ಅಮೆರಿಕದ ಸಂಸದೀಯ ಸಂಶೋಧನಾ ಸೇವಾ (ಸಿಆರ್‌ಎಸ್) ವರದಿಯ ಪ್ರಕಾರ, ಲಷ್ಕರ್-ಎ-ತೈಬಾ ಮತ್ತು ಜೈಷ್-ಎ-ಮೊಹಮ್ಮದ್‌ನಂತಹ ಭಾರತವನ್ನು ಗುರಿಯಾಗಿಸುವ ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ಆಶ್ರಯ ನೀಡುವುದನ್ನು ಮುಂದುವರಿಸಿದೆ. ಈ ಗುಂಪುಗಳು ಪಾಕ್ ನೆಲದಿಂದಲೇ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ವರದಿ.
ವಾಷಿಂಗ್ಟನ್ (ಮಾ.29): ಭಾರತವನ್ನು, ವಿಶೇಷವಾಗಿ ಕಾಶ್ಮೀರವನ್ನು ಗುರಿಯಾಗಿಸಿಕೊಂಡಿರುವ ಲಷ್ಕರ್-ಎ-ತೈಬಾ, ಜೈಷ್-ಎ-ಮೊಹಮ್ಮದ್ ಮೊದಲಾದ ಭಯೋತ್ಪಾದಕ ಸಂಘಟನೆಗಳಿಗೆ ಪಾಕಿಸ್ತಾನ ತನ್ನ ನೆಲದಲ್ಲಿ ಆಶ್ರಯ ನೀಡಿದೆ. ವರ್ಷಗಳ ಸೇನಾ ಕಾರ್ಯಾಚರಣೆಗಳು ಮತ್ತು ಕಾನೂನು ಕ್ರಮಗಳ ಹೊರತಾಗಿಯೂ, ಈ ಉಗ್ರ ಗುಂಪುಗಳು ಪಾಕಿಸ್ತಾನದ ನೆಲದಲ್ಲಿ ಕಾರ್ಯನಿರ್ವಹಿಸುವುದನ್ನು ಮುಂದುವರಿಸಿವೆ ಎಂದು ಅಮೆರಿಕದ ಸಂಸದೀಯ ಸಂಶೋಧನಾ ಸೇವಾ (ಸಿಆರ್‌ಎಸ್) ವರದಿ ಎಚ್ಚರಿಸಿದೆ.
2008ರ ಮುಂಬೈ ದಾಳಿ ಸಂಚಿನ ಲಷ್ಕರ್ ಹಾಗೂ 2001ರ ಸಂಸತ್ ದಾಳಿಯ ರೂವಾರಿ ಜೈಷ್ ಇವತ್ತಿಗೂ ಸಕ್ರಿಯವಾಗಿದ್ದು, ಪಾಕ್‌ನಿಂದ ಕಾರ್ಯನಿರ್ವಹಿಸುವುದನ್ನು ಮುಂದುವರಿಸಿವೆ. ಈ ಉಗ್ರ ಗುಂಪುಗಳು ಪಾಕಿಸ್ತಾನವನ್ನು ನೆಲೆಯಾಗಿ ಮತ್ತು ಗುರಿಯಾಗಿ ಎರಡೂ ರೀತಿಯಲ್ಲಿ ಬಳಸಿಕೊಳ್ಳುತ್ತಿವೆ. ಹೆಚ್ಚಿನವು ಇಸ್ಲಾಮಿಕ್ ಉಗ್ರಗಾಮಿ ಸಿದ್ಧಾಂತದಿಂದ ಪ್ರೇರಿತವಾಗಿವೆ ಎಂದು ವರದಿ ಉಲ್ಲೇಖಿಸಿದೆ.
5 ವರ್ಗಗಳಲ್ಲಿ ಕೆಲಸ:
ಈ ಸಂಘಟನೆಗಳು 5 ವಿಶಾಲ ವರ್ಗಗಳಾಗಿ ಕೆಲಸ ಮಾಡುತ್ತಿವೆ. ಜಾಗತಿಕ ಕೇಂದ್ರಿತ, ಅಫ್ಘಾನಿಸ್ತಾನ ಕೇಂದ್ರಿತ, ಭಾರತ ಮತ್ತು ಕಾಶ್ಮೀರ ಕೇಂದ್ರಿತ, ದೇಶೀಯವಾಗಿ ಕೇಂದ್ರಿತ ಮತ್ತು ಪಂಥೀಯ ಸಂಘಟನೆಗಳಾಗಿ ಇವನ್ನು ವಿಭಜಿಸಲಾಗಿದೆ. ಅಲ್ ಖೈದಾದ ಮೂಲ ಶಕ್ತಿ ಕುಸಿದಿದ್ದರೂ ಇನ್ನೂ ಕಾರ್ಯನಿರ್ವಹಿಸುತ್ತಿದೆ ಎಂದು ವರದಿ ತಿಳಿಸಿದೆ.
ಇಸ್ಲಾಮಿಕ್ ಸ್ಟೇಟ್‌ನ ಪ್ರಾದೇಶಿಕ ಅಂಗಸಂಸ್ಥೆಯಾದ ಇಸ್ಲಾಮಿಕ್ ಸ್ಟೇಟ್-ಖೋರಾಸನ್ ಅಂದಾಜು 4,000-6,000 ಉಗ್ರರನ್ನು ಒಳಗೊಂಡಿದೆ. ಇವರು ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದಾದ್ಯಂತ ಹಬ್ಬಿದ್ದು, ಇತರ ಉಗ್ರಗಾಮಿ ಗುಂಪುಗಳ ಹಳೆಯ ಸದಸ್ಯರನ್ನು ಆಕರ್ಷಿಸುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಲಾಗಿದೆ.
ಟಿಇಟಿ ಅತಿ ಮಾರಕ ಸಂಘಟನೆ:
ತೆಹ್ರಿಕ್-ಇ-ತಾಲಿಬಾನ್ (ಟಿಇಟಿ) ಪಾಕಿಸ್ತಾನವನ್ನು ‘ಪಾಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅತ್ಯಂತ ಮಾರಕ ಭಯೋತ್ಪಾದಕ ಸಂಘಟನೆ’ ಎಂದು ವಿವರಿಸಲಾಗಿದೆ. ಇದರ ಸುಮಾರು 2,500-5,000 ಉಗ್ರರು ಪಾಕಿಸ್ತಾನಿ ಸರ್ಕಾರವನ್ನು ಉರುಳಿಸಿ, ಷರಿಯಾ ಕಾನೂನನ್ನು ಜಾರಿಗೊಳಿಸುವ ಗುರಿ ಹೊಂದಿದ್ದಾರೆ ಎಂದು ವರದಿ ತಿಳಿಸಿದೆ.
ಸಿಆರ್‌ಎಸ್ ಅಮೆರಿಕ ಸಂಸತ್ತಿನ ಸ್ವತಂತ್ರ ಸಂಶೋಧನಾ ವಿಭಾಗವಾಗಿದ್ದು, ಸಂಸತ್ ಸದಸ್ಯರು ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಲು ವಿವಿಧ ವಿಷಯಗಳ ಕುರಿತು ವರದಿಗಳನ್ನು ಸಿದ್ಧಪಡಿಸುತ್ತದೆ.


