ಜ.2ರ ರಾತ್ರಿ ನೆಮ್ಮದಿಯ ನಿದ್ದೆಗೆ ಜಾರಿದ್ದ ವೆನಿಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೋರನ್ನು ಅಮೆರಿಕದ ಯೋಧರು ಪತ್ನಿಸಮೇತ ಹೊತ್ತೊಯ್ದು, ಅಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಯಾಗಿರುವ ಹೊತ್ತಿನಲ್ಲಿ, ಆ ರಾಷ್ಟ್ರದ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.
ದಕ್ಷಿಣ ಅಮೆರಿಕ ಖಂಡದ ಪ್ರಮುಖ ದೇಶಗಳಲ್ಲಿ ‘ಬೊಲಿವೇರಿಯನ್ ರಿಪಬ್ಲಿಕ್ ಆಫ್ ವೆನಿಜುವೆಲಾ’ ಕೂಡಾ ಒಂದು. 2.8 ಕೋಟಿ ಜನಸಂಖ್ಯೆಯುಳ್ಳ ಈ ದೇಶ, 1811ರಲ್ಲಿ ಒಪ್ಪಂದದ ಪ್ರಕಾರ ಸ್ಪೇನ್‌ನಿಂದ ಸ್ವಾತಂತ್ರ್ಯ ಪಡೆದರೂ, ಅಧಿಕೃತವಾಗಿ ಪರತಂತ್ರದಿಂದ ಮುಕ್ತವಾಗಿದ್ದು 1830ರಲ್ಲಿ. ಇಂತಹ ರಾಷ್ಟ್ರಕ್ಕೆ ಸರ್ವಾಧಿಕಾರ ಅಥವಾ ಮಿಲಿಟರಿ ಆಡಳಿತ ಹೊಸದಲ್ಲ. 1958ರಿಂದ 1999ರ ವರೆಗೆ ಪುಂಟೊ ಫಿಜೊ ಅಧಿಕಾರಾವಧಿಯಲ್ಲಿ ದೇಶದ ಜನತೆ ಪ್ರಜಾಪ್ರಭುತ್ವದ ರುಚಿ ಕಂಡದ್ದು ಬಿಟ್ಟರೆ, ಆ ಬಳಿಕ ಬಂದವರೆಲ್ಲಾ ಅಘೋಷಿತ ಸರ್ವಾಧಿಕಾರಿಯಾಗಿ ಮೆರೆದವರು. ಜ.2ರ ರಾತ್ರಿ ನೆಮ್ಮದಿಯ ನಿದ್ದೆಗೆ ಜಾರಿದ್ದ ವೆನಿಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೋರನ್ನು ಅಮೆರಿಕದ ಯೋಧರು ಪತ್ನಿಸಮೇತ ಹೊತ್ತೊಯ್ದು, ಅಲ್ಲಿ ರಾಜಕೀಯ ಅರಾಜಕತೆ ಸೃಷ್ಟಿಯಾಗಿರುವ ಹೊತ್ತಿನಲ್ಲಿ, ಆ ರಾಷ್ಟ್ರದ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.
ತೈಲ ಸಂಪತ್ತಿನಲ್ಲೇ ವಿಶ್ವದಲ್ಲೇ ನಂ.1!
ವೆನಿಜುವೆಲಾ ವಿಶ್ವದಲ್ಲೇ ಅತ್ಯಂತ ಹೆಚ್ಚು ತೈಲ ನಿಕ್ಷೇಪ ಹೊಂದಿದೆ. ವಿಶ್ವದಲ್ಲಿ ಪತ್ತೆಯಾದ ಒಟ್ಟು ಕಚ್ಚಾತೈಲದ ನಿಕ್ಷೇಪದ ಪೈಕಿ ಈ ದೇಶವೊಂದರಲ್ಲೇ ಶೇ.20ರಷ್ಟಿದೆ. ಬ್ಯಾರಲ್ ಲೆಕ್ಕಾಚಾರದಲ್ಲಿ ಹೇಳುವುದಾದರೆ 303 ಶತಕೋಟಿ ಬ್ಯಾರಲ್ (1 ಬ್ಯಾರಲ್ ಎಂದರೆ 159 ಲೀಟರ್). ಆದರೆ ಜಾಗತಿಕ ರಫ್ತಿನಲ್ಲಿ ಈ ದೇಶದ ಪಾಲು ಕೇವಲ ಶೇ.2 ಮಾತ್ರ. ಇದರ ಜೊತೆಗೆ ಚಿನ್ನ, ಕಬ್ಬಿಣದ ಅದಿರು, ಬಾಕ್ಸೈಟ್, ಕೋಲ್ಟನ್, ವಜ್ರ, ನಿಕಲ್‌ನಂತಹ ಖನಿಜಗಳು ಹೇರಳವಾಗಿದೆ. ಆದರೆ ಅವುಗಳನ್ನು ಹೊರತೆಗೆದು ಸಂಸ್ಕರಿಸಲು, ಬಳಸಲು, ರಫ್ತು ಮಾಡಲು ಮುಲಸೌಕರ್ಯದ ಕೊರತೆ ಅಡ್ಡಿಯಾಗಿದೆ. ಜತೆಗೆ ತೈಲದ ಮೇಲೆ ಸಂಪೂರ್ಣ ಗಮನ, ಅಮೆರಿಕದ ನಿರ್ಬಂಧ, ರಾಜಕೀಯ ಅಸ್ಥಿರತೆಯಂತಹ ಸಮಸ್ಯೆಗಳಿಂದ ಖನಿಜಗಳ ಸಮರ್ಪಕ ಬಳಕೆ ಆಗದೆ ಅವು ಭೂಗತವಾಗಿಯೇ ಉಳಿದಿವೆ.
ಕಪ್ಪುಚಿನ್ನದ ಗಣಿ ಇದ್ರೂ ಯಾಕಿದು ಬಡರಾಷ್ಟ್ರ?
ವೆನಿಜುವೆಲಾದ ಒರಿನೊಕೊ ಬೆಲ್ಟ್‌ನ ನಿಕ್ಷೇಪಗಳಲ್ಲಿರುವ ತೈಲ ದ್ರವರೂಪದಲ್ಲಿರದೆ, ಟಾರ್‌ನಂತೆ ಗಟ್ಟಿಯಿರುತ್ತದೆ. ಇದರಿಂದ ಭಾರೀ ಲಾಭವಿದೆ. ಆದರೆ ಇದರ ಸಂಸ್ಕರಣೆಗೆ ಸಾಧಾರಣ ಉಪಕರಣಗಳು ಸಾಲದು. ಆ ತೈಲವನ್ನು ರಫ್ತು ಮಾಡುವ ಮುನ್ನ ತೆಳುಗೊಳಿಸಲು ಅತ್ಯಾಧುನಿಕ ತಂತ್ರಜ್ಞಾನ ಅತ್ಯಗತ್ಯ. ಅದರ ಸಂಸ್ಕರಣೆಗೂ ವಿಶೇಷ ಯಂತ್ರೋಪಕರಣ ಬೇಕು. ಇದನ್ನು ಅಮೆರಿಕ ವೆನಿಜುವೆಲಾದಲ್ಲಿ ದಶಕಗಳ ಹಿಂದೆಯೇ ನಿರ್ಮಿಸಿತ್ತು. ಆದರೆ ತೈಲ ಉದ್ಯಮದ ರಾಷ್ಟ್ರೀಕರಣದ ಬಳಿಕ ಅಮೆರಿಕದ ಆಟ ನಿಂತು ಚೀನಾ ಪಾದಾರ್ಪಣೆ ಮಾಡಿದೆ. ಆದರೆ ಅಮೆರಿಕದ ನಿರ್ಬಂಧ ಬಳಿಕ ಬೇರೆ ದೇಶಗಳು ತೈಲ ಸಂಸ್ಕರಣೆ ಮಾಡಲಾಗದೇ ದೇಶ ಸಂಕಷ್ಟದಲ್ಲಿದೆ. ಇದೀಗ ದೇಶ ಮತ್ತೆ ಅಮೆರಿಕದ ಪಾಲಾದ ಕಾರಣ ಅಲ್ಲಿ ದೊಡ್ಡಮಟ್ಟದಲ್ಲಿ ಹೂಡಿಕೆ ಮಾಡಿ, ಮರಳಿ ತೈಲ ಸಂಪನ್ಮೂಲ ವಲಯವನ್ನು ತೆಕ್ಕೆಗೆ ತೆಗೆದುಕೊಳ್ಳುವುದು ಅಮೆರಿಕದ ಗುರಿ.
