ಗರುಡ ಪುರಾಣ (Garuda Purana) ಮರಣಾನಂತರ ಆತ್ಮಕ್ಕೆ ಏನಾಗುತ್ತದೆ, ಸಜ್ಜನರಿಗೆ ಸಿಗುವ ಪುರಸ್ಕಾರ ಮತ್ತು ದುಷ್ಟರಿಗೆ ವಿಧಿಸುವ ಶಿಕ್ಷೆಗಳ ಬಗ್ಗೆ ವಿವರಿಸುತ್ತದೆ. ಜೊತೆಗೆ, ಮರಣದ ಕ್ಷಣದಲ್ಲಿ, ಅದಕ್ಕೆ ಮೊದಲು ಏನಾಗುತ್ತದೆ ಎಂಬುದನ್ನೂ ತಿಳಿಸುತ್ತದೆ.
ಸಾಯುವಾಗ ಮನುಷ್ಯನಿಗೆ ಏನಾಗುತ್ತದೆ? ಸತ್ತ ನಂತರ ಆತ್ಮಕ್ಕೆ ಏನಾಗುತ್ತದೆ? ಸಜ್ಜನರಿಗೆ ಏನು ಪುರಸ್ಕಾರ? ದುಷ್ಟರಿಗೆ ಏನು ಶಿಕ್ಷೆ? ಇದೆಲ್ಲವನ್ನೂ ನಮ್ಮ ಗರುಡ ಪುರಾಣ ವಿವರಿಸುವ ಪ್ರಯತ್ನ ಮಾಡಿದೆ. ಮರಣಾನಂತರದ ಜೀವನದ ಮೇಲೆ ಕೂಡ ಬೆಳಕು ಚೆಲ್ಲಲು ಪ್ರಯತ್ನಿಸಿದೆ. ಹಿಂದೂ ಧರ್ಮದ ಹದಿನೆಂಟು ಮಹಾಪುರಾಣಗಳಲ್ಲಿ ಒಂದಾದ ಗರುಡ ಪುರಾಣವನ್ನು ಬರೆದವರು ವೇದವ್ಯಾಸರು ಎನ್ನಲಾಗುತ್ತದೆ. ಗರುಡ ಎಂಬುದು ವಿಷ್ಣುವನ್ನು ಹೊತ್ತು ಹಾರುವ ಪವಿತ್ರ ಪಕ್ಷಿಯ ಹೆಸರು. ಈ ಪುಸ್ತಕವು ಸಾವು ಹಾಗೂ ಸಾವಿನ ನಂತರ ಬಗ್ಗೆ ಮಾತನಾಡುತ್ತದೆ. ಗರುಡ ಪುರಾಣದ ಪ್ರಕಾರ ಒಬ್ಬ ವ್ಯಕ್ತಿಯು ಭೂಮಿಯ ಮೇಲೆ ಮಾಡುವ ವಿವಿಧ ಕಾರ್ಯಗಳಿಗೆ ಅವನು ಸತ್ತ ನಂತರ ವಿವಿಧ ಶಿಕ್ಷೆಗಳನ್ನು ಅನುಭವಿಸುತ್ತಾನೆ. ಮೊದಲೇ ಇಂತಹ ತಪ್ಪಿಗೆ ಇಂತಹ ಶಿಕ್ಷೆ ಎಂಬುದು ನಿಗದಿಯಾಗಿರುತ್ತದೆ. ಈ ಮೂಲಕ ಪುನರ್ಜನ್ಮ ಮತ್ತು ವಿಮೋಚನೆಯ ಪ್ರಕ್ರಿಯೆಗಳ ಒಳನೋಟಗಳನ್ನು ಈ ಪುರಾಣವು ಒದಗಿಸುತ್ತದೆ.
ಬಹುಶಃ ನಮ್ಮನ್ನು ಬದುಕಿಗಿಂತ ಹೆಚ್ಚು ಕಾಡುವುದು ಸಾವು. ಸಾವು ಎಂದರೆ ನೋವು ಹಾಗೂ ಅಂತ್ಯ. ನಾವೆಲ್ಲರೂ ಒಂದಲ್ಲ ಒಂದು ದಿನ ಸಾಯಲೇಬೇಕು ನಿಜ. ಆದ್ರೆ, ಸತ್ತ ನಂತರ ಏನಾಗುತ್ತದೆ ಎಂಬ ಪ್ರಶ್ನೆಯ ಎಲ್ಲರನ್ನೂ ಕಾಡುವುದು ಸಹಜ. ಅದಕ್ಕೆ ಗರುಡಪುರಾಣದ ಪ್ರಕಾರ ಇಲ್ಲಿದೆ ಉತ್ತರ. ಗರುಡ ಪುರಾಣದ ಪ್ರಕಾರ ಜಗತ್ತಿನಲ್ಲಿ 84 ಲಕ್ಷ ವಿವಿಧ ಜಾತಿಯ ಜೀವ ಜಂತುಗಳಿವೆ, ಅಂದರೆ ಆತ್ಮಗಳಿವೆ. ಇದರಲ್ಲಿ ಕೀಟಗಳು, ಪ್ರಾಣಿಗಳು, ಪಕ್ಷಿಗಳು, ಮರಗಳು ಹಾಗೂ ಮನುಷ್ಯ ಹೀಗೆ ಜೀವಂತಿಕೆ ಇರುವ ಎಲ್ಲವೂ ಸೇರಿವೆ. ಗರುಡ ಪುರಾಣದ ಪ್ರಕಾರ ವ್ಯಕ್ತಿಯ ಮರಣದ ಆತ್ಮವು ದೇಹವನ್ನು ತೊರೆದಾಗ ಹಸಿವು, ಬಾಯಾರಿಕೆ, ಕೋಪ, ದ್ವೇಷ ಹಾಗೂ ಕಾಮದಂತಹ ಭಾವನೆಗಳು ಅದರಲ್ಲಿ ಉಳಿದು ಹೋಗುತ್ತದೆ.
72 ಗಂಟೆ ಮೊದಲು ಏನಾಗುತ್ತದೆ?
ಮಾನವನ ಸಾವಿಗೂ 72 ಗಂಟೆಗಳ ಮುನ್ನ ಅವನ ಮುಖದಲ್ಲಿ ಹಾಗೂ ದೇಹದಲ್ಲಿ ಕೆಲವು ಬದಲಾವಣೆಗಳು ನಡೆಯುತ್ತವೆ. ಸಾವಿನ ಕಾರಣದಿಂದಾಗಿ ಅವನ ಮುಖದ ಅಭಿವ್ಯಕ್ತಿಗಳು ಬದಲಾಗಲು ಪ್ರಾರಂಭಿಸುತ್ತವೆ. ಈ ಸಂದರ್ಭದಲ್ಲಿ ಅನೇಕ ಜನರು ತಮ್ಮ ಪೂರ್ವಜರನ್ನು, ಕರೆದುಕೊಂಡು ಹೋಗಲು ಬಂದವರ ಮುಖಗಳನ್ನು ನೋಡುತ್ತಾರೆ. ಹಾಗೂ ಅನೇಕ ಜನರು ಸಾಯುವ ಮೊದಲು ಜೀವನದಿಂದ ಮುಕ್ತರಾಗುತ್ತಿರುವ ಬಗ್ಗೆ ಇತರ ಜನರಿಗೂ ಹೇಳುತ್ತಾರೆ ಎನ್ನಲಾಗಿದೆ.
ಗರುಡ ಪುರಾಣದ ಪ್ರಕಾರ, ಸತ್ತ ವ್ಯಕ್ತಿಯು ಪಡೆಯುವ ಮುಂದಿನ ಜನ್ಮ ಅವನು ಮಾಡಿದ ಕಾರ್ಯಗಳಿಂದ ನಿರ್ಧರಿಸಲ್ಪಡುತ್ತದೆ. ಕೆಟ್ಟ ಕರ್ಮಗಳನ್ನು ಮಾಡುವ ವ್ಯಕ್ತಿಯ ಆತ್ಮವು ಮರಣದ ಪ್ರಪಂಚದಲ್ಲಿ ಅಂದರೆ ಭೂಮಿಯ ಮೇಲೆ ಯಾವುದೋ ರೂಪದಲ್ಲಿ ಹುಟ್ಟುತ್ತದೆ. ಇದರೊಂದಿಗೆ ಹುಟ್ಟಿದ ಮೇಲೆ ಅಲೆದಾಡುತ್ತಲೇ ಇರುತ್ತದೆ. ಮತ್ತೊಂದೆಡೆ, ಒಬ್ಬ ವ್ಯಕ್ತಿಯು ನೈಸರ್ಗಿಕ ರೀತಿಯಲ್ಲಿ ಸಾಯದಿದ್ದರೆ, ಅರ್ಥಾತ್ ಅಪಘಾತ, ಕೊಲೆ ಅಥವಾ ಆತ್ಮಹತ್ಯೆ ಇತ್ಯಾದಿಗಳಂತೆ ಅಕಾಲಿಕವಾಗಿ ಮರಣಹೊಂದಿದರೆ, ಅಂತಹ ವ್ಯಕ್ತಿಯ ಆತ್ಮವು ಪ್ರೇತಲೋಕಕ್ಕೆ ಹೋಗುತ್ತದೆ ಎನ್ನಲಾಗಿದೆ.
ಪುರಾಣಗಳ ಪ್ರಕಾರ. ಆತ್ಮವು ದೇಹದಿಂದ ಅರ್ಥಾತ್, ಆತ್ಮವು ದೇಹವನ್ನು ಕಾಲ್ಬೆರಳುಗಳಿಂದ ಬೇರ್ಪಡಿಸುತ್ತದೆ. ಅದಕ್ಕಾಗಿಯೇ ಸಾವಿನ ನಂತರ, ಕಾಲ್ಬೆರಳುಗಳನ್ನು ಒಟ್ಟಿಗೆ ಕಟ್ಟಲಾಗುತ್ತದೆ. ಇದನ್ನು ಮಾಡದಿದ್ದರೆ, ಆತ್ಮವು ಮತ್ತೆ ದೇಹವನ್ನು ಪ್ರವೇಶಿಸುತ್ತದೆ ಎಂಬ ನಂಬಿಕೆ ಇದೆ. ಇದರೊಂದಿಗೆ ಆತ್ಮವು ತಲೆಯಿಂದ ಹೊರಹೋಗುತ್ತದೆ ಜೊತೆಗೆ ಬಾಯಿಂದಲೂ ಸಾಯುತ್ತಾರೆ, ಹಾಗೂ ಕಣ್ಣು ತೆರೆದು ಸಹ ಸಾಯುತ್ತಾರೆ ಎನ್ನಲಾಗಿದೆ.
ಹಲವು ನಂಬಿಕೆಗಳ ಪ್ರಕಾರ, ಸತ್ತವರ ಆತ್ಮ ಶಾಂತಿಗಾಗಿ ಗರುಡ ಪುರಾಣವನ್ನು ಪಠಿಸಲಾಗುತ್ತದೆ. ಮನೆಯಲ್ಲಿ ಯಾರಾದರೂ ಸತ್ತ ನಂತರ 12 ರಿಂದ 13 ದಿನಗಳವರೆಗೆ ಗರುಡ ಪುರಾಣವನ್ನು ಪಠಿಸುವ ರೂಢಿ ಇದೆ. ಕುಟುಂಬದಲ್ಲಿ ಯಾರಾದರೂ ಸತ್ತರೆ, ಗರುಡ ಪುರಾಣವನ್ನು ಓದಿಸಿ ಕೇಳುವುದರಿಂದ ಈ ಭೀಕರ ದುರಂತವನ್ನು ಸಹಿಸಿಕೊಳ್ಳಲು ಅವರಿಗೆ ಶಕ್ತಿ ಬರುತ್ತದೆ. ವ್ಯಕ್ತಿ ತನ್ನ ಜೀವನದಲ್ಲಿ ಯಾವುದೇ ಸಂದರ್ಭದಲ್ಲೂ ಒಳ್ಳೆಯ ಕಾರ್ಯಗಳನ್ನು ಮಾಡುವುದನ್ನು ನಿಲ್ಲಿಸಬಾರದು ಎಂಬುದು ಗರುಡ ಪುರಾಣ ಕಲಿಸುವ ಪಾಠ.

