ಯುಎಐನಲ್ಲಿ ಯುದ್ಧ ಕುರಿತು ಸುಳ್ಳು ಸುದ್ದಿ ಹರಡಿದ 17 ಭಾರತೀಯರು ಸೇರಿ 35 ಮಂದಿ ಅರೆಸ್ಟ್, ಎಲ್ಲರೂ ವಿದೇಶಿಗರಾಗಿದ್ದಾರೆ. ಎಐ, ಹಳೇ ವಿಡಿಯೋಗಳನ್ನು ಬಳಸಿ ದೇಶದ ಭದ್ರತೆಗೆ ಧಕ್ಕೆ ಆರೋಪಿಗಳು ತರಲು ಯತ್ನಿಸಿದ್ದಾರೆ.
ದುಬೈ (ಫೆ.16) : ದುಬೈ, ಸೌದಿ ಅರೇಬಿಯಾ ಸೇರಿದಂತೆ ಅರಬ್ ರಾಷ್ಟ್ರಗಳ ಮೇಲೆ ಇರಾನ್ ಸತತ ದಾಳಿ ನಡೆಸುತ್ತಿದೆ. ಅಮೆರಿಕ ಸೇನಾ ನೆಲೆ ಗುರಿಯಾಗಿಸಿ ನಡೆಸುತ್ತಿರುವ ದಾಳಿ ಅರಬ್ ರಾಷ್ಟ್ರಗಳ ನಗ ವಸತಿಗಳ ಮೇಲೂ ಬೀಳುತ್ತಿದೆ. ಇಸ್ರೇಲ್ ಹಾಗೂ ಅಮೆರಿಕ ವಿರುದ್ದ ಹೋರಾಡುತ್ತಿರುವ ಇರಾನ್ ಸಿಕ್ಕ ಸಿಕ್ಕ ಕಡೆ ಮಿಸೈಲ್, ಡ್ರೋನ್ ದಾಳಿ ಮಾಡುತ್ತಿದೆ. ಇರಾನ್ ಪ್ರತಿದಾಳಿಯಲ್ಲಿ ಹೆಚ್ಚು ನಷ್ಟ ಅನಭವಿಸುತ್ತಿರುವುದು ಗಲ್ಫ್ ರಾಷ್ಟ್ರಗಳು. ಇದೇ ವೇಳೆ ಹಲವರು ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ. ನಕಲಿ, ಎಐ ಆಧಾರಿತ ವಿಡಿಯೋಗಳನ್ನು ಸೃಷ್ಟಿಸಿ ಹರಿಬಿಡುತ್ತಿದ್ದಾರೆ. ಭಾರತದಲ್ಲೂ ಈ ರೀತಿಯ ನಕಲಿ ಸುದ್ದಿಗಳು ಹರಿದಾಡುತ್ತಿದೆ. ಸಂಘರ್ಷದ ಸಮಯದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುವ ಸುಳ್ಳು ಸುದ್ದಿಗಳ ವಿರುದ್ಧ ಯುಎಇ ಸರ್ಕಾರ ಕಠಿಣ ಕ್ರಮಕ್ಕೆ ಮುಂದಾಗಿದೆ. ಎಐ ಬಳಸಿ ನಕಲಿ ಪ್ರಚಾರ ನಡೆಸಿದ ಆರೋಪದ ಮೇಲೆ ಯುಎಇ ಅಟಾರ್ನಿ ಜನರಲ್, ವಿವಿಧ ದೇಶಗಳ 35 ಜನರನ್ನು ಬಂಧಿಸಿದ್ದಾರೆ. ಇವರಲ್ಲಿ 17 ಮಂದಿ ಭಾರತೀಯರಾಗಿದ್ದಾರೆ.
ಆರೋಪಿಗಳ ಶೀಘ್ರ ವಿಚಾರಣೆ
ಈ ಪ್ರಕರಣದ ಆರೋಪಿಗಳ ಶೀಘ್ರ ವಿಚಾರಣೆಗೆ ಆದೇಶಿಸಲಾಗಿದೆ. ಕೃತಕವಾಗಿ ಸೃಷ್ಟಿಸಿದ ವಿಡಿಯೋಗಳನ್ನು ಬಳಸಿ ತಪ್ಪು ಮಾಹಿತಿ ಹರಡಿದ್ದಾರೆ ಎಂಬುದು ಇವರ ಮೇಲಿರುವ ಪ್ರಮುಖ ಆರೋಪ. ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಮೇಲೆ ತೀವ್ರ ನಿಗಾ ಇರಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ದೇಶದ ಭದ್ರತೆಗೆ ಧಕ್ಕೆ
ಜನರನ್ನು ದಾರಿ ತಪ್ಪಿಸಿ, ಭಯ ಹುಟ್ಟಿಸಿ ದೇಶದ ಭದ್ರತೆಗೆ ಕುತ್ತು ತರಲು ಯತ್ನಿಸಿದ್ದಾರೆ ಎಂದು ಈ ಪ್ರಕರಣವನ್ನು ದಾಖಲಿಸಲಾಗಿದೆ. ಬೇರೆ ದೇಶಗಳಲ್ಲಿ ನಡೆದ ಸೇನಾ ದಾಳಿಗಳ ವಿಡಿಯೋಗಳನ್ನು ಯುಎಇಯಲ್ಲಿ ನಡೆದಿದ್ದು ಎಂದು ಸುಳ್ಳು ಹೇಳಿ ಹರಿಬಿಟ್ಟಿದ್ದಾರೆ. ಜನರ ಮೇಲೆ ದಾಳಿ ನಡೆಯುತ್ತಿರುವ ವಿಡಿಯೋಗಳನ್ನೂ ಪ್ರಚಾರ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಎಐ ತಂತ್ರಜ್ಞಾನ ಬಳಸಿ ಯುಎಇಯ ಪ್ರಮುಖ ಐಕಾನಿಕ್ ಸ್ಥಳಗಳು ಧ್ವಂಸವಾದಂತೆ ನಕಲಿ ವಿಡಿಯೋ ಸೃಷ್ಟಿಸಿ ಹಂಚಿಕೊಂಡಿದ್ದಾರೆ. ಈ ಆರೋಪ ಸಾಬೀತಾದರೆ, ಆರೋಪಿಗಳಿಗೆ ಕನಿಷ್ಠ ಒಂದು ವರ್ಷ ಜೈಲು ಶಿಕ್ಷೆ ಮತ್ತು 1 ಲಕ್ಷ ದಿರಾಮ್ ವರೆಗೆ ದಂಡ ವಿಧಿಸುವ ಸಾಧ್ಯತೆ ಇದೆ. ಈ ಹಿಂದೆ, ಇದೇ ರೀತಿ ದೃಶ್ಯಗಳನ್ನು ಚಿತ್ರೀಕರಿಸಿದ ಆರೋಪದ ಮೇಲೆ ಅಬುಧಾಬಿ ಪೊಲೀಸರು 45 ಜನರನ್ನು ಬಂಧಿಸಿದ್ದರು.
ಯುದ್ಧದ ಸಂದರ್ಭದಲ್ಲಿ ಅರಬ್ ರಾಷ್ಟ್ರಗಳು ತತ್ತರಿಸಿದೆ. ಅರಬ್ ಉದ್ಯಮದ ಜೊತೆಗೆ ಪ್ರವಾಸೋದ್ಯಮದ ಮೇಲೂ ಹೊಡೆತ ಬಿದ್ದಿದೆ. ದುಬೈ ಸೇರಿದಂತೆ ಅರಬ್ ರಾಷ್ಟ್ರಗಳು ಸುರಕ್ಷಿತ ಎಂಬ ಭಾವನೆ ಅಂತ್ಯಗೊಂಡಿದೆ. ಇದರಿಂದ ಅರಬ್ ರಾಷ್ಟ್ರಗಳಲ್ಲಿ ಹೂಡಿಕೆಗಳು ಕುಂಠಿತವಾಗುವ, ಕಂಪನಿಗಳು ಬೇರೆಡೆಡೆ ಸ್ಥಳಾಂತರಗೊಳ್ಳುವ ಸಾಧ್ಯತೆಗಳಿವೆ ಎಂಬ ಆತಂಕ ಕಾಡುತ್ತಿದೆ.


