ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ಸಂಚು ರೂಪಿಸಿದ್ದ ಮತ್ತು ಯುರೋಪ್‌ನಲ್ಲಿ ಹಲವು ದಾಳಿಗಳನ್ನು ಯೋಜಿಸಿದ್ದ ಇರಾನ್ ಬೆಂಬಲಿತ ಇರಾಕಿ ಉಗ್ರ ಮೊಹಮ್ಮದ್ ಬಕರ್‌ನನ್ನು ಅಮೆರಿಕ ಬಂಧಿಸಿದೆ. ಹಿಯಾ ಎಂಬ ಹೊಸ ಸಂಘಟನೆಯ ಕಮಾಂಡರ್ ಆಗಿದ್ದ ಈತನ ಬಂಧನದೊಂದಿಗೆ ಭಯಾನಕ ಜಿಹಾದಿ ಸಂಚೊಂದು ಬಯಲಾಗಿದೆ.
ನ್ಯೂಯಾರ್ಕ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹತ್ಯೆಗೆ ಸಂಚು ರೂಪಿಸಿದ್ದಲ್ಲದೆ, ಯುರೋಪ್‌ನಲ್ಲಿ ಕನಿಷ್ಠ 18 ಉಗ್ರದಾಳಿಗಳನ್ನು ಯೋಜಿಸಿದ್ದ ಇರಾನ್ ಬೆಂಬಲಿತ ಇರಾಕ್ ಉಗ್ರನನ್ನು ಬಂಧಿಸಲಾಗಿದೆ ಎಂದು ಅಮೆರಿಕ ನ್ಯಾಯ ಇಲಾಖೆ ಘೋಷಿಸಿದೆ. ಇದರ ಬೆನ್ನಲ್ಲೇ ಅಮೆರಿಕದ ಮ್ಯಾನ್‌ಹಟನ್ ಕೋರ್ಟ್ ಪಿತೂರಿ, ಬಾಂಬ್ ದಾಳಿ ಸೇರಿದಂತೆ 6 ಆರೋಪಗಳನ್ನು ಹೊರಿಸಿದೆ.

ಮೊಹಮ್ಮದ್ ಬಕರ್ ಸಾದ್ ದಾವೂದ್ ಅಲ್-ಸಾದಿ (32) ಶುಕ್ರವಾರ ಕೋರ್ಟ್ ಎದುರು ವಿಚಾರಣೆಗೆ ಹಾಜರಾಗಿದ್ದಾನೆ. ಈತ ಇರಾಕ್ ಪ್ರಜೆಯಾಗಿದ್ದು, ಇರಾನ್ ಬೆಂಬಲಿತ ಹೊಸ ಭಯೋತ್ಪಾದಕ ಸಂಘಟನೆ ಹರಕತ್ ಅಶಾಬ್ ಅಲ್ ಯಾಮಿನ್ ಅಲ್ ಇಸ್ಲಾಮಿಯಾದ (ಹಿಯಾ) ಕಮಾಂಡರ್ ಆಗಿದ್ದ. ಫೆ.28ರಂದು ಅಮೆರಿಕ-ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ರಾತೋರಾತ್ರಿ ಹುಟ್ಟಿಕೊಂಡಿದ್ದ ಈ ಸಂಘಟನೆ, ಯುರೋಪ್‌ನಲ್ಲಿ ಕನಿಷ್ಠ 18 ಉಗ್ರದಾಳಿಗಳನ್ನು ನಡೆಸಲು ಸಂಚು ರೂಪಿಸಿತ್ತು ಎಂದು ತಿಳಿದುಬಂದಿದೆ.
