ಖಗ್ರಾಸ ಚಂದ್ರ ಗ್ರಹಣ: ಯಾವ ರಾಶಿಯವರಿಗೇನು ಫಲ?

First Published 24, Jul 2018, 7:13 PM IST
Full lunar eclipse which sun sign affect much and solution
Highlights

ಶತಮಾನದ ಸುದೀರ್ಘ ಹಾಗೂ ಸಂಪೂರ್ಣ ಚಂದ್ರ ಗ್ರಹಣ ಜು.27ರಂದು ಗೋಚರಿಸಲಿದೆ. ಈ ಗ್ರಹಣದ ಬಗ್ಗೆ ಆಸ್ತಿಕರು ಹೆಚ್ಚು ತಲೆ ಕೆಡಿಸಿಕೊಂಡಿದ್ದು, ಯಾವುದೇ ಶುಭ ಕಾರ್ಯಗಳನ್ನು ಮಾಡದಿರಲು ನಿರ್ಧರಿಸಿದ್ದಾರೆ. ಅದರಲ್ಲಿಯೂ ರಾಜಕಾರಣಿಗಳಂತೂ ಕೆಲ ಮೌನಕ್ಕೆ ಶರಣಾಗುವುದು ಒಳಿತೆಂದು ನಿರ್ಧರಿಸಿದ್ದಾರೆ. ಯಾವ ರಾಶಿಯವರಿಗೆ ಯಾವ ಫಲ? ಇಲ್ಲಿದೆ ಓದಿ.....

ಗ್ರಹಣ ಸಂಭವಿಸುವ ದಿನಾಂಕ 27-07-18 - ಶುಕ್ರವಾರ

ಶ್ರೀ ವಿಲಂಬಿ ನಾಮ ಸಂವತ್ಸರ

ದಕ್ಷಿಣಾಯನ
ಗ್ರೀಷ್ಮ 
ಋತು 
ಆಷಾಢ ಮಾಸ 
ಶುಕ್ಲ ಪಕ್ಷ

ಪೌರ್ಣಮಿ ತಿಥಿ 

ಉತ್ತರಾಷಾಢ ನಕ್ಷತ್ರ 
ರಾಹುಕಾಲ - 07.34 ರಿಂದ 09.14

ಯಮಗಂಡ ಕಾಲ 10.54 ರಿಂದ 12.33

ಗುಳಿಕ ಕಾಲ 02.13 ರಿಂದ 03.53

ಗ್ರಹಣ ದಿನದ ಗ್ರಹಸ್ಥಿತಿಯನ್ನು ರಾಶಿ ಚಕ್ರದಲ್ಲಿ ಗಮನಿಸಿಕೊಳ್ಳಬಹುದು.  ಕರ್ಕಟಕ ರಾಶಿಯಲ್ಲಿ ಸೂರ್ಯ, ಬುಧ, ರಾಹುಗಳಿದ್ದು, ಶುಕ್ರನು  ಸಿಂಹರಾಶಿಲ್ಲಿದ್ದಾನೆ , ತುಲಾ ರಾಶಿಯಲ್ಲಿ ಗುರು, ಧನಸ್ಸು ರಾಶಿಯಲ್ಲಿ ಶನಿ ಹಾಗೂ  ಮಕರ ರಾಶಿಯಲ್ಲಿ ಕುಜ-ಕೇತುಗಳ ಯುತಿ ಇದೆ. ಚಂದ್ರ ಮಕರದಲ್ಲಿ ಕೇತು, ಕುಜಯುಕ್ತನಾಗಿದ್ದಾನೆ. ಇದನ್ನು ಗಮನಿಸಿದರೆ ಕಾಳ ಸರ್ಪ ದೋಷವೂ ಕಾಣುತ್ತದೆ. ಇಡೀ ದಿನದ ಕುಂಡಲಿ ಗಮನಿಸಿದರೆ ರಾಹು-ಕೇತು ಮಧ್ಯದಲ್ಲಿ  ಎಲ್ಲ ಗ್ರಹಗಳಿವೆ. 


