ಓಮನ್‌ ಮೂಲಕ ಲಂಡನ್‌ನ ಹೀಥ್ರೋ ವಿಮಾನನಿಲ್ದಾಣಕ್ಕೆ ಪಾಕಿಸ್ತಾನ ಯುರೇನಿಯಂಅನ್ನು ಪಾರ್ಸಲ್‌ ಮಾಡಿದೆ. ಯುರೇನಿಯಂ ವಿಕಿರಣಶೀಲ ವಸ್ತುವಾಗಿದ್ದು, ಇದನ್ನು ಪರಮಾಣು ಬಾಂಬ್‌ಗಳನ್ನು ತಯಾರಿಸಲು ಪ್ರಮುಖವಾಗಿ ಬಳಸಲಾಗುತ್ತದೆ. ಈ ಪ್ರಕರಣದಲ್ಲಿ ಯುಕೆ ಏಜೆನ್ಸಿಗಳು ಇನ್ನೂ ಯಾವುದೇ ಬಂಧನವನ್ನು ಮಾಡಿಲ್ಲವಾದರೂ, ದೊಡ್ಡ ಮಟ್ಟದ ಅಲರ್ಟ್‌ ನೀಡಿ ತನಿಖೆ ಮಾಡುತ್ತಿದೆ.

ನವದೆಹಲಿ (ಜ.11): ಅಣುಬಾಂಬ್‌ಅನ್ನು ತಯಾರಿಸಲು ಪ್ರಮುಖವಾಗಿ ಬಳಕೆ ಮಾಡುವ ಯುರೇನಿಯಂಅನ್ನು ಬ್ರಿಟನ್‌ಗೆ ಪಾರ್ಸಲ್‌ ಮಾಡಿದ ಆರೋಪವನ್ನು ಪಾಕಿಸ್ತಾನ ಹೊತ್ತುಕೊಂಡಿದೆ. ಅದರೊಂದಿಗೆ ಪಾಕಿಸ್ತಾನದ ಅಣುಶಕ್ತಿಯ ಬಗ್ಗೆ ಭಾರತ ಜಗತ್ತಿಗೆ ನೀಡುತ್ತಿದ್ದ ಎಚ್ಚರಿಕೆ ಕೂಡ ನಿಜವಾಗಿದೆ. ಡಿಸೆಂಬರ್‌ 29 ರಂದು ಪಾಕಿಸ್ತಾನವು, ಓಮಾನ್‌ ಮೂಲಕ ಇಂಗ್ಲೆಂಡ್‌ನ ಹೀಥ್ರೂ ವಿಮಾನ ನಿಲ್ದಾಣಕ್ಕೆ ಭಾರೀ ಪ್ರಮಾಣದಲ್ಲಿ ಯುರೇನಿಯಂಅನ್ನು ಪಾರ್ಸಲ್‌ ಮಾಡಿದೆ. ಇದನ್ನು ವಿಮಾನ ನಿಲ್ದಾಣದ ಅಧಿಕಾರಿಗಳು ಸೀಜ್‌ ಮಾಡಿದ್ದಾರೆ. ಇದರ ಮೂಲವನ್ನು ಹುಡುಕಿದಾಗ, ಪಾಕಿಸ್ತಾನದಿಂದ ಈ ಪಾರ್ಸಲ್‌ ಬಂದಿರುವುದಾಗಿ ತಿಳಿದುಬಂದಿದೆ. ಯುರೇನಿಯಂಅನ್ನು ಬೇರೆ ಬೇರೆ ಕಾರಣಗಳಿಗಾಗಿ ಬಳಕೆ ಮಾಡಲಾಗುತ್ತದೆಯಾದರೂ, ದೊಡ್ಡ ಪ್ರಮಾಣದಲ್ಲಿ ಇದರ ಬಳಕೆ ಅಣುಬಾಂಬ್‌ ತಯಾರಿಕೆಗಾಗಿ ಮಾಡುತ್ತಾರೆ. ಇಂಗ್ಲೆಂಡ್‌ ಮೂಲದ ಇರಾನ್‌ ಕಂಪನಿಗೆ ಪಾಕಿಸ್ತಾನ ಈ ಯುರೇನಿಯಂ ಶಿಪ್‌ಮೆಂಟ್‌ ಮಾಡಿತ್ತು ಎನ್ನುವ ಮಾಹಿತಿಯೂ ಬೆಳಕಿಗೆ ಬಂದಿದೆ. ಪ್ಯಾಕೇಜ್ ಅನ್ನು ಪಾಕಿಸ್ತಾನದಿಂದ ಗಲ್ಫ್ ದೇಶವಾದ ಒಮಾನ್ ಮೂಲಕ ವಿಮಾನದಲ್ಲಿ ಕಳುಹಿಸಲಾಗಿದೆ, ಬ್ರಿಟನ್‌ನಲ್ಲಿ ತನ್ನ ಗುರಿಯನ್ನು ತಲುಪುವ ಮುನ್ನವೇ ಇದನ್ನು ವಶಪಡಿಸಿಕೊಳ್ಳಲಾಗಿದೆ.

