7ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿ ವಿದ್ಯಾರ್ಥಿನಿಯ ಮೇಲಿನ ಸೇಡಿನಿಂದ ಆಕೆಯ ಮೇಲೆ ಅತ್ಯಾಚಾರ ಮತ್ತು ಹತ್ಯೆಗೆ 9ನೇ ತರಗತಿಯ ಬಾಲಕನಿಗೆ ಸುಪಾರಿ ನೀಡಿದ್ದ. ಆದರೆ, ಸುಪಾರಿ ಪಡೆದ ಬಾಲಕ ಶಾಲಾ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದರಿಂದ ದುರಂತ ತಪ್ಪಿದೆ. ಪ್ರಕರಣ ಮುಚ್ಚಿಹಾಕಲು ಯತ್ನಿಸಿದ ಮೂವರು ಶಿಕ್ಷಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಪುಣೆ (ಜ.30): 7ನೇ ತರಗತಿಯ ವಿದ್ಯಾರ್ಥಿಯೋರ್ವ ತನ್ನದೇ ತರಗತಿಯ ವಿದ್ಯಾರ್ಥಿನಿ ವಿರುದ್ಧ ಸೇಡು ತೀರಿಸಿಕೊಳ್ಳುವ ಸಲುವಾಗಿ ಆಕೆಯ ಮೇಲೆ ಅತ್ಯಾಚಾರ ಎಸಗಿ, ಆಕೆಯನ್ನು ಹತ್ಯೆ ಮಾಡಲು 9ನೇ ತರಗತಿ ಬಾಲಕನಿಗೆ 100 ರು.ನ ಸುಪಾರಿ ಕೊಟ್ಟ ಆಘಾತಕಾರಿ ಘಟನೆ ಮಹಾರಾಷ್ಟ್ರದ ದೌಂಡ್ ಜಿಲ್ಲೆಯಲ್ಲಿ ನಡೆದಿದೆ.
ಆದರೆ ಅದೃಷ್ಟವಶಾತ್ ಸುಪಾರಿ ಪಡೆದಿದ್ದ ಬಾಲಕ ಕೃತ್ಯ ಎಸಗುವ ಬದಲು ಈ ವಿಷಯವನ್ನು ಶಾಲೆಯ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದಾನೆ. ಹೀಗಾಗಿ ದುರಂತ ತಪ್ಪಿದೆ. ಆದರೆ ಪ್ರಕರಣದಲ್ಲಿ ಆರೋಪಿ ಬಾಲಕನ ವಿರುದ್ಧ ಕ್ರಮ ಕೈಗೊಳ್ಳಬೇಕಿದ್ದ ಪ್ರಿನ್ಸಿಪಾಲ್ ಮತ್ತು ಇಬ್ಬರು ಶಿಕ್ಷಕಿಯರು ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ ಮಾಡಿದ್ದಾರೆ. ಆದರೆ ವಿಷಯ ಬಹಿರಂಗವಾದ ಬಳಿಕ ಇದೀಗ ಮೂವರು ಶಿಕ್ಷಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸೇಡು: ಬಾಲಕ ತನ್ನ ರಿಪೋರ್ಟ್ ಕಾರ್ಡಿನಲ್ಲಿ ಪೋಷಕರ ನಕಲಿ ಸಹಿ ಮಾಡಿದ್ದ ಎಂದು ವಿದ್ಯಾರ್ಥಿನಿ ಶಿಕ್ಷಕರಿಗೆ ದೂರು ನೀಡಿದ್ದಳು. ಇದಕ್ಕೆ ಕುಪಿತಗೊಂಡಿದ್ದ ಬಾಲಕ, ಪಾಠ ಕಲಿಸಲು ಆಕೆಯ ಮೇಲೆ ಅತ್ಯಾಚಾರ ಮತ್ತು ಕೊಲೆ ಮಾಡಲು 9ನೇ ಕ್ಲಾಸ್ ಹುಡುಗನಿಗೆ 100 ರು. ಸುಪಾರಿ ನೀಡಿದ್ದ
ಇದನ್ನೂ ಓದಿ: 35 ರೂಪಾಯಿಗಾಗಿ ಕೊಲೆ; 57 ವರ್ಷಗಳ ಬಳಿಕ ಆರೋಪಿ ಪೊಲೀಸರಿಗೆ ಸಿಕ್ಕಿದ್ದೇಗೆ?