ಅಮೆರಿಕಕ್ಕೆ ಈಗ ಬ್ಯಾಂಕಿಂಗ್ ವಲಯದ ತಾಂತ್ರಿಕ ಅಡಚಣೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಜೆಪಿಮಾರ್ಗನ್ ಚೇಸ್ ಬ್ಯಾಂಕ್‌ನ ಆಂತರಿಕ ವ್ಯವಸ್ಥೆಯಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷದಿಂದಾಗಿ ಆನ್‌ಲೈನ್ ಬ್ಯಾಂಕಿಂಗ್ ಮತ್ತು ಡಿಜಿಟಲ್ ಹಣ ವರ್ಗಾವಣೆ ಸೇವೆಗಳಲ್ಲಿ ಭಾರಿ ವ್ಯತ್ಯಯ ಉಂಟಾಗಿದೆ.

ವಾಷಿಂಗ್ಟನ್‌: ಮೈಕ್ರೋಸಾಫ್ಟ್ ತಾಂತ್ರಿಕ ದೋಷ ಮತ್ತು ವಿಮಾನಯಾನ ನಿಯಂತ್ರಣ ವ್ಯವಸ್ಥೆ ಸ್ಥಗಿತಗೊಂಡ ಬೆನ್ನಲ್ಲೇ, ಈಗ ಅಮೆರಿಕದ ಬ್ಯಾಂಕಿಂಗ್ ವಲಯಕ್ಕೂ ತಾಂತ್ರಿಕ ಅಡಚಣೆ ಎದುರಾಗಿದೆ. ಜೆಪಿಮಾರ್ಗನ್ ಚೇಸ್ ಬ್ಯಾಂಕ್‌ನ ಆಂತರಿಕ ಸಾಫ್ಟ್‌ವೇರ್ ದೋಷದಿಂದಾಗಿ ಸೋಮವಾರ ಸಾವಿರಾರು ಗ್ರಾಹಕರು ಆನ್‌ಲೈನ್ ಬ್ಯಾಂಕಿಂಗ್ ಮತ್ತು ‘ಝೆಲ್ಲೆ’ ಹಣ ವರ್ಗಾವಣೆ ಸೇವೆಗಳಲ್ಲಿ ವ್ಯತ್ಯಯ ಎದುರಿಸಿದ್ದಾರೆ.

ಚೇಸ್ ಬ್ಯಾಂಕ್‌ನಲ್ಲಿ ಉಂಟಾದ ಈ ತಾಂತ್ರಿಕ ಸಮಸ್ಯೆಯಿಂದಾಗಿ ಬ್ಯಾಂಕ್ ಆಫ್ ಅಮೆರಿಕ, ವೆಲ್ಸ್ ಫಾರ್ಗೋ ಮತ್ತು ಸಿಟಿಗ್ರೂಪ್ ಗ್ರಾಹಕರ ವಹಿವಾಟುಗಳೂ ವಿಳಂಬವಾಗಿವೆ. ಇದು ಯಾವುದೇ ಸೈಬರ್ ದಾಳಿಯಲ್ಲ, ಕೇವಲ ಸಾಫ್ಟ್‌ವೇರ್ ದೋಷವಾಗಿದೆ. ಜೆಪಿಮಾರ್ಗನ್ ಚೇಸ್‌ನ ಆಂತರಿಕ ಹಾರ್ಡ್‌ವೇರ್ ವ್ಯವಸ್ಥೆಯಲ್ಲಿ ಕಾಣಿಸಿಕೊಂಡ ಸಾಫ್ಟ್‌ವೇರ್ ದೋಷವೇ ಈ ಎಲ್ಲಾ ವಿಳಂಬಗಳಿಗೆ ಕಾರಣವಾಗಿದ್ದು, ಸೇವೆಗಳನ್ನು ಮರುಸ್ಥಾಪಿಸಲು ತಜ್ಞರು ಶ್ರಮಿಸುತ್ತಿದ್ದಾರೆ. ಆದರೆ, ಝೆಲ್ಲೆ ಪಾವತಿ ಜಾಲವು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೇವಲ ಚೇಸ್ ಗ್ರಾಹಕರೊಂದಿಗಿನ ವಹಿವಾಟುಗಳಿಗೆ ಮಾತ್ರ ಅಡಚಣೆಯಾಗಿದೆ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.