ಮೂಲಗಳ ಪ್ರಕಾರ, ಯುರೇನಿಯಂ ತುಂಬಿದ ಈ ಪ್ಯಾಕೇಜ್ ಅನ್ನು ಪ್ರಯಾಣಿಕ ವಿಮಾನದಿಂದ ಕಳುಹಿಸಲಾಗಿದೆ. ಭದ್ರತಾ ತಪಾಸಣೆ ವೇಳೆ ಅಪಾಯಕಾರಿ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ. ಯುರೇನಿಯಂ ಪೊಟ್ಟಣ ಸಿಕ್ಕಿದ ಕೂಡಲೇ ಅದನ್ನು ಪ್ರತ್ಯೇಕ ಕೊಠಡಿಯಲ್ಲಿ ಇರಿಸಲಾಗಿತ್ತು. ಕೂಡಲೇ ಈ ಬಗ್ಗೆ ಉಗ್ರ ನಿಗ್ರಹ ಪೊಲೀಸರಿಗೆ ಮಾಹಿತಿ ನೀಡಲಾಯಿತು. ಆ ನಂತರವೇ ಈ ಸರಕು ಎಲ್ಲಿಂದ ಬಂದಿದ್ದು, ಎಲ್ಲಿಗೆ ಹೋಗುವುದಾಗಿತ್ತು ಎನ್ನುವ ತನಿಖೆಯನ್ನು ಪ್ರಾರಂಭ ಮಾಡಲಾಗಿತ್ತು.

ತನಿಖೆಯ ವೇಳೆ ಯುರೇನಿಯಂ ಅನ್ನು ಬ್ರಿಟನ್‌ನಲ್ಲಿರುವ ಇರಾನ್‌ನ ಸಂಸ್ಥೆಗೆ ಕಳುಹಿಸಲಾಗಿದೆ ಎಂದು ಪೊಲೀಸರಿಗೆ ತಿಳಿದುಬಂದಿದೆ. ಆದರೆ, ಯಾರಿಗೆ ಕಳುಹಿಸಬೇಕು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಅಲ್ಲದೆ ಈ ಪ್ರಕರಣದಲ್ಲಿ ಪೊಲೀಸರು ಇದುವರೆಗೆ ಯಾರನ್ನೂ ಬಂಧಿಸಿಲ್ಲ. ಯುಕೆ ಭದ್ರತಾ ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಈಗ ಈ ವಿಷಯವು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಯಾಗಿ ಮಾರ್ಪಟ್ಟಿದೆ. ಇಂಗ್ಲೆಂಡ್‌ನಲ್ಲಿ ವಾಸ ಮಾಡುತ್ತಿರುವ ಇರಾನ್‌ ಪ್ರಜೆಗಳು ಇದನ್ನು ಆರ್ಡರ್‌ ಮಾಡಿದ್ದರೇ ಎನ್ನುವುದು ಕಳವಳದ ವಿಷಯವಾಗಿದೆ.

