ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ, ದೇಶ ವಿರೋಧಿ ಪ್ರಚಾರ ಮಾಡಿದ ಆರೋಪದ ಮೇಲೆ 11 ಸೋಶಿಯಲ್ ಮೀಡಿಯಾ ಆಕ್ಟಿವಿಸ್ಟ್‌ಗಳನ್ನು ನ್ಯಾಷನಲ್ ಸೈಬರ್ ಕ್ರೈಂ ಇನ್ವೆಸ್ಟಿಗೇಷನ್ ಏಜೆನ್ಸಿ (NCCIA) ಬಂಧಿಸಿದೆ. ಸೇನೆ ವಿರುದ್ಧ ಆನ್‌ಲೈನ್‌ನಲ್ಲಿ ಪೋಸ್ಟ್ ಹಿನ್ನೆಲೆ ಈ ಕ್ರಮ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Source: ANI

ಲಾಹೋರ್: ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ರಾಜ್ಯ ವಿರೋಧಿ ಪ್ರಚಾರ ನಡೆಸಿದ ಆರೋಪದಡಿ 11 ಮಂದಿ ಸೋಷಿಯಲ್ ಮೀಡಿಯಾ ಆಕ್ಟಿವಿಸ್ಟ್‌ಗಳನ್ನ ರಾಷ್ಟ್ರೀಯ ಸೈಬರ್ ಕ್ರೈಂ ತನಿಖಾ ಏಜೆನ್ಸಿ (NCCIA) ಬಂಧಿಸಿದೆ ಎಂದು ಡಾನ್ ವರದಿ ಮಾಡಿದೆ.

ಎನ್‌ಸಿಸಿಐಎ ಪಂಜಾಬ್ ವಕ್ತಾರರ ಪ್ರಕಾರ, ಬಂಧಿತರ ಮೇಲೆ ಹಲವು ದಿನಗಳಿಂದ ನಿಗಾದಲ್ಲಿಡಲಾಗಿತ್ತು. ಇವರು ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ವಿಷಯ ಹಂಚಿಕೊಳ್ಳುವುದಲ್ಲದೆ, ವಿಶೇಷವಾಗಿ ಸೇನೆ ಸೇರಿದಂತೆ ರಾಜ್ಯ ಸಂಸ್ಥೆಗಳ ವಿರುದ್ಧ ಆನ್‌ಲೈನ್ ಅಭಿಯಾನ ನಡೆಸುತ್ತಿದ್ದರೆಂದು ಆರೋಪಿಸಲಾಗಿದೆ.

ಗುರುವಾರ ವಿವಿಧ ನಗರಗಳಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಲಾಹೋರ್‌ನಿಂದ ಇಬ್ಬರು, ಫೈಸಲಾಬಾದ್‌ನಿಂದ ಮೂವರು, ಮುಲ್ತಾನ್‌ನಿಂದ ನಾಲ್ವರು ಹಾಗೂ ಗುಜ್ರಾನ್‌ವಾಲಾದಿಂದ ಒಬ್ಬರನ್ನು ಬಂಧಿಸಿದ್ದಾರೆ. ಬಂಧಿತರ ವಿರುದ್ಧ 2016ರ ಎಲೆಕ್ಟ್ರಾನಿಕ್ ಅಪರಾಧ ತಡೆ ಕಾಯ್ದೆ (PECA) ಅಡಿಯಲ್ಲಿ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವರದಿ ತಿಳಿಸಿದೆ.

ಬಂಧಿತರಿಂದ ವಶಪಡಿಸಿಕೊಂಡಿರುವ ಡಿಜಿಟಲ್ ಸಾಧನಗಳು ಹಾಗೂ ಸಾಮಾಜಿಕ ಜಾಲತಾಣ ದಾಖಲೆಗಳನ್ನು ಅಧಿಕಾರಿಗಳು ಪರಿಶೀಲಿಸುತ್ತಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದ ಇನ್ನಷ್ಟು ಆನ್‌ಲೈನ್ ಜಾಲಗಳನ್ನು ಪತ್ತೆಹಚ್ಚುವ ಕಾರ್ಯ ಮುಂದುವರಿದಿದೆ.

ಎನ್‌ಸಿಸಿಐಎ ಪಂಜಾಬ್ ನಿರ್ದೇಶಕ ಮೊಹಮ್ಮದ್ ಅಲಿ ವಸೀಮ್ ಮಾತನಾಡಿ, 'ರಾಜ್ಯ ವಿರೋಧಿ ಪ್ರಚಾರ ಹಾಗೂ ಅಶಾಂತಿ ಸೃಷ್ಟಿಸಲು ಯತ್ನಿಸುವವರ ವಿರುದ್ಧ ಯಾವುದೇ ಸಡಿಲಿಕೆ ತೋರಿಸುವುದಿಲ್ಲ. ಇಂತಹ ಅಂಶಗಳ ವಿರುದ್ಧ ಕ್ರಮ ಮುಂದುವರಿಯುತ್ತದೆ” ಎಂದು ಎಚ್ಚರಿಕೆ ನೀಡಿದ್ದಾರೆ. ಈ ತಿಂಗಳ ಆರಂಭದಲ್ಲೇ ಇದೇ ರೀತಿಯ ಆರೋಪದಡಿ 13 ಮಂದಿ ಸಾಮಾಜಿಕ ಜಾಲತಾಣ ಕಾರ್ಯಕರ್ತರನ್ನು ಪಂಜಾಬ್‌ನಲ್ಲಿ ಬಂಧಿಸಲಾಗಿತ್ತು. ಸರ್ಕಾರ ಹಾಗೂ ರಾಜ್ಯ ಸಂಸ್ಥೆಗಳ ವಿರುದ್ಧ ಸಂಯೋಜಿತ ಪ್ರಚಾರ ನಡೆಸಿದ ಆರೋಪ ಇವರ ಮೇಲೂ ಹೊರಿಸಲಾಗಿದೆ ಎಂದು ಡಾನ್ ವರದಿ ಉಲ್ಲೇಖಿಸಿದೆ. ಈ ಕ್ರಮದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಾಮಾಜಿಕ ಜಾಲತಾಣಗಳ ಮೇಲಿನ ನಿಯಂತ್ರಣ ಕುರಿತ ಚರ್ಚೆ ಮತ್ತಷ್ಟು ತೀವ್ರಗೊಂಡಿದೆ.