
ಬೆಂಗಳೂರು(ಜ.30): ಸಾಲ ವಸೂಲಾತಿ ವೇಳೆ ಸಾಲಗಾರರಿಗೆ ಕಿರುಕುಳ ನೀಡುತ್ತಿರುವ ಮೈಕ್ರೋ ಫೈನಾನ್ಸ್ ಸಂಸ್ಥೆ ಗಳ ಮೇಲೆ ನಿಯಂತ್ರಣ ಹೇರಲು ಮಸೂದೆ ಕರಡು ಸಿದ್ದಪಡಿಸಲಾಗಿದ್ದು, ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ವಿಧಾನಸೌಧದಲ್ಲಿ ಬುಧವಾರ ಮಸೂದೆ ಅಂತಿಮಗೊಳಿಸುವ ಸಂಬಂಧ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಜತೆಗೂಡಿ ವಿವಿಧ ಇಲಾಖೆಗಳ ಅಧಿಕಾರಿ ಗಳೊಂದಿಗೆ ಸಭೆ ನಡೆಸಿ ನಂತರ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್‌ಗಳು ಸಾಲ ವಸೂಲಾತಿ ಸಂದರ್ಭದಲ್ಲಿ ನವೀಯವಾಗಿ ವರ್ತಿಸುತ್ತಿವೆ. ಅದರಿಂದಾಗಿ ಸಣ್ಣ ಪ್ರಮಾಣದ ಸಾಲ ಪಡೆದವರು ಸಮಸ್ಯೆಗೀಡಾಗುತ್ತಿದ್ದು, ಅದನ್ನು ತಪ್ಪಿಸಲು ನೂತನ ಮಸೂದೆ ಸಿದ್ದಪಡಿಸಲಾಗಿದೆ. ಅದರ ಕುರಿತು ಮುಖ್ಯಮಂತ್ರಿಯ ವರೊಂದಿಗೆ ಅಂತಿಮವಾಗಿ ಚರ್ಚಿಸಿ ಗುರುವಾರದ ಸಚಿವ ಸಂಪುಟ ಸಭೆಯಲ್ಲಿ ಅದನ್ನು ಮಂಡಿಸಲಾಗುವುದು ಎಂದರು.
ಶಿವಮೊಗ್ಗದಲ್ಲಿ ಮೈಕ್ರೋ ಫೈನಾನ್ಸ್ ಹಾವಳಿಗೆ ಬೇಸತ್ತ ಆಟೋ ಚಾಲಕನಿಂದ ಆತ್ಮಹತ್ಯೆ ಯತ್ನ!
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತನಾಡಿ, ಮೈಕ್ರೋ ಫೈನಾನ್ಸ್ ಸಂಸ್ಥೆಗಳು ಸಾರ್ವಜನಿಕರಿಗೆ ನೀಡುತ್ತಿರುವ ಕಿರುಕುಳವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅದನ್ನು ತಡೆಯಲು ತ್ವರಿತವಾಗಿ ಕಾನೂನು ತರಲು ಮುಖ್ಯಮಂತ್ರಿಗಳು ಸೂಚಿಸಿದ್ದಾರೆ. ಮಸೂದೆ ಸಿದ್ದಪಡಿಸಲಾಗಿದ್ದು, ಸಚಿವ ಸಂಪುಟ ಸಭೆಯಲ್ಲಿ ಮಂಡಿಸಿ ಚರ್ಚಿಸಲಾಗುವುದು. ಅಲ್ಲದೆ, ಮಾರ್ಚ್‌ನಲ್ಲಿ ವಿಧಾನಮಂಡಲ ಅಧಿವೇಶನ ನಡೆಯಲಿದೆ. ಅಲ್ಲಿಯವರೆಗೆ ಕಾಯುವ ಬದಲು ಸುಗ್ರೀವಾಜ್ಞೆ ಮೂಲಕ ಮಸೂದೆಯನ್ನು ಶೀಘ್ರದಲ್ಲಿ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಸಚಿವ ಸಂಪುಟ ಸಭೆಯಲ್ಲಿ ಮಸೂದೆಗೆ ಅನುಮೋದನೆ ಪಡೆದು, ಸುಗ್ರೀವಾಜ್ಞೆ ಹೊರಡಿಸಿ ರಾಜ್ಯಪಾಲರ ಅನುಮೋದನೆಗೆ ಕಳುಹಿಸಲಾಗುವುದು ಎಂದು ಹೇಳಿದರು.
ಮಸೂದೆಗೆ ಅನುಮೋದನೆ ದೊರೆಯುವವರೆಗೆ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳಕ್ಕೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದೂರುಗಳು ಬರದಿದ್ದರೂ, ವಿಷಯ ತಿಳಿದರೆ ಸ್ವಯಂ ಪ್ರೇರಿತ ದೂರು ದಾಖಲಿಸಿ ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೂ ಸೂಚಿಸಲಾಗಿದೆ. ಅದರ ಜತೆಗೆ ಸಾಲ ಪಡೆಯುವುದು ಮತ್ತು ಅದನ್ನು ಮರುಪಾವ ತಿಸುವ ಕುರಿತಂತೆ ಜನರಲ್ಲಿ ಜಾಗೃತಿಯನ್ನೂ ಮೂಡಿಸಲಾಗುವುದು ಎಂದು ತಿಳಿಸಿದರು.
ಗದಗ ಜಿಲ್ಲೆಯಲ್ಲಿವೆ 24 ಮೈಕ್ರೋ ಫೈನಾನ್ಸ್ ಬ್ರ್ಯಾಂಚ್: ಜನರ ನಿರಂತರ ಶೋಷಣೆ!
ನೂತನ ಮಸೂದೆಯಲ್ಲಿ ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಆರ್ಥಿಕ ವ್ಯವಹಾರಗಳಿಗೆ ತಡೆಯೊಡ್ಡುತ್ತಿಲ್ಲ. ಬದಲಿಗೆ ಸಾಲ ವಸೂಲಾತಿ ವೇಳೆ ಕಿರುಕುಳ ನೀಡುವುದನ್ನು ತಪ್ಪಿಸುವ ಅಂಶಗಳು ಇರಲಿದೆ. ಕಿರುಕುಳದ ಕುರಿತು ದೂರುಗಳು ಬಂದು ಸಾಬೀತಾದರೆ ಮೈಕ್ರೋ ಫೈನಾನ್ಸ್ ಸಂಸ್ಥೆ ಮುಖ್ಯಸ್ಥರಿಗೆ ದಂಡವಿಧಿಸುವುದು ಮತ್ತು ಜೈಲು ಶಿಕ್ಷೆ ನೀಡುವಂತಹ ಕಠಿಣ ಅಂಶಗಳು ಮಸೂದೆಗೆ ಸೇರಿಸಲಾಗುತ್ತಿದೆ ಎಂದು ವಿವರಿಸಿದರು.
ಫೈನಾನ್ಸ್ ಕಿರುಕುಳಕ್ಕೆ ಮತ್ತೊಬ್ಬ ಮಹಿಳೆ ಬಲಿ
ಮಂಡ್ಯ/ತುಮಕೂರು: ಮೈಕ್ರೋ ಫೈನಾ ನ್ಸ್ ಕಿರುಕುಳಕ್ಕೆ ರಾಜ್ಯದಲ್ಲಿ ಮತ್ತೊಂದು ಸಾವು ಸಂಭವಿಸಿದೆ. ದೌರ್ಜನ್ಯದಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕು ಕೊನ್ನಾಪುರ ಗ್ರಾಮದ ಪ್ರೇಮಾ (59) ಬುಧವಾರ ಮೃತಪಟ್ಟಿದ್ದಾರೆ. ಮತ್ತೊಂದೆಡೆ, ತುಮಕೂರು ಜಿಲ್ಲೆ ಕೊರಟಗೆರೆ ತಾಲೂಕಿನ ಅಲ್ಲಾಳಸಂದ್ರ ಹನುಮಂತಪುರದಲ್ಲಿ ಮಂಗಳಮ್ಮ ಎಂಬುವರು 30 ಬಿಪಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