ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ಇರಾನ್ ಕಳುಹಿಸಿದ್ದ ಪರಿಷ್ಕೃತ ಶಾಂತಿ ಪ್ರಸ್ತಾಪವನ್ನು ಅಮೆರಿಕ ತಿರಸ್ಕರಿಸಿದೆ. ಮಾತುಕತೆ ವಿಫಲವಾದರೆ ಪೂರ್ಣ ಪ್ರಮಾಣದ ಯುದ್ಧ ಆರಂಭವಾಗಬಹುದು ಎಂದು ಅಮೆರಿಕ ಎಚ್ಚರಿಕೆ ನೀಡಿದೆ.

ವಾಷಿಂಗ್ಟನ್ / ಟೆಹ್ರಾನ್ (ಮೇ.18): ಮಧ್ಯಪ್ರಾಚ್ಯದಲ್ಲಿ ಶಾಂತಿ ಸ್ಥಾಪನೆಗಾಗಿ ಇರಾನ್ ಕಳುಹಿಸಿದ್ದ ಪರಿಷ್ಕೃತ (Updated) ಶಾಂತಿ ಪ್ರಸ್ತಾಪವನ್ನು ಅಮೆರಿಕ ಸಂಪೂರ್ಣವಾಗಿ ತಿರಸ್ಕರಿಸಿದೆ. ಇರಾನ್‌ನ ಈ ಹೊಸ ಪ್ರಸ್ತಾಪವು ಅತ್ಯಂತ ಅಪೂರ್ಣವಾಗಿದ್ದು, ಇದರಿಂದ ಯಾವುದೇ ಪ್ರಗತಿ ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿದೆ. ಅಷ್ಟೇ ಅಲ್ಲದೆ, ಮಾತುಕತೆ ವಿಫಲವಾದರೆ ಜಾರಿಯಲ್ಲಿರುವ ಕದನ ವಿರಾಮ ಅಂತ್ಯಗೊಂಡು ಯಾವುದೇ ಕ್ಷಣದಲ್ಲೂ ಉಭಯ ದೇಶಗಳ ನಡುವೆ ಪೂರ್ಣ ಪ್ರಮಾಣದ ಯುದ್ಧ ಪುನರಾರಂಭವಾಗಬಹುದು ಎಂದು ಅಮೆರಿಕ ಗಂಭೀರ ಎಚ್ಚರಿಕೆ ನೀಡಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ 'ಅಕ್ಸಿಯೋಸ್' (Axios) ವರದಿ ಮಾಡಿದೆ.

Add Asianetnews Kannada as a Preferred SourcegooglePreferred

ಇರಾನ್‌ನ ಪರಮಾಣು ಕಾರ್ಯಕ್ರಮದ ಸುತ್ತ ಉದ್ವಿಗ್ನತೆ ಹೆಚ್ಚಾಗುತ್ತಿರುವ ಈ ಸೂಕ್ಷ್ಮ ಸಂದರ್ಭದಲ್ಲಿ, ಅಮೆರಿಕವು ರಾಜತಾಂತ್ರಿಕ ಹಾಗೂ ಮಿಲಿಟರಿ (ಸೇನಾ) ಕಾರ್ಯಾಚರಣೆ ಎರಡೂ ಆಯ್ಕೆಗಳನ್ನು ಮುಕ್ತವಾಗಿಟ್ಟಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮಾತುಕತೆಯ ಮೂಲಕವೇ ಶಾಂತಿಯುತ ಪರಿಹಾರವನ್ನು ಬಯಸುತ್ತಿದ್ದಾರಾದರೂ, ಅಮೆರಿಕ ನಿಗದಿಪಡಿಸಿರುವ ಕಟ್ಟುನಿಟ್ಟಿನ ಷರತ್ತುಗಳಿಗೆ ಒಪ್ಪಿಕೊಳ್ಳಲು ಟೆಹ್ರಾನ್ (ಇರಾನ್) ನಿರಾಕರಿಸುತ್ತಿರುವುದು ವಾಷಿಂಗ್ಟನ್‌ನ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಪಾಕಿಸ್ತಾನದ ಮಧ್ಯಸ್ಥಿಕೆ; ಪ್ರಸ್ತಾಪದಲ್ಲೇನಿದೆ?