ಅಮೆರಿಕದ- ವೆನಿಜುವೆಲಾ ಹಾವು-ಮುಂಗುಸಿ ವೈರತ್ವ
ಅಮೆರಿಕ- ವೆನಿಜುವೆಲಾ ತೈಲ ಸಂಬಂಧ ಆರಂಭವಾಗುವುದು 20ನೇ ಶತಮಾನದ ಆರಂಭದಲ್ಲಿ. ವೆನಿಜುವೆಲಾದಲ್ಲಿ ಅಮೆರಿಕದ ಬೃಹತ್ ಕಂಪನಿಗಳು ತೈಲ ಉತ್ಖನನದ ಮೇಲೆ ಭಾರೀ ಹೂಡಿಕೆ ಮಾಡಿದ್ದವು ಮತ್ತು ಸಂಸ್ಕರಣಾ ಘಟಕ ಸ್ಥಾಪಿಸಿದ್ದವು. ಅವು 1920ರಿಂದ ಲವನ್ನು ತಡೆಯಿಲ್ಲದೆ ಬಗೆಯುತ್ತಿದ್ದವು. ಆದರೆ ವೆನಿಜುವೆಲಾ ಸರ್ಕಾರ 1976ರಲ್ಲಿ ಪೆಟ್ರೋಲಿಯಂ ಉದ್ಯಮವನ್ನು ರಾಷ್ಟ್ರೀಕರಣಗೊಳಿಸಿತು. ಬಳಿಕ ಅಮೆರಿಕದ ಕಂಪನಿಗಳನ್ನು ಈ ಉದ್ಯಮದಿಂದ ಹೊರಹಾಕಿ, ಅವುಗಳ ಆಸ್ತಿ ವಶಪಡಿಸಿಕೊಂಡಿತು. ಇದು, ಉಭಯ ದೇಶಗಳ ನಡುವೆ ಶೀತಲ ಸಮರಕ್ಕೆ ನಾಂದಿ ಹಾಡಿತು. ಈ ಕ್ರಮವನ್ನು ದರೋಡೆಗೆ ಹೋಲಿಸಿದ ಅಮೆರಿಕ, 2014ರಲ್ಲಿ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಕೋರ್ಟ್ ಮೊರೆ ಹೋಗಿತ್ತು. ಅಲ್ಲಿ, ಅಮೆರಿಕ ತೈಲ ಕಂಪನಿಗಳಿಗೆ 14000 ಕೋಟಿ ರು. ಪರಿಹಾರ ನೀಡಲು ಸೂಚಿಸಿತ್ತು. ಆದರೆ ಅಷ್ಟೂ ಮೊತ್ತವನ್ನು ವೆನಿಜುವೆಲಾ ನೀಡಿರಲಿಲ್ಲ. ಅದನ್ನೀಗ ಟ್ರಂಪ್ ಮರಳಿ ಕೇಳುತ್ತಿದ್ದಾರೆ. ಈ ಕಾರಣಕ್ಕಾಗಿಯೇ ವೆನಿಜುವೆಲಾ ತಮ್ಮ ಪಾಲಿನ ತೈಲ ಕಸಿದುಕೊಂಡಿದೆ. ಅದನ್ನು ಮರಳಿ ಪಡೆದೇ ಸಿದ್ಧ ಎಂದು ಘೋಷಿಸಿದ್ದಾರೆ.
