ಮುಟ್ಟು ಅಥವಾ ಸೂತಕದ ಸಮಯದಲ್ಲಿ ದೇವರ ಪ್ರಸಾದ ಸೇವಿಸಬಹುದೇ ಎಂಬ ಗೊಂದಲ ಹಲವರನ್ನು ಕಾಡುತ್ತಿದೆ. ಈ ಕುರಿತಂತೆ ಧಾರ್ಮಿಕ ಪಂಡಿತರನ್ನು ಹಲವರು ಪ್ರಶ್ನೆ ಮಾಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಚರ್ಚೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಈ ಗೊಂದಲಕ್ಕೆ ಪಂಡಿತರು ಸ್ಪಷ್ಟನೆ ನೀಡಿದ್ದಾರೆ. ನಿಮ್ಮಲ್ಲಿರುವ ಗೊಂದಲಗಳಿಗೆ ಇಲ್ಲಿದೆ ನೋಡಿ ಉತ್ತರ.
ಹಿಂದೂ ಸಂಪ್ರದಾಯದಲ್ಲಿ ಪ್ರಸಾದಕ್ಕೆ ಮಹತ್ವದ ಸ್ಥಾನ ಇದೆ. ದೇವರಿಗೆ ನೈವೇದ್ಯವಾಗಿ ನೀಡಿದ ಆಹಾರವನ್ನು ಪ್ರಸಾದವಾಗಿ ಭಕ್ತರಿಗೆ ವಿತರಣೆ ಮಾಡಲಾಗುತ್ತದೆ. ಆದರೆ ಹಲವು ಭಕ್ತರಿಗೆ ಸಂದೇಹವೊಂದು ಕಾಡುತ್ತದೆ. ಮಹಿಳೆಯರು ತಿಂಗಳ ಮುಟ್ಟಿನ ಸಂದರ್ಭದಲ್ಲಿ ಅಥವಾ ಮನೆಯಲ್ಲಿ ಸೂತಕ ಇರುವ ಸಂದರ್ಭದಲ್ಲಿ ದೇವರ ಪ್ರಸಾದ ಸೇವಿಸಬಹುದಾ ಎಂದು ಪಂಡಿತರಿಗೆ ಹಲವು ಸಂದರ್ಭದಲ್ಲಿ ಪ್ರಶ್ನಿಸಿದ್ದಾರೆ. ಈ ವಿಚಾರದ ಬಗ್ಗೆ ಹಲವು ಅಭಿಪ್ರಾಯಗಳಿದ್ದು, ಕೆಲವು ಆಧ್ಯಾತ್ಮಿಕ ಪಂಡಿತರು ಭಿನ್ನವಾದ ವಿವರಣೆಯನ್ನು ನೀಡಿದ್ದಾರೆ.
ಪಂಡಿತರು ಹೇಳಿದ್ದೇನು?
ಈ ಬಗ್ಗೆ ಸ್ಪಷ್ಟನೆ ನೀಡಿರುವ ಸ್ಮಾರ್ತ ಪುರೋಹಿತರಾದ ಗುಮ್ಮಾ ರಾಜಶೇಖರ್ ಶರ್ಮಾ ಅವರು, ಮುಟ್ಟು ಅಥವಾ ಮನೆಯಲ್ಲಿ ಸೂತಕ ಇರುವ ಸಂದರ್ಭದಲ್ಲಿ ದೇವರ ಪ್ರಸಾದ ಸ್ವೀಕರಿಸಬಹುದು. ವೇದಗಳು, ಶ್ರೀಮದ್ಭಾಗವತ, ಅಷ್ಟಾದಶ ಪುರಾಣಗಳು, ಉಪನಿಷತ್ತುಗಳಲ್ಲಿ ದೇವರಿಗೆ ಅರ್ಪಿಸಿದ ನೈವೇದ್ಯಾವನ್ನು ಪ್ರಸಾದವಾಗಿ ಸ್ವೀಕರಿಸಬಹುದು ಪವಿತ್ರಾ ಕಾರ್ಯ ಎಂದು ವಿವರಿಸೋದಾಗಿ ನ್ಯೂಸ್18 ತೆಲುಗು ವರದಿ ಮಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ಚರ್ಚೆ!
