ಚಾಣಕ್ಯ ಮತ್ತು ವಾತ್ಸ್ಯಾಯನ ಇಬ್ಬರೂ ಒಬ್ಬರೇ ಎಂದು ಬಹಳ ಮಂದಿ ನಂಬಿದ್ದಾರೆ. ಅದಕ್ಕೆ ಕಾರಣ ಇಬ್ಬರ ಕಾಲವೂ ಗುಪ್ತರ ಕಾಲವೂ ಆಗಿರುವುದು ಹಾಗೂ ಇಬ್ಬರ ಬರಹದ ಶೈಲಿಯೂ ಒಂದೇ ಆಗಿದೆ. ಆದರೆ ನಿಜವೇನು? 

ಚಾಣಕ್ಯನ ಅರ್ಥಶಾಸ್ತ್ರ ಹಾಗೂ ವಾತ್ಸ್ಯಾಯನನ ಕಾಮಸೂತ್ರ ಎರಡೂ ಕೂಡ ಪ್ರಾಚೀನ ಭಾರತದ ಎರಡು ಮಹಾಗ್ರಂಥಗಳು. ಇವುಗಳನ್ನು ಹೊರತುಪಡಿಸಿ ಪ್ರಾಚೀನ ಭಾರತದ ಸಾಹಿತ್ಯವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೆಚ್ಚಾಗಿ ಎಲ್ಲರೂ ಮುಕ್ತವಾಗಿ ಚಾಣಕ್ಯನ ನೀತಿಸೂತ್ರಗಳನ್ನೂ ಗುಟ್ಟುಗುಟ್ಟಾಗಿ ವಾತ್ಸ್ಯಾಯನನ ಕಾಮಸೂತ್ರವನ್ನೂ ಅಧ್ಯಯನ ಮಾಡುತ್ತಾರೆ! ಎರಡೂ ಗ್ರಂಥಗಳ ರೀತಿನೀತಿ, ಗುರಿ, ಸ್ವರೂಪ ಬೇರೆ ಬೇರೆ. ಆದರೂ ಇವರಿಬ್ಬರೂ ಒಬ್ಬರೇ ಎನ್ನುವವರುಂಟು. ಎರಡೂ ಗ್ರಂಥಗಳ ವಾಕ್ಯಗಳ ಶೈಲಿ, ಚಾಣಾಕ್ಷತೆ, ರಸಿಕತನ ಇವೆಲ್ಲವನ್ನೂ ಗಮನಿಸಿ ಹೀಗೆನ್ನಲಾಗುತ್ತದೆ.

ಆದರೆ ಇಬ್ಬರೂ ಒಬ್ಬರೇನಾ? ಅಲ್ಲವೆನ್ನುತ್ತಾರೆ ತಜ್ಞರು. ಚಾಣಕ್ಯನು ಮಗಧ ಗಡಿ ಗ್ರಾಮದ ಚಣಕ ಎಂಬ ಬ್ರಾಹ್ಮಣನ ಮಗ. ಅವನ ತಂದೆ ಅವನಿಗೆ ಕೌಟಿಲ್ಯ ಎಂದು ಹೆಸರಿಟ್ಟನು. ತನ್ನ ಗುರುತನ್ನು ಮರೆಮಾಡಲು, ಕೌಟಿಲ್ಯ ತನ್ನ ಹೆಸರನ್ನು ವಿಷ್ಣು ಗುಪ್ತ ಎಂದು ಬದಲಾಯಿಸಿಕೊಂಡನು. ನಂತರ ಅವನು ಕೌಟಿಲ್ಯ ಎಂಬ ಹೆಸರಿನಲ್ಲಿ ಅರ್ಥಶಾಸ್ತ್ರವನ್ನೂ ಬರೆದನು.

ಚಂದ್ರಗುಪ್ತ ಮೌರ್ಯನ ಮಗ ಬಿಂದುಸಾರ ಮೌರ್ಯ ಮತ್ತು ಅವನ ಮಗ ಚಕ್ರವರ್ತಿ ಅಶೋಕ. ಆಚಾರ್ಯ ಚಾಣಕ್ಯನು ಈ ಮೂವರಿಗೆ ಜೀವನದ ಮಾರ್ಗವನ್ನು ತೋರಿಸಿ ಕೊಟ್ಟಿದ್ದನು. ಆಚಾರ್ಯ ಚಾಣಕ್ಯನು ಕ್ರಿ.ಪೂ. 371 ರಲ್ಲಿ ಜನಿಸಿದರೆ, ಕ್ರಿ.ಪೂ. 283 ರಲ್ಲಿ ಚಾಣಕ್ಯನು ಮರಣ ಹೊಂದಿದನು ಎಂದು ಹೇಳಲಾಗುತ್ತದೆ. ಮುದ್ರಾರಾಕ್ಷಸ, ಬೃಹತ್ಕಥಾಕೋಶ, ವಾಯುಪುರಾಣ, ಮತ್ಸ್ಯಪುರಾಣ, ವಿಷ್ಣುಪುರಾಣ, ಬೌದ್ಧ ಗ್ರಂಥಗಳು, ಮಹಾವಂಶ, ಜೈನ ಪುರಾಣ ಇತ್ಯಾದಿಗಳಲ್ಲಿ ಚಾಣಕ್ಯನ ಬಗ್ಗೆ ಉಲ್ಲೇಖಿಸಲಾಗಿದೆ. ಬೃಹತ್ಕಥಾಕೋಶದ ಪ್ರಕಾರ ಚಾಣಕ್ಯನ ಹೆಂಡತಿಯ ಹೆಸರು ಯಶೋಮತಿ.

ಮುದ್ರಾರಾಕ್ಷಸದ ಪ್ರಕಾರ, ಚಾಣಕ್ಯನ ನಿಜವಾದ ಹೆಸರು ವಿಷ್ಣುಗುಪ್ತ. ಚಾಣಕ್ಯನ ತಂದೆಯಾದ ಚಣಕನು ಅವನಿಗೆ ಕೌಟಿಲ್ಯ ಎಂದು ಹೆಸರಿಟ್ಟನು. ಚಾಣಕ್ಯನ ತಂದೆಯಾದ ಚಣಕನನ್ನು ಮಗಧದ ರಾಜ ರಾಜದ್ರೋಹದ ಅಪರಾಧಕ್ಕಾಗಿ ಕೊಂದನು. ಚಾಣಕ್ಯ ತನ್ನ ವಿದ್ಯಾಭ್ಯಾಸವನ್ನು ತಕ್ಷಶಿಲಾ ವಿದ್ಯಾಲಯದಲ್ಲಿ ಪೂರ್ಣಗೊಳಿಸಿದನು. ಚಾಣಕ್ಯ, ಮಗಧ ಚಕ್ರವರ್ತಿ ಧನಾನಂದನ ಸಾಮ್ರಾಜ್ಯದ ವಿರುದ್ಧ ಚಂದ್ರಗುಪ್ತನಿಗೆ ರಾಜಕೀಯ ಬೆಂಬಲವನ್ನು ನೀಡಿದ. ಅಂತಿಮವಾಗಿ ಧನಾನಂದನ ನಾಶದ ನಂತರ, ಅವನು ಚಂದ್ರಗುಪ್ತನನ್ನು ಮಗಧದ ಚಕ್ರವರ್ತಿಯಾಗಿ ಮಾಡಿದನು ಮತ್ತು ತಾನು ಸ್ವತಃ ಸಾಮಾನ್ಯ ಮಂತ್ರಿಯಾದನು.

ವಾತ್ಸ್ಯಾಯನನ ಬಗ್ಗೆ ಹೆಚ್ಚು ವಿವರಗಳು ತಿಳಿದುಬಂದಿಲ್ಲ. ಆದರೆ ಇವನ ಕಾಲ ಚಾಣಕ್ಯನಿಂದ ಬಹಳ ನಂತರ. ಬ್ರಾಹ್ಮಣ ವಿದ್ವಾಂಸನೊಬ್ಬನ ಮಗನೆಂದು ಹೇಳಲಾಗುವ ವಾತ್ಸ್ಯಾಯನ ಮೂಲ ಹೆಸರನ್ನು ಮಲ್ಲಿನಾಘ ಅಥವಾ ಮಲ್ಲನಾಘನೆಂದು ಭಾವಿಸಲಾಗುತ್ತದೆ. ಆತನ ಗತಕಾಲದ ಬಗ್ಗೆ ಯಾರಿಗೂ ಗೊತ್ತಿಲ್ಲ. ಆದರೂ ಆತ ಅಲ್ಲಲ್ಲಿ ಶಾತವಾಹನರ ಬಗ್ಗೆ ಮತ್ತು ರಾಹಮಿಹಿರನ ಬಗ್ಗೆ ಪ್ರಸ್ತಾಪಿಸುತ್ತಾನೆ. ಹೀಗಾಗಿ ಆತ ಗುಪ್ತರ ಕಾಲವಾದ ಕ್ರಿ.ಶ. 4ನೇ ಮತ್ತು 6ನೇ ಶತಮಾನಗಳ ಮಧ್ಯೆ ಜೀವಿಸಿದ್ದಿರಬಹುದೆಂದು ಅಂದಾಜಿಸಲಾಗುತ್ತದೆ.

ಕಾಮಕ್ಕೆ ಸಂಬಂಧಿಸಿದಂತೆ ವಾತ್ಸ್ಯಾಯನ ಕಾಮಸೂತ್ರವೆಂಬ ಗ್ರಂಥವನ್ನು ರಚಿಸಿದ್ದಾನೆ. ಕಾಮಸೂತ್ರದಲ್ಲಿ ನರ-ನಾರಿಯ ಸಂಬಂಧ, ಮೋಹ, ರಾಗಗಳ ಬಗ್ಗೆ ಪ್ರಸ್ತಾಪಿಸಲಾಗಿದೆ. ಕುತೂಹಲಕರ ಸಂಗತಿಯೆಂದರೆ,ವಾತ್ಸ್ಯಾಯನನ ಸಂಬಂಧಿಯೊಬ್ಬಳು ವೇಶ್ಯಾಮಂದಿರದಲ್ಲಿ ಕೆಲಸ ಮಾಡುತ್ತಿದ್ದರಿಂದ ಮತ್ತು ಆತನ ಬಾಲ್ಯವೆಲ್ಲ ಅಂಥ ಸ್ಥಳಗಳಲ್ಲೇ ಕಳೆದುಹೋಗಿದ್ದರಿಂದ ವಾತ್ಸಾಯನ ಕಾಮಸೂತ್ರದಂಥ ಗ್ರಂಥ ರಚಿಸಲು ಸಾಧ್ಯವಾಯಿತೆಂದೂ ಹೇಳುತ್ತಾರೆ. ಮೂಲತಃ ಭಾರತೀಯರು ಕಾಮದಂಥ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡುವ,ವಿಶ್ಲೇಷಿಸುವ ಬಗ್ಗೆ ತೋರುವ ಮಡಿವಂತಿಕೆಯೂ ಕೂಡ ವಾತ್ಸಾಯನನ ಜೀವಿತಕಾಲದ ಬಗ್ಗೆ ಮುಸುಕಾಗಿರಿಸಿರಬಹುದು. ಆದರೆ ಆತನ ಕಾಮಸೂತ್ರ ಜಗತ್ವಿಖ್ಯಾತವಾಗಿದೆ.