ಇರಾನ್ ತನ್ನ ಈ ಹೊಸ ಪರಿಷ್ಕೃತ ಪ್ರಸ್ತಾಪವನ್ನು ಭಾನುವಾರ ರಾತ್ರಿ ಪಾಕಿಸ್ತಾನಿ ಮಧ್ಯಸ್ಥಗಾರರ (Pakistani Mediators) ಮೂಲಕ ಅಮೆರಿಕಕ್ಕೆ ತಲುಪಿಸಿತ್ತು. ಆದರೆ, ಈ ಹೊಸ ಡ್ರಾಫ್ಟ್‌ನಲ್ಲಿ ಹಳೆಯ ಪ್ರಸ್ತಾಪಗಳಿಗಿಂತ ದೊಡ್ಡ ಬದಲಾವಣೆಗಳೇನೂ ಇಲ್ಲ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಹೊಸ ಪ್ರಸ್ತಾಪದಲ್ಲಿ ತಾನು ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸುವುದಿಲ್ಲ ಎಂಬ ಇರಾನ್‌ನ ಹಳೆಯ ವಾದವನ್ನು ಮತ್ತಷ್ಟು ಬಲವಾದ ಪದಗಳಲ್ಲಿ ಪುನರುಚ್ಚರಿಸಲಾಗಿದೆಯೇ ಹೊರತು, ಯುರೇನಿಯಂ ಪುಷ್ಟೀಕರಣವನ್ನು (Uranium Enrichment) ಸ್ಥಗಿತಗೊಳಿಸುವ ಬಗ್ಗೆ ಅಥವಾ ಈಗಾಗಲೇ ತನ್ನ ಬಳಿ ಇರುವ ಅತ್ಯಂತ ಅಪಾಯಕಾರಿ ಪುಷ್ಟೀಕರಿಸಿದ ಯುರೇನಿಯಂ ದಾಸ್ತಾನನ್ನು ಬೇರೆಡೆಗೆ ವರ್ಗಾಯಿಸುವ ಬಗ್ಗೆ ಯಾವುದೇ ಸ್ಪಷ್ಟ ಹಾಗೂ ವಿವರವಾದ ಭರವಸೆಗಳನ್ನು ಇರಾನ್ ನೀಡಿಲ್ಲ. ಹೀಗಾಗಿ ಶ್ವೇತಭವನವು ಈ ಪ್ರಸ್ತಾಪವನ್ನು ಕಸದ ಬುಟ್ಟಿಗೆ ಹಾಕಿದೆ.

ತೈಲ ನಿರ್ಬಂಧಗಳ ಸಡಿಲಿಕೆ ಮತ್ತು ಇರಾನ್ ಹಠ

ಇದೇ ವೇಳೆ, ಮಾತುಕತೆಯ ಅವಧಿಯಲ್ಲಿ ಅಮೆರಿಕವು ತನ್ನ ಮೇಲಿನ ಕೆಲವು ಆರ್ಥಿಕ ನಿರ್ಬಂಧಗಳನ್ನು ಸಡಿಲಗೊಳಿಸಲು ಸಿದ್ಧವಿದೆ ಎಂದು ಇರಾನ್‌ನ ಸರ್ಕಾರಿ ಸ್ವಾಮ್ಯದ ಮಾಧ್ಯಮಗಳು ಬಿಂಬಿಸುತ್ತಿವೆ. ಇರಾನ್‌ನ ಸಂಧಾನಕಾರರ ತಂಡಕ್ಕೆ ಆಪ್ತವಾಗಿರುವ ಮೂಲವೊಂದು 'ತಸ್ನೀಮ್' (Tasnim) ಸುದ್ದಿ ಸಂಸ್ಥೆಗೆ ನೀಡಿರುವ ಮಾಹಿತಿ ಪ್ರಕಾರ, ಈ ಹಿಂದಿನಕ್ಕಿಂತ ಭಿನ್ನವಾಗಿ ಅಮೆರಿಕವು ಮಾತುಕತೆ ನಡೆಯುವ ಅವಧಿಯಲ್ಲಿ ಇರಾನ್ ಮೇಲಿನ ತೈಲ ರಫ್ತು ನಿರ್ಬಂಧಗಳನ್ನು (Oil Sanctions) ತಾತ್ಕಾಲಿಕವಾಗಿ ಹಿಂಪಡೆಯಲು ಒಪ್ಪಿಕೊಂಡಿದೆ ಎನ್ನಲಾಗಿದೆ.

ಆದರೆ, ತನ್ನ ಮೇಲಿನ ಎಲ್ಲಾ ಅಂತಾರಾಷ್ಟ್ರೀಯ ನಿರ್ಬಂಧಗಳನ್ನು ಸಂಪೂರ್ಣವಾಗಿ ಮತ್ತು ಕಾಯಂ ಆಗಿ ತೆಗೆದುಹಾಕುವುದು ಅಮೆರಿಕದ ಜವಾಬ್ದಾರಿ ಎಂದು ಇರಾನ್ ಹಠ ಹಿಡಿದಿದೆ. ಇದಕ್ಕೆ ವಿರುದ್ಧವಾಗಿ ಅಮೆರಿಕವು, ಅಂತಿಮ ಒಪ್ಪಂದವಾಗುವವರೆಗೆ ಕೇವಲ 'ಒಫಾಕ್' (OFAC - ಓಫೀಸ್ ಆಫ್ ಫಾರಿನ್ ಅಸೆಟ್ಸ್ ಕಂಟ್ರೋಲ್) ನಿರ್ಬಂಧಗಳನ್ನು ಮಾತ್ರ ತಾತ್ಕಾಲಿಕವಾಗಿ ಸಡಿಲಗೊಳಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ. ಯಾವುದೇ ಷರತ್ತುಗಳಿಲ್ಲದೆ ಇರಾನ್‌ಗೆ ಆರ್ಥಿಕ ವಿನಾಯಿತಿ ನೀಡಲು ಸಾಧ್ಯವೇ ಇಲ್ಲ ಎಂದು ಅಮೆರಿಕ ಸ್ಪಷ್ಟಪಡಿಸಿದೆ.