ಕಳೆದ ವಾರದ ವಿಮಾನಯಾನ ಮತ್ತು ಮೈಕ್ರೋಸಾಫ್ಟ್ ವ್ಯತ್ಯಯಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದು, ಗ್ರಾಹಕರ ಹಣ ಸುರಕ್ಷಿತವಾಗಿದೆ ಎಂದಿದ್ದಾರೆ.

ಇರಾನ್‌ನ ಆಯಕಟ್ಟಿನ ಖೇಶಂ ದ್ವೀಪದ ಮೇಲೆ ಅಮೆರಿಕ ದಾಳಿ

ಟೆಹ್ರಾನ್‌: ಕೆಲ ದಿನಗಳಿಂದ ಶಾಂತವಾಗಿದ್ದ ಅಮೆರಿಕ-ಇರಾನ್‌ ನಡುವಿನ ಯುದ್ಧ ಮಂಗಳವಾರ ಚುರುಕುಗೊಂಡಿದ್ದು, ಇರಾನ್‌ನ ಖೇಶಂ ದ್ವೀಪದ ಮೇಲೆ ಅಮೆರಿಕ ಹಲವಾರು ದಾಳಿಗಳನ್ನು ನಡೆಸಿರುವುದು ವರದಿಯಾಗಿದೆ. ಇದು ಮಧ್ಯಪ್ರಾಚ್ಯ ಕದನ ಮತ್ತೊಮ್ಮೆ ತೀವ್ರವಾಗುವ ಆತಂಕ ಸೃಷ್ಟಿಸಿದೆ.

ಹೋರ್ಮುಜ್ ಜಲಸಂಧಿಯಲ್ಲಿರುವ ಇರಾನ್‌ನ ದಕ್ಷಿಣ ದ್ವೀಪವಾದ ಖೇಶಂ ಮೇಲೆ ಮಂಗಳವಾರ ಮುಂಜಾನೆ ಅಮೆರಿಕ ಹಲವಾರು ದಾಳಿಗಳನ್ನು ನಡೆಸಿದೆ ಎಂದು ಇರಾನ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಈ ದ್ವೀಪದ ಮೇಲೆ ಸ್ಫೋಟಗಳು ಸಂಭವಿಸುತ್ತಿರುವ ದೃಶ್ಯಗಳು ಕೂಡ ವರದಿಯಾಗಿವೆ. ಆದರೆ ದಾಳಿಯಿಂದಾಗಿ ಅಲ್ಲಿನ ವಸತಿ, ವಾಣಿಜ್ಯ ಅಥವಾ ಮೂಲಸೌಕರ್ಯ ಪ್ರದೇಶಗಳಿಗೆ ಯಾವುದೇ ಹಾನಿಯಾಗಿಲ್ಲ.

ಪರ್ಷಿಯನ್ ಕೊಲ್ಲಿಯಲ್ಲಿನ ಅತಿ ದೊಡ್ಡ ದ್ವೀಪವಾಗಿರುವ ಖೇಶಂ ದ್ವೀಪವು, ವ್ಯೂಹಾತ್ಮಕ, ಪರಿಸರ ಮತ್ತು ಆರ್ಥಿಕ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಇದು ಜಗತ್ತಿನ ಪ್ರಮುಖ ತೈಲ ಮತ್ತು ಎಲ್‌ಎನ್‌ಜಿ ಸಾಗಣಾ ಮಾರ್ಗವಾದ ಹೋರ್ಮುಜ್ ಜಲಸಂಧಿಯ ಸಮೀಪದಲ್ಲಿದ್ದು, ಪ್ರಮುಖ ವ್ಯಾಪಾರಿ ಹಾಗೂ ಸಮುದ್ರ ಮಾರ್ಗಗಳನ್ನು ನಿಯಂತ್ರಿಸುವ ಶಕ್ತಿ ಹೊಂದಿದೆ.