'ಆಪರೇಷನ್ ಸಿಂದೂರ್'ನಲ್ಲಿ ಸೋತ ಪಾಕಿಸ್ತಾನಿ ಸೇನೆಯು, ಲಷ್ಕರ್-ಎ-ತೈಬಾ ಮತ್ತು ಜಮಾತ್-ಉದ್-ದವಾ ಜೊತೆ ಸೇರಿ ಭಾರತದ ವಿರುದ್ಧ ಹೊಸ ಪಿತೂರಿ ರೂಪಿಸುತ್ತಿದೆ. ಉಗ್ರ ಕಮಾಂಡರ್‌ಗಳು ಭಾರತದ ನಕ್ಷೆಯನ್ನೇ ಬದಲಾಯಿಸುವುದಾಗಿ ಬೆದರಿಕೆ ಹಾಕಿದ್ದಾರೆ.

ಭಾರತದ ವಿರುದ್ಧದ 'ಆಪರೇಷನ್ ಸಿಂದೂರ್'ನಲ್ಲಿ ಹೀನಾಯವಾಗಿ ಸೋತು ಮುಖಭಂಗ ಅನುಭವಿಸಿರುವ ಪಾಕಿಸ್ತಾನಿ ಸೇನೆ, ಈಗ ಮತ್ತೆ ಭಯೋತ್ಪಾದಕ ಸಂಘಟನೆಗಳ ಜೊತೆ ಸೇರಿ ಹೊಸ ಪಿತೂರಿ ನಡೆಸುತ್ತಿದೆ. ಪಾಕ್ ಸೇನಾ ಮುಖ್ಯಸ್ಥ ಅಸಿಮ್ ಮುನೀರ್ ಮತ್ತು ಶಹಬಾಜ್ ಸರ್ಕಾರದ ನೇರ ಬೆಂಬಲದೊಂದಿಗೆ ಲಷ್ಕರ್-ಎ-ತೈಬಾ (LeT) ಹಾಗೂ ಜಮಾತ್-ಉದ್-ದವಾ (JuD) ಸಂಘಟನೆಗಳು ಭಾರತದ ವಿರುದ್ಧ ಬಹಿರಂಗವಾಗಿ ವಿಷಕಾರಲು ಆರಂಭಿಸಿವೆ. ಪಾಕಿಸ್ತಾನಿ ಸೇನೆಯು ಭಯೋತ್ಪಾದಕರಿಗೆ ಬೆನ್ನೆಲುಬಾಗಿ ನಿಂತಿರುವುದು ಈಗ ಜಗತ್ತಿನ ಮುಂದೆ ಜಗಜ್ಜಾಹೀರಾಗಿದೆ.

'ಭಾರತದ ನಕ್ಷೆ ಬದಲಿಸುತ್ತೇವೆ': ಉಗ್ರ ಘಿಲ್ಜೈ ಅಟ್ಟಹಾಸ

ರಹೀಮ್ ಯಾರ್ ಖಾನ್‌ನಲ್ಲಿ ನಡೆದ ಉಗ್ರರ ಸಮಾವೇಶದಲ್ಲಿ ಜಮಾತ್-ಉದ್-ದವಾದ ಉನ್ನತ ಕಮಾಂಡರ್ ಅತಾವುಲ್ಲಾ ಘಿಲ್ಜೈ ಭಾರತದ ವಿರುದ್ಧ ವಿಷ ಕಾರಿದ್ದಾನೆ. 'ನಾವು ಭಾರತದ ಒಳಗೆ ನುಗ್ಗುತ್ತೇವೆ ಮತ್ತು ಭಾರತದ ನಕ್ಷೆಯನ್ನೇ ಬದಲಾಯಿಸಲು ಸನ್ನದ್ಧರಾಗಿದ್ದೇವೆ' ಎಂದು ಬೊಗಳೆ ಬಿಟ್ಟಿದ್ದಾನೆ. ಅಷ್ಟೇ ಅಲ್ಲದೆ, ಪಾಕಿಸ್ತಾನಿ ಮಿಲಿಟರಿ ತಮ್ಮೊಂದಿಗೆ ಸದಾ ಸಂಪರ್ಕದಲ್ಲಿದ್ದು, ಜಂಟಿಯಾಗಿ ಕಾರ್ಯಾಚರಣೆ ನಡೆಸಲು ಆಹ್ವಾನ ನೀಡಿದ್ದೇವೆ ಎಂದು ಹೇಳುವ ಮೂಲಕ ಪಾಕ್ ಸೇನೆಯ ಅಸಲಿ ಮುಖವಾಡ ಮತ್ತೆ ಬಯಲು ಮಾಡಿದ್ದಾನೆ.

