ಅಮೆರಿಕ ಮತ್ತು ಇರಾನ್ ನಡುವಿನ ಭೀಕರ ಸಮರಕ್ಕೆ ಅಧಿಕೃತವಾಗಿ ಅಂತ್ಯ ಹಾಡಲಾಗಿದೆ. ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಉಭಯ ರಾಷ್ಟ್ರಗಳ ಅಧ್ಯಕ್ಷರು ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ್ದು, ಯುದ್ಧ ನಿಲುಗಡೆ, ಅಣ್ವಸ್ತ್ರ ಮಾತುಕತೆ ಪುನರಾರಂಭ ಮತ್ತು ನಿರ್ಬಂಧಗಳ ಸಡಿಲಿಕೆ ಇದರ ಪ್ರಮುಖ ಅಂಶಗಳಾಗಿವೆ.
ವಾಷಿಂಗ್ಟನ್/ಟೆಹ್ರಾನ್/ಇಸ್ಲಾಮಾಬಾದ್ (ಜೂ.19): ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಒಪ್ಪಂದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಬೇರೆ ಬೇರೆ ದೇಶಗಳಲ್ಲಿ ಕುಳಿತು ಬುಧವಾರ ಸಹಿ ಹಾಕಿದ್ದಾರೆ. ಮಧ್ಯಸ್ಥಿಕೆ ವಹಿಸಿದ್ದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಕೂಡ ಮಧ್ಯವರ್ತಿಯ ಸಹಿ ಹಾಕಿದ್ದಾರೆ. ಈ ಮೂಲಕ ಕಳೆದ ಮೂರುವರೆ ತಿಂಗಳಿನಿಂದ ನಡೆಯುತ್ತಿದ್ದ ಭೀಕರ ಸಮರಕ್ಕೆ ಅಧಿಕೃತವಾಗಿ ಅಂತ್ಯ ಹಾಡಿದ್ದಾರೆ.
ಜಿ7 ಶೃಂಗಸಭೆಗಾಗಿ ಫ್ರಾನ್ಸ್‌ಗೆ ತೆರಳಿರುವ ಟ್ರಂಪ್, ಅಲ್ಲಿನ ಐತಿಹಾಸಿಕ ಪ್ಯಾಲೇಸ್ ಆಫ್ ವರ್ಸೇಲ್ಸ್‌ನಲ್ಲಿ ಕುಳಿತು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯಲ್ ಮ್ಯಾಕ್ರಾನ್ ಸಮ್ಮುಖದಲ್ಲಿ ಒಪ್ಪಂದ ಪತ್ರಕ್ಕೆ ಸಹಿ ಹಾಕಿದರು. ಈ ವೇಳೆ ಅಮೆರಿಕ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಕೂಡ ಉಪಸ್ಥಿತರಿದ್ದರು. ಇತ್ತ ಇರಾನ್ ಪರವಾಗಿ ಅದರ ಅಧ್ಯಕ್ಷ ಪೆಜೆಶ್ಕಿಯಾನ್ ಒಪ್ಪಂದಕ್ಕೆ ಸಹಿ ಹಾಕಿದ್ದಾಗಿ ಅಲ್ಲಿನ ಸರ್ಕಾರಿ ಮಾಧ್ಯಮ ವರದಿ ಮಾಡಿದೆ. ಈ ಮೂಲಕ ಅಂತಿಮ ಒಪ್ಪಂದವನ್ನು ಜಾರಿಗೊಳಿಸಲು ಎರಡೂ ದೇಶಗಳ ನಡುವೆ 60 ದಿನಗಳ ಮಾತುಕತೆ ಪ್ರಾರಂಭವಾಗಲಿದೆ.
ಸ್ವಿಜರ್ಲೆಂಡ್ ಸಹಿ ಸಮಾರಂಭ ಅನಿಶ್ಚಿತ
ಶುಕ್ರವಾರ ಸ್ವಿಜರ್ಲೆಂಡ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ಸಮಾರಂಭವನ್ನು ಈ ಮೊದಲು ಯೋಜಿಸಲಾಗಿತ್ತು. ಆದರೆ ಅಮೆರಿಕ, ಇರಾನ್ ಮತ್ತು ಪಾಕಿಸ್ತಾನದಿಂದ ಬಂದಿರುವ ಮಾಹಿತಿ ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಹಾಗಾಗಿ ಅಲ್ಲಿ ನಡೆಯುವ ಕಾರ್ಯಕ್ರಮವು ಅನಿಶ್ಚಿತವಾಗಿದೆ.
ಒಪ್ಪಂದದ ಅಂಶಗಳೇನು?
