ ಎಂದು ಪೀಡಿಸುವುದು, ಅವನ ಜೊತೆ ಯಾಕೆ ಮಾತಾಡಿದೆ ಎಂದು ಸಂಶಯಿಸುವುದು, ಮಕ್ಕಳಿಗೆ ಯಾಕೆ ಹೊಡೆದೆ ಎಂದು ನಿಂದಿಸಿ ಆಕೆಯನ್ನು ಶಿಕ್ಷಿಸುವುದು, ಮನೆಯ ಖರ್ಚಿಗೆ ಹಣ ಕೊಡದೆ ಸತಾಯಿಸುವುದು, ಆಕೆ ಅಳುತ್ತಾ ಮಲಗುವಂತೆ ಮಾಡುವವನನ್ನು ಯಮನ ದೂತರು ಕುದಿಯುವ ಎಣ್ಣೆಯ ಪಾಕಕ್ಕೆ ಎಸೆಯುತ್ತಾರೆ. ಅಲ್ಲಿ ಎರಡು ಸಾವಿರ ವರ್ಷಗಳ ಕಾಲ ಬೆಂದ ಬಳಿಕ ಭೂಮಿಗೆ ಎಸೆಯುತ್ತಾರೆ.
ತೊರೆದು ಹೋಗುವವನು
ಸನ್ಯಾಸದ ಕಾರಣದಿಂದ ಪತ್ನಿಯ- ಬಂಧುಗಳ ಅಪ್ಪಣೆ ಪಡೆದು ಹೋಗುವವನನ್ನು ಹೊರತುಪಡಿಸಿ, ಸಕಾರಣವಿಲ್ಲದೆ, ಹೆಂಡತಿ ಮಕ್ಕಳನ್ನು ನಡುನೀರಿನಲ್ಲಿ ಕೈಬಿಟ್ಟು ಹೋಗುವವನನ್ನು ನರಕದ ಬಂಟರು ಕುರಿಯನ್ನು ಎಳೆದೊಯ್ಯುವಂತೆ ಎಳೆದೊಯ್ದು ಚರ್ಮ ಸುಲಿಯುತ್ತಾರೆ. ಗಾಯಗಳಿಗೆ ಉಪ್ಪು ಹಚ್ಚಿ ಕಾದ ಕಾವಲಿಯಲ್ಲಿ ಹೊರಳಿಸುತ್ತಾರೆ. ಪುರುಷನು ಯಾವತ್ತೂ ಕುಟುಂಬದ ಜವಾಬ್ದಾರಿಯನ್ನು ಅರಿತು ನಿರ್ವಹಿಸಬೇಕು.
ಕೆಟ್ಟ ಕೆಲಸ ಮಾಡಿಸುವವನು
ಕೆಲವು ದುಷ್ಟ ಪುರುಷರು ತಮ್ಮ ಲೌಕಿಕ ಸ್ವಾರ್ಥ, ಲೋಭಕ್ಕಾಗಿ ತಮ್ಮ ಪತ್ನಿಯರನ್ನು ಅನ್ಯ ಪುರುಷರ ಬಳಿಗೆ ಬಳಸಿಕೊಳ್ಳಲು ಕಳಿಸುತ್ತಾರೆ. ಇಂಥ ಪಾಪ ಎಸಗುವ ನೀಚರಿಗೆ ಮುಕ್ತಿಯೇ ಇಲ್ಲ. ಇವರ ಆತ್ಮಕ್ಕೆ ನರಕದಲ್ಲಿರುವ ಎಲ್ಲ ಶಿಕ್ಷೆಯನ್ನೂ ನೀಡಲಾಗುತ್ತದೆ. ಇವರನ್ನು ಯಮ ದೂತರು ಕೂಡ ತುಂಬ ನಿಕೃಷ್ಟವಾಗಿ ನಡೆಸಿಕೊಳ್ಳುತ್ತಾರೆ.
ಮನೆಯ ಶಾಂತಿ ಮತ್ತು ಸಂತೋಷವು ಅದರ ಮಹಿಳೆಯರಿಗೆ ತೋರಿಸುವ ಗೌರವಕ್ಕೆ ಸಂಬಂಧಿಸಿದೆ. ಪುರುಷನು ತನ್ನ ಹೆಂಡತಿಯನ್ನು ಗೌರವಿಸಿದಾಗ ಅವರು ಆರೋಗ್ಯಕರ ಸಮಾಜಕ್ಕೆ ಅಡಿಪಾಯ ಹಾಕುತ್ತಿದ್ದಾನೆ ಎಂದರ್ಥ. ಈ ಮೇಲಿನ ಅಭಿಪ್ರಾಯಗಳು ಗರುಡ ಪುರಾಣದಿಂದ ಉದೃತವಾಗಿವೆ. ಸುವರ್ಣ ನ್ಯೂಸ್ ಇದನ್ನು ಸಮರ್ಥಿಸುವುದಿಲ್ಲ.


