ಅಮೆರಿಕದಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಅಲ್ಲಿನ ಸರ್ಕಾರ ಗಂಭೀರ ಎಚ್ಚರಿಕೆ ನೀಡಿದೆ. ವಲಸೆ ನಿಯಮಗಳನ್ನು ಉಲ್ಲಂಘಿಸಿದರೆ ವೀಸಾ ರದ್ದುಗೊಳಿಸಿ, ಗಡೀಪಾರು ಮಾಡುವುದಾಗಿ ಸ್ಪಷ್ಟಪಡಿಸಿದೆ. ಈ ಕಠಿಣ ನಿಲುವು ಮತ್ತು ಬಿಗಿಯಾದ ವೀಸಾ ನಿಯಮಗಳಿಂದಾಗಿ ಸಾವಿರಾರು ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗಿದ್ದಾರೆ.
ವಾಷಿಂಗ್ಟನ್/ನವದೆಹಲಿ (ಜ.7): ಅಮೆರಿಕದಲ್ಲಿ ನೆಲೆಸಿರುವ ಮತ್ತು ಅಲ್ಲಿಗೆ ತೆರಳಲು ಬಯಸುವ ಭಾರತೀಯ ವಿದ್ಯಾರ್ಥಿಗಳಿಗೆ ಅಮೆರಿಕ ಸರ್ಕಾರ ಗಂಭೀರ ಎಚ್ಚರಿಕೆಯನ್ನು ನೀಡಿದೆ. ವಲಸೆ ನಿಯಮಗಳ ಉಲ್ಲಂಘನೆಯು ನಿಮ್ಮನ್ನು ದೇಶದಿಂದ ಹೊರಹಾಕಲು (ಗಡೀಪಾರು) ಕಾರಣವಾಗಬಹುದು ಎಂದು ಸ್ಪಷ್ಟಪಡಿಸಿದೆ.
ವೀಸಾ ರದ್ದತಿ ಮತ್ತು ಗಡೀಪಾರು ಭೀತಿ
ಭಾರತದಲ್ಲಿನ ಅಮೆರಿಕ ರಾಯಭಾರ ಕಚೇರಿಯು ಬುಧವಾರ (ಜನವರಿ 7, 2026) ಈ ಕುರಿತು ಅಧಿಕೃತ ಪ್ರಕಟಣೆ ಹೊರಡಿಸಿದೆ. ಅಮೆರಿಕದ ಕಾನೂನುಗಳನ್ನು ಉಲ್ಲಂಘಿಸುವುದು ನಿಮ್ಮ ವಿದ್ಯಾರ್ಥಿ ವೀಸಾದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಯಾವುದೇ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿ ಬಂಧನಕ್ಕೊಳಗಾದರೆ ನಿಮ್ಮ ವೀಸಾವನ್ನು ತಕ್ಷಣವೇ ರದ್ದುಗೊಳಿಸಲಾಗುವುದು. ಅಷ್ಟೇ ಅಲ್ಲದೆ, ನಿಮ್ಮನ್ನು ಗಡೀಪಾರು ಮಾಡುವುದರ ಜೊತೆಗೆ ಭವಿಷ್ಯದಲ್ಲಿ ಅಮೆರಿಕ ವೀಸಾ ಪಡೆಯಲು ಶಾಶ್ವತವಾಗಿ ಅನರ್ಹರನ್ನಾಗಿ ಮಾಡಲಾಗುವುದು ಎಂದು ಎಚ್ಚರಿಸಿದೆ.
'ವೀಸಾ ಎಂಬುದು ಹಕ್ಕಲ್ಲ, ಅದೊಂದು ಸವಲತ್ತು'
ವಿದ್ಯಾರ್ಥಿಗಳಿಗೆ ನಿಯಮ ಪಾಲನೆಯ ಮಹತ್ವವನ್ನು ತಿಳಿಸಿರುವ ರಾಯಭಾರ ಕಚೇರಿ, ಅಮೆರಿಕದ ವೀಸಾ ಪಡೆಯುವುದು ನಿಮ್ಮ ಹಕ್ಕಲ್ಲ, ಬದಲಾಗಿ ಅದು ನಿಮಗೆ ನೀಡಲಾದ ಒಂದು ಸವಲತ್ತು ಎಂದು ಮಾರ್ಮಿಕವಾಗಿ ಹೇಳಿದೆ. ನಿಯಮಗಳನ್ನು ಗಾಳಿಗೆ ತೂರಿ ನಿಮ್ಮ ಶೈಕ್ಷಣಿಕ ಭವಿಷ್ಯವನ್ನು ಮತ್ತು ಅಮೆರಿಕ ಪ್ರವಾಸವನ್ನು ಅಪಾಯಕ್ಕೆ ಸಿಲುಕಿಸಬೇಡಿ ಎಂದು ಅಮೆರಿಕದ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಲಾಗಿದೆ.