ಬ್ರಿಟಿಷ್ ನ್ಯೂಕ್ಲಿಯರ್ ಡಿಫೆನ್ಸ್ ರೆಜಿಮೆಂಟ್‌ನ ಮಾಜಿ ಕಮಾಂಡರ್ ಹ್ಯಾಮಿಶ್ ಡಿ ಬ್ರೆಟ್ಟನ್ ಗಾರ್ಡನ್, ಬ್ರಿಟನ್‌ನಲ್ಲಿರುವ ಇರಾನ್ ವಿಳಾಸಕ್ಕೆ ವಾಣಿಜ್ಯ ವಿಮಾನದ ಮೂಲಕ ಪಾಕಿಸ್ತಾನದಿಂದ ಯುರೇನಿಯಂ ಪ್ಯಾಕೇಜ್ ಆಗಮನವು ಹೆಚ್ಚು ಅನುಮಾನಾಸ್ಪದವಾಗಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ಹೂಡಿಕೆ ಏರಿಸುವ ಬಗ್ಗೆ ಸೌದಿ ರಾಜನ ಮಹಾಪ್ಲ್ಯಾನ್‌!

ಪೊಲೀಸ್‌ ವ್ಯವಸ್ಥೆ ಸರಿಯಾಗಿ ಕೆಲಸ ಮಾಡಿದೆ ಹಾಗೂ ಈ ಪ್ಯಾಕೇಜ್‌ಅನ್ನು ಸರಿಯಾದ ಸ್ಥಳದಲ್ಲಿ ಹಿಡಿಯಲಾಗಿದೆ. ಯುರೇನಿಯಂ ಹೆಚ್ಚಿನ ಮಟ್ಟದ ವಿಷಕಾರಿ ವಿಕಿರಣವನ್ನು ಬಿಡುಗಡೆ ಮಾಡುತ್ತದೆ ಎಂದು ಅವರು ಹೇಳಿದರು. ಅಲ್ಲದೆ, ಅಪಾಯಕಾರಿ ಬಾಂಬ್‌ಗಳನ್ನು ತಯಾರಿಸಲು ಇದನ್ನು ಬಳಕೆ ಮಾಡಲಾಗುತ್ತದೆ ಎಂದಿದ್ದಾರೆ.

ಪಾಕ್‌ನಲ್ಲಿ ಆಹಾರಕ್ಕೆ ತೀವ್ರ ಹಾಹಾಕಾರ: ಗನ್‌ ಹಿಡಿದು ಸರ್ಕಾರದಿಂದ ಆಹಾರ ವಿತರಣೆ

ಅದೇ ಸಮಯದಲ್ಲಿ, ಗ್ರೇಟರ್ ಲಂಡನ್‌ನ ಪ್ರಾದೇಶಿಕ ವಿಭಾಗದ ಪೊಲೀಸರು, ಡಿಸೆಂಬರ್ 19 ರಂದು ವಾಡಿಕೆಯ ತಪಾಸಣೆಯ ಸಮಯದಲ್ಲಿ ಈ ಅನುಮಾನಾಸ್ಪದ ಪ್ಯಾಕೇಜ್ ಕಂಡಿಬಂದಿತ್ತು ಎಂದಿದ್ದಾರೆ. ಪೊಟ್ಟಣವನ್ನು ಪರಿಶೀಲಿಸಿದಾಗ ಅದರಲ್ಲಿ ಯುರೇನಿಯಂ ತುಂಬಿರುವುದು ಕಂಡುಬಂದಿದೆ. ಆದರೆ, ಸಿಕ್ಕಿರುವ ಯುರೇನಿಯಂ ಪ್ರಮಾಣ ದೊಡ್ಡ ಮಟ್ಟದಲ್ಲಿಲಿಲ್ಲ. ಬಳಿಕ ಇದನ್ನು ತಜ್ಞರಿಗೆ ನೀಡಲಾಗಿತ್ಉತ. ಅವರೂ ಕೂಡ ಇದರಿಂದ ಸಾಮಾನ್ಯ ಜನರಿಗೆ ಯಾವುದೇ ಹಾನಿ ಇಲ್ಲ ಎಂದು ಹೇಳಿದ್ದರು ಎಂದ ಮೆಟ್ರೋ ಪೊಲೀಸ್‌ ಅಧಿಕಾರಿ ರಿಚರ್ಡ್ ಸ್ಮಿತ್‌ ತಿಳಿಸಿದ್ದಾರೆ.