ರೆಡ್ ಇಟ್ ನಲ್ಲಿ ಈ ಕುರಿತಂತೆ ಬಳಕೆದಾರರೊಬ್ಬರು ಪ್ರಶ್ನೆ ಮಾಡಿ ಸಂದೇಹವನ್ನು ಹಂಚಿಕೊಂಡಿದ್ದು, ಈ ಪೋಸ್ಟ್ಗೆ ಪ್ರತಿಕ್ರಿಯೆ ನೀಡಿರುವ ಹಲವರು ತಮ್ಮದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಟ್ಟಿನ ಸಂದರ್ಭದಲ್ಲಿ ಪ್ರಸಾದ ತಿನ್ನೋದರಲ್ಲಿ ಯಾವುದೇ ತಪ್ಪು ಇಲ್ಲ. ನಮಗೆ ವಿಶೇಷವಾಗಿ ಪ್ರಸಾದವನ್ನು ತಂದುಕೊಡುತ್ತಿದ್ದರು. ಏಕೆಂದರೆ ಪ್ರಸಾದ ಅನ್ನೋದು ವಿಶೇಷವಾಗಿದ್ದು, ದೇವರ ಅನುಗ್ರಹ ಪಡೆದುಕೊಂಡ ಆಹಾರವಾಗಿದೆ. ಪುರಾಣದಲ್ಲೂ ದ್ರೌಪದಿ ಮುಟ್ಟಿನ ಸಂದರ್ಭದಲ್ಲಿ ಶ್ರೀಕೃಷ್ಣನಿಗೆ ಪ್ರಾರ್ಥನೆ ಮಾಡಿಕೊಂಡಿದ್ದರು, ಈ ಬಗ್ಗೆ ಹಲವು ಪಂಡಿತರು ತಮ್ಮ ಪ್ರಸಂಗಗಳಲ್ಲಿ ತಿಳಿಸಿದ್ದಾರೆ. ಆದ್ದರಿಂದ ಮುಟ್ಟಿನ ಸಂದರ್ಭದಲ್ಲಿ ಪ್ರಸಾದ ಸೇವಿಸಬಹುದು ಎಂದು ಬರೆದುಕೊಂಡಿದ್ದಾರೆ.
ಭಕ್ತರಲ್ಲಿ ಸಾತ್ವಿಕ ಭಾವನೆ ಮೂಡಿಸುವ ಪ್ರಸಾದ
ಭಕ್ತಿಯಿಂದ ದೇವರಿಗೆ ಅರ್ಪಿಸಿದ ಬಳಿಕ ಪ್ರಸಾದವಾಗಿ ಬದಲಾಗುತ್ತದೆ. ಇದು ಸಾಮಾನ್ಯ ಆಹಾರ ಆಗಿರೋದಿಲ್ಲ, ದೇವರ ಅನುಗ್ರಹಪಡೆದುಕೊಂಡ ಪ್ರಸಾದವಾಗಿ ಭಕ್ತರು ಭಾವಿಸುತ್ತಾರೆ. ಆಧ್ಯಾತ್ಮಿಕ ವಿಶ್ವಾಸಗಳ ಅನ್ವಯ, ದೇವರ ಪ್ರಸಾದ ಸೇವಿಸುವುದರಿಂದ ನಮ್ಮಲ್ಲಿರುವ ರಾಜಸಿಕ (ಆಸೆ ಮತ್ತು ಚಟುವಟಿಕೆ), ತಾಮಸಿಕ (ಅಜ್ಞಾನ ಮತ್ತು ಜಡತ್ವ), ಆಸುರಿಕ (ರಾಕ್ಷಸೀ) ಗುಣಗಳು ಕಡಿಮೆಯಾಗಿ ಸಾತ್ವಿಕ ಭಾವನೆ ಹೆಚ್ಚಾಗುತ್ತದೆ ಎಂದು ನಂಬುತ್ತಾರೆ. ಆದ್ದರಿಂದ ದೇವಾಲಯಗಳಲ್ಲಿ ನೀಡುವ ಪ್ರಸಾದವನ್ನು ಭಕ್ತರು ಪವಿತ್ರಾವಾಗಿ ಭಾವಿಸಿ ಸ್ವೀಕರಿಸುತ್ತಾರೆ. ಇದು ಕೇವಲ ಆಹಾರವಾಗಿ ಮಾತ್ರವಲ್ಲದೇ, ದೇವರ ಕೃಪೆಯಾಗಿ ಭಾವಿಸುತ್ತಾರೆ.
