₹6 ಕೋಟಿ ಲಪಟಾಯಿಸಿದ ಪತ್ನಿಯಿಂದ ತನಿಖೆ ಟೆನ್ಶನ್, ಕಾನೂನು ಹೋರಾಟಗಳ ನಡುವೆ ಪ್ರತಿಷ್ಠಿತ ಫ್ಯಾಶನ್ ಬ್ರ್ಯಾಂಡ್ ಸಹ ಸಂಸ್ಥಾಪಕ 17ನೇ ಮಹಡಿಯಿಂದ ಬಿದ್ದು ಅನುಮಾನಸ್ಪದವಾಗಿ ಸಾವು ಕಂಡಿದ್ದಾರೆ. 

ಥಾಯ್ಲೆಂಡ್ (ಫೆ.21) ಅಸಾಸ್ (ASOS) ಜಗತ್ತಿನ ಪ್ರತಿಷ್ಠಿತ ಫ್ಯಾಶನ್ ಬ್ರ್ಯಾಂಡ್ ಕಂಪನಿ. ಬ್ರಿಟಿಷ್ ಪ್ಯಾಶನ್ ರಿಟೈಲರ್ ಕಂಪನಿ ಜಗತ್ತಿನೆಲ್ಲೆಡೆ ವ್ಯಾಪಾರ ವಹಿವಾಟು ನಡೆಸುತ್ತಿದೆ. ಇದರ ಸಹ ಸಂಸ್ಥಾಪಕ ಕ್ವೆಂಟಿನ್ ಗ್ರಿಫಿಥ್ಸ್ ಅನುಮಾನಸ್ಪದ ರೀತಿಯಲ್ಲಿ ಸಾವು ಕಂಡಿದ್ದಾರೆ. ಥಾಯ್ಲೆಂಡ್‌ನಲ್ಲಿರುವ ಅಪಾರ್ಟ್‌ಮೆಂಟ್‌ನ 17ನೇ ಮಹಡಿಯಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಮಾಜಿ ಪತ್ನಿ ಮಾಡಿದ ಕಳ್ಳಾಟದಿಂದ ಗ್ರಿಫಿಥ್ಸ್ ನಿರಂತರ ತನಿಖೆ ತಲೆನೋವು ಎದುರಿಸುತ್ತಿದ್ದಾರೆ. ಇದರ ನಡುವೆ ಅನುಮಾನಸ್ಪದ ರೀತಿಯಲ್ಲಿ ಸಾವು ಕಂಡಿದ್ದಾರೆ.

ಪ್ರಕರಣ ದಾಖಲಿಸಿದ ಪೊಲೀಸ್

ಕ್ವೆಂಚಿನ್ ಗ್ರಿಫಿಥ್ಸ್ ಥಾಯ್ಲೆಂಡ್‌ನ ಪ್ರತಿಷ್ಠಿತ ಅಪಾರ್ಟ್‌ಮೆಂಟ್‌ನ 17ನೇ ಮಹಡಿಯಲ್ಲಿ ವಾಸವಿದ್ದಾರೆ. ಈ ಮನೆಯ ಬಾಲ್ಕನಿಯಿಂದ ಕೆಳಕ್ಕೆ ಬಿದ್ದು ಮೃತಪಟ್ಟಿದ್ದಾರೆ. ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಗ್ರಿಫಿಥ್ಸ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಇತ್ತ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಆದರೆ ಪೊಲೀಸ್ ತನಿಖೆ ವೇಳೆ ಕೆಲ ಮಾಹಿತಿಗಳನ್ನು ಪೊಲೀಸರು ಕಲೆ ಹಾಕಿದ್ದಾರೆ.

ಮಾಜಿ ಪತ್ನಿ ಕೆಲಸದಿಂದ ತೀವ್ರ ತಲೆನೋವು ಎದುರಿಸುತ್ತಿದ್ದ ಗ್ರಿಫಿಥ್ಸ್

ಅಸಾಸ್ ಫ್ಯಾಶನ್ ಬ್ರ್ಯಾಂಡ್ ಕಂಪನಿಯಲ್ಲಿ ಗ್ರಿಫಿಥ್ಸ್ ಹಾಗೂ ಪತ್ನಿ ಇಬ್ಬರು ಜೊತೆಯಾಗಿ ಕೆಲಸ ಮಾಡುತ್ತಿದ್ದರು. ಗ್ರಿಫಿಥ್ಸ್ ಸಹ ಸಂಸ್ಥಾಪಕ, ಮಾರ್ಕೆಂಟಿಂಗ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದರೆ, ಪತ್ನಿಯೂ ಉನ್ನತ ಹುದ್ದೆಯಲ್ಲಿದ್ದರು. ಈ ವೇಳೆ ನಕಲಿ ದಾಖಲೆ, ಸಹಿ ಮಾಡಿ ಕೆಲ ಜಮೀನು ಹಾಗೂ ಷೇರುಗಳನ್ನು ಮಾರಾಟ ಮಾಡಿದ್ದಾರೆ ಅನ್ನೋ ಗಂಭೀರ ಆರೋಪ ಹಾಗೂ ಪ್ರಕರಣದ ತನಿಖೆ ನಡೆಯುತ್ತಿದೆ. ಹೀಗೆ ಮಾರಾಟ ಮಾಡಿ 6.1 ಕೋಟಿ ರೂಪಾಯಿ ವಂಚಿಸಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿ ಪತಿ ಹಾಗೂ ಪತ್ನಿ ನಡುವೆ ಜಗಳ ನಡುದೆ ವಿಚ್ಚೇದನ ಪಡೆದುಕೊಂಡಿದ್ದಾರೆ.

ಪತ್ನಿ ಕಳ್ಳಾಟದಿಂದ ತನಿಖೆ ಸಂಕಷ್ಟ

ಪತ್ನಿ ಷೇರು, ಜಮೀನು ಮಾರಾಟ ಮಾಡಿ 6 ಕೋಟಿ ರೂಪಾಯಿ ಕಂಪನಿಗೆ ವಂಚನೆ ಮಾಡಿರುವ ಪ್ರಕರಣದಲ್ಲಿ ಪತ್ನಿ ಗ್ರಿಫಿಥ್ಸ್ ಪಾತ್ರದ ಕುರಿತು ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಹಲವು ಬಾರಿ ಗ್ರಿಫಿಥ್ಸ್ ತನಿಖೆ ಎದುರಿಸಿದ್ದಾರೆ. ತಮ್ಮ ಅರಿವಿನಲ್ಲಿ ನಡೆದಿಲ್ಲ ಎಂದು ದಾಖಲೆ ಸಮೇತ ಉತ್ತರ ನೀಡಿದ್ದಾರೆ. ಪದೇ ಪದೇ ತನಿಖೆಯಿಂದ ಗ್ರಿಫಿಥ್ಸ್ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ. ಇದರ ನಡುವೆ 17ನೇ ಮಹಡಿಯಿಂದ ಬಿದ್ದು ಅನುಮಾನಸ್ಪದವಾಗಿ ಸಾವು ಕಂಡಿದ್ದಾರೆ.