ಎಂಜಿನಿಯರ್‌ಗಳು ಬೇಡ, ನಮಗೆ ತಾಲಿಬಾನ್ ಮಾದರಿಯ ಹೋರಾಟಗಾರರು ಬೇಕು!

ಇನ್ನೊಬ್ಬ ಉಗ್ರ ಕಮಾಂಡರ್ ಸೈಫುಲ್ಲಾ ಕಸೂರಿ ತನ್ನ ಭಾಷಣದಲ್ಲಿ ಭೀಬತ್ಸ ಸಿದ್ಧಾಂತವನ್ನು ಬಿಚ್ಚಿಟ್ಟಿದ್ದಾನೆ. 'ನಮಗೆ ದೇಶ ನಡೆಸಲು ವೈದ್ಯರು ಅಥವಾ ಎಂಜಿನಿಯರ್‌ಗಳ ಅಗತ್ಯವಿಲ್ಲ. ಮದರಸಾಗಳಲ್ಲಿ ತರಬೇತಿ ಪಡೆದ ತಾಲಿಬಾನ್ ಮಾದರಿಯ ಜಿಹಾದಿ ಹೋರಾಟಗಾರರು ನಮಗೆ ಬೇಕು' ಎಂದು ಹೇಳಿದ್ದಾನೆ. ಪಾಕಿಸ್ತಾನದ ರಾಜಕೀಯವನ್ನು ಪ್ರವೇಶಿಸುವ ಹುನ್ನಾರ ನಡೆಸಿರುವ ಈ ಉಗ್ರರು, ಶರಿಯಾ ಕಾನೂನು ಜಾರಿಗೆ ತರುವುದೇ ನಮ್ಮ ಗುರಿ ಎಂದು ಘೋಷಿಸಿದ್ದಾರೆ.

ಸೋಲಿನ ಹತಾಶೆಯಲ್ಲಿ ಭಾರತದತ್ತ ಗಮನ ತಿರುಗಿಸುವ ತಂತ್ರ

ಭಾರತದ ಭದ್ರತಾ ಸಂಸ್ಥೆಗಳ ವಿಶ್ಲೇಷಣೆಯ ಪ್ರಕಾರ, ಪಾಕಿಸ್ತಾನವು ಆಂತರಿಕವಾಗಿ ಎದುರಿಸುತ್ತಿರುವ ಆರ್ಥಿಕ ಬಿಕ್ಕಟ್ಟು ಹಾಗೂ 'ಆಪರೇಷನ್ ಸಿಂದೂರ್' ಸೋಲಿನಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಕಾಶ್ಮೀರದ ಹೆಸರಿನಲ್ಲಿ ಮತ್ತೆ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡುತ್ತಿದೆ. ಭಾರತದ ಗಡಿಯಲ್ಲಿ ಪದೇ ಪದೇ ಸೋಲುತ್ತಿರುವ ಅಸಿಮ್ ಮುನೀರ್ ತಂಡ, ಈಗ ಭಯೋತ್ಪಾದಕರನ್ನು ಮುಂದೆ ಬಿಟ್ಟು ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿದೆ.