ಚಿಕಿತ್ಸೆ ಫಲಕಾರಿಯಾಗದೆ ಮೊಜ್ತಬಾ ಖಮೇನಿ ಸಾವು, ಫೋನ್ ಮೂಲಕ ಅನುಮಾನ ವ್ಯಕ್ತಪಡಿಸಿದ ಟ್ರಂಪ್, ಅಮೆರಿಕ ಹಾಗೂ ಇಸ್ರೇಲ್ ನಡೆಸಿದ ದಾಳಿಯಲ್ಲಿ ಇರಾನ್ ನೂತನ ಸರ್ವೋಚ್ಚ ನಾಯಕ ಮೊಜ್ತಬಾ ಖಮೇನಿ ಹತ್ಯೆಯಾಗಿದ್ದಾರೆ ಎಂದು ಟ್ರಂಪ್ ಹೇಳಿದ್ದಾರೆ. 

ವಾಶಿಂಗ್ಟನ್ (ಮಾ.15)ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ನಿರಂತರ ದಾಳಿ ನಡೆಸುತ್ತಿದೆ. ಇತ್ತ ಇರಾನ್ ಶರಣಾಗುವುದಿಲ್ಲ ಎಂದು ಖಚಿತಪಡಿಸಿದ್ದು ಮಾತ್ರವಲ್ಲ, ಅಮೆರಿಕಾ ಸೇನಾ ನೆಲೆಗಳನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಫೆಬ್ರವರಿ 28ರಂದು ನಡೆಸಿದ ಪ್ರಬಲ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲ ಅಲಿ ಖಮೇನಿ ಹತ್ಯೆಯಾಗಿದ್ದರು. ಅಲಿ ಖಮೇನಿ ಜೊತೆ ಇಡೀ ಕುಟುಂಬವೇ ಹತ್ಯೆಯಾಗಿತ್ತು. ಬಳಿಕ ಇರಾನ್ ಅಲಿ ಖಮೇನಿ ಸ್ಥಾನಕ್ಕೆ ಪುತ್ರ ಮೊಜ್ತಬಾ ಖಮೇನಿಯನ್ನು ಸರ್ವೋಚ್ಚ ನಾಯಕನಾಗಿ ಆಯ್ಕೆ ಮಾಡಿತ್ತು. ಇದೀಗ ಮೊಜ್ತಬಾ ಖಮೇನಿ ಕೂಡ ದಾಳಿಯಲ್ಲಿ ಹತ್ಯೆಯಾಗಿರುವ ಅನುಮಾನ ಬಲಗೊಂಡಿದೆ ಎಂದು ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಹೇಳಿದ್ದಾರೆ.

ನನಗೆ ಬಂದಿರುವ ಮಾಹಿತಿ ಪ್ರಕಾರ ಮೊಜ್ತಬಾ ಖಮೇನಿ ಹತ್ಯೆ

ಎನ್‌ಬಿಸಿ ನ್ಯೂಸ್ ಸಂಸ್ಥೆ ನಡೆಸಿದ ಫೋನ್ ಸಂದರ್ಶನದಲ್ಲಿ ಟ್ರಂಪ್ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ನಮ್ಮ ದಾಳಿ ಸ್ಪಷ್ಟವಾಗಿತ್ತು ಹಾಗೂ ನಿರ್ದಿಷ್ಟವಾಗಿತ್ತು. ಮೊಜ್ತಬಾ ಖಮೇನಿ ಆಯ್ಕೆ ಶರಣಾಗತಿ, ಯುದ್ಧ ಸೋಲು ಮರೆಮಾಚಲು ಮಾಡಿದ ತಂತ್ರ ಎಂದಿದ್ದಾರೆ. ದಾಳಿಯಲ್ಲಿ ಮೊಜ್ತಬಾ ಖಮೇನಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅವರಿಗೆ ರಹಸ್ಯ ಸ್ಥಳದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಬದುಕುಳಿದ ಖಮೇನಿ ಕುಟುಂಬ ಏಕೈಕ ಸದಸ್ಯನಿಗೆ ಪಟ್ಟ ಕಟ್ಟಲಾಗಿತ್ತು. ಆದರೆ ಇದುವರೆಗೆ ಮೊಜ್ತಬಾ ಖಮೇನಿ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ, ವಿಡಿಯೋ ಹೇಳಿಕೆ ಬಿಡುಗಡೆ ಮಾಡಿಲ್ಲ. ಇರಾನ್ ಜನತೆಯೇ ಮೊಜ್ತಬಾ ಖಮೇನಿ ಎಲ್ಲಿದ್ದಾರೆ ಎಂದು ಪ್ರಶ್ನಿಸುತ್ತಿದ್ದಾರೆ. ನನಗೆ ಬಂದಿರುವ ಮಾಹಿತಿ ಪ್ರಕಾರ ಮೊಜ್ತಬಾ ಖಮೇನಿ ಸಾವು ಕಂಡಿದ್ದಾರೆ. ಒಂದು ಪಕ್ಷ ಮೊಜ್ತಬಾ ಖಮೇನಿ ಬದುಕುಳಿದಿದ್ದರೆ, ಒಂದೇ ಆಯ್ಕೆ ಮುಂದಿದೆ. ಅದು ಶರಣಾಗತಿ ಎಂದು ಟ್ರಂಪ್ ಎಚ್ಚರಿಸಿದ್ದಾರೆ.

ಚಿಕಿತ್ಸೆ ಫಲಕಾರಿಯಾಗದೆ ಸಾವು?

ಕ್ಯಾಮೆರಾ, ವಾಯ್ಸ್ ರೆಕಾರ್ಡ್, ಮೊಬೈಲ್ ಕ್ಯಾಮೆರಾ ಸೇರಿದಂತ ಈಗ ಎಲ್ಲವೂ ಇದೆ. ಆದರೆ ಮೊಜ್ತಬಾ ಖಮೇನಿಯ ಒಂದು ಪತ್ರಿಕಾ ಹೇಳಿಕೆ ಮಾತ್ರ ಬಿಡುಗಡೆಯಾಗಿದೆ. ಹೀಗಾಗಿ ಅನುಮಾನ ಹೆಚ್ಚಾಗಿದೆ. ಸಿಕ್ಕ ಮಾಹಿತಿ ಪ್ರಕಾರ ಚಿಕಿತ್ಸೆ ಫಲಕಾರಿಯಾಗದೆ ಖಮೇನಿ ಸಾವು ಕಂಡಿರುವ ಸಾಧ್ಯತೆ ಹೆಚ್ಚು ಎಂದು ಟ್ರಂಪ್ ಹೇಳಿದ್ದಾರೆ.

ಅಮೆರಿಕಾ ಮೇಲೆ ಪ್ರತೀಕಾರ

ಇರಾನ್ ಮೇಲಿನ ಯುದ್ಧ ಆರಂಭಗೊಂಡು 15 ದಿನಗಳೇ ಉರುಳಿದೆ. ಅತ್ತ ಇಸ್ರೇಲ್ ಸೋತಿಲ್ಲ, ಇತ್ತ ಅಮೆರಿಕ ಬಿಡುತ್ತಿಲ್ಲ. ಆದರೆ ಕಳೆದ 15 ದಿನಗಳಿಂದ ಮೊಜ್ತಬಾ ಖಮೇನಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಗುರುವಾರ (ಮಾರ್ಚ್ 12) ಮೊಜ್ತಬಾ ಖಮೇನಿ ಹೇಳಿಕೆ ಪ್ರಕಟಣೆಯೊಂದು ಬಿಡುಗಡೆಯಾಗಿತ್ತು. ದಾಳಿ ಹಾಗೂ ಅಮೆರಿಕಾಗೆ ಎಚ್ಚರಿಕೆ ನೀಡಿದ ಈ ಪ್ರಕಟಣೆ ಹೊರತುಪಡಿಸಿದರೆ ಮೊಜ್ತಬಾ ಖಮೇನಿಯದ್ದು ಎಂದಿರುವ ಯಾವುದೇ ಒಂದು ಹೇಳಿಕೆ, ವಿಡಿಯೋ ಸಂದೇಶ, ಆದೇಶ ಹೊರಬಿದ್ದಿಲ್ಲ. ಮಾರ್ಚ್ 12ರ ಪತ್ರಿಕಾ ಪ್ರಕಟಣೆಯಲ್ಲಿ ಅಮೆರಿಕ ಹಾಗೂ ಇಸ್ರೇಲ್‌ಗೆ ಎಚ್ಚರಿಕೆ ನೀಡಿದ್ದರು. ಅಮೆರಿಕಾ ಮೇಲೆ ಪ್ರತೀಕಾರ ಮುಂದುವರಿಯಲಿದೆ.ನಾವು ಶರಣಾಗುವುದಿಲ್ಲ. ಅಮರಿಕ ಸೇನಾ ನೆಲೆಗಳ ಮೇಲೆ ನಮ್ಮ ದಾಳಿ ಮುಂದುವರಿಯಲಿದೆ. ಅದು ನಮ್ಮ ನೆರೆ ರಾಷ್ಟ್ರಗಳಲ್ಲಿರುವ ಸೇನಾ ನೆಲೆಗಳನ್ನು ಟಾರ್ಗೆಟ್ ಮಾಡಿ ದಾಳಿ ಮುಂದುವರಿಸಲಾಗುತ್ತದೆ. ನೆರೆ ರಾಷ್ಟ್ರಗಳ ಮೇಲೆ ನಮ್ಮ ಗೆಳೆತನ ಹಾಗೇ ಇರಲಿದೆ. ಆದರೆ ನಮ್ಮ ಉಳಿಯುವಿಕೆಗೆ ಅಮೆರಿಕಾ ಮೇಲೆ ದಾಳಿ ಅನಿವಾರ್ಯವಾಗಿದೆ ಎಂದಿದ್ದರು. ಇದೇ ವೇಳೆ ಹೊರ್ಮುಜ್ ಜಲಸಂಧಿಯಲ್ಲಿನ ನಿರ್ಬಂಧ ಮುಂದುವರಿಯಲಿದೆ ಎಂದಿದ್ದಾರೆ.