Quad Leaders Meet In Manila ಕ್ವಾಡ್ ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ಮೋದಿಯವರನ್ನು ಕಠಿಣ ವ್ಯಕ್ತಿ ಎಂದು ಪ್ರಶಂಸಿಸಿದ್ದಾರೆ. ಹಾಗೆಯೇ, ಆಂಧ್ರಪ್ರದೇಶದ ಕರ್ನೂಲ್‌ನಲ್ಲಿ ಮೋದಿಯವರ ತಾಯಿ ಹೀರಾಬೆನ್ ಹೆಸರಿನಲ್ಲಿ ದೇವಾಲಯ ನಿರ್ಮಾಣವಾಗುತ್ತಿದೆ.

ಮನಿಲಾ (ಫಿಲಿಪ್ಪೀನ್ಸ್‌) : ಪ್ರಧಾನಿ ನರೇಂದ್ರ ಮೋದಿ(Prime minister narendra modi) ಅವರ ನಾಯಕತ್ವ, ವಿದೇಶಗಳೊಂದಿಗೆ ಒಪ್ಪಂದದ ವಿಷಯದಲ್ಲಿ ಚೌಕಾಸಿ, ಜಾಗತಿಕ ರಾಜತಾಂತ್ರಿಕ ವಿಷಯದಲ್ಲಿ ನೈಪುಣ್ಯದ ಬಗ್ಗೆ ಸದಾ ಕೊಂಡಾಡುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಭಾರತದ ಪ್ರಧಾನಿ ಬಗ್ಗೆ ಮತ್ತೆ ಅಂಥದ್ದೇ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

'ಮೋದಿ ಟಫ್ ಗೈ.. ಎಂದ ಟ್ರಂಪ್

ಮಂಗಳವಾರ ಇಲ್ಲಿ ನಡೆದ ಕ್ವಾಡ್‌ ದೇಶಗಳ ಶೃಂಗಸಭೆ ವೇಳೆ ಮೋದಿ ಅವರನ್ನು ಟಫ್‌ ಗೈ (ಕಠಿಣ ವ್ಯಕ್ತಿ) ಎಂದು ಪ್ರಶಂಸಿಸಿದ್ದಾರೆ. ಶೃಂಗದ ಆರಂಭದಲ್ಲಿ ನಾಯಕರ ಫೋಟೋಶೂಟ್‌ ವೇಳೆ ಮೋದಿಯವರ ಪಕ್ಕದಲ್ಲಿ ಡೊನಾಲ್ಡ್‌ ಟ್ರಂಪ್‌ ನಿಂತಿದ್ದರು. ಅಲ್ಲಿ ಎಲ್ಲಾ ನಾಯಕರನ್ನು ಉದ್ದೇಶಿಸಿ ಮಾತನಾಡಿದ ಟ್ರಂಪ್‌ ಅವರು ಮೋದಿ ‘ಟಫ್‌ ಗೈ’ ಎಂದಿದ್ದಾರೆ. ಬಳಿಕ ನಾಯಕರ ಸಭೆ ವೇಳೆಯೂ ಟ್ರಂಪ್‌ ‘ಮೋದಿ ನನ್ನ ಅತ್ಯುತ್ತಮ ಸ್ನೇಹಿತ. ಅದ್ಭುತ ನಾಯಕ. ಪ್ರಪಂಚದಾದ್ಯಂತ ಎಲ್ಲರೂ ಅವರನ್ನು ಬಹಳವಾಗಿ ಗೌರವಿಸುತ್ತಾರೆ’ ಎಂದಿದ್ದಾರೆ.

ಟ್ರಂಪ್‌ ಮೋದಿಯವರನ್ನು ಹೊಗಳುತ್ತಿರುವುದು ಇದೇ ಮೊದಲೇನಲ್ಲ. ಈ ವರ್ಷದ ಆರಂಭದಲ್ಲಿ ಸಂದರ್ಶನವೊಂದರಲ್ಲಿ ‘ಮೋದಿ ಉತ್ತಮ ನಾಯಕ’ ಎಂದು ಹೊಗಳಿದ್ದರು.

ನೆಲದ ಮೇಲಿಟ್ಟಿದ್ದ ತ್ರಿವರ್ಣ ಧ್ವಜದ ಗುರುತಿನ ಚೀಟಿ ಎತ್ತಿಟ್ಟು ಮೋದಿ ಗೌರವ

ಮನಿಲಾ: ಇಲ್ಲಿ ನಡೆಯುತ್ತಿರುವ ಕ್ವಾಡ್‌ ಶೃಂಗಸಭೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ನೆಲದ ಮೇಲೆ ಸ್ಥಳದ ಗುರುತಿಗಾಗಿ ಇರಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಎತ್ತಿಕೊಂಡು ತಮ್ಮ ಜೇಬಿನಲ್ಲಿ ಇಟ್ಟುಕೊಂಡು ಅದಕ್ಕೆ ಗೌರವ ಸಲ್ಲಿಸಿದ ಘಟನೆ ಮಂಗಳವಾರ ಇಲ್ಲಿ ನಡೆದಿದೆ. ಇದರ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಭಾರೀ ಮೆಚ್ಚುಗೆ ಗಳಿಸಿದೆ.

ಮೋದಿ ತ್ರಿವರ್ಣ ಧ್ವಜದ ಗುರುತಿನ ಚೀಟಿ ಎತ್ತಿಕೊಳ್ಳುತ್ತಲೇ ಪಕ್ಕದಲ್ಲಿದ್ದ ಟ್ರಂಪ್‌ ಮೋದಿಯತ್ತ ತಿರುಗಿದ್ದಾರೆ. ಆಗ ಮೋದಿ, ನಾನು ರಾಷ್ಟ್ರಧ್ವಜವನ್ನು ಹೀಗೆ ಕೆಳಗೆ ಇಡಲಾರೆ ಎಂದಿದ್ದಾರೆ. ಆಗ ಟ್ರಂಪ್‌ ಅದನ್ನು ಕಾಪಾಡಿಕೊಳ್ಳಿ ಎಂದಿದ್ದಾರೆ.

ವೇದಿಕೆಯ ಮೇಲೆ ನಾಯಕರು ನಿಲ್ಲಬೇಕಾದ ಸ್ಥಳವನ್ನು ಗುರುತಿಸಲು ಆಯಾ ದೇಶದ ಧ್ವಜಗಳಿರುವ ಕಾರ್ಡ್‌ಗಳನ್ನು ನೆಲದ ಮೇಲೆ ಅಂಟಿಸಲಾಗಿತ್ತು. 2023ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್‌ ಶೃಂಗಸಭೆ ವೇಳೆಯೂ ಮೋದಿ ನೆಲದ ಮೇಲೆ ಸ್ಥಳ ಗುರುತಾಗಿ ಇರಿಸಲಾಗಿದ್ದ ತ್ರಿವರ್ಣ ಧ್ವಜವನ್ನು ಇದೇ ರೀತಿ ಎತ್ತಿಕೊಂಡು ತಮ್ಮ ಬಳಿ ಇಟ್ಟುಕೊಂಡಿದ್ದರು.

ಆಂಧ್ರದಲ್ಲಿ ಮೋದಿ ತಾಯಿ ಹೆಸರಲ್ಲಿ ದೇಗುಲ ನಿರ್ಮಾಣ

ಕರ್ನೂಲ್: ಆಂಧ್ರಪ್ರದೇಶದ ಕರ್ನೂಲ್‌ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ದಿ. ಹೀರಾಬೆನ್‌ ಮೋದಿ ಅವರ ಹೆಸರಿನಲ್ಲಿ ದೇಗುಲವೊಂದು ನಿರ್ಮಾಣವಾಗುತ್ತಿದೆ. ಈಗಾಗಲೇ ಬಿಜೆಪಿ ಶಾಸಕ ಪಿ.ವಿ. ಪಾರ್ಥಸಾರಥಿ ಅವರ ಸಮ್ಮುಖದಲ್ಲಿ ಭೂಮಿ ಪೂಜೆಯೂ ನೆರವೇರಿದೆ. ಜಿಲ್ಲೆಯ ಗುಡಿಕಲ್ಲು ಗ್ರಾಮದಲ್ಲಿ ಮಾತಾ ಶ್ರೀ ಮಂದಿರಂ ಚಾರಿಟೇಬಲ್ ಸೊಸೈಟಿಯು ಈ ಕಾರ್ಯಕ್ಕೆ ಮುಂದಾಗಿದೆ. ಅಂದಾಜು 3 ಲಕ್ಷ ರು. ವೆಚ್ಚದಲ್ಲಿ ಹೀರಾಬೆನ್‌ ಮೋದಿಯವರ ಅಮೃತಶಿಲೆಯ ಮೂರ್ತಿಯು ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆಗೊಳ್ಳಲಿದೆ.