Paradox Snake: ವಿಜ್ಞಾನ ಲೋಕದಲ್ಲಿ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ವಿಜ್ಞಾನಿ ಡಾ. ಜಾರ್ಜಿಯೊಸ್ ಅವರ ಕಣ್ಣಿಗೆ ಬಿದ್ದ ಈ 'ಪ್ಯಾರಾಡಾಕ್ಸ್ ಸ್ನೇಕ್' ಈಗ ಹಾವಿನ ವಿಕಾಸದ ಬಗ್ಗೆ ಹೊಸ ಸತ್ಯಗಳನ್ನು ಹೊರಹಾಕುತ್ತಿದೆ. ಈ ರೋಚಕ ಸಂಶೋಧನೆಯ ಪೂರ್ಣ ವಿವರ ಇಲ್ಲಿದೆ.

ಕ್ಷಾಂತರ ವರ್ಷಗಳ ಹಿಂದೆ ಇಂಗ್ಲೆಂಡ್ ಇಂದಿನಂತಿರಲಿಲ್ಲ. ಲೇಟ್ ಈಯಸೀನ್ (Late Eocene) ಕಾಲಘಟ್ಟದಲ್ಲಿ, ಇಂಗ್ಲೆಂಡ್ ಉಷ್ಣವಲಯದ ಜೌಗು ಕಾಡುಗಳಿಂದ ಸಮೃದ್ಧವಾಗಿತ್ತು. ಇದು ಸರಿಸೃಪಗಳಿಗೆ ವಾಸಿಸಲು ಅತ್ಯಂತ ಸೂಕ್ತವಾದ ಸ್ಥಳವಾಗಿತ್ತು. 1981ರಲ್ಲಿ ದಕ್ಷಿಣ ಇಂಗ್ಲೆಂಡ್‌ನಲ್ಲಿ ಪತ್ತೆಯಾದ ಪಳೆಯುಳಿಕೆಯೊಂದು ಬರೋಬ್ಬರಿ 37 ಮಿಲಿಯನ್ ವರ್ಷಗಳಷ್ಟು ಹಳೆಯದಾದ ಹೊಸ ಹಾವಿನ ಪ್ರಭೇದಕ್ಕೆ ಸೇರಿದ್ದೆಂದು ಈಗ ತಿಳಿದುಬಂದಿದೆ. ಸದ್ಯ ಈ ವಿಶಿಷ್ಟ ಪ್ರಭೇದಕ್ಕೆ ಪ್ಯಾರಾಡಾಕ್ಸೋಫಿಡಿಯನ್ ರಿಚರ್ಡ್‌ಓವೆನಿ (Paradoxophidion richardoweni) ಎಂದು ಹೆಸರಿಸಲಾಗಿದ್ದು, ಇದು ಬ್ರಿಟಿಷ್ ದ್ವೀಪಗಳಲ್ಲಿ ಹಾವಿನ ವಿಕಾಸದ ಬಗ್ಗೆ ಹೊಸ ಬೆಳಕು ಚೆಲ್ಲುತ್ತದೆ.

40 ವರ್ಷಗಳ ನಂತರ ನಡೆದ ಮಹತ್ವದ ಸಂಶೋಧನೆ

ಈ ಪಳೆಯುಳಿಕೆಯು ಇಂಗ್ಲೆಂಡ್‌ನ ದಕ್ಷಿಣ ಕರಾವಳಿಯ ಹೊರ್ಡಲ್ ಕ್ಲಿಫ್‌ನಲ್ಲಿ (Hordle Cliff) ಪತ್ತೆಯಾಗಿದ್ದು, 31 ಬೆನ್ನುಮೂಳೆಯ ಮೂಳೆಗಳನ್ನು (Vertebrae) ಒಳಗೊಂಡಿತ್ತು. ಈ ಪ್ರಾಚೀನ ಮೂಳೆಗಳು ಲಂಡನ್‌ನ ನ್ಯಾಚುರಲ್ ಹಿಸ್ಟರಿ ಮ್ಯೂಸಿಯಂನ ಡ್ರಾಯರ್‌ನಲ್ಲಿ ದಶಕಗಳ ಕಾಲ ಯಾರ ಗಮನಕ್ಕೂ ಬಾರದೆ ಬಿದ್ದಿದ್ದವು. ಡಾ. ಜಾರ್ಜಿಯೊಸ್ ಜಾರ್ಜಾಲಿಸ್ ಅವರು ಮ್ಯೂಸಿಯಂನ ಹಳೆಯ ಪಳೆಯುಳಿಕೆ ಸಂಗ್ರಹವನ್ನು ತಪಾಸಣೆ ಮಾಡುವಾಗ ಇದು ಬೆಳಕಿಗೆ ಬಂತು.