ಯುದ್ಧವನ್ನು ಕೊನೆಗೊಳಿಸುವುದು, ಇರಾನ್‌ನ ಅಣ್ವಸ್ತ್ರ ತಯಾರಿ ಬಗ್ಗೆ ಅಮೆರಿಕ ಮತ್ತು ಇರಾನ್ ನಡುವಿನ ಮಾತುಕತೆಗಳನ್ನು ಪುನರಾರಂಭಿಸುವುದು, ಹೋರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವುದು, ಇರಾನ್ ತನ್ನ ಸಂಸ್ಕರಿತ ಯುರೇನಿಯಂ ಪ್ರಮಾಣವನ್ನು ಕಡಿಮೆ ಮಾಡುವುದು, ಅಮೆರಿಕವು ನಿರ್ಬಂಧಗಳನ್ನು ಕೈಬಿಟ್ಟು, ಇರಾನ್‌ನ ತೈಲ ಮಾರಾಟಕ್ಕೆ ಮುಕ್ತ ಅವಕಾಶ ಕಲ್ಪಿಸುವುದು ಒಪ್ಪಂದದ ಪ್ರಮುಖ ಅಂಶಗಳಾಗಿದೆ.
2 ತಿಂಗಳ ಕಾಲ ಸುಂಕವಿಲ್ಲದೆ ಹೋರ್ಮುಜ್ ಅನ್ನು ಮುಕ್ತ ಮಾಡಬೇಕು, ಆದರೆ ಭವಿಷ್ಯದಲ್ಲಿ ಶುಲ್ಕವನ್ನು ವಿಧಿಸಬಹುದು. ಇದಕ್ಕೆ ಪ್ರತಿಯಾಗಿ, ಅಮೆರಿಕವು ಇರಾನ್ ವಿರುದ್ಧದ ಕೆಲವು ನಿರ್ಬಂಧಗಳನ್ನು ಪೂರ್ತಿ ರದ್ದುಗೊಳಿಸುವ ಬದಲು ವಿನಾಯಿತಿ ನೀಡುತ್ತದೆ. ಹಿಜ್ಬುಲ್ಲಾ ಉಗ್ರರ ವಿರುದ್ಧ ಇಸ್ರೇಲ್ ಆಕ್ರಮಣದ ಸಂದರ್ಭದಲ್ಲಿ ಲೆಬನಾನ್‌ನ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕು ಎಂದು ಎರಡೂ ದೇಶಗಳು ಬಿಡುಗಡೆ ಮಾಡಿದ ವಿವರಗಳು ತಿಳಿಸಿವೆ. ಇರಾನ್‌ನ ಆರ್ಥಿಕತೆ ಪುನರ್ನಿರ್ಮಾಣಕ್ಕೆ 28 ಲಕ್ಷ ಕೋಟಿ ರು. ಒದಗಿಸುವ ಬಗ್ಗೆ ಕೂಡ ಉಲ್ಲೇಖವಿದೆ.
‘ಇಸ್ಲಾಮಾಬಾದ್ ಒಪ್ಪಂದ’ ಎಂದ ಷರೀಫ್!
ಇಸ್ಲಾಮಾಬಾದ್: ಅಮೆರಿಕ-ಇರಾನ್ ನಡುವಿನ ಒಪ್ಪಂದಕ್ಕೆ ಮಧ್ಯವರ್ತಿ ಪಾಕಿಸ್ತಾನವು, ‘ಇಸ್ಲಾಮಾಬಾದ್ ತಿಳಿವಳಿಕೆ ಒಪ್ಪಂದ’ (ಇಸ್ಲಾಮಾಬಾದ್ ಎಂಒಯು) ಎಂದು ಹೆಸರಿಟ್ಟಿದೆ. ಇದಕ್ಕೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಗುರುವಾರ ಸಹಿ ಹಾಕಿದ್ದಾರೆ. ಆ ಬಳಿಕ ಟ್ವೀಟ್ ಮಾಡಿದ ಅವರು, ‘ಐತಿಹಾಸಿಕ ಇಸ್ಲಾಮಾಬಾದ್ ತಿಳಿವಳಿಕೆ ಒಪ್ಪಂದಕ್ಕೆ ಇಂದು ಅಮೆರಿಕ ಮತ್ತು ಇರಾನ್ ನಡುವೆ ವಿದ್ಯುನ್ಮಾನವಾಗಿ (ಎಲೆಕ್ಟ್ರಾನಿಕ್) ಸಹಿ ಹಾಕಲಾಗಿದೆ ಎಂದು ಘೋಷಿಸಲು ಗೌರವವೆನಿಸುತ್ತಿದೆ. ಈ ಒಪ್ಪಂದ ತಕ್ಷಣ ಜಾರಿಗೆ ಬರಲಿದೆ. ಇದಕ್ಕಾಗಿ ಅಧ್ಯಕ್ಷ ಟ್ರಂಪ್ ಹಾಗೂ ಇರಾನ್ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿಯವರಿಗೆ ಅಭಿನಂದನೆಗಳು’ ಎಂದು ತಿಳಿಸಿದ್ದಾರೆ. ಒಪ್ಪಂದದ ಹಲವು ಸುತ್ತಿನ ಮಾತುಕತೆಗಳು ಇಸ್ಲಾಮಾಬಾದ್‌ನಲ್ಲಿ ನಡೆದಿದ್ದವು.


