ಅಮೆರಿಕ ಸೇನೆಯ ಡೆಲ್ಟಾ ಫೋರ್ಸ್, ಅಮೆರಿಕ ಸೇನೆಯ ವಿಶೇಷ ಪಡೆಗಳ ಉನ್ನತ ಘಟಕವಾಗಿದೆ. ವೆನಿಜುವೆಲಾ ರಾಜಧಾನಿ ಕಾರಕಸ್‌ನಲ್ಲಿ ಕಾರ್ಯಾಚರಣೆಗೆ ಇಳಿದ ಈ ಪಡೆ ಅಧ್ಯಕ್ಷ ನಿಕೋಲಸ್ ಮಡುರೋ ಹಾಗೂ ಪತ್ನಿಯನ್ನು ಸೆರೆಹಿಡಿದಿದೆ.

ವಾಷಿಂಗ್ಟನ್‌/ಕಾರಕಸ್: ಅಮೆರಿಕ ಸೇನೆಯ ಡೆಲ್ಟಾ ಫೋರ್ಸ್, ಅಮೆರಿಕ ಸೇನೆಯ ವಿಶೇಷ ಪಡೆಗಳ ಉನ್ನತ ಘಟಕವಾಗಿದೆ. ವೆನಿಜುವೆಲಾ ರಾಜಧಾನಿ ಕಾರಕಸ್‌ನಲ್ಲಿ ಕಾರ್ಯಾಚರಣೆಗೆ ಇಳಿದ ಈ ಪಡೆ ಅಧ್ಯಕ್ಷ ನಿಕೋಲಸ್ ಮಡುರೋ ಹಾಗೂ ಪತ್ನಿಯನ್ನು ಸೆರೆಹಿಡಿದಿದೆ.

ಶುಕ್ರವಾರ ನಸುಕಿನ ಜಾವ 2.30ರ ನಂತರ ಮಡುರೋ ಅವರು ಇದ್ದ ಫೋರ್ಟ್ ಟಿಯುನಾ ಮಿಲಿಟರಿ ನೆಲೆಯೊಳಗಿನ ತಮ್ಮ ಮನೆಗೆ ನುಗ್ಗಿದ ಡೆಲ್ಟಾ ಫೋರ್ಸ್ ಪಡೆ, ಬೆಡ್‌ರೂಮಿಗೆ ನುಗ್ಗಿ ಇಬ್ಬರನ್ನೂ ಬಂಧಿಸಿ ಕರೆದೊಯ್ಯಿತು ಎಂದು ಅಮೆರಿಕ ಸರ್ಕಾರದ ಮೂಲಗಳನ್ನು ಉಲ್ಲೇಖಿಸಿ ಸಿಎನ್‌ಎನ್‌ ವರದಿ ಮಾಡಿದೆ. ವೆನಿಜುವೆಲಾ ಸರ್ಕಾರ ಕೂಡ ಇದನ್ನೇ ಹೇಳಿದೆ.

2019ರಲ್ಲಿ ಇಸ್ಲಾಮಿಕ್ ಸ್ಟೇಟ್‌ ಉಗ್ರಗಾಮಿ ನಾಯಕ ಅಬು ಬಕರ್ ಅಲ್-ಬಾಗ್ದಾದಿಯನ್ನು ಹತ್ಯೆಗೆ ಕಾರಣವಾದ ಕಾರ್ಯಾಚರಣೆಯ ನೇತೃತ್ವವನ್ನೂ ಇದೇ ಡೆಲ್ಟಾ ಫೋರ್ಸ್ ವಹಿಸಿತ್ತು.

ಡೆಲ್ಟಾ ಫೋರ್ಸ್‌ ಬಹುಮುಖ ಸಾಮರ್ಥ್ಯ ಇರುವ ನಿಷ್ಣಾತ ಯೋಧರನ್ನು ಹೊಂದಿರುತ್ತದೆ. ಇದು ನೇರ ಕಾರ್ಯಾಚರಣೆಗಳು, ಒತ್ತೆಯಾಳು ರಕ್ಷಣಾ ಕಾರ್ಯಾಚರಣೆಗಳು. ಭಯೋತ್ಪಾದಕ ನಿಗ್ರಹ ದಾಳಿ ಮತ್ತು ರಹಸ್ಯ ದಾಳಿಯಂಥ ಚಟುವಟಿಕೆಗಳನ್ನು ನಡೆಸುತ್ತದೆ, ಆಗಾಗ್ಗೆ ಸಿಐಎ ಯೊಂದಿಗೆ ನಿಕಟ ಸಮನ್ವಯದೊಂದಿಗೆ ನಿರ್ದಿಷ್ಟ ಗುರಿಯನ್ನು ಇರಿಸಿಕೊಂಡು ಕಾರ್ಯಾಚರಣೆ ನಡೆಸುತ್ತದೆ.

ಅಮೆರಿಕದ ಗಣ್ಯರ ರಕ್ಷಣೆಗೆಂದೂ ಡೆಲ್ಟಾ ಫೋರ್ಸ್‌ ಅನ್ನು ನಿಯೋಜಿಸಲಾಗುತ್ತದೆ.

ಮಡುರೋ ಬಂಧನವನ್ನು ಲೈವ್‌ ಆಗಿ ನೋಡಿದೆ: ಟ್ರಂಪ್‌

ವಾಷಿಂಗ್ಟನ್: ‘ವೆನೆಜುವೆಲಾದಲ್ಲಿ ಕಾರ್ಯಾಚರಣೆ ನಡೆಸಲು ಅಮೆರಿಕ ನಾಲ್ಕು ದಿನ ಕಾಯುತ್ತಿತ್ತು. ಉತ್ತಮ ಹವಾಮಾನವಿದೆ ಎಂದು ದೃಢವಾದ ಬಳಿಕ ವೈಮಾನಿಕ ಹಾಗೂ ನೆಲದ ಮೂಲಕ ದಾಳಿ ನಡೆಸಲಾಯಿತು’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಬಂಧನದ ಬಗ್ಗೆ ಶನಿವಾರ ಸಂಜೆ ಮಾತನಾಡಿದ ಅವರು, ‘ವೆನಿಜುವೆಲಾ ಅಧ್ಯಕ್ಷ ಮಡುರೋ ಅವರ ಬಂಧನವನ್ನು ನಾನು ನೇರಪ್ರಸಾರದಲ್ಲಿ ನೋಡಿದೆ. ಅದೊಂದು ಟೀವಿ ಕಾರ್ಯಕ್ರಮದಂತಿತ್ತು’ ಎಂದಿದ್ದಾರೆ.

‘ಮಡುರೋ ದಂಪತಿಯನ್ನು ಹಡಗು ಮೂಲಕ ಅಮೆರಿಕಕ್ಕೆ ಕರೆತರಲಾಗುತ್ತಿದೆ. ನ್ಯೂಯಾರ್ಕ್‌ ಕೋರ್ಟ್‌ನಲ್ಲಿ ಡ್ರಗ್ಸ್ ಉಗ್ರವಾದದ ಕೇಸು ಹಾಕಿ ಕಾನೂನು ಪ್ರಕಾರ ವಿಚಾರಣೆ ಮಾಡಲಾಗುತ್ತದೆ’ ಎಂದಿದ್ದಾರೆ.

ವೆನಿಜುವೆಲಾ ಮೇಲೆ ಅಮೆರಿಕ ದಾಳಿಗೆ ರಷ್ಯಾ ಖಂಡನೆ

ಮಾಸ್ಕೋ: ವೆನುಜುವೆಲಾ ಮೇಲಿನ ಅಮೆರಿಕ ದಾಳಿಯನ್ನು ರಷ್ಯಾ ಖಂಡಿಸಿದೆ. ಈ ದಾಳಿ ಸಶಸ್ತ್ರ ಆಕ್ರಮಣ, ವೆನುಜುವೆಲಾದ ಸಾರ್ವಭೌಮತ್ವದ ಮೇಲಿನ ದಾಳಿಯಾಗಿದೆ. ಈ ವಿಚಾರವಾಗಿ ವಿಶ್ವಸಂಸ್ಥೆಯು ತಕ್ಷಣ ಭದ್ರತಾ ಮಂಡಳಿ ಸಭೆ ಕರೆಯಬೇಕು ಎಂದು ರಷ್ಯಾ ಆಗ್ರಹಿಸಿದೆ.

ಬಸ್ ಚಾಲಕನಾಗಿದ್ದ ನಿರಂಕುಶವಾದಿ ಮಡುರೋ..

ಕಾರಕಸ್: ಒಬ್ಬ ಸಾಮಾನ್ಯ ಬಸ್‌ ಡ್ರೈವರ್‌ ಆಗಿದ್ದ ನಿಕೋಲಸ್‌ ಮಡುರೋ, ಬಳಿಕ ಯೂನಿಯನ್‌ ಲೀಡರ್‌, ಆ ಬಳಿಕ ಎಡಪಂಥೀಯ ರಾಜಕಾರಣದ ಹಾದಿಯಲ್ಲಿ ಸಾಗಿ ಅಧಿಕಾರದ ಗದ್ದುಗೆಗೆ ಏರಿದ ನಾಯಕ. 2006ರಿಂದ 2013ರ ವರೆಗೆ ವಿದೇಶಾಂಗ ಸಚಿವರಾಗಿ ಕಾರ್ಯ ನಿರ್ವಹಿಸಿದ್ದ ಮುಡುರೋರನ್ನು ಆಗಿನ ವೆನಿಜುವೆಲಾ ಅಧ್ಯಕ್ಷ ಹ್ಯುಗೋ ಶಾವೆಜ್‌ ಅವರು 2012ರಲ್ಲಿ ಉಪಾಧ್ಯಕ್ಷನನ್ನಾಗಿ ನೇಮಿಸಿದ್ದರು. ಶಾವೆಜ್‌ ನಿಧನ ಬಳಿಕ 2013ರಲ್ಲಿ ಮಧ್ಯಂತರ ಅಧ್ಯಕ್ಷರಾಗಿ ನೇಮಕಗೊಂಡರು. 2013ರಿಂದ ವೆನಿಜುವೆಲಾ ಅಧ್ಯಕ್ಷರಾಗಿರುವ ಮುದುರೋ ಸರ್ವಾಧಿಕಾರಿಯಾಗಿ ಬದಲಾಗಿದ್ದಾರೆ. ಅವರು ಚುನಾವಣಾ ಅಕ್ರಮಗಳ ಮೂಲಕವೇ ಗೆಲ್ಲುತ್ತಿದ್ದಾರೆ ಎಂಬ ಗಂಭೀರ ಆರೋಪ ಇದೆ. ಮುಡುರೋ ಆಡಳಿತದಲ್ಲಿ ವೆನಿಜುವೆಲಾವು ಅಂತಾರಾಷ್ಟ್ರೀಯ ನಿರ್ಬಂಧಗಳು, ಪ್ರತಿಭಟನೆ, ಆರ್ಥಿಕತೆಯ ಕುಸಿತಕ್ಕೆ ಸಾಕ್ಷಿಯಾಗಿದೆ.

ಮಡುರೋ ವಿರೋಧಿಗೆ ಬಂದಿತ್ತು ನೊಬೆಲ್ ಶಾಂತಿ ಗೌರವ

ಇದೇ ಮಡುರೋ ವಿರುದ್ಧದ ಹೋರಾಟಕ್ಕಾಗಿ ಕಳೆದ ವರ್ಷ ವೆನಿಜುವೆಲಾ ವಿಪಕ್ಷ ನಾಯಕಿ ಮಾರಿಯಾ ಕೊರಿನಾ ಮಚಾಡೊ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಬಂದಿತ್ತು.

1989ರ ಬಳಿಕದ ಲ್ಯಾಟಿನ್‌ ಅಮೆರಿಕದಲ್ಲಿ ಅಮೆರಿಕ ದಾಳಿ

ಲ್ಯಾಟಿನ್‌ ಅಮೆರಿಕದ ದೇಶಗಳ ಮೇಲೆ ಅಮೆರಿಕ ನೇರವಾಗಿ ಸೇನಾ ಕಾರ್ಯಾಚರಣೆ ನಡೆಸಿದ್ದು ತೀರಾ ಅಪರೂಪ. ಈ ಹಿಂದೆ 1989ರಲ್ಲಿ ಪನಾಮಾ ದೇಶದ ಮೇಲೆ ದಾಳಿ ನಡೆಸಿ ಆಗಿನ ಮಿಲಿಟರಿ ನಾಯಕ ಮ್ಯಾನ್ಯುವೆಲ್‌ ನೊರಿಯೆಗಾ ಅವರನ್ನು ಅಧಿಕಾರದಿಂದ ಕೆಳಗಿಳಿಸಿತ್ತು. ಇದಾದ ಬಳಿಕ ಲ್ಯಾಟಿನ್‌ ಅಮೆರಿಕ ದೇಶದ ಮೇಲೆ ಅಮೆರಿಕ ನೇರ ದಾಳಿ ನಡೆಸುತ್ತಿರುವುದು ಇದೇ ಮೊದಲು.