ಜಾರ್ಜಾಲಿಸ್ ಅವರು ನವೆಂಬರ್ 2025ರಲ್ಲಿ ಪ್ರಕಟವಾದ ಅಧ್ಯಯನದಲ್ಲಿ, ಈ ಹಾವಿನ ಬೆನ್ನುಮೂಳೆಯ ಮೂಳೆಗಳು ಎಷ್ಟು ವಿಭಿನ್ನವಾಗಿದ್ದವು ಎಂದರೆ ಅವುಗಳನ್ನು ನೋಡಿದ ತಕ್ಷಣವೇ ಇದೊಂದು ಹೊಸ ಪ್ರಭೇದವೆಂದು ತಮಗೆ ಅರಿವಾಯಿತು ಎಂದು ತಿಳಿಸಿದ್ದಾರೆ.

ಪ್ಯಾರಾಡಾಕ್ಸೋಫಿಡಿಯನ್ ರಿಚರ್ಡ್‌ಓವೆನಿ ಕುರಿತ ಅಚ್ಚರಿಯ ಮಾಹಿತಿ

ಈ ಪಳೆಯುಳಿಕೆಯಲ್ಲಿ ಕೇವಲ ಹಾವಿನ ಬೆನ್ನುಮೂಳೆಯ ಭಾಗಗಳು ಮಾತ್ರ ಲಭ್ಯವಿವೆ.
ರಚನೆ:ಇದರ ಬೆನ್ನುಮೂಳೆಯು ದೊಡ್ಡ ನರ ಕಾಲುವೆ ಮತ್ತು ಬಲವಾದ ಆಧಾರ ರಚನೆಯನ್ನು ಹೊಂದಿದೆ. ಇದರ ಆಕಾರವು ಪ್ರಾಚೀನ ಹಾವುಗಳು ಮತ್ತು ಇಂದಿನ ಆಧುನಿಕ ಹಾವುಗಳಿಗಿಂತ ಭಿನ್ನವಾಗಿದೆ.
ಗಾತ್ರ:ಪತ್ತೆಯಾದ ಪಳೆಯುಳಿಕೆಯ ತುಣುಕುಗಳು ಕೇವಲ ಕೆಲವು ಮಿಲಿಮೀಟರ್‌ಗಳಷ್ಟು ಉದ್ದವಿವೆ. ಆದರೆ, ವಯಸ್ಕ ಹಾವಿನ ಒಟ್ಟು ಉದ್ದ ಸುಮಾರು 3 ಅಡಿ ಇರಬಹುದು ಎಂದು ಅಂದಾಜಿಸಲಾಗಿದೆ.
ತಂತ್ರಜ್ಞಾನ: ಸಂಶೋಧನಾ ತಂಡವು 'ಮೈಕ್ರೋ ಸಿಟಿ ಸ್ಕ್ಯಾನ್' (Micro CT Scans) ಬಳಸಿ ಈ ಮೂಳೆಗಳ 3D ಮಾದರಿಗಳನ್ನು ತಯಾರಿಸಿ, ಇದು ಈವರೆಗೆ ಜಗತ್ತಿಗೆ ತಿಳಿಯದ ಹೊಸ ಪ್ರಭೇದವೆಂದು ಖಚಿತಪಡಿಸಿದೆ.

