ಜಗತ್ತು ಕಂಡುಕೇಳರಿಯದ ರೀತಿ ದಾಳಿ ನಡೆಸಿ ಸೆರೆ ಹಿಡಿಯಲಾದ ವೆನಿಜುವೆಲಾ ಅಧ್ಯಕ್ಷ ನಿಕೋಲಸ್‌ ಮಡುರೋ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರೆಸ್‌ ಅನ್ನು ಅಮೆರಿಕ ಸರ್ಕಾರ ನ್ಯೂಯಾರ್ಕ್‌ನ ಬ್ರೂಕ್ಲಿನ್‌ ಜೈಲಿಗೆ ಅಟ್ಟಿದೆ

ವಾಷಿಂಗ್ಟನ್‌: ಜಗತ್ತು ಕಂಡುಕೇಳರಿಯದ ರೀತಿ ದಾಳಿ ನಡೆಸಿ ಸೆರೆ ಹಿಡಿಯಲಾದ ವೆನಿಜುವೆಲಾ ಅಧ್ಯಕ್ಷ ನಿಕೋಲಸ್‌ ಮಡುರೋ ಮತ್ತು ಅವರ ಪತ್ನಿ ಸಿಲಿಯಾ ಫ್ಲೋರೆಸ್‌ ಅನ್ನು ಅಮೆರಿಕ ಸರ್ಕಾರ ನ್ಯೂಯಾರ್ಕ್‌ನ ಬ್ರೂಕ್ಲಿನ್‌ ಜೈಲಿಗೆ ಅಟ್ಟಿದೆ. ಜೊತೆಗೆ ಮಡುರೋ, ಪತ್ನಿ, ಪುತ್ರ ಸೇರಿದಂತೆ 5 ಜನರ ವಿರುದ್ಧ ಡ್ರಗ್ಸ್‌ ಭಯೋತ್ಪಾದನೆಯ ದೋಷಾರೋಪವಿದ್ದು ಅವರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಹೇಳಿದೆ. ಒಂದು ವೇಳೆ ಆರೋಪ ಸಾಬೀತಾದರೆ ಕಠಿಣ ಶಿಕ್ಷೆ ಪ್ರಕಟಿಸುವ ಸಾಧ್ಯತೆ ಇದೆ.

ಈ ನಡುವೆ ಸಾರ್ವಭೌಮ ದೇಶವೊಂದರ ಹಾಲಿ ಅಧ್ಯಕ್ಷರನ್ನೇ ಬಂಧಿಸಿದ ಕ್ರಮವನ್ನು ಅಮೆರಿಕದ ಡೆಮಾಕ್ರೆಟ್‌ ಪಕ್ಷದ ನಾಯಕಿ, ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಟ್ರಂಪ್ ಎದುರಾಳಿಯಾಗಿದ್ದ ಕಮಲಾ ಹ್ಯಾರಿಸ್‌, ಚೀನಾ, ರಷ್ಯಾ ಮತ್ತು ನ್ಯಾಟೋದ ಕೆಲ ಮಿತ್ರ ದೇಶಗಳು ಕೂಡಾ ಕಟುವಾಗಿ ಟೀಕಿಸಿವೆ. ಮತ್ತೊಂದೆಡೆ ಇದೊಂದು ಸಾಮ್ರಾಜ್ಯಶಾಹಿ ಬೆಳವಣಿಗೆ. ಕೂಡಲೇ ಮಡುರೋ ಅವರನ್ನು ಬಿಡುಗಡೆ ಮಾಡುವಂತೆ ವೆನಿಜುವೆಲಾ ಸರ್ಕಾರ ಅಮೆರಿಕವನ್ನು ಆಗ್ರಹಿಸಿದೆ.

ಇನ್ನೊಂದೆಡೆ ವೆನಿಜುವೆಲಾದಲ್ಲಿ ಪರ್ಯಾಯ ವ್ಯವಸ್ಥೆ ಆಗುವವರೆಗೂ ಅಮೆರಿಕವೇ ಆಡಳಿತ ನಡೆಸಲಿದೆ. ಜೊತೆಗೆ ಅಲ್ಲಿನ ವ್ಯಾಪಕ ಕಚ್ಚಾತೈಲವನ್ನು ಹೊರತೆಗೆದು ಅದನ್ನು ಇತರೆ ದೇಶಗಳಿಗೆ ಹಂಚಲಾಗುವುದು ವೆನಿಜುವೆಲಾದ ತೈಲ ಕಂಪನಿಗಳಲ್ಲಿ ಅಮೆರಿಕ ಕಂಪನಿಗಳು ಸಾವಿರಾರು ಕೋಟಿ ಬಂಡವಾಳ ಹೂಡಲಿವೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಘೋಷಿಸಿದ್ದಾರೆ.