ಮಧ್ಯಪ್ರಾಚ್ಯದ ಈ ಅತ್ಯಂತ ಹದಗೆಡುತ್ತಿರುವ ಪರಿಸ್ಥಿತಿಯನ್ನು ಪರಾಮರ್ಶಿಸಲು ಮತ್ತು ಇರಾನ್ ವಿರುದ್ಧ ಕೈಗೊಳ್ಳಬೇಕಾದ ಸಂಭಾವ್ಯ ಮಿಲಿಟರಿ (ಸೇನಾ) ದಾಳಿಯ ಆಯ್ಕೆಗಳ ಬಗ್ಗೆ ಚರ್ಚಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಮುಂಬರುವ ಮಂಗಳವಾರ ಶ್ವೇತಭವನದ ಅತ್ಯಂತ ರಹಸ್ಯ 'ಸಿಚುಯೇಷನ್ ರೂಮ್'ನಲ್ಲಿ (Situation Room) ಉನ್ನತ ಮಟ್ಟದ ರಾಷ್ಟ್ರೀಯ ಭದ್ರತಾ ಮಂಡಳಿಯ ತುರ್ತು ಸಭೆಯನ್ನು ಕರೆದಿದ್ದಾರೆ.

ಅಕ್ಸಿಯೋಸ್ ಸಂಸ್ಥೆಯೊಂದಿಗೆ ಭಾನುವಾರ ಫೋನ್‌ನಲ್ಲಿ ಮಾತನಾಡಿದ್ದ ಟ್ರಂಪ್, "ಸಮಯ ವೇಗವಾಗಿ ಓಡುತ್ತಿದೆ (The clock is ticking). ಇರಾನ್ ಈಗಲೂ ಮೃದು ಧೋರಣೆ ತಳೆಯದಿದ್ದರೆ, ಅವರು ಹಿಂದೆಂದೂ ಊಹಿಸದ ಭೀಕರ ಹೊಡೆತವನ್ನು (Hit much harder) ಎದುರಿಸಬೇಕಾಗುತ್ತದೆ" ಎಂದು ಮುನಿಸು ಹೊರಹಾಕಿದ್ದಾರೆ.

'ಒಪ್ಪದಿದ್ದರೆ ಬಾಂಬ್‌ಗಳ ಮೂಲಕವೇ ಮಾತುಕತೆ!'

ಅಮೆರಿಕದ ಮತ್ತೊಬ್ಬ ಉನ್ನತ ಅಧಿಕಾರಿ ಇರಾನ್‌ನ ಹಠಮಾರಿ ಧೋರಣೆಯ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದು, "ಇರಾನ್ ಈಗಲಾದರೂ ನಮಗೆ ಸ್ವಲ್ಪ ಸಿಹಿ ಸುದ್ದಿ ನೀಡಬೇಕು (Throw bit of candy out). ಪರಮಾಣು ಕಾರ್ಯಕ್ರಮದ ಬಗ್ಗೆ ನಮಗೆ ಅತ್ಯಂತ ಗಂಭೀರ ಹಾಗೂ ಸ್ಪಷ್ಟವಾದ ಮಾತುಕತೆಯ ಅಗತ್ಯವಿದೆ. ಒಂದು ವೇಳೆ ಇರಾನ್ ಅದಕ್ಕೆ ಸಿದ್ಧವಿಲ್ಲದಿದ್ದರೆ, ಮುಂದಿನ ದಿನಗಳಲ್ಲಿ ನಾವು ಅವರೊಂದಿಗೆ ಬಾಂಬ್‌ಗಳ ಮೂಲಕವೇ ಮಾತುಕತೆ (Conversation through bombs) ನಡೆಸಬೇಕಾಗುತ್ತದೆ. ಹಾಗಾಗುವುದು ದುರದೃಷ್ಟಕರ" ಎಂದು ನೇರ ಯುದ್ಧದ ವಾರ್ನಿಂಗ್ ನೀಡಿದ್ದಾರೆ.

ಅಮೆರಿಕದ ಅಧಿಕಾರಿಗಳ ಪ್ರಕಾರ, ಇರಾನ್ ಜಾಗತಿಕವಾಗಿ ಎಷ್ಟೇ ಬಿಗುಮಾನ ಪ್ರದರ್ಶಿಸುತ್ತಿದ್ದರೂ, ಸತತವಾಗಿ ಹೊಸ ಪ್ರಸ್ತಾಪಗಳನ್ನು ಕಳುಹಿಸುತ್ತಿರುವುದನ್ನು ನೋಡಿದರೆ ಅಮೆರಿಕದ ಮಿಲಿಟರಿ ದಾಳಿಗೆ ಇರಾನ್ ಒಳಗೊಳಗೇ ತೀವ್ರವಾಗಿ ಹೆದರಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ.