ಗರುಡ ಪುರಾಣದ ಪ್ರಕಾರ, ಕೆಲವರು ಆತ್ಮಗಳು ಪ್ರೇತ ಯೋನಿಯಲ್ಲಿ ಸಿಲುಕಿಕೊಂಡು, ಭೂಮಿಯ ಮೇಲೆ ತಮ್ಮ ಸಂಬಂಧಿಕರು ಹಾಗೂ ಪ್ರೀತಿಪಾತ್ರರ ಸುತ್ತಮುತ್ತಲೂ ಸುಳಿದಾಡುತ್ತಿರುತ್ತವೆ. ಏಕೆ ಅವುಗಳಿಗೆ ಈ ಸ್ಥಿತಿ? ಇಲ್ಲಿದೆ ನೋಡಿ.

ಮರಣದ ನಂತರ ಆತ್ಮಕ್ಕೆ ಏನಾಗುತ್ತದೆ? ಕೆಲವು ಆತ್ಮಗಳು ಏಕೆ ಶಾಂತಿ ಪಡೆಯದೇ ಭೂಮಿಯ ಮೇಲೆಯೇ ತಿರುಗಾಡುತ್ತವೆ ಎಂಬ ಮಾತು ನಮ್ಮ ಸಂಸ್ಕೃತಿಯಲ್ಲಿ ಶತಮಾನಗಳಿಂದಲೂ ಇದೆ. ಭೂತ, ಪ್ರೇತ, ಅತೃಪ್ತ ಆತ್ಮಗಳ ಕಥೆಗಳು ಊರೂರುಗಳಲ್ಲಿ, ತಾತ-ಅಜ್ಜಿ ಹೇಳುವ ಕಥೆಗಳಲ್ಲಿ, ಇಂದಿನ ವೆಬ್ ಟ್ರೆಂಡ್‌ಗಳಲ್ಲೂ ಕಾಣಿಸುತ್ತವೆ. ಈ ಎಲ್ಲದಕ್ಕೂ ಉತ್ತರವನ್ನು ಗರುಡ ಪುರಾಣ ಸ್ಪಷ್ಟವಾಗಿ ನೀಡುತ್ತದೆ.

ಹಿಂದೂ ಧರ್ಮದಲ್ಲಿ ಗರುಡ ಪುರಾಣವನ್ನು ಮರಣಾನಂತರದ ಜೀವನದ ಮಾರ್ಗದರ್ಶಿ ಎಂದು ಪರಿಗಣಿಸಲಾಗುತ್ತದೆ. ಗರುಡ ಪುರಾಣದ ಪ್ರಕಾರ ದೇಹ ಸತ್ತರೂ ಆತ್ಮ ತಕ್ಷಣವೇ ಮುಕ್ತಿಯಾಗುವುದಿಲ್ಲ. ಸಾವು ಆದ ಬಳಿಕ ಆತ್ಮವು ಪ್ರೇತ ಯೋನಿಯಲ್ಲಿ ಇರುತ್ತದೆ. ಈ ಹಂತದಲ್ಲಿ ಆತ್ಮಕ್ಕೆ ದೇಹವಿಲ್ಲ, ಆದರೆ ಹಸಿವು, ಬಾಯಾರಿಕೆ, ನೋವು, ಆಸೆಗಳು ಇರುತ್ತವೆ. ಇದರಿಂದಲೇ ಆತ್ಮ ಭೂಮಿಯ ಮೇಲೆಯೇ ಅಲೆಯುತ್ತದೆ ಎಂದು ಹೇಳಲಾಗುತ್ತದೆ.