ಗ್ರಹಗಳು ಈ ಸ್ಥಿತಿಯಲ್ಲಿರುವಾಗ ನಿಮ್ಮ ರಾಶಿಯ ಮೇಲೆ ಅವುಗಳು  ಹೇಗೆ ಪರಿಣಾಮ ಬೀರುತ್ತವೆ ಹಾಗೂ ಯಾವ ಫಲವನ್ನ ಕೊಡುತ್ತವೆ ಎಂಬುದನ್ನು ನೋಡೋಣ.  ಇದೇ 27 ಘೋರ ಗ್ರಹಣ ಸಂಭವಿಸಲಿದೆ. ಗ್ರಹಣ ಅಂದ್ರೆ ಏನು..? ಗೃಹ್ಣಾತಿ ಇತಿ ಗ್ರಹಣ ಅಂತ ಅಂದ್ರೆ ಹಿಡಿಯುವ ಪ್ರಕ್ರಿಯೆಗೆ ಗ್ರಹಣ ಅಂತಾರೆ . ಹಾಗಾದ್ರೆ ಏನು ಹಿಡಿಯತ್ತೆ..? ಪುರಾಣಗಳ ಪ್ರಕಾಣ ಕೇತು ಚಂದ್ರನನ್ನ ಹಿಡಿಯುತ್ತಾನೆ. ವಿಜ್ಞಾನದ ಪ್ರಕಾರ ಸೂರ್ಯ ಭೂಮಿ ಚಂದ್ರರ ಸಮಾನ ರೇಖೆ. ಏನೇ ಇರಲಿ ಗ್ರಹಗಳು ಮನುಷ್ಯರ ಮೇಲೆ ಪ್ರಭಾವ ಬೀರುತ್ತವೆ ಎನ್ನುವುದರಲ್ಲಿ ಸಂದೇಹವಿಲ್ಲ. ಇಂಥ ವಿಶೇಷ ಸಂದರ್ಭದಲ್ಲಿ ಯಾವ ರಾಶಿಯವರಿಗೆ ಯಾವ ರೀತಿಯ ಪ್ರಭಾವಗಳಾಗಬಹುದು?

ಮೇಷ ರಾಶಿ: ನಿಮ್ಮ ರಾಶಿಯ ಅಧಿಪತಿ ಕೇತು ಯುಕ್ತನಾಗಿ ಹಾಗೂ ಚಂದ್ರ ಯುಕ್ತನಾಗಿ ಮಕರ ರಾಶಿಯಲ್ಲಿದ್ದಾನೆ. ನಿಮ್ಮ ಮೇಲೆ ಇದರ ಪರಿಣಾಮ ಬೀರದಿರಲು ಹೇಗೆ ಸಾಧ್ಯ..? ನಿಮ್ಮ ಸಂಚಾರ ಸಮಯದಲ್ಲಿ ಅವಘಡಗಳು ಸಂಭವಿಸುವ ಸಾಧ್ಯತೆ ಇದೆ, ಕ್ರೂರ ಪ್ರಾಣಿಗಳಿಂದ ಬಾಧೆಗೆ ಒಳಗಾಗುವ ಸಾಧ್ಯತೆ ಇದೆ, ನಿಮ್ಮ  ಉದ್ಯೋಗ ಸ್ಥಳದಲ್ಲಿ ಸ್ಥನ ಪಲ್ಲಟ, ಅಥವಾ ಬಿರು ಮಾತಿನ ಘರ್ಷಣೆಗಳಾಗುವ ಸಾಧ್ಯತೆ ಇದೆ. ಗಣಪತಿ ದೇವಸ್ಥಾನಕ್ಕೆ ಹೋಗಿ ಕೆಂಪುಗಂಧದಿಂದ ಅಭಿಷೇಕ ಮಾಡಿದಿ ತೀರ್ಥ ಸ್ವೀಕರಿಸಿದಲ್ಲಿ ನಿಮ್ಮ ಮೇಲಿನ ಉಗ್ರ ಪ್ರಭಾವ ಕಡಿಮೆಯಾಗಿತ್ತದೆ. 
ದೋಷಪರಿಹಾರ: ಶಿವ ಪರಿವಾರವಿರುವ ದೇವಸ್ಥಾನಕ್ಕೆ ಹೋಗಿಬನ್ನಿ. ಸಾಧ್ಯವಾದರೆ ಅಮ್ಮನವರಿಗೆ ಅಭಿಷೇಕ ಸಾಮಗ್ರಿಗಳನ್ನು ದಾನ ಮಾಡಿಬನ್ನಿ.