ತಡರಾತ್ರಿ ಆಗಮನ:

ತಡರಾತ್ರಿ ಕಾರ್ಯಾಚರಣೆ ಮೂಲಕ ಸೆರೆಹಿಡಿದ ಅಧ್ಯಕ್ಷ ಮಡುರೋ ಮತ್ತು ಅವರ ಪತ್ನಿಯನ್ನು ಬಂಧಿಸಿ ನೇರವಾಗಿ ಸಮೀಪದಲ್ಲಿನ ಅಮೆರಿಕದ ಮಿಲಿಟರಿ ನೆಲೆಗೆ ಕರೆದೊಯ್ಯಲಾಗಿತ್ತು. ತರುವಾಯ ಯುಎಸ್‌ಎಸ್‌ ಇವೋ ಜಿಮಾ ಯುದ್ಧನೌಕೆ ಮೂಲಕ ಸಾಗಿಸಲಾಯಿತು. ತದನಂತರದಲ್ಲಿ ತಡರಾತ್ರಿ ನ್ಯೂಯಾರ್ಕ್‌ ಹೊರವಲಯಕ್ಕೆ ಮುಡುರೋ ದಂಪತಿ ಇದ್ದ ವಿಮಾನ ಆಗಮಿಸಿತು. ಅಲ್ಲಿಂದ ಅವರನ್ನು ಕಾಪ್ಟರ್‌ ಮೂಲಕ ಮಾದಕ ವಸ್ತು ಸಾಗಣೆ ಕುರಿತು ತನಿಖೆ ನಡೆಸುವ(ಡಿಇಎ) ಮುಖ್ಯ ಕಚೇರಿಗೆ ಕರೆದೊಯ್ದು ಕೆಲಕಾಲ ಇರಿಸಿ, ಆ ಬಳಿಕ ಬ್ರೂಕ್ಲಿನ್‌ನಲ್ಲಿರುವ ಗಣ್ಯವ್ಯಕ್ತಿಗಳಿಗಾಗಿಯೇ ಇರುವ ಬಿಗಿ ಭದ್ರತೆಯ ಜೈಲಿಗೆ ರವಾನಿಸಲಾಗಿದೆ. ಮಡುರೋ ಮತ್ತು ಪತ್ನಿ ವಿರುದ್ಧ ಡ್ರಗ್ಸ್‌ ಭಯೋತ್ಪಾದನೆ, ಡ್ರಗ್ಸ್ ಸಾಗಣೆ ಆರೋಪದ ಮೇರೆಗೆ ವಿಚಾರಣೆ ನಡೆಸುವ ಸಾಧ್ಯತೆ ಇದೆ.

ಹ್ಯಾಪಿ ನ್ಯೂ ಇಯರ್‌:

ಮಡುರೋ ಅವರನ್ನು ಕೈಕೊಳ ತೊಡಿಸಿ ಮ್ಯಾನ್‌ಹಟನ್‌ನಲ್ಲಿರುವ ಅಮೆರಿಕದ ಡ್ರಗ್‌ ಎನ್‌ಫೋರ್ಸ್‌ಮೆಂಟ್‌ ಅಡ್ಮಿನಿಸ್ಟ್ರೇಷನ್‌(ಡಿಇಎ) ಕಚೇರಿಗೆ ಕರೆತಂದಾಗ ಅವರು ನಗುತ್ತಾ, ‘ಗುಡ್‌ನೈಟ್‌, ಹ್ಯಾಪಿ ನ್ಯೂ ಇಯರ್‌’ ಎಂದು ತನ್ನನ್ನು ಕರೆದೊಯ್ಯುತ್ತಿದ್ದ ಅಧಿಕಾರಿಗಳಿಗೆ ಹೇಳುತ್ತಿರುವ ವಿಡಿಯೋ ಇದೀಗ ವೈರಲ್‌ ಆಗಿದೆ.

ಏನೇನು ಆರೋಪ?:

ಮಡುರೋ ನೇತೃತ್ವದ ಭ್ರಷ್ಟ, ಅಕ್ರಮ ಸರ್ಕಾರವು ಭಾರೀ ಪ್ರಮಾಣದಲ್ಲಿ ಹಲವು ಟನ್‌ ಮಾದಕ ವಸ್ತುಗಳನ್ನು ಸಾಗಣೆ ಮಾಡಿದೆ. ಮಡುರೋ, ಪತ್ನಿ, ಪುತ್ರ ಹಾಗೂ ಇತರೆ ಮೂವರ ವಿರುದ್ಧ ಮಾದಕವಸ್ತು ಭಯೋತ್ಪಾದನೆ ಷಡ್ಯಂತ್ರ, ಮಾದಕ ವಸ್ತು ಸಾಗಣೆಗೆ ಬೆಂಬಲ ಸೇರಿ ಹಲವು ಆರೋಪಗಳನ್ನು ಹೊರಿಸಲಾಗಿದೆ.

ಮಡುರೋ, ಕುಟುಂಬ ವಿಶ್ವದ ಕುಖ್ಯಾತ ಹಾಗೂ ಹಿಂಸಾತ್ಮಕ ಮಾದಕ ವಸ್ತು ಸಾಗಣೆದಾರರು ಮತ್ತು ನಾರ್ಕೋ ಉಗ್ರರ ಜತೆಗೆ ಸಹಭಾಗಿತ್ವ ಹೊಂದಿದೆ. ಕೊಕೇನ್‌ ಆಧರಿತ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡಿದೆ. ಇದಲ್ಲದೆ, ಕಿಡ್ನಾಪ್‌, ಕೊಲೆ ಮತ್ತಿತರ ಆರೋಪಗಳನ್ನೂ ಅವರ ಮೇಲೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ.