ಇಸ್ಲಾಮಾಬಾದ್‌(ಜೂ.03): ಭಾರತದ ವಿರುದ್ಧ ಗಡಿ ವಿಷಯದಲ್ಲಿ ಕತ್ತಿ ಮಸೆಯುತ್ತಿರುವ ಚೀನಾ ಹಾಗೂ ಪಾಕಿಸ್ತಾನಗಳು ಈಗ ಪುನಃ ‘ಒಗ್ಗಟ್ಟು’ ಪ್ರದರ್ಶಿಸಿದ್ದು, ಕೊರೋನಾ ಲಸಿಕೆ ವಿಷಯದಲ್ಲೂ ಒಂದಾಗಿವೆ. ಕೋವಿಡ್‌ ಸೋಂಕಿನ ವಿರುದ್ಧ ತಾನು ಚೀನಾ ನೆರವಿನಿಂದ ದೇಶೀ ಲಸಿಕೆ ಅಭಿವೃದ್ಧಿಪಡಿಸಿರುವುದಾಗಿ ಪಾಕಿಸ್ತಾನ ಸರ್ಕಾರ ಘೋಷಿಸಿದೆ. ಈ ಲಸಿಕೆಗೆ ‘ಪಾಕ್‌ ವ್ಯಾಕ್‌’ ಎಂಬ ಹೆಸರಿಡಲಾಗಿದೆ.

ಪಾಕಿಸ್ತಾನಕ್ಕೆ ಅಣ್ವಸ್ತ್ರ ನೀಡಿಕೆಯಲ್ಲಿ ಈ ಹಿಂದೆ ಚೀನಾ ಪ್ರಮುಖ ಪಾತ್ರ ವಹಿಸಿತ್ತು ಹಾಗೂ ಪಾಕಿಸ್ತಾನದಲ್ಲಿನ ಅನೇಕ ಅಭಿವೃದ್ಧಿ ಯೋಜನೆಗಳಿಗೆ ಚೀನಾ ನೆರವು ನೀಡುತ್ತಿದೆ. ಈಗ ವುಹಾನ್‌ ಲ್ಯಾಬ್‌ನಲ್ಲಿ ಕೊರೋನಾ ‘ಸೃಷ್ಟಿ’ ಮಾಡಿದ ಆರೋಪ ಹೊತ್ತಿರುವ ಚೀನಾ, ಪಾಕಿಸ್ತಾನಕ್ಕೆ ಲಸಿಕೆ ನೆರವು ಕೂಡ ನೀಡುತ್ತಿದೆ. ಭಾರತದ ನೆರೆ ದೇಶಗಳ ಈ ನಡೆ ಅನುಮಾನಕ್ಕೆ ಕಾರಣವಾಗಿದೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

‘ಸ್ವದೇಶೀ’ ಪಾಕ್‌ ಲಸಿಕೆ ಘೋಷಣೆ:

ಚೀನಾದ ಕ್ಯಾನ್‌ಸಿನೋ ಕಂಪನಿಯ ನೆರವಿನೊಂದಿಗೆ ‘ಪಾಕ್‌ ವ್ಯಾಕ್‌’ ಹೆಸರಿನ ಸಿಂಗಲ್‌ ಡೋಸ್‌ ಲಸಿಕೆ ಅಭಿವೃದ್ಧಿಪಡಿಸಿರುವುದಾಗಿ ಪಾಕ್‌ ಪ್ರಧಾನಿಗಳ ವಿಶೇಷ ಸಹಾಯಕ (ಆರೋಗ್ಯ) ಡಾ.ಫೈಸಲ್‌ ಸುಲ್ತಾನ್‌ ಪ್ರಕಟಿಸಿದ್ದಾರೆ.

‘ಚೀನಾ ನಮಗೆ ಲಸಿಕೆ ಉತ್ಪಾದನೆಗೆ ಅಗತ್ಯವಾದ ಕಚ್ಚಾವಸ್ತುಗಳನ್ನು ಪೂರೈಕೆ ಮಾಡಿತ್ತು. ಅದರ ನಂತರದ ಕ್ಲಿಷ್ಟಕರ ಪ್ರಕ್ರಿಯೆಗಳನ್ನು ನಮ್ಮ ವಿಜ್ಞಾನಿಗಳು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ’ ಎಂದು ಸುಲ್ತಾನ್‌ ಹೇಳಿದ್ದಾರೆ.

ಜಪಾ​ನ್‌​ನಲ್ಲಿ 12-15 ವರ್ಷ​ದ ಮಕ್ಕ​ಳಿಗೆ ಫೈಝರ್‌ ಲಸಿಕೆ!

ಕೆಲ ತಿಂಗಳ ಹಿಂದೆ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಅವರ ಸಲಹೆಗಾರ (ಆರೋಗ್ಯ) ಝಫರ್‌ ಮಿರ್ಜಾ, ‘ನಾವು ಯಾವುದೇ ಲಸಿಕೆ ಉತ್ಪಾದಿಸುತ್ತಿಲ್ಲ. ಕೆಲ ದೇಶಗಳು ನಮ್ಮ ದೇಶದಲ್ಲಿ ಲಸಿಕೆಯ ಪ್ರಾಯೋಗಿಕ ಪರೀಕ್ಷೆಗೆ ಅನುಮತಿ ಕೇಳಿವೆ’ ಎಂದು ಹೇಳಿದ್ದರು ಎಂಬುದು ಇಲ್ಲಿ ಗಮನಾರ್ಹ.

ಅಣ್ವಸ್ತ್ರಕ್ಕೂ ಇದೇ ರೀತಿ ಚೀನಾ ನೆರವು

ದಶಕಗಳ ಹಿಂದೆ ಪಾಕಿಸ್ತಾನ ಅಣ್ವಸ್ತ್ರ ತಯಾರಿಸಲು ಕೂಡಾ ಚೀನಾ ರಹಸ್ಯವಾಗಿ ನೆರವು ನೀಡಿತ್ತು. ಭಾರತದ ವಿರುದ್ಧ ಪಾಕಿಸ್ತಾನವನ್ನು ಎತ್ತಿಕಟ್ಟುವ ನಿಟ್ಟಿನಲ್ಲಿ ಚೀನಾ ಮಿಲಿಟರಿ, ಅಣ್ವಸ್ತ್ರ ತಯಾರಿಸಲು ಬೇಕಾದ ಹಲವು ಉಪಕರಣ ಮತ್ತು ಕಚ್ಚಾ ವಸ್ತುಗಳನ್ನು ರಹಸ್ಯವಾಗಿ ಪೂರೈಸಿತ್ತು.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona