ಇರಾನ್‌ನ ಸುಮಾರು 30 ತೈಲ ಸಂಗ್ರಹಾಗಾರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ನಡೆಸಿದ ದಾಳಿಗೆ ಅಮೆರಿಕ ಕೆಂಡಾಮಂಡಲವಾಗಿದ್ದು, ತನ್ನ ಮಿತ್ರದೇಶವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಈ ಮೂಲಕ 10 ದಿನಗಳ ಯುದ್ಧದಲ್ಲಿ ಇದೇ ಮೊದಲ ಬಾರಿ ಮಿತ್ರದೇಶಗಳಲ್ಲಿ ಭಿನ್ನಾಭಿಪ್ರಾಯ ಮೂಡಿದೆ.

ವಾಷಿಂಗ್ಟನ್‌/ಟೆಹ್ರಾನ್‌ : ಇರಾನ್‌ನ ಸುಮಾರು 30 ತೈಲ ಸಂಗ್ರಹಾಗಾರಗಳನ್ನು ಗುರಿಯಾಗಿಸಿಕೊಂಡು ಇಸ್ರೇಲ್‌ ನಡೆಸಿದ ದಾಳಿಗೆ ಅಮೆರಿಕ ಕೆಂಡಾಮಂಡಲವಾಗಿದ್ದು, ತನ್ನ ಮಿತ್ರದೇಶವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಈ ಮೂಲಕ 10 ದಿನಗಳ ಯುದ್ಧದಲ್ಲಿ ಇದೇ ಮೊದಲ ಬಾರಿ ಮಿತ್ರದೇಶಗಳಲ್ಲಿ ಭಿನ್ನಾಭಿಪ್ರಾಯ ಮೂಡಿದೆ.

ಟೆಹ್ರಾನ್‌ನ ತೈಲ ಘಟಕಗಳ ಮೇಲೆ ಇಸ್ರೇಲ್‌ ದಾಳಿ

ಭಾನುವಾರ ಇರಾನ್‌ ರಾಜಧಾನಿ ಟೆಹ್ರಾನ್‌ನ ತೈಲ ಘಟಕಗಳ ಮೇಲೆ ಇಸ್ರೇಲ್‌ ದಾಳಿ ನಡೆಸಿತ್ತು. ದಾಳಿಯ ತೀವ್ರತೆಗೆ ಬೆಂಕಿ ಮುಗಿಲೆತ್ತರಕ್ಕೆ ಹಬ್ಬಿ, ಹೊಗೆ ಇಡೀ ನಗರವನ್ನು ಆವರಿಸಿತ್ತು. ಈ ವೇಳೆ ನಾಲ್ವರು ಸಾವನ್ನಪ್ಪಿದ್ದರು.

ಮೊದಲೇ ಅಮೆರಿಕಕ್ಕೆ ಮಾಹಿತಿ ನೀಡಿತ್ತು

ಮೂಲಗಳ ಪ್ರಕಾರ, ಇಸ್ರೇಲ್‌ ಈ ದಾಳಿ ನಡೆಸುವುದಾಗಿ ಮೊದಲೇ ಅಮೆರಿಕಕ್ಕೆ ಮಾಹಿತಿ ನೀಡಿತ್ತು. ಆದರೆ ಅಮೆರಿಕ ಊಹಿಸಿದ್ದಕ್ಕಿಂತ ದಾಳಿ ಬಹಳ ತೀವ್ರವಾಗಿದ್ದರಿಂದ ಅದು ಅಸಮಾಧಾನಗೊಂಡಿದೆ. ‘ಇದು ಉತ್ತಮ ಆಲೋಚನೆಯಲ್ಲ’ ಎಂದು ಇಸ್ರೇಲ್‌ ಅನ್ನು ತೀಕ್ಷ್ಣ ಪದಗಳಲ್ಲಿ ತರಾಟೆಗೆ ತೆಗೆದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಆದರೆ ಇರಾನ್‌ ಈ ತೈಲ ಡಿಪೋಗಳನ್ನು ತನ್ನ ಮಿಲಿಟರಿ ಘಟಕಗಳು ಸೇರಿದಂತೆ ವಿವಿಧ ಸಂಬಂಧಿತ ದೇಶಗಳಿಗೆ ಇಂಧನ ಪೂರೈಸಲು ಬಳಸಿಕೊಂಡಿತ್ತು. ಹೀಗಾಗಿ ದಾಳಿ ಮಾಡಲಾಗಿದೆ. ಅಲ್ಲದೆ, ಇಸ್ರೇಲ್‌ ಮೌಲಸೌಕರ್ಯವನ್ನು ಗುರಿಯಾಗಿಸಿಕೊಳ್ಳುವುದನ್ನು ನಿಲ್ಲಿಸುವಂತೆ ಟೆಹ್ರಾನ್‌ಗೆ ಎಚ್ಚರಿಕೆ ನೀಡಲು ಈ ದಾಳಿಗಳನ್ನು ಉದ್ದೇಶಿಸಲಾಗಿತ್ತು’ ಎಂದು ಇಸ್ರೇಲ್ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದಾಗ್ಯೂ, ದಾಳಿಯ ಪ್ರ+ಮಾಣವು ಅಮೆರಿಕದಲ್ಲಿ ಕಳವಳವನ್ನು ಹೆಚ್ಚಿಸಿದೆ. ದೈನಂದಿನ ನಾಗರಿಕ ಬಳಕೆಗೆ ಸಂಬಂಧಿಸಿದ ಘಟಕಗಳ ಮೇಲಿನ ದಾಳಿಗಳು ಅನಿರೀಕ್ಷಿತ ಪರಿಣಾಮ ಉಂಟುಮಾಡಬಹುದು, ಇರಾನ್‌ನಲ್ಲಿ ಇದು ಸರ್ಕಾರದ ಪರ ಅನುಕಂಪ ಮೂಡಿಸಬಹುದು ಹಾಗೂ ಜಾಗತಿಕ ತೈಲ ಬೆಲೆ ಹೆಚ್ಚಿಸುವ ಸಾಧ್ಯತೆಯಿದೆ ಎಂದು ಅಮೆರಿಕದ ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.