ದೇವರ ಮೇಲಿನ ಭಕ್ತಿ, ವಿಶ್ವಾಸವೇ ಮುಖ್ಯ!
ಈ ಹಿಂದೆ ಮನೆಯಲ್ಲಿ ಹಿರಿಯರು ನಿತ್ಯ ಮಾಡುವ ಅಡುಗೆಯನ್ನು ನೇರವಾಗಿ ಸ್ವೀಕರಿಸುತ್ತಿರಲಿಲ್ಲ. ಮೊದಲು ತುಳಸಿ ದಳದೊಂದಿಗೆ ದೇವರಿಗೆ ಅರ್ಪಿಸಿ, ಭಗವಂತನಿಗೆ ನಮಸ್ಕರಿಸಿ ಅರ್ಪಿಸುತ್ತಿದ್ದರು. ಆ ಬಳಿಕ ಪ್ರಸಾದವಾಗಿ ಆಹಾರವನ್ನು ಸ್ವೀಕರಿಸುತ್ತಿದ್ದರು. ಇಂದಿಗೂ ಹಲವರು ಈ ಪದ್ಧತಿಯನ್ನು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಆದರೆ ಈ ಆಚರಣೆಯೂ ಪ್ರದೇಶದಿಂದ ಪ್ರದೇಶಕ್ಕೆ ಕೆಲವು ಬದಲಾವಣೆಗಳನ್ನು ಹೊಂದಿರುತ್ತದೆ.
ಕೆಲವು ಕುಟುಂಬಗಳಲ್ಲಿ ಮುಟ್ಟಿನ ಸಂದರ್ಭದಲ್ಲಿ ಕೆಲವು ಪದ್ಧತಿಗಳನ್ನು ಅನುಸರಿಸುತ್ತಾರೆ. ಕೆಲವು ಕುಟುಂಬಗಳಲ್ಲಿ ಸೂತಕದ ಸಂದರ್ಭದಲ್ಲಿ ಕೆಲ ನಿಯಮಗಳನ್ನು ಪಾಲಿಸುತ್ತಾರೆ. ಪ್ರತಿಯೊಂದು ಕುಟುಂಬವೂ ತಮ್ಮ ಮನೆಗಳಲ್ಲಿ ಅನುಸರಿಸುವ ನಿಯಮಗಳನ್ನು ಗೌರವಿಸುತ್ತದೆ. ಆದರೆ ಪ್ರಸಾದ ವಿಚಾರದಲ್ಲಿ ದೇವರ ಮೇಲಿನ ಭಕ್ತಿ, ವಿಶ್ವಾಸ ಹಾಗೂ ಪದ್ಧತಿಗಳು ಪ್ರಮುಖವಾಗಿರುತ್ತದೆ. ಈ ಬಗ್ಗೆ ಹಲವರು ಬೇರೆ ಬೇರೆ ಅಭಿಪ್ರಾಯಗಳನ್ನು ಹೊಂದಿರುತ್ತಾರೆ.
ಹಲವು ಕುಟುಂಬಗಳಲ್ಲಿ ಇಂದಿಗೂ ಮನೆಯ ಹಿರಿಯರು, ಗುರುಗಳು, ಪಂಡಿತರು ನೀಡುವ ಸೂಚನೆಗಳು, ಸಲಹೆಗಳನ್ನು ಪಾಲಿಸುತ್ತಾರೆ. Disclaimer: ಈ ಅಭಿಪ್ರಾಯವು ಸಾಮಾಜಿಕ ಜಾಲತಾಣದಲ್ಲಿರುವ ವಿಡಿಯೋ ಹಾಗೂ ಪೋಸ್ಟ್ ಗಳಲ್ಲಿರುವ ಮಾಹಿತಿಯ ಆಧಾರ ಮೇರೆಗೆ ನೀಡಲಾಗಿದ್ದು, ವಿವಿಧ ಸಂಪ್ರದಾಯಗಳು ಆಚಾರಗಳು ಈ ವಿಚಾರದಲ್ಲಿ ಭಿನ್ನಾಭಿಪ್ರಾಯಗಳನ್ನು ಹೊಂದಿರಬಹುದು. ಇದನ್ನು ಸಾರ್ವತ್ರೀಕ ಧಾರ್ಮಿಕ ನಿಯಮವಾಗಿ ಭಾವಿಸಬಾರದು.