ಆತ್ಮ ಭೂಮಿಯಲ್ಲೇ ಅಲೆಯಲು ಕಾರಣಗಳು ಹೀಗಿವೆ:

1. ಅಪೂರ್ಣ ಆಸೆಗಳು: ಜೀವಿತದಲ್ಲಿ ತೀರಿಸಿಕೊಳ್ಳಲಾಗದ ಆಸೆಗಳು – ಮಕ್ಕಳ ಭವಿಷ್ಯ, ಹಣ, ಆಸ್ತಿ, ಪ್ರೀತಿ, ಪ್ರತೀಕಾರ – ಇವು ಆತ್ಮವನ್ನು ಬಂಧಿಸುತ್ತವೆ. ಇದನ್ನು ಇಂದಿನ ಭಾಷೆಯಲ್ಲಿ ಹೇಳುವುದಾದರೆ, emotional attachment. ಭಾವನಾತ್ಮಕವಾಗಿ ಯಾವುದಕ್ಕೇ ಆಗಲಿ ಕಟ್ಟುಬೀಳುವುದು ಲೇಸಲ್ಲ.

2. ಅಕಾಲ ಮರಣ: ಅಪಘಾತ, ಆತ್ಮಹತ್ಯೆ, ಹತ್ಯೆ ಮುಂತಾದ ಅಕಾಲ ಮರಣ ಸಂಭವಿಸಿದರೆ, ಆತ್ಮಕ್ಕೆ ತನ್ನ ಸಾವು ಒಪ್ಪಿಕೊಳ್ಳಲು ಸಮಯ ಬೇಕಾಗುತ್ತದೆ. ಅದು ದಿಕ್ಕುಗೆಟ್ಟವರಂತೆ, ಯಾಕೆ ಹೀಗಾಯಿತು ಎಂದು ಕೇಳುತ್ತಾ ಅಲೆದಾಡುತ್ತದೆ. ಇಂತಹ ಆತ್ಮಗಳು ಹೆಚ್ಚು ಕಾಲ ಭೂಮಿಯ ಮೇಲೆಯೇ ಉಳಿಯುತ್ತವೆ ಎಂದು ಪುರಾಣ ಹೇಳುತ್ತದೆ.

3. ಅಂತ್ಯಕ್ರಿಯೆಗಳ ಕೊರತೆ: ಶ್ರಾದ್ಧ, ಪಿಂಡಪ್ರದಾನ, ತರ್ಪಣ ಇವು ಸರಿಯಾಗಿ ನಡೆಯದಿದ್ದರೆ ಆತ್ಮಕ್ಕೆ ಮುಂದಿನ ಲೋಕದ ದಾರಿ ತೆರೆದುಕೊಳ್ಳುವುದಿಲ್ಲ. ಅದಕ್ಕೇ ನಮ್ಮ ಸಂಸ್ಕೃತಿಯಲ್ಲಿ ಈ ಕರ್ಮಗಳಿಗೆ ಅಪಾರ ಮಹತ್ವ ನೀಡಲಾಗಿದೆ. ಮಕ್ಕಳು ಸೂಕ್ತ ಕರ್ಮಾದಿಗಳ ಮೂಲಕ ಪಿತೃಗಳಿಗೆ ಸ್ವರ್ಗದ ದಾರಿ ತೆರೆಯಬೇಕಾಗುತ್ತದೆ.

4. ಪಾಪಕರ್ಮಗಳ ಭಾರ: ಜೀವಿತದಲ್ಲಿ ಮಾಡಿದ ಅನ್ಯಾಯ, ಮೋಸ, ಹಿಂಸೆ ಇವು ಆತ್ಮದ ಮೇಲೆ ಭಾರವಾಗಿ ಉಳಿಯುತ್ತವೆ. ಈ ಪಾಪಫಲ ಅನುಭವಿಸುವ ತನಕ ಆತ್ಮಕ್ಕೆ ಶಾಂತಿ ಸಿಗುವುದಿಲ್ಲ. ಪಾಪ ಕ್ಷಯವಾಗುವವರೆಗೂ ಮತ್ತೆ ಮತ್ತೆ ಇಲ್ಲಿ ಹುಟ್ಟಬೇಕು. ಹಾಗೆ ಹುಟ್ಟಲು ಸೂಕ್ತ ಜೀವಬೀಜ- ಜೀವಯೋನಿ ಸಿಗುವವರೆಗೂ ಅಲೆದಾಡಬೇಕಾಗುತ್ತದೆ.