ವೃಷಭ: ನಿಮ್ಮರಾಶಿಯವರಿಗೆ ನವಾಂಶ ಪ್ರಾರಂಭವಾಗುವುದೇ ಮಕರ ರಾಶಿಯಿಂದ (ಅಜ, ಮೃಗ, ತೌಲೀ, ಚಂದ್ರಭವನಾದಿ ಎಂಬ ಆಧಾರವಿದೆ )ಹಾಗಾಗಿ ಈ ರಾಶಿಯವರೂ ಗ್ರಹಣ ಗ್ರಹಚಾರದಿಂದ ಬಳಲುವುದು ನಿಶ್ಚಿತ. ನಿಮ್ಮ ದಾಂತ್ಯ ಅಧಿಪತಿ ಹಾಗೂ ವ್ಯಯಾಧಿಪತಿಯಾದ ಕುಜ ಕೇತು-ಚಂದ್ರಯುಕ್ತನಾಗಿರುವುದರಿಂದ ದಾಂಪತ್ಯದಲ್ಲಿ ಸಮಸ್ಯೆಗಳಾಗಬಹುದು, ಹೊಂದಾಣಿಕೆ ಒಡೆಯಬಹುದು, ಸ್ನೇಹ ವ್ಯಯ, ವ್ಯಾಪಾರದಲ್ಲಿ ನಷ್ಟಗಳು ಸಂಭವಿಸುತ್ತವೆ. ಸ್ವಲ್ಪ ಜಾಗ್ರತೆಯಿಂದ ಇರುವುದು ಒಳ್ಳೇದು. ಹೆಚ್ಚು ಮಾತು ಬೇಡ. ಅಮ್ಮನವರ ದೇವಸ್ಥಾನಕ್ಕೆ ಹೋಗಿ ಕ್ಷೀರ ದಾನ ಮಾಡಿ. ಆಹಾರ ಸೇವನೆ ಮಿತವಾಗಿರಲಿ.
ದೋಷ ಪರಿಹಾರ: ದೇವಿ ದೇವಸ್ಥಾನಕ್ಕೆ ಹೋಗಿ ಕಲ್ಲುಸಕ್ಕರೆ ಹಾಗೂ ಹಾಲನ್ನು ಕೊಟ್ಟುಬನ್ನಿ. ತೀರ್ಥ ಸ್ವೀಕರಿಸಿ ಬನ್ನಿ.

ಮಿಥುನ: ಆತ್ಮೀಯರೇ ನಿಮ್ಮ ರಾಶಿಯ ಅಧಿಪತಿ ಕರ್ಕಟಕ ರಾಶಿ ಅಂದರೆ ಚಂದ್ರ ರಾಶಿಯಲ್ಲಿ ಸ್ಥಿತನಾಗಿರುವುದರಿಂದ ಅಲ್ಲದೇ ಕುಜ-ಕೇತು- ಚಂದ್ರನ ದೃಷ್ಟಿ ನಿಮ್ಮ ರಾಶ್ಯಾಧಿಪತಿಯ ಮೇಲಿರುವುದರಿಂದ ನಿಮಗೂ ಈ ಗ್ರಹಚಾರ ಫಲ ಕಾಡುವ ಸಾಧ್ಯತೆ ಇದೆ. ನಿಮ್ಮ ದಾಂಪತ್ಯದಲ್ಲಿ ವಿರಸಗಳು, ಹೊಂದಾಣಿಕೆ ಸಮಸ್ಯೆ, ಸೊಂಟದ ಕೆಳಭಾಗದಲ್ಲಿ ಸಮಸ್ಯೆ, ವ್ಯಾಪಾರಗಳಲ್ಲಿ ನಷ್ಟ ಕೋರ್ಟು ಕಚೇರಿಗಳ ಸಮಸ್ಯೆಗಳು ಬಾಧಿಸುತ್ತವೆ. ಇಂದು ನೀವು ಮಾಡಬೇಕಾದದ್ದು ಗಣಪತಿ ಹಾಗೂ ಪಾರ್ವತೀ ದೇವಿಯ ಆರಾಧನೆ . ಗಣಪತಿಗೆ ಕೈಲಾದಷ್ಟು ಗರಿಕೆ ಹಾಗೂ ಅಮ್ಮನವರ ದೇವಸ್ಥಾನಕ್ಕೆ ಮಂಗಲ ದ್ರವ್ಯಗಳ ದಾನ ಮಾಡಿ.    
ದೋಷ ಪರಿಹಾರ: ದುರ್ಗಾ ದರ್ಶನದಿಂದ ದೋಷ ಪರಿಹಾರ, ಸಪ್ತಶತಿ ಪಾರಾಯಣ ಮಾಡಿದಲ್ಲಿ ಉತ್ತಮ ಫಲ.

ಕಟಕ: ನಿಮ್ಮ ರಾಶ್ಯಾಧಿಪತಿ ಕೇತುಯುಕ್ತನಾಗಿ ಗ್ರಹಣಕ್ಕೆ ತುತ್ತಾಗುವುದರಿಂದ ಶರೀರದಲ್ಲಿ ಬಾಧೆ, ಸಂಗಾತಿಯೊಂದಿಗೆ ಕಲಹ, ನಿಮ್ಮ ಉದ್ಯೋಗಾಧಿಪತಿ ಯಾದ ಕುಜ ಚಂದ್ರ ಯುಕ್ತನಾಗಿರುವುದರಿಂದ ಕಚೇರಿಯಲ್ಲಿ ಒತ್ತಡ, ಉದ್ಯೋಗ ಸಮಸ್ಯೆ, ಸಹೋದರರೊಡನೆ ಸ್ವಲ್ಪ  ಮಾತಿನ ಘರ್ಷಣೆ ಉಂಟಾಗಲಿದೆ, ಆರೋಗ್ಯದಲ್ಲಿ ವ್ಯತ್ಯಯವಾಗುತ್ತದೆ. ನಿಮ್ಮ ಮಾನಸಿಕ ಸ್ಥಿರತೆ ಕಳೆದುಹೋಗುವ ಸಾಧ್ಯತೆ ಇದೆ. ನಾಗ ದೋಷ, ನಾಗ ಸಮಸ್ಯೆ ಕಾಡಲಿದೆ, ಇಂದು ನೀವು ದುರ್ಗಾ ಆರಾಧನೆ ಮಾಡಬೇಕು. ದುರ್ಗಾ ದೇವಿಗೆ ವಸ್ತ್ರದಾನ ಮಾಡಿ, ಹಾಗೂ ಗಣಪತಿ ದೇವಸ್ಥಾನಕ್ಕೆ ದುರ್ವೆ ಅಂದರೆ ಗರಿಕೆ ಸಮರ್ಪಣೆ ಮಾಡಿ.
ದೋಷ ಪರಿಹಾರ: ದುರ್ಗಾ ದೇವಸ್ಥಾನದಲ್ಲಿ ಸಪ್ತಶತಿ ಪಾರಾಯಣ ಮಾಡಿಸಿ.

ಸಿಂಹ: ಆತ್ಮೀಯರೇ ನಿಮ್ಮ ರಾಶಿಯ ಅಧಿಪತಿ ರವಿ ಕರ್ಕಟಕ ರಾಶಿಯಲ್ಲೇ ಇದ್ದಾನೆ. ರವಿಗೂ ಚಂದ್ರ-ಕೇತು-ಕುಜ ದೃಷ್ಟಿ ಇದೆ. ನಿಮ್ಮ ಆತ್ಮಬಲ ಕುಗ್ಗಿ ಹೋಗುತ್ತದೆ. ನಿಮ್ಮ ಮನೆ, ಕ್ಷೇತ್ರ, ಹೊಲ, ವಾಹನ ಈ ಎಲ್ಲ ವಿಭಾಗದಲ್ಲೂ ಸಮಸ್ಯೆಗಳು ಕಾಡಲಿವೆ. ಅಷ್ಟೇ ಅಲ್ಲ ದುಷ್ಟರಿಂದ ಹಣ ವ್ಯಯವಾಗುತ್ತದೆ. ಮುಂದಿನ ಹಾದಿ ತೋರದಂತಾಗುತ್ತದೆ. ಆಹಾರ ಕ್ರಮದಲ್ಲಿ ವ್ಯತ್ಯಯವಾಗುತ್ತದೆ. ತಪ್ಪದೆ ಇಂದು ಶಿವ-ಶಕ್ತಿ ಹಾಗೂ ಸುಬ್ರಹ್ಮಣ್ಯ ದರ್ಶನ ಹಾಗೂ ಪೂಜೆಯಲ್ಲಿ ಭಾಗವಹಿಸಿ.
ದೋಷ ಪರಿಹಾರ: ಶಿವ ದೇವಸ್ಥಾನಕ್ಕೆ ಭಸ್ಮ ದಾನ ಮಾಡಿ.

ಕನ್ಯಾ: ಆತ್ಮೀಯರೇ ನಿಮ್ಮ ರಾಶಿಯ ಅಧಿಪತಿಯೂ ಕೂಡ ಕರ್ಕಟಕ ರಾಶಿಯಲ್ಲಿ ಸ್ಥಿತನಾಗಿದ್ದಾನೆ. ನಿಮ್ಮ ಮನಸ್ಸಿನಮೇಲೂ ಪರಿಣಾಮಕಾರಿ ಪ್ರಭಾವ ಬೀರಲಿದೆ, ನಿಮ್ಮ ಬುದ್ಧಿ ವಿಕಾರವಾಗತ್ತೆ. ನಿಮ್ಮ ಯೋಚನೆಗಳು ಅರ್ಥ ಹೀನವಾಗುತ್ತವೆ. ಯಾವುದೋ ಕೆಲಸ ಮಾಡಲು ಹೋಗಿ ಮತ್ತೇನೋ ಮಾಡಿ ಎಡವಟ್ಟು ಮಾಡಿಕೊಳ್ತೀರ. ಸಹೋರರಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ. ಬರುವ ಲಾಭದಲ್ಲಿ ನಷ್ಟವಾಗುತ್ತದೆ. ಎಚ್ಚರವಾಗಿರಿ.
ದೋಷ ಪರಿಹಾರ: ಗಣಪತಿ ದೇವಸ್ಥಾನದಲ್ಲಿ ಅಥರ್ವಶೀರ್ಷ ಹೋಮ ಮಾಡಿಸಿ ಅಥವಾ ಅಥರ್ವಶೀರ್ಷ ಮಂತ್ರದಿಂದ ಅಭಿಷೇಕ ಮಾಡಿಸಿ.

ತುಲಾ: ಆತ್ಮೀಯರೇ ನಿಮ್ಮ ರಾಶಿಯ ಅಧಿಪತಿ ಸಿಂಹ ರಾಶಿಯಲ್ಲಿದ್ದಾನೆ. ಆ ಶುಕ್ರನಿಗೆ ಕುಜ ದೃಷ್ಟಿ ಇದೆ. ಆ ಕುಜ ಚಂದ್ರ ಕೇತು ಯುಕ್ತನಾಗಿದ್ದಾನೆ. ಕುಜನಿಗೆ ದೃಷ್ಟಿ ಬಲ ಹೆಚ್ಚು ಕ್ರೂರ ದೃಕ್ ಅಂತ ಕರೀತಾರೆ ಕುಜನನ್ನ. ಅವನ ದೃಷ್ಟಿಯೇ ಕ್ರೂರ. ಹಾಗಾಗಿ ನಿಮ್ಮ ರಾಶಿಯವರು ದುಷ್ಟ ಜನರಿಂದ ಬಹಳ ಎಚ್ಚರವಾಗಿರಬೇಕು. ಅಲ್ಲದೆ ಸ್ತ್ರೀ-ಪುರುಷರಲ್ಲಿ  ಬಾಂಧವ್ಯ ಸಮಸ್ಯೆಯಾಗುತ್ತದೆ. ಎಚ್ಚರವಾಗಿರಿ. ಸರ್ಪ ದರ್ಶನ, ಸರ್ಪ ಸಮಸ್ಯೆಗಳು ಎದುರಾಗುತ್ತವೆ. ಜಾಗ್ರತೆ ಇರಲಿ. 
ದೋಷ ಪರಿಹಾರ: ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಪಂಚಾಮೃತ ಅಭಿಷೇಕ ಮಾಡಿಸಿ. 

ವೃಶ್ಚಿಕ: ಆತ್ಮೀಯರೇ,  ನಿಮ್ಮ ರಾಶ್ಯಾಧಿಪತಿಯಾದ  ಕುಜ ಮಕರ ರಾಶಿಯಲ್ಲೇ ಇದ್ದಾನೆ. ಅಲ್ಲೇ ಚಂದ್ರ ಕೇತು ಯುತಿ ಇದೆ. ಹಾಗಾಗಿ ಗ್ರಹಣದ ಪ್ರಭಾವ ನಿಮ್ಮ ರಾಶಿ ಮೇಲೆ ಆಗುವುದಿಲ್ಲ ಎಂದು ಹೇಳಲಾಗುವುದಿಲ್ಲ. ನಿಮ್ಮ ಅದೃಷ್ಟ ಕಳೆದುಹೋಗುವ ಸಾಧ್ಯತೆ ಇದೆ. ತಂದೆ - ಮಕ್ಕಳಲ್ಲಿ ಭಿನ್ನಾಭಿಪ್ರಾಯ ಬರಲಿದೆ. ನೀವು  ಸಂಚಾರ ಮಾಡುವಾಗ ಬಹಳ ಎಚ್ಚರಿಕೆಯಿಂದ ಇರಬೇಕು. ಮನೆ ಜಾಗಲ್ಲಿ ಸ್ವಲ್ಪ ದುಷ್ಟರ ಹಾವಳಿಯಿಂದಾಗಿ ಕಿರಿಕಿರಿಯಾಗಬಹುದು. ಅಮ್ಮನವರಿಗೆ ಹಾಗೂ ಸುಬ್ರಹ್ಮಣ್ಯ ಪ್ರಾರ್ಥನೆ ಮಾಡಿ. 
ದೋಷ ಪರಿಹಾರ: ಓಂ ಷಣ್ಮುಖಾಯ ನಮ: ಮಂತ್ರವನ್ನು 64 ಬಾರಿ ಪಠಿಸಿ

