ನಮ್ಮಲ್ಲಿ ಬಹುತೇಕರು ಕ್ಷಮೆ ಕೇಳುವುದರಲ್ಲಿ ನಾವು ನಿಸ್ಸೀಮರು ಎಂದುಕೊಂಡಿರುತ್ತೇವೆ. ಆದರೆ, ಸತ್ಯವೆಂದರೆ ಕ್ಷಮೆ ಕೇಳುವುದು ಸುಲಭವಲ್ಲ ಹಾಗೂ ನಮಗದನ್ನು ಸರಿಯಾಗಿ ಹೇಳಲು ಬರುವುದಿಲ್ಲ. ಆದರೆ, ಕ್ಷಮೆ ಕೇಳುವ ಕೌಶಲ್ಯವು ಹಲವು ಸಂಬಂಧಗಳನ್ನು ಉಳಿಸಬಲ್ಲದು.
I am Sorry...
ಕೇಳೋಕೆ ಎಷ್ಟು ಸಿಂಪಲ್ ಅಲ್ಲವೇ? ಆದರೆ, ಹೇಳುವುದು ಅಷ್ಟೊಂದು ಸಿಂಪಲ್ ಖಂಡಿತಾ ಅಲ್ಲ.
ಅಬ್ಬಬ್ಬಾ, ಈ ಸಾರಿ ಎಂಬುದು ಮನಸ್ಸು ಮಾಡಿದರೆ ಮುಗಿದೇಹೋಯಿತು ಎಂಬಂಥ ಸಂಬಂಧವೊಂದಕ್ಕೆ ಅಚ್ಚರಿಯ ರೀತಿಯಲ್ಲಿ ಹೊಸಜೀವ ನೀಡಬಲ್ಲದು. ತಾನು ಇಚ್ಛಿಸದಿದ್ದರೆ ಎಂಥೆಂಥ ಪ್ರೇಮಿಗಳ ನಡುವೆಯೂ ಕ್ಷಣಮಾತ್ರದಲ್ಲಿ ಬಿರುಕು ಮೂಡಿಸಬಲ್ಲದು.
ಈ ಬಗ್ಗೆ ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್‌ನಲ್ಲಿ ಪ್ರಕಟವಾಗಿರುವ ಅಧ್ಯಯನದಲ್ಲಿ ಸಂಶೋಧಕರು ಕಂಡುಕೊಂಡಿದ್ದೆಂದರೆ ಯಾರಾದರೂ ತಪ್ಪು ಮಾಡಿದವರು ತಕ್ಷಣ ಕ್ಷಮೆ ಕೇಳಿದರೆ ಬಹುತೇಕರು ಆ ತಪ್ಪನ್ನು ಕ್ಷಮಿಸುವ, ಹಗುರವಾಗಿ ಪರಿಗಣಿಸುವ ಮನಸ್ಸು ಮಾಡುತ್ತಾರೆ. ಜೊತೆಗೆ, ತಪ್ಪಿತಸ್ಥರು ನಿಜವಾಗಿಯೂ ಕ್ಷಮೆ ಕೋರಲು ಬಹಳ ಪ್ರಯತ್ನ ಹಾಕಿದ್ದಲ್ಲಿ, ಆ ತಪ್ಪು ಕ್ಷುಲ್ಲಕವಾಗಿ ಕಾಣಲಾರಂಭಿಸುತ್ತದೆ. ಕ್ಷಮೆಯು ಸಂಬಂಧವನ್ನು ಗಟ್ಟಿಗೊಳಿಸಬಲ್ಲದು ಹಾಗೂ ನಂಬಿಕೆಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.
ಕ್ಷಮೆ ಪರಿಣಾಮಕಾರಿಯಾಗಿರಲು ಬೇಕಾದ ಗುಣಗಳು
ಕ್ಷಮೆ ಕೋರುವುದು ಒಂದು ಮ್ಯಾಜಿಕ್ ಮೂವ್ ಆಗಿರುವ ಕಾರಣ, ಅದನ್ನು ಸರಿಯಾದ ರೀತಿಯಲ್ಲಿ ಕೇಳುವುದು ಅಗತ್ಯ. ಪರಿಣಾಮಕಾರಿ ಕ್ಷಮಾಪಣೆಯ ಲಕ್ಷಣಗಳೇನು ಎಂಬುದನ್ನು ಸಂಶೋಧಕರು ಹೀಗೆ ವಿವರಿಸಿದ್ದಾರೆ.
