ಇರಾನ್‌-ಅಮೆರಿಕ ಸಂಘರ್ಷದಲ್ಲಿ ಮಧ್ಯಸ್ಥಿಕೆ ವಹಿಸುವ ನಾಟಕವಾಡಿದ ಪಾಕಿಸ್ತಾನ, ಇರಾನ್‌ನ ಯುದ್ಧವಿಮಾನಗಳಿಗೆ ತನ್ನ ವಾಯುನೆಲೆಯಲ್ಲಿ ಆಶ್ರಯ ನೀಡಿದೆ. ಉಪಗ್ರಹ ಚಿತ್ರಗಳಿಂದ ಈ ಡಬಲ್ ಗೇಮ್ ಬಯಲಾಗಿದ್ದು, ನೂರ್ ಖಾನ್ ವಾಯುನೆಲೆಯಲ್ಲಿ ಇರಾನ್‌ನ ಗುಪ್ತಚರ ವಿಮಾನ ಪತ್ತೆಯಾಗಿದೆ.

ಉಪಗ್ರಹ ಚಿತ್ರದಿಂದ ಡಬಲ್‌ಗೇಂ ಬಯಲು । ನೂರ್‌ ಖಾನ್‌ನಲ್ಲಿ ಗುಪ್ತಚರ ವಿಮಾನ

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ನವದೆಹಲಿ (ಮೇ.14): ಇರಾನ್‌-ಅಮೆರಿಕ ನಡುವಿನ ಸಂಘರ್ಷ ಶಮನಕ್ಕೆ ಮಧ್ಯಸ್ಥಿಕೆ ವಹಿಸಿರುವ ಪಾಕಿಸ್ತಾನ, ತೆರೆಮರೆಯಲ್ಲಿ ಇರಾನ್‌ ಪರವಾಗಿ ಕೆಲಸ ಮಾಡುತ್ತಿರುವುದು ಬಯಲಾಗಿದೆ. ಯುದ್ಧ ನಡೆಯುತ್ತಿದ್ದ ಸಮಯದಲ್ಲಿ ಅಮೆರಿಕ ದಾಳಿಯಿಂದ ಇರಾನ್‌ನ ಯುದ್ಧವಿಮಾನಗಳಿಗೆ ರಕ್ಷಣೆ ನೀಡುವ ಸಲುವಾಗಿ ಅವುಗಳಿಗೆ ಆಶ್ರಯ ನೀಡಿರುವ ಬಗ್ಗೆ ಅಮೆರಿಕದ ಮಾಧ್ಯಮವೊಂದು ವರದಿ ಮಾಡಿದೆ. ಇದು ಉಪಗ್ರಹ ಚಿತ್ರಗಳಿಂದಲೂ ದೃಢಪಟ್ಟಿದೆ.

ಈ ಬಗ್ಗೆ ಅಮೆರಿಕದ ಅಧಿಕಾರಿಯೊಬ್ಬರು ಮಾತನಾಡಿದ್ದು, ‘ಏಪ್ರಿಲ್‌ನಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ ಕದನವಿರಾಮ ಘೋಷಿಸಿದಾಗ ಇರಾನ್‌ನಿಂದ ಹಲವು ಯುದ್ಧವಿಮಾನಗಳು ಪಾಕ್‌ನ ನೂರ್‌ ಖಾನ್‌ ವಾಯುನೆಲೆಗೆ ಬಂದಿದ್ದವು. ಅದರಲ್ಲಿ ಆರ್‌ಸಿ-130 ಕೂಡ ಇದ್ದವು’ ಎಂದಿದ್ದಾರೆ. ಸ್ಥಳಾನ್ವೇಷಣೆ ಮತ್ತು ಗುಪ್ತಚರ ಮಾಹಿತಿ ಸಂಗ್ರಹಣಾ ವಿಮಾನವಾಗಿರುವ ಇದು ಏ.11ಕ್ಕೆ ಪಾಕ್‌ಗೆ ಬಂದಿದ್ದು, ತಿಂಗಳಾದರೂ ಅಲ್ಲಿಂದ ಕದಲಿಲ್ಲ.

ಒಪ್ಪಿಕೊಂಡ ಪಾಕ್‌:

ಇರಾನ್‌ ಜೆಟ್‌ಗಳಿಗೆ ರಕ್ಷಣೆ ಕೊಡುತ್ತಿರುವ ಬಗ್ಗೆ ಪಾಕ್‌ ಬಹಿರಂಗವಾಗಿ ಒಪ್ಪಿಕೊಳ್ಳದಿದ್ದರೂ, ‘ಇಸ್ಲಾಮಾಬಾದ್‌ನಲ್ಲಿ ನಡೆದ ಮಾತುಕತೆಗಾಗಿ ಇರಾನ್‌ ಮತ್ತು ಅಮೆರಿಕದ ಅಧಿಕಾರಿಗಳು, ಭದ್ರತಾಪಡೆಗಳು ಬಂದಿದ್ದವು. ಅದರಲ್ಲಿ ಕೆಲವು ಇಲ್ಲೇ ಉಳಿದುಕೊಂಡಿವೆ’ ಎಂದು ಹೇಳಿದೆ.