ತಾಂತ್ರಿಕ ದೋಷದಿಂದಾಗಿ ಅಮೆರಿಕದಾದ್ಯಂತ 11 ಸಾವಿರಕ್ಕೂ ಹೆಚ್ಚು ವಿಮಾನಗಳ ಹಾರಾಟವನ್ನು ಏಕಾಏಕಿ ಸ್ಥಗಿತಗೊಳಿಸಲಾಯಿತು. 9/11 ಉಗ್ರ ದಾಳಿಯ ನಂತರ ಇದೇ ಮೊದಲ ಬಾರಿಗೆ ಇಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, 15 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಪರದಾಡುವಂತಾಯಿತು.

ನ್ಯೂಯಾರ್ಕ್​: ಇಂದು ತಾಂತ್ರಿಕ ದೋಷದಿಂದಾಗಿ ಅಮೆರಿಕದ 11 ಸಾವಿರಕ್ಕೂ ಅಧಿಕ ವಿಮಾನಗಳು ಏಕಾಏಕಿ ಸ್ಥಗಿತಗೊಂಡು ಬೇರೆ ಬೇರೆ ದೇಶಗಳಿಗೆ ಹೋಗುವ ಜನರ ಸ್ಥಿತಿ ಅಲ್ಲೋಲ ಕಲ್ಲೋಲವಾಗಿರುವ ಘಟನೆ ನಡೆದಿದೆ. ಅಮೆರಿಕದಲ್ಲಿ ಹೀಗೆ ದೇಶಾದ್ಯಂತ ವಿಮಾನಗಳ ನಿರ್ಗಮನವನ್ನು ತಡೆಹಿಡಿದಿರುವುದು 25 ವರ್ಷಗಳ ಬಳಿಕ ಇದೇ ಮೊದಲಾಗಿದೆ. ಇದಕ್ಕೂ ಮೊದಲು ಅಮೆರಿಕದಲ್ಲಿ ಅತ್ಯಂತ ಭಯಾನಕತೆ ಸೃಷ್ಟಿಸಿದ್ದ ನವೆಂಬರ್​ 11ರ ಅಂದರೆ ನ್ಯೂಯಾರ್ಕ್‌ನ ಅವಳಿ ಕಟ್ಟಡದ ಮೇಲೆ ನಡೆದ 9/11 ಉಗ್ರ ದಾಳಿಯ ಸಮಯದಲ್ಲಿ ಮಾತ್ರ ಹೀಗೆ ದೇಶಾದ್ಯಂತ ವಿಮಾನಗಳ ಹಾರಾಟಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಸದ್ಯ ಇದೀಗ ಬಂದಿರುವ ಆದೇಶದಿಂದ ಹಲವರಲ್ಲಿ ಉಗ್ರದಾಳಿಯ ಕರಾಳ ನೆನಪು ಮತ್ತೆ ಮೆಲುಕುಹಾಕುವಂತೆ ಮಾಡಿದೆ. ಜೊತೆಗೆ ಇದು ಸೈಬರ್‌ ಆಟ್ಯಾಕ್‌ ಆಗಿರಬಹುದಾ ಎಂಬ ಅನುಮಾನಕ್ಕೆ ಕಾರಣವಾಗಿದೆ.

ನ್ಯೂಯಾರ್ಕ್, ಶಿಕಾಗೋ, ಲಾಸ್ ಏಂಜಲೀಸ್‌, ಅಟ್ಲಾಂಟಾದಂತಹ ಪ್ರಮುಖ ಏರ್‌ಪೋರ್ಟ್‌ಗಳಲ್ಲಿ ತಕ್ಷಣಕ್ಕೆ ಜಾರಿಗೆ ಬಂದಿದ್ದು,ಇದರಿಂದ ಸಾವಿರಾರು ಪ್ರಯಾಣಿಕರು ಟರ್ಮಿನಲ್ ಲಾಂಜ್‌ಗಳು ಸೇರಿದಂತೆ ವಿಮಾನ ನಿಲ್ದಾಣದ ಟಾರ್ಮ್ಯಾಕ್‌ಗಳಲ್ಲೇ ಕಾಯುವ ಪರಿಸ್ಥಿತಿ ಎದುರಾಗಿದ್ದು, ಹಲವು ಗಂಟೆಗಳ ಬಳಿಕ ಪ್ರಯಾಣಕ್ಕೆ ಅನುವು ಮಾಡಿಕೊಡಲಾಗಿದೆ. ಇದರಿಂದ ಅಂದಾಜು 15 ಲಕ್ಷ ಪ್ರಯಾಣಿಕರು ತೊಂದರೆಗೊಳಗಾಗಿದ್ದಾರೆ ಎಂದು ವಿಮಾನಯಾನ ಡಾಟಾ ಸಂಸ್ಥೆ Cirium ತಿಳಿಸಿದೆ. ಈ ಘಟನೆಯು ಅಮೆರಿಕದ ವಿಮಾನಯಾನ ಮೂಲಸೌಕರ್ಯ ವ್ಯವಸ್ಥೆಯ ಸುರಕ್ಷತೆ ಮತ್ತು ವಿಶ್ವಾಸಾರ್ಹತೆಯ ಬಗ್ಗೆಯೂ ಆತಂಕ ಮೂಡಿಸಿದೆ. ಆರಂಭದಲ್ಲಿ ವಿಮಾನ ಸಂಚಾರವನ್ನು ಸಹಜ ಸ್ಥಿತಿಗೆ ತರಲು ಎಷ್ಟು ಸಮಯ ಬೇಕಾಗಬಹುದು ಎಂಬುದರ ಕುರಿತು ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ಲಭ್ಯವಾಗಿರಲಿಲ್ಲ ಎಂದು ಹೇಳಲಾಗಿದೆ.