ಪ್ರೇತ ಯೋನಿ ಎಂದರೇನು?

ಗರುಡ ಪುರಾಣದ ಪ್ರಕಾರ, ಪ್ರೇತ ಯೋನಿ ಒಂದು ಮಧ್ಯಂತರ ಹಂತ. ಇಲ್ಲಿ ಆತ್ಮವು ನೋವು ಅನುಭವಿಸುತ್ತದೆ, ಆದರೆ ಅದರ ಮಾತು ಯಾರಿಗೂ ಕೇಳಿಸದು. ಇದಕ್ಕಾಗಿಯೇ ಪುರಾಣದಲ್ಲಿ “ಜೀವಿತದಲ್ಲಿ ಮಾಡಿದ ಕರ್ಮಗಳೇ ಮರಣಾನಂತರ ಆತ್ಮದ ಸಂಗಾತಿಗಳು” ಎಂದು ಹೇಳಲಾಗಿದೆ.

ಆತ್ಮಕ್ಕೆ ಶಾಂತಿ ಸಿಗುವುದು ಶ್ರಾದ್ಧ ಮತ್ತು ತರ್ಪಣ, ಗಯಾ ಕ್ಷೇತ್ರದ ಪಿಂಡಪ್ರದಾನ, ಗರುಡ ಪುರಾಣ ಪಠಣ, ದಾನ, ಧರ್ಮ, ಅನ್ನದಾನಗಳಿಂದ. ಇವುಗಳಿಂದ ಆತ್ಮಕ್ಕೆ ಮುಂದಿನ ಲೋಕದ ದಾರಿ ಸುಗಮವಾಗುತ್ತದೆ ಎಂದು ನಂಬಲಾಗಿದೆ.

ವಿಜ್ಞಾನ ಆತ್ಮದ ಅಸ್ತಿತ್ವವನ್ನು ನೇರವಾಗಿ ಒಪ್ಪುವುದಿಲ್ಲ. ಆದರೆ ಗರುಡ ಪುರಾಣ ನಮ್ಮನ್ನು ಒಂದು ಮುಖ್ಯ ವಿಚಾರಕ್ಕೆ ಕರೆದೊಯ್ಯುತ್ತದೆ- ಜೀವಿತವನ್ನು ಜವಾಬ್ದಾರಿಯಿಂದ ಬದುಕು, ಏಕೆಂದರೆ ಕರ್ಮ ತಪ್ಪಿಸುವ ದಾರಿ ಇಲ್ಲ ಎನ್ನುತ್ತದೆ. ಇದು ಭಯ ಹುಟ್ಟಿಸಲಲ್ಲ, ಬದಲು ಬದುಕಿಗೆ ದಿಕ್ಕು ತೋರಿಸಲು.

ಆತ್ಮ ಭೂಮಿಯ ಮೇಲೆಯೇ ತಿರುಗಾಡುತ್ತದೆ ಎಂಬ ನಂಬಿಕೆ ಕೇವಲ ಭೂತಕಥೆಯಲ್ಲ. ಅದು ನಮ್ಮ ಸಂಸ್ಕೃತಿ, ಕರ್ಮ ಸಿದ್ಧಾಂತ ಮತ್ತು ಮಾನಸಿಕ ಬಂಧನಗಳ ಪ್ರತಿಬಿಂಬ. ಇಂದಿನ ಡಿಜಿಟಲ್ ಯುಗದಲ್ಲೂ, ರೀಲ್ಸ್ ಮತ್ತು ಪಾಡ್‌ಕಾಸ್ಟ್‌ಗಳ ನಡುವೆ, ʼಶಾಂತ ಮರಣಕ್ಕೆ ಶುದ್ಧ ಜೀವನವೇ ಮೂಲʼ ಎಂಬ ಮಾತನ್ನು ಗರುಡ ಪುರಾಣ ನೆನಪಿಸುತ್ತದೆ.