Trump Warns Colombian President: ವೆನೆಜುವೆಲಾದಲ್ಲಿ ನಡೆದ ದಾಳಿಗಳು ಒಂದು ದೇಶದ ಸಾರ್ವಭೌಮತ್ವದ ಮೇಲಿನ ದಾಳಿಯಾಗಿದೆ ಮತ್ತು ಇದು ದೊಡ್ಡ ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸುತ್ತದೆ ಎಂದು ಗುಸ್ಟಾವೊ ಪೆಟ್ರೋ ಪ್ರತಿಕ್ರಿಯಿಸಿದ ನಂತರ ಟ್ರಂಪ್ ಈ ಎಚ್ಚರಿಕೆ ನೀಡಿದ್ದಾರೆ.

ವಾಷಿಂಗ್ಟನ್: ವೆನೆಜುವೆಲಾದಲ್ಲಿ ನಿಕೋಲಸ್ ಮಡುರೊ ಅವರ ನಾಟಕೀಯ ಬಂಧನದ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮುಂದಿನ ಗುರಿ ಕೊಲಂಬಿಯಾ ಎಂಬ ಮುನ್ಸೂಚನೆ ಸಿಕ್ಕಿದೆ. ಕೊಲಂಬಿಯಾ ಅಧ್ಯಕ್ಷ ಗುಸ್ಟಾವೊ ಪೆಟ್ರೋ ಅವರಿಗೆ ಟ್ರಂಪ್ ನೀಡಿರುವ ಎಚ್ಚರಿಕೆ ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿದೆ.

ಡ್ರಗ್ಸ್ ದಂಧೆ ನಿಲ್ಲಿಸಿ, ಇಲ್ಲವೇ ಪರಿಣಾಮ ಎದುರಿಸಿ!

ಕೊಲಂಬಿಯಾದಲ್ಲಿ ನಡೆಯುತ್ತಿರುವ ಕೊಕೇನ್ ಉತ್ಪಾದನೆ ಮತ್ತು ಅಲ್ಲಿಂದ ಅಮೆರಿಕಕ್ಕೆ ಹರಿಯುತ್ತಿರುವ ಮಾದಕ ದ್ರವ್ಯಗಳ ಬಗ್ಗೆ ಟ್ರಂಪ್ ಕೆಂಡಾಮಂಡಲವಾಗಿದ್ದಾರೆ. ಕೊಲಂಬಿಯಾದ ಡ್ರಗ್ ಫ್ಯಾಕ್ಟರಿಗಳಿಂದ ಅಮೆರಿಕಕ್ಕೆ ವಿಷ ಹರಿದು ಬರುತ್ತಿದೆ. ಪೆಟ್ರೋ ಅವರು ಮೊದಲು ತಮ್ಮ ದೇಶದ ಕೆಲಸ ನೋಡಿಕೊಂಡರೆ ಒಳ್ಳೆಯದು, ವೆನೆಜುವೆಲಾದಲ್ಲಿ ಏನಾಗುತ್ತಿದೆ ಎಂದು ಅವರು ಚಿಂತಿಸುವ ಅಗತ್ಯವಿಲ್ಲ ಎಂದು ಟ್ರಂಪ್ ಖಡಕ್ ಆಗಿ ಹೇಳಿದ್ದಾರೆ. ಇದು ಕೊಲಂಬಿಯಾದ ಡ್ರಗ್ ಲ್ಯಾಬ್‌ಗಳ ಮೇಲೆ ಅಮೆರಿಕದ ಮುಂದಿನ ದಾಳಿಯ ಸೂಚನೆ ಎಂದು ವಿಶ್ಲೇಷಿಸಲಾಗುತ್ತಿದೆ.

