ಅಮೇರಿಕಾ ಹುಡುಗಿಯನ್ನು ಬೆಂಗಳೂರಿಗೆ ಹಾರಿಸಿಕೊಂಡು ಬಂದು ಮದುವೆಯಾದ ಒಡಿಶಾ ಹುಡುಗ; ಯುವತಿ ಫುಲ್ ಖುಷ್!
ಕೌಟುಂಬಿಕ ಮೌಲ್ಯಗಳು ದೇಶ, ದೇಶಗಳ ನಡುವಿನ ಸಾಂಸ್ಕೃತಿಕ ಎಲ್ಲೆಗಳನ್ನು ಮೀರಿಸಬಲ್ಲವು ಎಂಬುದಕ್ಕೆ ಬೆಂಗಳೂರಿನಲ್ಲಿ ನೆಲೆಸಿರುವ ಅಮೇರಿಕಾದ ಯುವತಿ ಹಾಗೂ ಒಡಿಶಾ ಹುಡುಗನ ದಾಂಪತ್ಯವೇ ಸಾಕ್ಷಿಯಾಗಿದೆ.
ದೇಶ-ವಿದೇಶಗಳನ್ನು ಲೆಕ್ಕಿಸದೇ, ತಮ್ಮ ಸಂಸ್ಕೃತಿಗಳು, ಜಾತಿ ಧರ್ಮಗಳನ್ನು ಲೆಕ್ಕಿಸದೇ ಕೆಲವರು ವಿದೇಶಿಯರನ್ನು ಮದುವೆಯಾಗುವ ಘಟನೆಗಳು ಇಂದಿನ ಕಾಲದಲ್ಲಿ ಹೊಸದೇನಲ್ಲ. ವಿಶೇಷವಾಗಿ ಭಾರತೀಯ ಯುವಜನರು ಆಯಾ ದೇಶಗಳಲ್ಲಿ ವಾಸಿಸುವವರನ್ನು ವಿವಾಹವಾಗಿ ಅಲ್ಲೇ ನೆಲೆಸುವುದು ಸಾಮಾನ್ಯ. ಆದರೆ, ಭಾರತೀಯ ವ್ಯಕ್ತಿಯನ್ನು ವಿವಾಹವಾಗಿ, ಪತಿಯೊಂದಿಗೆ ಬೆಂಗಳೂರಿಗೆ ಬಂದು ನೆಲೆಸಿರುವ ಅಮೇರಿಕನ್ ಮಹಿಳೆ ತನ್ನ ಬೆಂಗಳೂರು ಜೀವನದ ಕೆಲವು ಅಂಶಗಳನ್ನು ಒಳಗೊಂಡ ವೀಡಿಯೊವನ್ನು ಹಂಚಿಕೊಂಡಿದ್ದು, ಅದು ಸಾಮಾಜಿಕ ಜಾಲತಾಣಗಳಲ್ಲಿ ಸೂಪರ್ ಹಿಟ್ ಆಗಿದೆ.
'ಒಬ್ಬ ಒಡಿಯಾ ವ್ಯಕ್ತಿಯನ್ನು ವಿವಾಹವಾದ ನಂತರ ನನ್ನ ಜೀವನ ಹೇಗೆ ಬದಲಾಯಿತು' ಎಂಬ ಶೀರ್ಷಿಕೆಯೊಂದಿಗೆ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ದೀಪಕ್ - ಹನ್ನಾ ದಂಪತಿಗಳು ತಮ್ಮ ಇಬ್ಬರ ಹೆಸರಿನಲ್ಲಿ ಪ್ರಾರಂಭಿಸಿದ ಇನ್‌ಸ್ಟಾಗ್ರಾಮ್ ಪುಟದಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ತಾನು ವಾಸಿಸುತ್ತಿದ್ದ ಪರಿಸರಕ್ಕಿಂತ ಸಂಪೂರ್ಣವಾಗಿ ಭಿನ್ನವಾದ ಲೋಕದಲ್ಲಿ ಪತಿಯ ಕುಟುಂಬದೊಂದಿಗೆ ವಾಸಿಸುವಾಗ ಹನ್ನಾ ಅನೇಕ ಬಾರಿ ಕಂಡ, ಅನುಭವಿಸಿದ ದೃಶ್ಯಗಳನ್ನು ವೀಡಿಯೊದಲ್ಲಿ ತೋರಿಸಲಾಗಿದೆ.