ಧನಸ್ಸು: ಆತ್ಮೀಯರೇ ನಿಮ್ಮ ರಾಶಿಯಲ್ಲಿರುಗವ ಶನಿ ಮಕರ ರಾಶಿಯ ಅಧಿಪತಿ. ಈ ಗ್ರಹಣ ಸಂಭವಿಸುತ್ತಿರುವುದು ಮಕರ ರಾಶಿಯಲ್ಲೇ ಹಾಗಾಗಿ ಸ್ವಲ್ಪಮಟ್ಟಿಗಿನ ಪರಿಣಾಮ ನಿಮಗೂ ತಾಗಲಿದೆ. ನಿಮ್ಮ ದೇಹ ಕೃಶವಾಗಬಹುದು, ಎಡವಿ ಬೀಳುವ ಸಾಧ್ಯತೆ, ಮಾತಿನಿಂದ ತೊಂದರೆ, ಗಂಡ – ಹೆಂಡಿರಲ್ಲಿ ಭಿನ್ನಾಭಿಪ್ರಾಯ, ವ್ಯಾಪಾರದಲ್ಲಿ ನಷ್ಟ, ಅಥವಾ ಕ್ರೂರ ಜನರ ದೃಷ್ಟಿ ಬೀಳುವ ಸಾಧ್ಯತೆ ಇದೆ. ಎಚ್ಚರವಾಗಿರಿ. ಶಿವನ ಆರಾಧನೆಯನ್ನೇ ಮಾಡಬೇಕು. ಮೂರುದಿನಗಳ ಕಾಲ ಪ್ರಾತ: ಕಾಲದಲ್ಲಿ ಶಿವನಿಗೆ ಬಿಲ್ವಾರ್ಚನೆ ಮಾಡಿಸಿಬನ್ನಿ.
ದೋಷ ಪರಿಹಾರ: ಶನಿದೇವರಿಗೆ ಎಳ್ಳೆಣ್ಣೆ ದೀಪ ಹಚ್ಚಿ. 

ಮಕರ: ಆತ್ಮೀಯರೇ ಇಂದು ನಿಮ್ಮ ರಾಶಿಯಲ್ಲೇ ಗ್ರಹಣ ಸಂಭವಿಸುತ್ತಿದೆ. ಕೇಳಲೇಬೇಕಾಗಿಲ್ಲ. ಉತ್ತರಾಷಾಢ-ಶ್ರವಣ ನಕ್ಷತ್ರದವರು ಇಂದು ಬಹಳ ಎಚ್ಚರಿಕೆಯಿಂದ ಇರಬೇಕು. ದೊಡ್ಡ ನಷ್ಟವನ್ನು ಹೊಂದುವ ಸಾಧ್ಯತೆ ಇದೆ. ದೇಹಕ್ಕೆ ಬಲವಾಗಿ ಪೆಟ್ಟು ಬೀಳಬಹುದು. ಕೆಲವರಿಗೆ ಮಾರಣಾಂತಿಕ ಘಟನೆಗಳೂ ಜರುಗಬಹುದು. ಆದಷ್ಟು ಪ್ರಯಾಣ ಮಾಡುವುದು ಬೇಡ. ಎಲ್ಲ ಕಾರ್ಯಗಳನ್ನೂ ಮುಂದೂಡಿಕೊಳ್ಳಿ, ನಿಮ್ಮ ವಾಹನ, ಭೂಮಿಗಳಲ್ಲಿ ನಿಮಗೆ ತೊಂದರೆ ನಿಶ್ಚಯವಾಗಿ ಸಂಭವಿಸುತ್ತದೆ. ಧನ ವ್ಯಯವಾಗುತ್ತದೆ, ಮಾತಿನಿಂದ ದೊಡ್ಡ ತೊಂದರೆಯಾಗುವ ಸಾಧ್ಯತೆ ಇದೆ. ನಿಮ್ಮ ದಾಂಪತ್ಯದಲ್ಲಿ ಸಮಸ್ಯೆ ಉದ್ಭವಿಸಬಹುದು. ಬಹಳ ಎಚ್ಚರವಾಗಿರಿ. ಶಿವನಿಗೆ ತ್ರಿಕಾಲ ರುದ್ರಾಭಿಷೇಕ ಮಾಡಿಸಿದಲ್ಲಿ ಶುಭ ಫಲ. ಗಣಪತಿ ದೇವಸ್ಥಾನದಲ್ಲಿ ಮಂತ್ರಯುಕ್ತವಾದ ಪೂಜೆ ಮಾಡಿಸಿ.
ದೋಷ ಪರಿಹಾರ: ಶಿವ-ಗಣಪತಿಯರ ಆರಾಧನೆ ಮಾಡಿ.

