ಭಾರತದಲ್ಲಿ ನರೇಂದ್ರ ಮೋದಿ ಸರ್ಕಾರ ‘ಕಿಸಾನ್‌ ಸಮ್ಮಾನ್‌ ನಿಧಿ’ ಹೆಸರಲ್ಲಿ ರೈತರ ಖಾತೆಗೆ ಹಣ ವರ್ಗಾವಣೆ ಮಾಡುವ ರೀತಿಯಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ರೈತರ ಬ್ಯಾಂಕ್‌ ಖಾತೆಗೆ ನೇರ ಹಣ ವರ್ಗಾವಣೆ ಯೋಜನೆ ಪ್ರಕಟಿಸಿದ್ದಾರೆ.

ವಾಷಿಂಗ್ಟನ್‌: ಭಾರತದಲ್ಲಿ ನರೇಂದ್ರ ಮೋದಿ ಸರ್ಕಾರ ‘ಕಿಸಾನ್‌ ಸಮ್ಮಾನ್‌ ನಿಧಿ’ ಹೆಸರಲ್ಲಿ ರೈತರ ಖಾತೆಗೆ ಹಣ ವರ್ಗಾವಣೆ ಮಾಡುವ ರೀತಿಯಲ್ಲೇ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೂಡ ರೈತರ ಬ್ಯಾಂಕ್‌ ಖಾತೆಗೆ ನೇರ ಹಣ ವರ್ಗಾವಣೆ ಯೋಜನೆ ಪ್ರಕಟಿಸಿದ್ದಾರೆ.

ವಿದೇಶಗಳ ಮೇಲೆ ಇತ್ತೀಚೆಗೆ ಹೇರಿದ ಹೊಸ ತೆರಿಗೆಯಿಂದ ಭಾರೀ ಪ್ರಮಾಣದ ಹಣ ಹರಿದುಬರುತ್ತಿದ್ದು, ಈ ಪೈಕಿ ಮೊದಲಿಗೆ 1 ಲಕ್ಷ ಕೋಟಿ ರು.ನಷ್ಟು ಹಣವನ್ನು ರೈತರಿಗೆ ನೀಡುವುದಾಗಿ ಹೇಳಿದ್ದಾರೆ.

ಅಮೆರಿಕದ ತೆರಿಗೆಗೆ ಪ್ರತಿಯಾಗಿ ಚೀನಾ ಕೂಡ ತನ್ನಲ್ಲಿ ಮಾರಾಟವಾಗುವ ಅಮೆರಿಕದ ಧಾನ್ಯ, ಸೋಯಾಬೀನ್ ಸೇರಿದಂತೆ ಕೆಲ ಕೃಷಿ ಉತ್ಪನ್ನಗಳ ಮೇಲೆ ಪ್ರತಿತೆರಿಗೆ ವಿಧಿಸಿದೆ. ಇದರಿಂದ ಚೀನಾದ ಮಾರುಕಟ್ಟೆಯಲ್ಲಿ ಅಮೆರಿಕದ ಉತ್ಪನ್ನಗಳ ಬೆಲೆ ಹೆಚ್ಚಿದ್ದು, ಟ್ರಂಪ್‌ ಸಾಮ್ರಾಜ್ಯದ ಕೃಷಿಕರಿಗೆ ಅವುಗಳನ್ನು ಯಥೇಚ್ಛವಾಗಿ ಮಾರಾಟ ಮಾಡಲಾಗದೆ ನಷ್ಟವಾಗುತ್ತಿದೆ. ಇದನ್ನು ಭರಿಸುವ ಸಲುವಾಗಿ, ತೆರಿಗೆ ಹಣದಿಂದ ರೈತರಿಗಾಗಿ 1 ಲಕ್ಷ ಕೋಟಿ ರು. ಮೀಸಲಿಡುವುದಾಗಿ ಟ್ರಂಪ್‌ ಸೋಮವಾರ ಘೋಷಿಸಿದ್ದಾರೆ. ಮುಂದಿನ ಫೆಬ್ರವರಿಯ ಅಂತ್ಯದಲ್ಲಿ ಈ ಮೊತ್ತ ರೈತರಿಗೆ ಸಿಗಲಿದೆ. 98 ಸಾವಿರ ಕೋಟಿ ರು. ಅನ್ನು ಸೋಯಾಬೀನ್‌, ಜೋಳ, ಬೇಳೆ, ಗೋಧಿ, ಅಕ್ಕಿ ಮತ್ತು ಹತ್ತಿ ಬೆಳೆಗಾರರಿಗೆ ಒಮ್ಮೆ ಪಾವತಿಸಲಾಗುವುದು. ಉಳಿದ ಹಣವನ್ನು ಹಣ್ಣು, ತರಕಾರಿ, ಬೀಜ, ಆಲೂಗಡ್ಡೆ ಬೆಳೆಯುವವರಿಗೆ ನೀಡಲಾಗುವುದು.

ಈ ಮೊದಲು, ಅಮೆರಿಕದ ಜನಸಾಮಾನ್ಯರಿಗೆ 1.79 ಲಕ್ಷ ರು. ನೀಡುವುದಾಗಿ ಟ್ರಂಪ್‌ ಘೋಷಿಸಿದ್ದರು.

ರಾಜಕೀಯ ಲೆಕ್ಕಾಚಾರ:

ಅಮೆರಿಕದ ಕೃಷಿಕರಲ್ಲಿ ಬಹುತೇಕರು ಟ್ರಂಪ್‌ ಬೆಂಬಲಿಗರು. ಅನ್ಯ ದೇಶಗಳ ತೆರಿಗೆಯಿಂದಾಗಿ, ಅವರಿಗೆ ನಷ್ಟವಾಗುತ್ತಿರುವುದರಿಂದ ಟ್ರಂಪ್‌ ಅದನ್ನು ತಗ್ಗಿಸಲು ಮುಂದಾಗಿದ್ದಾರೆ. ಇದಕ್ಕೂ ಮೊದಲು, ತಮ್ಮ ಕೃಷಿ ರಫ್ತು ಹೆಚ್ಚಿಸಲು, ತಳೀಯವಾಗಿ ಮಾರ್ಪಾಡು ಮಾಡಲಾದ(ಜಿಎಂ) ಬೆಳೆಗಳನ್ನು ಹಾಗೂ ನಾನ್‌-ವೆಜ್‌ ಹಾಲನ್ನು ಆಮದು ಮಾಡಿಕೊಳ್ಳುವಂತೆ ಭಾರತವನ್ನು ಒತ್ತಾಯಿಸಲು ಶುರು ಮಾಡಿದ್ದರು.

ಏಕೆ ಈ ಸ್ಕೀಂ?

- ಅಮೆರಿಕ ಸುಂಕಕ್ಕೆ ಪ್ರತಿಯಾಗಿ ಚೀನಾದಿಂದಲೂ ಅಮೆರಿಕ ಮೇಲೆ ದುಬಾರಿ ತೆರಿಗೆ

- ಇದರಿಂದ ಅಮೆರಿಕ ಕೃಷಿ ಉತ್ಪನ್ನ ಚೀನಾದಲ್ಲಿ ದುಬಾರಿ. ಅಮೆರಿಕ ರೈತರಿಗೆ ನಷ್ಟ

- ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಮೋದಿ ‘ಕಿಸಾನ್‌ ಸಮ್ಮಾನ್‌’ ರೀತಿ ಟ್ರಂಪ್‌ ಸ್ಕೀಂ

- ಸುಂಕ ಹೇರಿಕೆಯಿಂದ ಸಂಗ್ರಹಿಸಿದ ಹಣದ ಪೈಕಿ 1 ಲಕ್ಷ ಕೋಟಿ ರು. ರೈತರಿಗೆ ವರ್ಗ

- ಫೆಬ್ರವರಿ ತಿಂಗಳ ಅಂತ್ಯದಲ್ಲಿ ಅಮೆರಿಕ ರೈತರಿಗೆ ಸಿಗಲಿದೆ ಟ್ರಂಪ್‌ ಸರ್ಕಾರದ ಹಣ