ಸಾರ್ವಭೌಮತ್ವದ ಹೆಸರಲ್ಲಿ ಟೀಕಿಸಿದ್ದಕ್ಕೆ ಟ್ರಂಪ್ ತಿರುಗೇಟು

ವೆನೆಜುವೆಲಾದಲ್ಲಿ ಅಮೆರಿಕ ನಡೆಸಿದ ಮಿಲಿಟರಿ ಕಾರ್ಯಾಚರಣೆಯನ್ನು ಗುಸ್ಟಾವೊ ಪೆಟ್ರೋ ಅವರು ಒಂದು ದೇಶದ ಸಾರ್ವಭೌಮತ್ವದ ಮೇಲಿನ ದಾಳಿ ಎಂದು ಟೀಕಿಸಿದ್ದರು. ಇದರಿಂದ ಅಸಮಾಧಾನಗೊಂಡ ಟ್ರಂಪ್, ಪೆಟ್ರೋ ಅವರ ಟೀಕೆಗಳಿಗೆ ತಕ್ಕ ಉತ್ತರ ನೀಡಿದ್ದಾರೆ. ಕೆರಿಬಿಯನ್ ಸಮುದ್ರದಲ್ಲಿ ಅಮೆರಿಕ ಸೈನ್ಯ ನಿಯೋಜನೆಯಾದಾಗಿನಿಂದ ಪೆಟ್ರೋ ಅವರು ಅಮೆರಿಕದ ಕ್ರಮಗಳನ್ನು 'ಆಕ್ರಮಣಕಾರಿ ಬೆದರಿಕೆ' ಎಂದು ಬಣ್ಣಿಸುತ್ತಾ ಬಂದಿದ್ದರು.

ವೆನೆಜುವೆಲಾ ತೈಲ ಸಂಪತ್ತಿನ ಮೇಲೆ ಅಮೆರಿಕ ಕಣ್ಣು?

ಮಡುರೊ ಅವರ ಬಂಧನದ ನಂತರದ ಬೆಳವಣಿಗೆಗಳು ಕೇವಲ ಡ್ರಗ್ ಮಾಫಿಯಾ ವಿರುದ್ಧದ ಹೋರಾಟ ಮಾತ್ರವಲ್ಲದೆ, ವೆನೆಜುವೆಲಾದ ಬೃಹತ್ ತೈಲ ಸಂಪತ್ತಿನ ಮೇಲೆ ಅಮೆರಿಕ ನಿಯಂತ್ರಣ ಸಾಧಿಸುವ ತಂತ್ರವೂ ಹೌದು ಎಂದು ರಾಜತಾಂತ್ರಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ದಕ್ಷಿಣ ಅಮೆರಿಕಾದಲ್ಲಿ ದೊಡ್ಡ ಮಟ್ಟದ ರಾಜಕೀಯ ಸ್ಥಿತ್ಯಂತರವನ್ನು ತರಲು ಟ್ರಂಪ್ ಆಡಳಿತ ಮುಂದಾಗಿರುವುದು ಈಗ ಸ್ಪಷ್ಟವಾಗಿದೆ.

ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್‌ಗೆ ತಾತ್ಕಾಲಿಕ ಅಧಿಕಾರ

ಅಧ್ಯಕ್ಷ ಮಡುರೊ ಅವರ ಬಂಧನದಿಂದ ವೆನೆಜುವೆಲಾದಲ್ಲಿ ಸೃಷ್ಟಿಯಾಗಿರುವ ರಾಜಕೀಯ ಶೂನ್ಯತೆಯನ್ನು ತುಂಬಲು ಅಲ್ಲಿನ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಉಪಾಧ್ಯಕ್ಷೆ ಡೆಲ್ಸಿ ರೊಡ್ರಿಗಸ್ ಅವರು ತಾತ್ಕಾಲಿಕ ಉಸ್ತುವಾರಿ ವಹಿಸಿಕೊಂಡಿದ್ದಾರೆ. ದೇಶದಲ್ಲಿ ಸಂಪೂರ್ಣ ಆಡಳಿತ ಬದಲಾವಣೆಯ ಗುರಿಯನ್ನು ಅಮೆರಿಕ ಹೊಂದಿದ್ದು, ಮುಂದಿನ ದಿನಗಳಲ್ಲಿ ವೆನೆಜುವೆಲಾದ ಭವಿಷ್ಯ ಯಾವ ತಿರುವು ಪಡೆಯಲಿದೆ ಎಂಬ ಕುತೂಹಲ ಮೂಡಿದೆ.