1. ಐ ಯಾಮ್ ಸಾರಿ ಎನ್ನಿ
ಐ ಲವ್ ಯೂ ಎಂಬುದು ಎಂಥ ಮ್ಯಾಜಿಕ್ ಪದಗಳೋ, ಐ ಯಾಮ್ ಸಾರಿಯೂ ಅಷ್ಟೇ ಪರಿಣಾಮಕಾರಿ ಪದಗಳು. ಜನ ಪಶ್ಚಾತ್ತಾಪ ಪಟ್ಟಿದ್ದರ ಬಗ್ಗೆ ಬಹಿರಂಗವಾಗಿ ಹೇಳಿಕೊಳ್ಳುವುದನ್ನು ಕೇಳಲು ಬಯಸುತ್ತಾರೆ. ಇದರ ಜೊತೆಗೆ, ಯಾವ ಕಾರಣಕ್ಕಾಗಿ ನಾವು ಕ್ಷಮೆ ಕೇಳುತ್ತಿದ್ದೇವೆ ಎಂಬುದನ್ನು ತಿಳಿಸುವುದು ಕೂಡಾ ಮುಖ್ಯ. ಇಂಥ ವರ್ತನೆಗಾಗಿ ಕ್ಷಮೆ ಕೋರುತ್ತಿದ್ದೇನೆ ಎಂಬುದು ಆ ನಡೆಯಿಂದುಂಟಾದ ದೈಹಿಕ ಅಥವಾ ಮಾನಸಿಕ ಹಾನಿಯನ್ನು ಬೇಗ ಸರಿಪಡಿಸಬಲ್ಲದು. ಜೊತೆಗೆ, ನಾವು ಮಾಡಿದ್ದು ತಪ್ಪೆಂಬ ಬಗ್ಗೆ ನಮಗೆ ಅರಿವಿದೆ ಎಂದು ತೋರಿಸಿಕೊಟ್ಟಂತಾಗುತ್ತಾದ್ದರಿಂದ ಆ ವರ್ತನೆ ಭವಿಷ್ಯದಲ್ಲಿ ಪುನರಾವರ್ತನೆ ಆಗುವುದಿಲ್ಲ ಎಂದೂ ಹೇಳಿದಂತಾಗುತ್ತದೆ.
ಉದಾಹರಣೆಗೆ, 'ನಾನು ನಿನ್ನ ಅನುಮತಿ ಇಲ್ಲದೆ ನಿನ್ನ ಫೋನ್ ಬಳಸಿದ್ದಕ್ಕೆ ಸಾರಿ. ಹೇಳಬೇಕಾಗಿತ್ತು, ಆದರೆ ಆ ಕ್ಷಣ ಎಮರ್ಜೆನ್ಸಿ ಕಾಲ್ ಮಾಡಬೇಕಿತ್ತು ಹಾಗೂ ನನ್ನ ಫೋನ್ ಸ್ವಿಚ್ ಆಫ್ ಆಗಿತ್ತು. ನೀನು ಕೂಡಾ ನಿದ್ರಿಸಿದ್ದೆ. ಹಾಗಾಗಿ ಅನುಮತಿ ಕೇಳಲಿಲ್ಲ' ಎನ್ನುವುದು ಕೇವಲ ಸಾರಿ ಎಂದು ಹೇಳುವುದಕ್ಕಿಂತ ಹೆಚ್ಚು ಪರಿಣಾಮಕಾರಿ.
2. ಪರಿಹಾರ ಕೊಡುವ ಬಗ್ಗೆ ಹೇಳಿ
ನೀವು ಮಾಡಿದ ಅಚಾತುರ್ಯಕ್ಕೆ ಕೇವಲ ಕ್ಷಮೆ ಕೋರುವ ಬದಲು, ಅದಕ್ಕೆ ಪರಿಹಾರ ಕೊಡುವ ಬಗ್ಗೆ ಮಾತನಾಡಿದರೆ, ನೀವು ಪ್ರಾಮಾಣಿಕವಾಗಿ ಆಗಿರುವ ತಪ್ಪಿನ ಕುರಿತು ನೊಂದಿರುವುದನ್ನು ಪ್ರಕಟಪಡಿಸಿದಂತಾಗುತ್ತದೆ. ತಪ್ಪನ್ನು ಸರಿಪಡಿಸಲು ಸಾಧ್ಯವಾದ ಪ್ರಯತ್ನಗಳನ್ನು ಮಾಡಲು ಸಿದ್ಧರಿದ್ದೀರೆಂಬುದು ತಿಳಿಯುತ್ತದೆ. ಹಾಗಾಗಿ ಕ್ಷಮೆ ಕೇಳಿದ ಬಳಿಕ 'ಇದನ್ನು ಸರಿಪಡಿಸಲು ನಾನೇನು ಮಾಡಬಹುದು ತಿಳಿಸಿ' ಎಂದು ಕೇಳಿ. ಉದಾಹರಣೆಗೆ ನೀವು ಯಾರದಾದರೂ ಬಟ್ಟೆಯ ಮೇಲೆ ಕೈತಪ್ಪಿ ಕಾಫಿ ಚೆಲ್ಲಿದಿರೆಂದುಕೊಳ್ಳಿ, ಬದಲಾಗಿ ಅವರಿಗೆ ಕಾಫಿ ಕೊಡಿಸಿದರೆ ಪ್ರಯೋಜನವಿಲ್ಲ. ಇದು ಅವರಲ್ಲಿ ಮತ್ತಷ್ಟು ಕೋಪ ಬರಿಸುತ್ತದೆ. ನೀವು ತಪ್ಪಿಗೆ ಬದಲಾಗಿ ಅವರಿಗೆ ಹೊಸ ಬಟ್ಟೆ ಕೊಡಿಸುವುದು ಹೆಚ್ಚು ಸೂಕ್ತ. ಅಥವಾ, ಮರುದಿನ ಆ ಬಟ್ಟೆ ತಂದುಕೊಟ್ಟಲ್ಲಿ ಡ್ರೈ ಕ್ಲೀನ್ ಮಾಡಿಸಿಕೊಡುವುದಾಗಿ ಹೇಳಬಹುದು.
3. ಜವಾಬ್ದಾರಿ ತೆಗೆದುಕೊಳ್ಳಿ
ಕೆಲವೊಮ್ಮೆ ತಮ್ಮ ವರ್ತನೆಯನ್ನು ಸಮರ್ಥಿಸಿಕೊಳ್ಳುತ್ತಲೇ ಸಾರಿ ಕೇಳುವುದಿದೆ. ಅಂದರೆ, ಆಗ ಒತ್ತಡದಲ್ಲಿದ್ದೆ, ಅದಕ್ಕೆ ಹಾಗೆ ಮಾಡಿದೆ, ಸಾರಿ, ನೀನು ಪ್ರಾಜೆಕ್ಟ್ ಹಿಂದುಳಿದಿದೆ ಎಂದಿದ್ದಕ್ಕಾಗಿ ಎಲ್ಲರಿದುರಿಗೆ ಕೂಗಾಡಿದೆ ಹೀಗೆ... ಇಲ್ಲಿ ವ್ಯಕ್ತಿಯು ತಪ್ಪನ್ನು ಒಪ್ಪಿಕೊಳ್ಳುತ್ತಿಲ್ಲ. ಬದಲಿಗೆ ಸನ್ನಿವೇಶವನ್ನು, ಇತರರನ್ನು ಹೊಣೆಯಾಗಿಸುತ್ತಿದ್ದಾನೆ. ಇಂಥ ಸಾರಿಯಿಂದ ಪ್ರಯೋಜನವೇನೂ ಇಲ್ಲ.
ತಪ್ಪನ್ನು ಎಲ್ಲರೂ ಮಾಡುತ್ತಾರೆ., ಅದನ್ನು ಒಪ್ಪಿಕೊಂಡು ಕ್ಷಮೆ ಕೋರಿ, ಸಾಧ್ಯವಾದರೆ ಸರಿಪಡಿಸಿ ಜವಾಬ್ದಾರಿ ಮೆರೆಯುವುದು ದೊಡ್ಡತನ ಎನಿಸಿಕೊಳ್ಳುತ್ತದೆ. ಇದರಿಂದ ತಪ್ಪು ಮಾಡಿಯೂ ದೊಡ್ಡವರಾಗಲು ಸಾಧ್ಯವಿದೆ. ಕ್ಷಮೆ ಕೋರುವ ವಿಧಾನ ಸರಿಯಾಗಿದ್ದಲ್ಲಿ ಎದುರಿನ ವ್ಯಕ್ತಿ ಕ್ಷಮಿಸದಿದ್ದರೇ ಸಣ್ಣವನೆನಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ, ಜೀವನದಲ್ಲಿ ಅಗತ್ಯ ಬಂದಾಗೆಲ್ಲ ಕ್ಷಮೆ ಕೋರುವುದು, ಕ್ಷಮೆ ಕೇಳಿದವರನ್ನು ಕ್ಷಮಿಸುವುದು ಅಭ್ಯಾಸ ಮಾಡಿಕೊಂಡರೆ ಸಂಬಂಧಗಳು ಸರಿಯಾದ ಹಾದಿಯಲ್ಲಿ ಸಾಗುತ್ತವೆ.