ಅಕ್ರಮ ವಲಸಿಗರ ವಿರುದ್ಧ ಟ್ರಂಪ್ ಆಡಳಿತದ ಕಠಿಣ ಕ್ರಮ
ಕೇವಲ ವಿದ್ಯಾರ್ಥಿಗಳಷ್ಟೇ ಅಲ್ಲದೆ, ಅಕ್ರಮವಾಗಿ ಅಮೆರಿಕ ಪ್ರವೇಶಿಸಿರುವ ವಲಸಿಗರ ವಿರುದ್ಧವೂ ಡೊನಾಲ್ಡ್ ಟ್ರಂಪ್ ನೇತೃತ್ವದ ಆಡಳಿತವು ಸಮರ ಸಾರಿದೆ. ವಲಸೆ ಕಾನೂನುಗಳನ್ನು ಉಲ್ಲಂಘಿಸುವವರಿಗೆ ಕಠಿಣ ಕ್ರಿಮಿನಲ್ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವ ವಿದೇಶಿ ಪ್ರಜೆಗಳನ್ನು ಯಾವುದೇ ಮುನ್ಸೂಚನೆ ಇಲ್ಲದೆ ದೇಶದಿಂದ ಹೊರಹಾಕುವ ಪ್ರಕ್ರಿಯೆ ಚುರುಕುಗೊಂಡಿದೆ.
H-1B ಮತ್ತು ವಿದ್ಯಾರ್ಥಿ ವೀಸಾ ನಿಯಮಗಳು ಇನ್ನಷ್ಟು ಬಿಗಿ
ಅಮೆರಿಕ ಸರ್ಕಾರವು ಉದ್ಯೋಗ ಆಧಾರಿತ H-1B ವೀಸಾ ಮತ್ತು ವಿದ್ಯಾರ್ಥಿ ವೀಸಾ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸುತ್ತಿದೆ. ಈ ಹೊಸ ಬದಲಾವಣೆಗಳಿಂದಾಗಿ ಅಮೆರಿಕಕ್ಕೆ ಬರುವ ವಿದೇಶಿ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡುಬಂದಿದೆ. ಅಂಕಿಅಂಶಗಳ ಪ್ರಕಾರ, ಕಳೆದ ವರ್ಷ ಅಂತರರಾಷ್ಟ್ರೀಯ ವಿದ್ಯಾರ್ಥಿಗಳ ಪ್ರವೇಶದಲ್ಲಿ ಶೇ. 17 ರಷ್ಟು ಕುಸಿತವಾಗಿದೆ. 2024 ರ ಆಗಸ್ಟ್ ವೇಳೆಗೆ ಈ ಪ್ರಮಾಣವು ಶೇ. 19 ಕ್ಕೆ ಏರಿದ್ದು, ಇದು 2021 ರ ನಂತರದ ಅತ್ಯಂತ ಕಡಿಮೆ ದಾಖಲೆಯಾಗಿದೆ.
ಭಾರತ-ಅಮೆರಿಕ ಸಂಬಂಧಗಳ ಮೇಲೆ ಪರಿಣಾಮ?
ಕಳೆದ ಕೆಲವು ತಿಂಗಳುಗಳಿಂದ ಭಾರತ ಮತ್ತು ಅಮೆರಿಕ ನಡುವಿನ ರಾಜತಾಂತ್ರಿಕ ಸಂಬಂಧಗಳಲ್ಲಿ ಏರಿಳಿತಗಳು ಕಂಡುಬರುತ್ತಿವೆ. ಇದರ ನೇರ ಪರಿಣಾಮ ಈಗ ವಲಸೆ ಮತ್ತು ವೀಸಾ ನೀತಿಗಳ ಮೇಲೆ ಬೀರುತ್ತಿದೆ ಎನ್ನಲಾಗುತ್ತಿದೆ. ಅಮೆರಿಕದ ಈ ಕಠಿಣ ನಿಲುವು ಸಾವಿರಾರು ಭಾರತೀಯ ವಿದ್ಯಾರ್ಥಿಗಳಲ್ಲಿ ಆತಂಕ ಮೂಡಿಸಿದೆ.