ಕುಂಭ: ಆತ್ಮೀಯರೇ ಇಂದು ನಿಮ್ಮ ಪಾಲಿಗೂ ಇದೆ ಕಂಟಕ. ನಿಮ್ಮ ರಾಶಿಯ ಅಧಿಪತಿಯೂ ಶನಿಯೇ ಆಗಿದ್ದಾನೆ. ಆತನ ಮನೆಯಲ್ಲೇ ಸಂಭವಿಸುತ್ತಿರುವ ಗ್ರಹಣ ನಿಮ್ಮ ಮೇಲೂ ಪ್ರಭಾವ ಬೀರಲಿದೆ. ನಿಮ್ಮ ಸಹೋದರರಲ್ಲಿ ದೊಡ್ಡ ಮಟ್ಟದ ಭಿನ್ನಾಭಿಪ್ರಾಯ ಮೂಡಬಹುದು. ನಿಮ್ಮ ಆರೋಗ್ಯದಲ್ಲಿ ತೀವ್ರ ಸಮಸ್ಯೆ ಕಾಣಿಸಿಕೊಳ್ಳಬಹುದು. ನಿಮ್ಮ ತಲೆ ಭಾಗದಲ್ಲಿ ಹಾಗೂ ಕಾಲಿನ ಭಾಗದಲ್ಲಿ ಪೆಟ್ಟಾಗುವ ಸಾಧ್ಯತೆ ಇದೆ. ನಿಮ್ಮ ಸಂಗಾತಿಯಲ್ಲಿ ಬೇಸರ, ವ್ಯಾಪಾರದಲ್ಲಿ ನಷ್ಟ, ಅಥವಾ ಕಳ್ಳತನವಾಗುವ ಸಾಧ್ಯತೆ ಇದೆ. ಎಚ್ಚರವಾಗಿರಿ.
ದೋಷ ಪರಿಹಾರ: ಶಿವ ದೇವಸ್ಥಾನಕ್ಕೆ ಹೋಗಿ ಜಲಾಭಿಷೇಕ ಮಾಡಿಸಿ.

ಮೀನ: ಸ್ನೇಹಿತರೆ ನಿಮ್ಮ ರಾಶಿಗೆ ಅಂಥಾ ಸಮಸ್ಯೆ ಏನೂ ಇಲ್ಲ. ಆದರೆ ಸ್ವಲ್ಪ ಮಟ್ಟಿಗಿನ ತೊಂದರೆ ಇದೆ. ಯಾಕೆಂದರೆ, ಧನಾಧಿಪತಿಯಾದ ಕುಜ ಚಂದ್ರಯುಕ್ತನಾಗಿದ್ದಾನೆ. ಹಾಗಾಗಿ ಧನ ನಷ್ಟ ಮಾಡಿಕೊಳ್ಳುವ ಸಾಧ್ಯತೆ ಇದೆ. ಅಲ್ಲದೆ ಮಕ್ಕಳಿಂದ ತೊಂದರೆಯಾಗುವ ಸಾಧ್ಯತೆ ಇದೆ. ದತ್ತಾತ್ರೇಯ ದರ್ಶನ ಮಾಡಿ.
ದೋಷ ಪರಿಹಾರ: ಗುರು ಪ್ರಾರ್ಥನೆ ಮಾಡಿ

ಗೀತಾಸುತ.

ಚಂದ್ರ ಗ್ರಹಣ: ಆಚರಣೆಗಳು ಹೇಗಿರಬೇಕು?
ಅನಾಹುತದ ಸರಮಾಲೆ ಹೊತ್ತು ತರಲಿದೆಯಾ ಈ ಗ್ರಹಣ?

loader