ಸಿಕ್ಕಿಲ್ಲ ಹಾವಿನ ತಲೆಬುರುಡೆ
ಈ ಹಾವಿನ ತಲೆಬುರುಡೆಯ ಪಳೆಯುಳಿಕೆ ಸಿಗದ ಕಾರಣ, ಇದು ಏನನ್ನು ಆಹಾರವಾಗಿ ಸೇವಿಸುತ್ತಿತ್ತು ಎಂಬ ಮಾಹಿತಿ ಲಭ್ಯವಿಲ್ಲ. ಆದರೆ, ಇದು ಇಂದು ಜಗತ್ತಿನಲ್ಲಿರುವ 80% ಕ್ಕಿಂತ ಹೆಚ್ಚು ಹಾವಿನ ಪ್ರಭೇದಗಳನ್ನು ಒಳಗೊಂಡಿರುವ 'ಕೇನೋಫಿಡಿಯನ್ಸ್' (Caenophidians) ಗುಂಪಿನ ಆರಂಭಿಕ ಸದಸ್ಯ ಎಂದು ಗುರುತಿಸಲಾಗಿದೆ.

ಸಂಶೋಧಕರು ಇದಕ್ಕೆ 'ಪ್ಯಾರಾಡಾಕ್ಸೋಫಿಡಿಯನ್ ರಿಚರ್ಡ್‌ಓವೆನಿ' ಎಂದು ಹೆಸರಿಟ್ಟಿದ್ದಾರೆ, ಗ್ರೀಕ್ ಭಾಷೆಯಲ್ಲಿ ಇದರರ್ಥ 'ಪ್ಯಾರಾಡಾಕ್ಸ್ ಸ್ನೇಕ್' (Paradox Snake. ಇದರ ಪ್ರಭೇದದ ಹೆಸರನ್ನು (richardoweni) ಬ್ರಿಟಿಷ್ ಜೀವವಿಜ್ಞಾನಿ ಸರ್ ರಿಚರ್ಡ್ ಓವೆನ್ ಅವರ ಗೌರವಾರ್ಥವಾಗಿ ಇಡಲಾಗಿದೆ. 

ಇದು 'ಎಲಿಫೆಂಟ್ ಟ್ರಂಕ್ ಸ್ನೇಕ್'ನ ಪೂರ್ವಜವೇ?
ಮತ್ತೊಂದು ಆಸಕ್ತಿದಾಯಕ ಅಂಶವೆಂದರೆ, ಈ ಹಾವಿನ ರಚನೆಯು ಇಂದಿನ ಅಕ್ರೋಕಾರ್ಡಿಡ್ಸ್ (Acrochordids) ಎಂಬ ವಿಷಕಾರಿಯಲ್ಲದ ಜಲಚರ ಹಾವುಗಳಿಗೆ ಹೋಲುತ್ತದೆ. ಇವುಗಳನ್ನು ಸಾಮಾನ್ಯವಾಗಿ 'ಎಲಿಫೆಂಟ್ ಟ್ರಂಕ್ ಸ್ನೇಕ್' (ಆನೆಯ ಸೊಂಡಿಲಿನಂತಹ ಹಾವು) ಎಂದು ಕರೆಯಲಾಗುತ್ತದೆ. ಒಂದು ವೇಳೆ ಪ್ಯಾರಾಡಾಕ್ಸೋಫಿಡಿಯನ್ ಈ ಕುಟುಂಬಕ್ಕೆ ಸೇರಿದ್ದೇ ಆದಲ್ಲಿ, ಇದು ಜಗತ್ತಿನ ಅತ್ಯಂತ ಹಳೆಯ ಜಲಚರ ಹಾವಿನ ಕುಟುಂಬದ ಸದಸ್ಯನಾಗಲಿದೆ.

ಮುಂದಿನ ಹಾದಿ
ವಿಜ್ಞಾನಿಗಳು ಮ್ಯೂಸಿಯಂನಲ್ಲಿರುವ ಇನ್ನುಳಿದ ಪಳೆಯುಳಿಕೆಗಳನ್ನು ಪರಿಶೀಲಿಸುವುದನ್ನು ಮುಂದುವರಿಸಲಿದ್ದಾರೆ. ಬೃಹತ್ ಗಾತ್ರದ ಜಲಚರ ಹಾವಾದ 'ಪ್ಯಾಲಿಯೋಫಿಸ್' (Palaeophis) ಸೇರಿದಂತೆ ಹಲವು ಮೂಳೆಗಳ ಅಧ್ಯಯನವು ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಹೊಸ ಪ್ರಭೇದಗಳ ಆವಿಷ್ಕಾರಕ್ಕೆ ದಾರಿ ಮಾಡಿಕೊಡಬಹುದು ಎಂದು ಆಶಿಸಲಾಗಿದೆ.