ಇಬ್ಬರೂ ಒಟ್ಟಿಗೆ ಇರುವ ದೃಶ್ಯದಿಂದ ವೀಡಿಯೊ ಆರಂಭವಾಗುತ್ತದೆ. ನಂತರ ಕುಟುಂಬ ಸದಸ್ಯರೆಲ್ಲರೂ ಒಟ್ಟಾಗಿ ತಿಂಡಿ ತಿನ್ನುವ ದೃಶ್ಯವಿದೆ. ಅತ್ತೆ ಮಗಳಿಗೆ ಕೂದಲು ಬಾಚಿಕೊಡುವುದು, ಮಾವನಿಗೆ ಸೊಸೆ ಬೆಡ್ ಕಾಫಿ ಕೊಡುವುದು, ಸೀರೆ ಉಡಲು ಕಲಿಯುವುದು, ಮೊಸರು ಕಡೆಯುವುದು, ಚೆಸ್ ಆಡುವುದು, ಚಪಾತಿ ಸುಡುವುದು, ಉಡುಗೊರೆಗಳನ್ನು ಪಡೆಯುವುದು, ಕಾಲಿಗೆ ಮೆಹಂದಿ ಹಾಕುವುದು, ಟೀ ಅಂಗಡಿಯಿಂದ ಬಿಸಿ ಚಹಾವನ್ನು ಊದುತ್ತಾ ಕುಡಿಯುವುದು ಹೀಗೆ ಮಧ್ಯಮ ವರ್ಗದ ಭಾರತೀಯ ಜೀವನದ ಹಲವು ದೃಶ್ಯಗಳನ್ನು ಹನ್ನಾ ತನ್ನ ವೀಡಿಯೊದಲ್ಲಿ ತೋರಿಸಿದ್ದಾರೆ. ಕೊನೆಯಲ್ಲಿ ದೀಪಕ್ ಅವರ ಬೈಕಿನಲ್ಲಿ ಹನ್ನಾ ಕೂತುಕೊಳ್ಳುವಾಗ, ಬೈಕಿನ ಚಕ್ರಕ್ಕೆ ಸೀರೆ ಸಿಕ್ಕಿಹಾಕಿಕೊಳ್ಳದಂತೆ ಮುಂದಾಣಿಯನ್ನು ಎತ್ತಿಕೊಡುವ ಮಹಿಳೆಯೊಂದಿಗೆ ವೀಡಿಯೊ ಕೊನೆಗೊಳ್ಳುತ್ತದೆ.
ಇದನ್ನೂ ಓದಿ: 54ರ ಹರೆಯದ ಸೈಬರ್ ಸೆಕ್ಯೂರಿಟಿ ತಜ್ಞ ಅಮಿತ್ ಯೊರನ್ ಕ್ಯಾನ್ಸರ್‌ಗೆ ಬಲಿ!
'ನಾನು ಒಂದು ಒಡಿಯಾ ಕುಟುಂಬದ ಭಾಗ. ನಾವೆಲ್ಲರೂ ಒಟ್ಟಿಗೆ ಇರುವಾಗ ಪ್ರೀತಿ, ನಗು, ಆಹಾರ ಮತ್ತು ಕಥೆಗಳನ್ನು ಹಂಚಿಕೊಳ್ಳುತ್ತೇವೆ' ಎಂದು ಹನ್ನಾ ವೀಡಿಯೊದೊಂದಿಗೆ ಬರೆದಿದ್ದಾರೆ. ಅಷ್ಟೇ ಅಲ್ಲ, ತನ್ನ ಅತ್ತೆಯ ಬಗ್ಗೆಯೂ ಹನ್ನಾ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 'ಅವರು ತುಂಬಾ ವಿನಮ್ರರು ಮತ್ತು ದಯಾಳುಗಳು. ಎಲ್ಲಾ ಸೊಸೆಯಂದಿರಿಗೂ ಇಷ್ಟು ಪ್ರೀತಿಯ ಅತ್ತೆ-ಮಾವ ಇರಬೇಕೆಂದು ನಾನು ಬಯಸುತ್ತೇನೆ' ಎಂದು ಹನ್ನಾ ಬರೆದಿದ್ದಾರೆ. 20 ಲಕ್ಷ ಜನರು ಈಗಾಗಲೇ ವೀಡಿಯೊವನ್ನು ವೀಕ್ಷಿಸಿದ್ದಾರೆ. ಸುಮಾರು ಅರ್ಧ ಲಕ್ಷಕ್ಕೂ ಹೆಚ್ಚು ಜನರು ವೀಡಿಯೊವನ್ನು ಲೈಕ್ ಮಾಡಿದ್ದಾರೆ. 'ಇದು ತುಂಬಾ ಸುಂದರವಾಗಿದೆ, ಪ್ರೀತಿ ನಿಜವಾಗಿಯೂ ಎಲ್ಲೆ ಮೀರಿದೆ' ಎಂದು ಒಬ್ಬ ವೀಕ್ಷಕ ಬರೆದಿದ್ದಾರೆ. 'ಕುಟುಂಬ ಮೌಲ್ಯಗಳು ಸಾಂಸ್ಕೃತಿಕ ವ್ಯತ್ಯಾಸಗಳನ್ನು ಹೇಗೆ ಮೀರಿಸಬಲ್ಲವು ಎಂಬುದಕ್ಕೆ ಇದು ಸಾಕ್ಷಿ' ಎಂದು ಮತ್ತೊಬ್ಬರು ಬರೆದಿದ್ದಾರೆ.
ಇದನ್ನೂ ಓದಿ: ಪ್ರಧಾನಿ ಮೋದಿ ನೀಡಿದ ವಜ್ರ, ಜಿಲ್ ಬೈಡೆನ್‌ಗೆ ಸಿಕ್ಕ ದುಬಾರಿ ಗಿಫ್ಟ್