ಇರಾನ್ ಮತ್ತು ಅಮೆರಿಕ ನಡುವಿನ ದಾಳಿ-ಪ್ರತಿದಾಳಿ ಮುಂದುವರಿದಿದ್ದು, ಇರಾನ್‌ನ ಸೇನಾ ವ್ಯವಸ್ಥೆಗಳ ಮೇಲೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಇರಾನ್ ಕೂಡ ಪ್ರತಿ ದಾಳಿ ನಡೆಸಿದೆ. ವೆನಿಜುವೆಲಾ ರೀತಿ ಇರಾನ್‌ನ ಪ್ರಮುಖ ತೈಲ ನಿಕ್ಷೇಪ ವಶಪಡಿಸಿಕೊಳ್ಳುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.
2ನೇ ದಿನವೂ ದಾಳಿ-ಪ್ರತಿದಾಳಿ
ದುಬೈ: ಕದನ ವಿರಾಮದ ನಡುವೆಯೂ ಇರಾನ್ ಮತ್ತು ಅಮೆರಿಕ ನಡುವಿನ ದಾಳಿ-ಪ್ರತಿದಾಳಿ ಎರಡನೇ ದಿನವಾದ ಗುರುವಾರವೂ ಮುಂದುವರಿದಿದೆ. ಗುರುವಾರ ಇರಾನ್‌ನ ಸೇನಾ ಕಣ್ಗಾವಲು ವ್ಯವಸ್ಥೆ, ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಗುರಿಮಾಡಿಕೊಂಡು ಅಮೆರಿಕ ಮತ್ತೆ ದಾಳಿ ನಡೆಸಿದೆ. ಇದಕ್ಕೆ ಪ್ರತಿಯಾಗಿ ಕುವೈಟ್, ಬಹರೈನ್ ಮತ್ತು ಜೋರ್ಡನ್ ಮೇಲೆ ಭಾರೀ ಕ್ಷಿಪಣಿ, ಡ್ರೋನ್ ದಾಳಿಯನ್ನು ಇರಾನ್ ನಡೆಸಿದೆ
ಈಗಾಗಲೇ ಮೂರೂವರೆ ತಿಂಗಳು ಪೂರೈಸಿರುವ ಮಧ್ಯಪ್ರಾಚ್ಯ ಯುದ್ಧವನ್ನು ಮತ್ತಷ್ಟು ತೀವ್ರಗೊಳಿಸುವ ಸೂಚನೆ ನೀಡಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್ ಮೇಲೆ ಮತ್ತಷ್ಟು ಕಠೋರ ದಾಳಿ ನಡೆಸುವುದಾಗಿ ಹೇಳಿದ್ದಾರೆ. ಅಲ್ಲದೆ ಕೆಲ ತಿಂಗಳ ಹಿಂದೆ ವೆನಿಜುವೆಲಾದ ಮೇಲೆ ದಾಳಿ ಮಾಡಿ ಅಲ್ಲಿನ ತೈಲ ವಲಯವನ್ನು ಹಿಡಿತಕ್ಕೆ ಪಡೆದಂತೆ ಇರಾನ್‌ನ ಖಾರ್ಗ್ ದ್ವೀಪ ಸೇರಿದಂತೆ ಆಯಕಟ್ಟಿನ ತೈಲ ಮತ್ತು ಅನಿಲ ನಿಕ್ಷೇಪಗಳನ್ನು ವಶಕ್ಕೆ ಪಡೆಯುವ ಎಚ್ಚರಿಕೆ ನೀಡಿದ್ದಾರೆ.
ಒಪ್ಪಂದ ಮಾಡಿಕೊಳ್ಳದ ಇರಾನ್ ಈಗ ತಕ್ಕ ಬೆಲೆ ತೆರಲಿದೆ ಎಂದು ನಿಗೂಢ ಸಂದೇಶ ರವಾನಿಸಿದ ಮರುದಿನವೇ ಅವರಿಂದ ಈ ಸಂದೇಶ ಬಂದಿದೆ.
ಟ್ರುತ್ ಸೋಶಿಯಲ್‌ನಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಟ್ರಂಪ್, ‘ಗುರುವಾರ ರಾತ್ರಿ ಅಮೆರಿಕ ಇರಾನ್ ಮೇಲೆ ಕಠಿಣ ದಾಳಿ ಮಾಡಲಿದೆ. ಅದು ನೌಕಾಪಡೆ, ವಾಯುಪಡೆ, ರಾಡಾರ್ ಮತ್ತು ಇತರ ಎಲ್ಲಾ ರೀತಿಯ ರಕ್ಷಣಾ ವ್ಯವಸ್ಥೆಗಳ ಮೇಲೆ ನಡೆಯಲಿದೆ. ಅವೆಲ್ಲ ಕಣ್ಮರೆಯಾಗಲಿವೆ. ಇದು ಸದ್ಯದ ಭವಿಷ್ಯದಲ್ಲೇ ನಡೆಯಲಿದೆ. ನಾವು ಖಾರ್ಗ್ ದ್ವೀಪ ಮತ್ತು ಇತರ ತೈಲ ಮೂಲಸೌಕರ್ಯಗಳನ್ನು ವಶಪಡಿಸಿಕೊಳ್ಳುತ್ತೇವೆ. ವೆನಿಜುವೆಲಾ ಮತ್ತು ಅಮೆರಿಕ ಎರಡಕ್ಕೂ ಉಪಯುಕ್ತವಾಗುವ ರೀತಿಯಲ್ಲಿ ವೆನಿಜುವೆಲಾಕ್ಕೆ ಮಾಡಿದಂತೆಯೇ, ಇರಾನ್‌ನ ಎಲ್ಲ ತೈಲ ಮತ್ತು ಅನಿಲ ಮಾರುಕಟ್ಟೆಗಳ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುತ್ತೇವೆ’ ಎಂದು ಬರೆದುಕೊಂಡಿದ್ದಾರೆ.
ಖಾರ್ಗ್ ದ್ವೀಪವು ಇರಾನ್‌ನ ಪ್ರಮುಖ ತೈಲ ಮತ್ತು ಅನಿಲ ನಿಕ್ಷೇಪ ಮತ್ತು ಸಂಗ್ರಹಾಗಾರಗಳನ್ನು ಒಳಗೊಂಡಿದೆ. ಅದು ಅಮೆರಿಕದ ವಶವಾದರೆ ಇರಾನ್‌ನ ಆರ್ಥಿಕತೆ ಬಹುತೇಕ ಸ್ಥಗಿತಗೊಳ್ಳಲಿದೆ.
ವೆನಿಜುವೆಲಾ ಮೇಲೆ ದಾಳಿ ಹೇಗಿತ್ತು?:
2026ರ ಜ.3ರಂದು ರಾತ್ರಿ ವೆನಿಜುವೆಲಾದ ಮೇಲೆ ರಹಸ್ಯ ದಾಳಿ ನಡೆಸಿದ್ದ ಅಮೆರಿಕದ ಯೋಧರು, ವೆನಿಜುವೆಲಾದ ಅಧ್ಯಕ್ಷ ಮಡುರೋ, ಅವರ ಪತ್ನಿಯನ್ನು ಬಂಧಿಸಿ ಅಮೆರಿಕಕ್ಕೆ ಕರೆದೊಯ್ದಿದ್ದರು. ಜೊತೆಗೆ ಅಲ್ಲಿನ ತೈಲ ಸಂಪನ್ಮೂಲಗಳನ್ನು ಅಮೆರಿಕ ಪರೋಕ್ಷವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡಿತ್ತು.


