ಅಮೆರಿಕಕ್ಕೆ ಬರುವವರಿಗೆ ನೀಡಲಾಗುವ ಎಚ್-1ಬಿ ಹಾಗೂ ಅವರ ಜತೆ ಆಗಮಿಸುವವರಿಗೆ ಕೊಡಲಾಗುವ ಎಚ್-4 ವೀಸಾಗೆ ಸಂಬಂಧಿಸಿದಂತೆ ಕಠಿಣ ನಿಯಮ ಜಾರಿಗೆ ತರುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಎಲ್ಲಾ ಅರ್ಜಿದಾರರಿಗೆ ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಸಾರ್ವಜನಿಕಗೊಳಿಸುವಂತೆ ಸೂಚಿಸಿದ್ದಾರೆ.
ನ್ಯೂಯಾರ್ಕ್/ ವಾಷಿಂಗ್ಟನ್: ಉದ್ಯೋಗಕ್ಕಾಗಿ ಅಮೆರಿಕಕ್ಕೆ ಬರುವವರಿಗೆ ನೀಡಲಾಗುವ ಎಚ್-1ಬಿ ಹಾಗೂ ಅವರ ಜತೆ ಆಗಮಿಸುವವರಿಗೆ ಕೊಡಲಾಗುವ ಎಚ್-4 ವೀಸಾಗೆ ಸಂಬಂಧಿಸಿದಂತೆ ಕಠಿಣ ನಿಯಮ ಜಾರಿಗೆ ತರುತ್ತಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಎಲ್ಲಾ ಅರ್ಜಿದಾರರಿಗೆ ತಮ್ಮ ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಸಾರ್ವಜನಿಕಗೊಳಿಸುವಂತೆ ಸೂಚಿಸಿದ್ದಾರೆ.
ಈ ಮೊದಲು, ವಿದ್ಯಾರ್ಥಿಗಳು ಮತ್ತು ಅಲ್ಪಾವಧಿಗೆ ಅಮೆರಿಕಕ್ಕೆ ಬರುವವರಿಗಷ್ಟೇ ಖಾತೆಗಳನ್ನು ಪಬ್ಲಿಕ್ ಮಾಡಲು ನಿರ್ದೇಶಿಸಲಾಗಿತ್ತು. ಈಗ ಅದನ್ನು ಎಚ್-1ಬಿ ಹಾಗೂ ಎಚ್-4 ವೀಸಾಗೂ ವಿಸ್ತರಿಸಲಾಗಿದೆ. ಇದಕ್ಕೆ ಕಾರಣವನ್ನೂ ತಿಳಿಸಿರುವ ಅಮೆರಿಕದ ಗೃಹ ಸಚಿವಾಲಯ, ‘ಅರ್ಜಿದಾರರು ರಾಷ್ಟ್ರೀಯ ಹಿತದೃಷ್ಟಿ, ಭದ್ರತೆ ಹಾಗೂ ಇಲ್ಲಿನವರಿಗೆ ಅಪಾಯಕಾರಿಯಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲು ಎಲ್ಲರ ಸಾಮಾಜಿಕ ಮಾದ್ಯಮ ಖಾತೆಗಳನ್ನು ಪರಿಶೀಲಿಸಲಾಗುವುದು. ಜತೆಗೆ, ಅವರು ಅಮೆರಿಕಕ್ಕೆ ಬರಲು ಅರ್ಹರೇ ಎಂಬುದನ್ನೂ(ಅವರ ಪೋಸ್ಟ್‌ಗಳ ಆಧಾರದಲ್ಲಿ) ನಿರ್ಧರಿಸಲಾಗುವುದು’ ಎಂದಿದೆ. ಜತೆಗೆ ವೀಸಾ ಪಡೆಯುವುದು ಹಕ್ಕಲ್ಲ, ಅದೊಂದು ಸವಲತ್ತು ಎಂದು ಪುನರುಚ್ಚರಿಸುವ ಮೂಲಕ ತನ್ನ ಶ್ರೇಷ್ಠತೆಯನ್ನು ಮೆರೆದಿದೆ.
ಏನೇನು ಪರಿಶೀಲನೆ?:
ಅರ್ಜಿದಾರರು ಅಮೆರಿಕ ವಿರೋಧಿ ಮನಸ್ಥಿತಿ ಹೊಂದಿದ್ದಾರೆಯೇ ಹಾಗೂ ಅಂಥವರನ್ನು ಬೆಂಬಲಿಸುತ್ತಾರೆಯೇ ಎಂಬುದನ್ನು, ಅವರು ಮಾಡುವ ಪೋಸ್ಟ್, ಕಮೆಂಟ್‌ಗಳ ಆಧಾರದಲ್ಲಿ ಪರಿಶೀಲಿಸಲಾಗುತ್ತದೆ. ಜತೆಗೆ, ಅಪಾಯಕಾರಿ ವ್ಯಕ್ತಿಗಳು ಅಥವಾ ಉಗ್ರರ ನಂಟಿದೆಯೇ ಎಂಬುದನ್ನೂ ನೋಡಲಾಗುತ್ತದೆ. ಇದರೊಂದಿಗೆ, ಅವರ ಆರ್ಥಿಕ, ಸಾಮಾಜಿಕ ಸ್ಥಿತಿಗತಿ, ಹಿನ್ನೆಲೆಯನ್ನೂ ಕೊಂಚ ಮಟ್ಟಿಗೆ ಅರಿಯಬಹುದು.
ಈಗಾಗಲೇ ಎಚ್-1ಬಿ ವೀಸಾ ದರವನ್ನು ಏರಿಸಿರುವ ಟ್ರಂಪ್
ಈಗಾಗಲೇ ಎಚ್-1ಬಿ ವೀಸಾ ದರವನ್ನು ಏರಿಸಿರುವ ಟ್ರಂಪ್, ಇತ್ತೀಚೆಗಷ್ಟೇ ಭದ್ರತೆ ಕಾರಣ ನೀಡಿ 19 ರಾಷ್ಟ್ರದವರಿಗೆ ಗ್ರೀನ್ ಕಾರ್ಡ್(ಅಮೆರಿಕದ ನಾಗರಿಕತ್ವ) ವಿತರಣೆಯನ್ನು ನಿಲ್ಲಿಸಿದ್ದರು.