ಟ್ರಂಪ್ ಹತ್ಯೆಗೆ ಕರೆ:
ಉಗ್ರ ಅಲ್-ಸಾದಿ, ‘ಅಹಂಕಾರಿ, ಅಪರಾಧಿ ಮತ್ತು ಶಾಪವಾಗಿರುವ ಟ್ರಂಪ್‌ನನ್ನು ಕೊಲ್ಲಿ’ ಎಂದು ಹಿಯಾ ಬೆಂಬಲಿಗರಿಗೆ ಕರೆ ನೀಡಿದ್ದ. ಏ.20ರಂದು ಸ್ನ್ಯಾಪ್‌ಚಾಟ್‌ನಲ್ಲಿ ಪೋಸ್ಟ್ ಮಾಡಿದ್ದ ಈತ, ‘ನಾವು ನಮ್ಮ ಸಂದೇಶವನ್ನು ಅಮೆರಿಕದ ಸ್ವತಂತ್ರ ಜನರಿಗೆ, ವಿಶೇಷವಾಗಿ ಸುರಕ್ಷತಾ ಸೇವೆಗಳಿಗೆ, ಗುಪ್ತಚರ ಅಧಿಕಾರಿಗಳಿಗೆ ಮತ್ತು ಎಪ್‌ಸ್ಟೀನ್ ದೌರ್ಜನ್ಯದ ಬಲಿಪಶುಗಳಿಗೆ ನಿರ್ದೇಶಿಸುತ್ತೇವೆ. ಅಲ್ಲಿ ಕುಟುಂಬಗಳ ರಕ್ತ ಸುರಿದಿದೆ ಮತ್ತು ಮಕ್ಕಳ ಜೀವಗಳನ್ನು ಕಸಿದುಕೊಳ್ಳಲಾಗಿದೆ’ ಎಂದು ಬರೆದುಕೊಂಡಿದ್ದ.
ಜಿಹಾದ್ ನಡೆಸುವ ಗುರಿ:
ಹಿಯಾ ಸಂಘಟನೆ ಮಾ.9ರಂದು ಬೆಲ್ಜಿಯಂನ ಯಹೂದಿಗಳ ಮಂದಿರವೊಂದರ ಮೇಲೆ ಮೊದಲ ಬಾರಿ ಬಾಂಬ್ ದಾಳಿ ನಡೆಸಿತ್ತು. ಅದರ ಬೆನ್ನಲ್ಲೇ ಟೆಲಿಗ್ರಾಂನಲ್ಲಿ ಪೋಸ್ಟ್ ಮಾಡಿದ್ದ ಅಲ್-ಸಾದಿ, ‘ಇಸ್ಲಾಮಿನ ಯೋಧರು ಜಿಹಾದ್ ಅನ್ನು ತೀವ್ರಗೊಳಿಸಿ. ಕತ್ತಲೆ ಎಲ್ಲಿ ಆಶ್ರಯ ಪಡೆಯುತ್ತದೆಯೋ ಅಲ್ಲಿಗೆ ಹೊರಡಿ, ಹಿಂಸೆಯನ್ನು ಹೆಚ್ಚಿಸಿ’ ಎಂದು ಪ್ರಚೋದಿಸಿದ್ದ.
ಈತನ ಕರೆಯಿಂದ ಉನ್ಮತ್ತರಾದ ಉಗ್ರರು ಯಹೂದಿ ಮತ್ತು ಅಮೆರಿಕನ್ನರ ವಿರುದ್ಧ ಹಲವು ದಾಳಿಗಳನ್ನು ಆರಂಭಿಸಿದರು. ಲಂಡನ್‌ನಲ್ಲಿ ಇಬ್ಬರು ಯಹೂದಿಗಳಿಗೆ ಚೂರಿ ಇರಿತ, ಆಮ್‌ಸ್ಟರ್‌ಡ್ಯಾಮ್, ಮ್ಯೂನಿಚ್ ಮತ್ತು ಇತರೆಡೆಗಳಲ್ಲಿ ಯಹೂದಿ ಸ್ಥಳಗಳು ಮತ್ತು ಶಾಲೆಗಳ ಮೇಲೆ ದಾಳಿ, ಬೆಂಕಿ ಹಚ್ಚುವಿಕೆ ನಡೆಸಿದ್ದರು ಎಂದು ತಿಳಿದುಬಂದಿದೆ.


