ಇಸ್ರೇಲ್‌-ಇರಾನ್‌ ಸಮರಕ್ಕೆ ಅಮೆರಿಕ ಪ್ರವೇಶ ಬಹುತೇಕ ನಿಚ್ಚಳವಾಗಿದ್ದು, ವಾರಾಂತ್ಯದಲ್ಲಿ ಇರಾನ್‌ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ಸಾಧ್ಯತೆ ದಟ್ಟವಾಗಿದೆ ಎಂದು ಬ್ಲೂಂಬರ್ಗ್‌ ವರದಿ ಮಾಡಿದೆ.

ವಾಷಿಂಗ್ಟನ್‌: ಇಸ್ರೇಲ್‌-ಇರಾನ್‌ ಸಮರಕ್ಕೆ ಅಮೆರಿಕ ಪ್ರವೇಶ ಬಹುತೇಕ ನಿಚ್ಚಳವಾಗಿದ್ದು, ವಾರಾಂತ್ಯದಲ್ಲಿ ಇರಾನ್‌ ಮೂಲಸೌಕರ್ಯಗಳನ್ನು ಗುರಿಯಾಗಿಸಿ ದಾಳಿ ಸಾಧ್ಯತೆ ದಟ್ಟವಾಗಿದೆ ಎಂದು ಬ್ಲೂಂಬರ್ಗ್‌ ವರದಿ ಮಾಡಿದೆ.

ಇರಾನ್‌ ಯಾವುದೇ ಕಾರಣಕ್ಕೂ ಅಣ್ವಸ್ತ್ರ ಹೊಂದಬಾರದು. ಈ ಕುರಿತ ಒಪ್ಪಂದಕ್ಕೆ ಅದು ಸಹಿ ಹಾಕಬೇಕು. ಅವರು ಬೇಷರತ್‌ ಶರಣಾಗಬೇಕು. ಖಮೇನಿ ಎಲ್ಲಿದ್ದಾರೋ ನಮಗೆ ಗೊತ್ತಿದೆ. ಆದರೆ ಅವರನ್ನು ಸದ್ಯಕ್ಕೆ ಅವರನ್ನು ಏನೂ ಮಾಡಲ್ಲ. ಮುಂದಿನ ವಾರದ ಹೊತ್ತಿಗೆ ನಾನೇನು ಮಾಡುತ್ತೇನೋ ನನಗೂ ಗೊತ್ತಿಲ್ಲ ಎಂಬ ಟ್ರಂಪ್‌ ಎಚ್ಚರಿಕೆ ಬೆನ್ನಲ್ಲೇ ಅಮೆರಿಕ ಯುದ್ಧಕ್ಕೆ ಸಜ್ಜಾಗುತ್ತಿರುವ ಸುದ್ದಿ ಹೊರಬಿದ್ದಿದೆ. ದಾಳಿ ಯೋಜನೆಗಳಿಗೆ ಈಗಾಗಲೇ ಅನುಮೋದನೆ ನೀಡಿದ್ದಾರೆ. ಆದರೆ ಅಂತಿಮ ನಿರ್ಧಾರ ತೆಗೆದುಕೊಂಡಿಲ್ಲ ಎಂದೂ ಸಹ ವರದಿಯಾಗುತ್ತಿದೆ.

ಇದಕ್ಕೆ ಇನ್ನಷ್ಟು ಪುಷ್ಟಿ ಕೊಡುವಂತೆ, ಅಮೆರಿಕದ ಹಾರುವ ಪೆಂಟಗನ್‌ ಖ್ಯಾತಿಯ ವಿಮಾನ ಪ್ರತ್ಯಕ್ಷವಾಗಿದೆ. ಜತೆಗೆ, ಇರಾನ್‌ ಗುರಿಯಾಗಿಸಿ ಸೇನಾ ಜಮಾವಣೆಯನ್ನೂ ಆರಂಭಿಸಿರುವುದು ಕಂಡುಬಂದಿದೆ.

ಅಮೆರಿಕ ಜೊತೆ ಯುದ್ಧಕ್ಕೆ ರಷ್ಯಾ ಎಂಟ್ರಿ?

ಮಾಸ್ಕೋ: ಇಸ್ರೇಲ್‌- ಇರಾನ್‌ ಸಮರಕ್ಕೆ ಅಮೆರಿಕ ಪ್ರವೇಶ ಖಚಿತವಾದ ಬೆನ್ನಲ್ಲೇ ವಿಶ್ವದ ಮತ್ತೊಂದು ಪ್ರಬಲ ದೇಶವಾದ ರಷ್ಯಾ ಕೂಡಾ ಪ್ರವೇಶ ಮಾಡಿದೆ. ಇದು ಉಭಯ ದೇಶಗಳ ನಡುವೆ ಮತ್ತೊಂದು ಸುತ್ತಿನ ಶೀತಲ ಸಮರಕ್ಕೆ ನಾಂದಿ ಹಾಡುವ ಆತಂಕಕ್ಕೆ ಕಾರಣವಾಗಿದೆ.ಇಸ್ರೇಲ್‌ ಪರ ಯುದ್ಧಕ್ಕೆ ನೇರವಾಗಿ ಧುಮುಕದಂತೆ ಅಮೆರಿಕಕ್ಕೆ ಎಚ್ಚರಿಸಿರುವ ರಷ್ಯಾದ ವಿದೇಶಾಂಗ ಇಲಾಖೆಯ ವಕ್ತಾರೆ ಮಾರಿಯಾ ಜಖರೋವಾ, ‘ಈ ಪರಿಸ್ಥಿತಿಯಲ್ಲಿ ಸೇನಾ ಹಸ್ತಕ್ಷೇಪ ಮಾಡದಂತೆ ನಾವು ವಾಷಿಂಗ್ಟನ್‌ಗೆ ಎಚ್ಚರಿಸುತ್ತಿದ್ದೇವೆ. 

ಒಂದೊಮ್ಮೆ ಈ ಅಪಾಯಕಾರಿ ಹೆಜ್ಜೆ ಇಟ್ಟರೆ, ಅನಿರೀಕ್ಷಿತ ಕೆಟ್ಟ ಪರಿಣಾಮಗಳನ್ನು ಎದುರಿಸುವುದು ಖಂಡಿತ’ ಎಂದು ಹೇಳಿದ್ದಾರೆ. ಯುದ್ಧಪ್ರವೇಶದ ಬಗ್ಗೆ ಮಾತಾಡುತ್ತಾ, ‘ನಾನು ಏನು ಮಾಡುತ್ತೇನೋ ಯಾರಿಗೂ ಗೊತ್ತಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.

ಈಗಾಗಲೇ ಅಮೆರಿಕ ಇಸ್ರೇಲ್‌ ಪರ ಕದನಕ್ಕಿಳಿಯುವ ಸೂಚನೆಗಳನ್ನು ನೀಡುತ್ತಿದೆ. ಇದಕ್ಕೆ ಪ್ರತಿಯಾನ್‌ ಇರಾನ್‌ ಬೆನ್ನಿಗೆ ರಷ್ಯಾ ಕೂಡ ನಿಂತರೆ, ಶೀತಲ ಸಮರ ಉತ್ತುಂಗಕ್ಕೆ ತಲುಪಿ, ಇಡೀ ವಿಶ್ವವನ್ನೇ ಅಸ್ಥಿರಗೊಳಿಸುವುದರಲ್ಲಿ ಸಂದೇಹವಿಲ್ಲ.