ದೇಶವ ನಾಶಮಾಡಿದ ಚಾವೇಜ್, ಮಡುರೋ
1998ರಲ್ಲಿ ನಡೆದ ಚುನಾವಣೆಯ ಮೂಲಕ ಆರಿಸಿಬಂದ ಹ್ಯೂಗೋ ಚಾವೆಜ್, ಬಳಿಕ ಚುನಾವಣೆಗಳನ್ನು ತನ್ನಿಷ್ಟದಂತೆ ನಡೆಸಿಕೊಂಡು ಸಂವಿಧಾನವನ್ನೇ ತಿರುಚಿ ಸರ್ವ ಅಧಿಕಾರಗಳನ್ನು ತಮ್ಮ ಕೈಗೇ ತೆಗೆದುಕೊಂಡರು. ಬಳಿಕ ನಡೆದ ಎಲೆಕ್ಷನ್‌ಗಳೆಲ್ಲ ನಾಮಮಾತ್ರ. 2013ರಲ್ಲಿ ಇವರ ನಿಧನಾನಂತರ, ಉಪಾಧ್ಯಕ್ಷರಾಗಿದ್ದ ನಿಕೋಲಸ್ ಮಡುರೋ ಪದೋನ್ನತಿ ಹೊಂದಿದರು. ಆ ಬಳಿಕ ವೆನಿಜುವೆಲಾದ ಅವನತಿ ಆರಂಭವಾಯಿತು. ಕಾನೂನಾತ್ಮಕವಾಗಿ ಮಡುರೋ ಅವಧಿ ಮುಗಿದ ಬಳಿಕ ವೆನಿಜುವೆಲಾದಲ್ಲಿ ಚುನಾವಣೆಗಳು ನಡೆದವಾದರೂ, ಅದರಿಂದ ಅವರ ಹುದ್ದೆಗೇನೂ ಸಮಸ್ಯೆಯಾಗಲಿಲ್ಲ. ಕಾರಣ, ಅದಾಗಲೇ ಸರ್ವಾಧಿಕಾರಿಯಾಗಿ ರೂಪಗೊಂಡಿದ್ದ ಅವರು, ವಿರೋಧಿಗಳನ್ನು ಚುನಾವಣೆಯಿಂದಲೇ ಹೊರಗಿಟ್ಟು, ಚುನಾವಣಾ ಮಂಡಳಿಯನ್ನೇ ಮುಷ್ಟಿಯಲ್ಲಿಟ್ಟುಕೊಂಡು ಫಲಿತಾಂಶವನ್ನು ಸುಲಭವಾಗಿ ತಮ್ಮ ಪರವಾಗಿ ಬರುವಂತೆ ಮಾಡಿಕೊಂಡರು.
ತುಘಲಕ್ ಆಡಳಿತ, ಹುಚ್ಚುಚ್ಚು ವ್ಯಕ್ತಿತ್ವ
ದೇಶದಲ್ಲಿ ಆಹಾರ ಸಾಮಗ್ರಿಗಳ ಬೆಲೆಯನ್ನು ಅವೈಜ್ಞಾನಿಕವಾಗಿ ನಿಗದಿಪಡಿಸಿ, ಕೃಷಿ ಕ್ಷೇತ್ರ ನಾಶಪಡಿಸಿದ ಕುಖ್ಯಾತಿಯೂ ಮಡುರೋರದ್ದು. 2016-19ರ ನಡುವೆ ಜನ ಆಹಾರಕ್ಕೂ ಪರಡಾಡುವ ಸ್ಥಿತಿ ಉದ್ಭವಿಸಿದಾಗ ತನ್ನ ಪಕ್ಷದ ಬೆಂಬಲಿಗರಿಗಷ್ಟೇ ಅವರ ಗುರುತಿನ ಚೀಟಿ ಪರಿಶೀಲಿಸಿ ಆಹಾರವನ್ನು ಹಂಚಿ, ಉಳಿದವರನ್ನು ಹಸಿವಿನಿಂದ ಸಾಯಲು ಬಿಟ್ಟಿದ್ದರು. 2018-2020ರ ಅವಧಿಯಲ್ಲಿ ಹಣದುಬ್ಬರ ವಿಪರೀತ ಹೆಚ್ಚಾಗಿ ದೇಶವು ಆರ್ಥಿಕ ತುರ್ತುಪರಿಸ್ಥಿತಿಯಲ್ಲಿದ್ದಾಗ ಅದನ್ನು ಮೇಲೆತ್ತುವ ಬದಲು ಮಡುರೋ, ಅನಿಯಂತ್ರಿತವಾಗಿ ನೋಟು ಮುದ್ರಿಸಿ ಹಂಚಿದರು. ಇದರಿಂದ ಹಣ ಮೌಲ್ಯ ಕಳೆದುಕೊಂಡು ಆರ್ಥಿಕವಾಗಿ ಇನ್ನಷ್ಟು ಕುಸಿಯಿತು. ಅಮೆರಿಕದ ನಿರ್ಬಂಧದಿಂದ ಪಾರಾಗಲು ‘ಪೆಟ್ರೋ’ ಎಂಬ ಕ್ರಿಪ್ಟೋ ಕರೆನ್ಸಿ ಪರಿಚಯಿಸಿದರಾದರೂ ಅದು ಬೆಲೆರಹಿತವಾಗಿ ಉಳಿದು, ಮಾಯವಾಯಿತು. ಇಂಧನ ಬಿಕ್ಕಟ್ಟು ಉದ್ಭವವಾದಾಗ ಉತ್ಪಾದನೆಯನ್ನು ಹೆಚ್ಚಿಸುವ ಬದಲು ಗಡಿಯಾರವನ್ನು ಅರ್ಧ ಗಂಟೆ ಹಿಂದಕ್ಕೆ ತಿರುಗಿಸಿಬಿಟ್ಟರು.
ವೆನಿಜುವೆಲಾ ಎಂಬ ಡ್ರಗ್ಸ್ ಸಾಮ್ರಾಜ್ಯ
ವೆನೆಜುವೆಲಾದಲ್ಲಿ ಕಾರ್ಟೆಲ್ ಡಿ ಲಾಸ್ ಸೋಲ್ಸ್ ಎಂಬ ಮಾದಕವಸ್ತು ದಂಧೆಕೋರರ ಗುಂಪೇ ಇದೆ. ಇದು ರೂಪಗೊಂಡದ್ದು ಚಾವೆಜ್ ಅವಧಿಯಲ್ಲಾದರೂ ಹೆಮ್ಮರವಾದದ್ದು ಮಡುರೋರ ನೆರಳಲ್ಲಿ. ಇದರಲ್ಲಿ ರಾಜಕಾರಣಿಗಳು, ಅಧಿಕಾರಿಗಳಷ್ಟೇ ಅಲ್ಲ, ಸ್ವತಃ ಮಡುರೋ, ಅವರ ಪತ್ನಿ ಹಾಗೂ ಪುತ್ರ ಭಾಗಿಯಾಗಿದ್ದಾರೆ. ಇವರೆಲ್ಲಾ ಕೊಲಂಬಿಯಾದಿಂದ ಅಮೆರಿಕ, ಯುರೋಪ್‌ಗೆ ಮಾದಕವಸ್ತುಗಳನ್ನು ಸಾಗಿಸುವವರಿಗೆ ರಕ್ಷಣೆ ನೀಡುತ್ತಿದ್ದಾರೆ ಎಂಬುದು ಅಮೆರಿಕದ ಆರೋಪ.
ಕಳೆದ ನವೆಂಬರ್‌ನಲ್ಲಿ ಕೆರೇಬಿಯನ್ ಸಮುದ್ರದಲ್ಲಿ ಕಾರ್ಯಾಚರಣೆ ಆರಂಭಿಸಿದ ಟ್ರಂಪ್, ನಶಾ ವಸ್ತು ಸಾಗಿಸುತ್ತಿದ್ದರು ಎಂಬ ಆರೋಪ ಹೊರಿಸಿ 2025ರಲ್ಲಿ 30-35ಕ್ಕೂ ಹೆಚ್ಚು ವೆನಿಜುವೆಲಾದ ಹಡಗುಗಳ ಮೇಲೆ ವಾಯುದಾಳಿ ನಡೆಸಿದ್ದರು.
ದಾಳಿಗೆ ನೀಡಿದ ಕಾರಣವೇನು?
1. ತೈಲದ ಮೇಲೆ ಕಣ್ಣು
ವೆನಿಜುವೆಲಾದಲ್ಲಿ ಹೇರಳವಾಗಿರುವ ತೈಲದ ಮೇಲೆ ಅಮೆರಿಕದ ಕಣ್ಣಿದೆ. ತೈಲ ಉದ್ಯಮದ ರಾಷ್ಟ್ರೀಕರಣದ ಬಳಿಕ ತಾನು ಕಳೆದುಕೊಂಡ ಹಿಡಿತ ಮತ್ತು ರಫ್ತುದಾರನನ್ನು ಮರಳಿ ಪಡೆಯುವುದು ಟ್ರಂಪ್ ಉದ್ದೇಶ. ಆದರೆ ವೆನಿಜುವೆಲಾದಲ್ಲಿ ಕಮ್ಯುನಿಸ್ಟ್ ಸರ್ಕಾರ ಮತ್ತು ಅದಕ್ಕೆ ತನ್ನ ವಿರೋಧಿಗಳ ಬೆಂಬಲದಿಂದಾಗಿ ಇದು ಸಾಧ್ಯವಾಗಿರಲಿಲ್ಲ. ಇದಕ್ಕಿದ್ದ ಪರಿಹಾರ, ಪ್ರಸ್ತುತವಿರುವ ಸರ್ಕಾರವನ್ನುರುಳಿಸಿ ತನ್ನ ಪರವಾಗಿರುವವರನ್ನು ಕೂರಿಸುವುದು. ಆ ಮೂಲಕ ತೈಲ ನಿಕ್ಷೇಪದ ಹಿಡಿತವನ್ನು ಮರಳಿ ಪಡೆಯುವುದು.
2. ಚೀನಾ, ರಷ್ಯಾ ಪ್ರಭಾವ
ವೆನಿಜುವೆಲಾದಿಂದ ದಶಕಗಳ ಹಿಂದೆ ಅಮೆರಿಕ ನಿರ್ಗಮಿಸಿದ ಬಳಿಕ, ಅದರ ಕಡುವಿರೋಧಿಗಳಾದ ಚೀನಾ ಮತ್ತು ರಷ್ಯಾ, ಹತ್ತಿರಾದವು. ಸಹಾಯಹಸ್ತದ ನೆಪದಲ್ಲಿ ವೆನಿಜುವೆಲಾವನ್ನು ಚೀನಾ ತನ್ನ ಸಾಲದ ಸುಳಿಯಲ್ಲಿ ಸಿಲುಕಿಸಿದ್ದರೆ, ವೆನಿಜುವೆಲಾದ ಶಸ್ತ್ರಾಗಾರವನ್ನು ತುಂಬುವಲ್ಲಿ ರಷ್ಯಾ ನೆರವಾಗುತ್ತಿದೆ. ಇದು ಹೀಗೇ ಮುಂದುವರೆದು ದಕ್ಷಿಣ ಅಮೆರಿಕದ ಈ ರಾಷ್ಟ್ರದಲ್ಲಿ ತನ್ನ ಶತ್ರುಗಳ ನೆಲೆ ಗಟ್ಟಿಯಾದರೆ ಅದರಿಂದ ತನ್ನ ಹಿತಾಸಕ್ತಿಗೆ ಧಕ್ಕೆ ಎಂದರಿತಿರುವ ಅಮೆರಿಕ, ಅಧ್ಯಕ್ಷನ ಅಪಹರಣದ ಮೂಲಕ ಅಧಿಕಾರ ಬದಲಾವಣೆಗೆ ನಾಂದಿ ಹಾಡಿದೆ.


