ಅಮೆರಿಕ ಮತ್ತು ಇರಾನ್ ನಡುವೆ ಸಂಧಾನಕ್ಕೆ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸಿಂ ಮುನೀರ್ ಮುಂದಾಗಿದ್ದಾರೆ. ಆದರೆ, ಮುನೀರ್‌ಗೆ ಇರಾನ್‌ನ ಅರೆಸೇನಾಪಡೆ ಐಆರ್‌ಜಿಸಿ ಜೊತೆ ನಂಟಿದ್ದು, ಆತ 'ರೆಡ್ ಫ್ಲ್ಯಾಗ್' ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಅಧ್ಯಕ್ಷ ಟ್ರಂಪ್‌ಗೆ ಎಚ್ಚರಿಕೆ ನೀಡಿದೆ. 

ವಾಷಿಂಗ್ಟನ್‌ (ಏ.20): ಇರಾನ್‌ ಜತೆಗೆ ಅಮೆರಿಕದ ಸಂಧಾನ ಮಾಡಿಸುತ್ತೇನೆಂಬ ಹುಮ್ಮಸ್ಸಿನಲ್ಲಿ ಪಾಕಿಸ್ತಾನದ ಸೇನಾ ಮುಖ್ಯಸ್ಥ ಜ। ಅಸಿಂ ಮುನೀರ್‌ ಕುಣಿಯುತ್ತಿರುವ ಹೊತ್ತಿನಲ್ಲಿ, ‘ಆತ ರೆಡ್‌ ಫ್ಲ್ಯಾಗ್‌(ಅಪಾಯ) ಹಾಗೂ ಹೊರೆ ಇದ್ದಂತೆ’ ಎಂದು ಅಮೆರಿಕದ ಗುಪ್ತಚರ ಸಂಸ್ಥೆ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ಗೆ ಎಚ್ಚರಿಕೆ ನೀಡಿದೆ. ‘ನನ್ನಿಷ್ಟದ ಫೀಲ್ಡ್‌ ಮಾರ್ಷಲ್‌’ ಎಂದು ಟ್ರಂಪ್‌ರಿಂದ ಹೊಗಳಿಸಿಕೊಳ್ಳುತ್ತಿರುವ ಮುನೀರ್‌ಗೆ, ಇರಾನ್‌ನಲ್ಲಿ ಸದ್ಯ ಬಲಿಷ್ಠವಾಗಿರುವ ಅರೆಸೇನಾಪಡೆ ಐಆರ್‌ಜಿಸಿ ಜತೆ ನಂಟಿದೆ ಎಂಬರ್ಥದಲ್ಲಿ ಹೀಗೆ ಹೇಳಲಾಗಿದೆ.

ಪಾಕಿಸ್ತಾನದ ನಿವೃತ್ತ ಜ। ಅಹ್ಮದ್ ಸಯೀದ್ ಅಮೆರಿಕದ ಫಾಕ್ಸ್‌ ನ್ಯೂಸ್‌ ಜತೆ ಮಾತನಾಡುತ್ತಾ, ‘2016ರಿಂದಲೇ ಮುನೀರ್‌ ಇರಾನ್‌ ಜತೆ ನಂಟು ಬೆಳೆಸಿಕೊಳ್ಳುತ್ತಿದ್ದರು. ಅವರಿಗೆ ಐಆರ್‌ಜಿಸಿ, ಇರಾನ್‌ನ ಸೇನೆ, ಖುದ್ಸ್‌ ಫೋರ್ಸ್‌ನ ಕಮಾಂಡರ್‌ ಆಗಿದ್ದ ಖಾಸಿಂ ಸೊಲೈಮಾನಿ, ಹೊಸೇನ್ ಸಲಾಮಿಯಂತಹ ನಾಯಕರೊಂದಿಗೆ ಒಳ್ಳೆ ಬಾಂಧವ್ಯವಿದೆ’ ಎಂದು ಹೇಳಿದ್ದರು.

ಇದರ ಬೆನ್ನಲ್ಲೇ ಇನ್ನೊಬ್ಬ ಭದ್ರತಾ ವಿಶ್ಲೇಷಕ ಬಿಲ್ ರೋಗಿಯೋ, ‘ಅಫ್ಘಾನಿಸ್ತಾನದ ಜತೆಗಿನ ಯುದ್ಧದ ವೇಳೆ ನಮಗೆ ಮಿತ್ರನಾಗಿದ್ದುಕೊಂಡೇ ಪಾಕಿಸ್ತಾನವು ತಾಲಿಬಾನಿಗಳನ್ನು ಬೆಂಬಲಿಸುತ್ತಿತ್ತು. ಈಗ ಇರಾನ್‌ ಜತೆಗಿನ ಯುದ್ಧ ಸ್ಥಗಿತಕ್ಕೆ ಮಧ್ಯಸ್ಥಿಕೆ ವಹಿಸುತ್ತಿರುವ ಮುನೀರ್‌ ಮತ್ತು ಐಆರ್‌ಜಿಸಿ ನಡುವಿನ ನಂಟನ್ನು ಅಪಾಯವೆಂದು ಪರಿಗಣಿಸಬೇಕು’ ಎಂದು ಸಲಹೆ ನೀಡಿದ್ದಾರೆ.

ಇರಾನ್‌ ಹಾಗೂ ಅಮೆರಿಕ, ಎರಡೂ ರಾಷ್ಟ್ರಗಳಿಗೆ ಮಿತ್ರನಾಗಿರುವ ಪಾಕಿಸ್ತಾನವು ಅವೆರಡರ ನಡುವೆ ಸಂಧಾನ ಮಾಡಿಸಲು ಮಧ್ಯಸ್ಥಿಕೆ ವಹಿಸುತ್ತಿದೆ. ಅದರ ಬೆನ್ನಲ್ಲೇ ಇಂತಹ ಎಚ್ಚರಿಕೆ ಬಂದಿರುವುದು ಕಳವಳಕಾರಿಯಾಗಿದೆ.