ಸೈಬರ್ ದಾಳಿಯ ಸಾಧ್ಯತೆಯನ್ನು ತಳ್ಳಿಹಾಕಿದ ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಮುಖ್ಯಸ್ಥ ಮಾರ್ಕ್‌ವೇನ್ ಮುಲ್ಲಿನ್, ಅಧಿಕಾರಿಗಳು ಘಟನೆಯ ಬಗ್ಗೆ ಇನ್ನೂ ತನಿಖೆ ನಡೆಸುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದರು. "ಇದು ನಮ್ಮ ವಿರುದ್ಧದ ದುಷ್ಕೃತ್ಯದ ದಾಳಿ ಎಂಬುದಕ್ಕೆ ಇದುವರೆಗೆ ಯಾವುದೇ ಸೂಚನೆಯಿಲ್ಲ. ಇದು ಕೇವಲ ದೂರಸಂಪರ್ಕ ಕಡಿತವಾಗಿದೆ" ಎಂದು ಮುಲ್ಲಿನ್ ಹೇಳಿದರು.

ತಾಂತ್ರಿಕ ದೋಷ ಕಾರಣ

ಅಮೆರಿಕದ ಎಲ್ಲಾ ಏರ್ ರೂಟ್ ಟ್ರಾಫಿಕ್ ಕಂಟ್ರೋಲ್ ಸೆಂಟರ್‌ಗಳ (ARTCC) ಸಂವಹನ ವ್ಯವಸ್ಥೆಯಲ್ಲಿ ಏಕಾಏಕಿ ತಾಂತ್ರಿಕ ದೋಷ ಕಾಣಿಸಿಕೊಂಡಿತು. ಈ ಹಿನ್ನೆಲೆ FAA ವಿಮಾನಗಳ ನಿರ್ಗಮನವನ್ನ ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರ ಕೈಗೊಂಡಿತ್ತು. ನೆಟ್‌ವರ್ಕ್ ರೌಟರ್‌ಗಳಿಗೆ ಸಂಬಂಧಿಸಿದ ಸಮಸ್ಯೆಯಿಂದ ಈ ವ್ಯತ್ಯಯ ಉಂಟಾಗಿದ್ದು, ಅದು ಹಂತ ಹಂತವಾಗಿ ದೇಶದಾದ್ಯಂತದ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಗೆ ಹರಡಿದೆ ಎಂದು ವಿಮಾನಯಾನ ಸಂಸ್ಥೆಯ ಮೂಲಗಳು ತಿಳಿಸಿವೆ. ವಾಯು ಸಂಚಾರ ಸುರಕ್ಷತೆಯ ಮೇಲೆ ಪರಿಣಾಮ ಬೀರುವ ಅಸಾಧಾರಣ ಸಂದರ್ಭಗಳು ಎದುರಾಗಿರುವ ಹಿನ್ನಲೆಯಲ್ಲಿ ಸುರಕ್ಷಿತ ದೃಷ್ಟಿಯಿಂದ ಅಮೆರಿಕಾದಾದ್ಯಂತ ವಿಮಾನಗಳ ನಿರ್ಗಮನವನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು FAA ಆದೇಶಿಸಿತು. ಇದು ಇಡೀ ಅಮೆರಿಕನ್‌ ಏವಿಯೇಶನ್‌ ವ್ಯವಸ್ಥೆಯನ್ನೇ ಅಸ್ತವ್ಯಸ್ತ ಮಾಡಿದ್ದು, ವಿಮಾನ ಹಾರಾಟಕ್ಕಾಗಿ ಏರ್‌ಪೋರ್ಟ್‌ಗಳಿಗೆ ಬಂದಿದ್ದ ಸಾವಿರಾರು ಪ್ರಯಾಣಿಕರು ವಿಮಾನಗಳ ರದ್ದಾಗಿರುವ ಸುದ್ದಿ ಕೇಳಿ ಆಘಾತಕ್ಕೊಳಗಾದರು.