ಪುರಾತತ್ವ ಇಲಾಖೆ ನಿರ್ವಹಿಸುವ ಪ್ರಾಚೀನ ತಾಣ ವೀಕ್ಷಿಸಲು ತೆರಳಿದ ಪ್ರವಾಸಿಗರಿದ್ದ ವಿಮಾನ ಪತನಗೊಂಡಿದೆ. ಪರಿಣಾಮ ವಿಮಾನದಲ್ಲಿ 13 ಪ್ರವಾಸಿಗರು ಜೀವಂತ ದಹನವಾಗಿದ್ದಾರೆ. ಘಟನೆ ದೃಶ್ಯಗಳು ಹೊರಬಂದಿದ್ದು, ಭೀಕರತೆಯ ಸಾರುತ್ತಿದೆ.
ಪೆರು (ಆ.02) ಪ್ರವಾಸಿಗರಿದ್ದ ವಿಮಾನ ಪತನಗೊಂಡು ದುರಂತ ಸಂಭವಿಸಿದೆ. ಪುರಾತತ್ವ ಇಲಾಖೆಯ ಪ್ರಸಿದ್ದ ತಾಣ ವೀಕ್ಷಣೆಗೆ ತೆರಳಿದ್ದ 11 ಪ್ರಯಾಣಿಕರು ಹಾಗೂ ಇಬ್ಬರು ಪೈಲೆಟ್‌ಗಳಿದ್ದ ವಿಮಾನ ತಾಂತ್ರಿಕ ಕಾರಣಗಳಿಂದ ದುರಂತಕ್ಕೀಡಾದ ಘಟನೆ ದಕ್ಷಿಣ ಅಮೆರಿಕ ಖಂಡದ ಪೆರುವಿನಲ್ಲಿ ನಡೆದಿದೆ. ಪೆರುವಿನಲ್ಲಿರುವ ಯುನೆಸ್ಕೋ ವಿಶ್ವ ಪಾರಂಪರಿಕ ತಾಣವಾಗಿರುವ ನಾಜ್ಕಾ ಲೈನ್ಸ್ ತಾಣಕ್ಕೆ 11 ಪ್ರವಾಸಿಗರು ತೆರಳಿದ್ದರು. ವೈಮಾನಿಕ ವೀಕ್ಷಣೆ ವೇಳೆ ವಿಮಾನ ಪತನಗೊಂಡಿದೆ. ಪರಿಣಾಮ ಒಟ್ಟು 13 ಮಂದಿ ದುರಂತ ಅಂತ್ಯಕಂಡಿದ್ದಾರೆ.
11 ವಿದೇಶಿ ಪ್ರವಾಸಿಗರು ಸಾವು
ನಾಜ್ಕಾದ ಪುಯೆಬ್ಲೋ ವಿಯೆಜೋ ಪ್ರದೇಶದಲ್ಲಿ ವಿಮಾನ ಪತನಗೊಂಡಿದೆ. ವಿಮಾನ ಪತನದ ಬೆನ್ನಲ್ಲೇ ಬೆಂಕಿಯ ಜ್ವಾಲೆ ಆವರಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಸಂಪೂರ್ಣ ವಿಮಾನ ಹೊತ್ತಿ ಉರಿದಿದೆ. ಈ ವಿಮಾನದಲ್ಲಿ 11 ವಿದೇಶಿ ಪ್ರವಾಸಿಗರು ನಾಜ್ಕಾ ಲೈನ್ಸ್ ತಾಣ ವೀಕ್ಷಿಸಲು ಹಾಗೂ ಅಧ್ಯಯನಕ್ಕೆ ತೆರಳಿದ್ದರು. ಘಟನೆ ಕುರಿತು ಪೆರು ಪ್ರವಾಸೋದ್ಯಮ ಇಲಾಖೆ ಅಧಿಕೃತ ಪ್ರಕಟಣೆ ಹೊರಡಿಸಿದೆ. ವಿದೇಶಿ ಪ್ರವಾಸಿಗರಲ್ಲಿ ಯೂರೋಪ್ ಮೂಲದವರೇ ಹೆಚ್ಚಾಗಿದ್ದರು ಎಂದು ಇಲಾಖೆ ಹೇಳಿದೆ.
ಸಂಪರ್ಕ ಕಡಿತಗೊಂಡ ಬೆನ್ನಲ್ಲೇ ವಿಮಾನ ಪತನ
ಶನಿವಾರ (ಆ.01) ಮಧ್ಯಾಹ್ನ 1 ಗಂಟೆ ಸುಮಾರಿಗೆ ಪೆರುವಿನ ನಾಜ್ಕಾ ಲೈನ್ಸ್ ಪಾರಂಪರಿಕ ತಾಣದ ವೈಮಾನಿಕ ವೀಕ್ಷಣೆಗೆ ಪ್ರವಾಸಿಗರು ತೆರಳಿದ್ದಾರೆ. ಏರೋಡಿಯಾನಾ ಸಂಸ್ಥೆಗೆ ಸೇರಿದ ಸಣ್ಣ ವಿಮಾನದಲ್ಲಿ ಪ್ರವಾಸಿಗರು ಪ್ರಯಾಣ ಬೆಳೆಸಿದ್ದಾರೆ. ಪಿಸ್ಕೋ ನಗರದಿಂದ ವಿಮಾನ ಟೇಕ್ ಆಫ್ ಆಗಿತ್ತು. ನಾಜ್ಕಾ ಲೈನ್ಸ್ ಪಾರಂಪರಿಕ ತಾಣ ಸಮೀಪಿಸುತ್ತಿದ್ದಂತೆ ವಿಮಾನದ ಸಂಪರ್ಕ ಕಡಿತಗೊಂಡಿದೆ. ವಿಮಾನದಲ್ಲಿ ತಾಂತ್ರಿಕ ದೋಷಗಳು ಕಾಣಿಸಿಕೊಂಡಿದೆ ಎನ್ನಲಾಗಿದೆ. ಏರ್ ಟ್ರಾಫಿಕ್ ಕಂಟ್ರೋಲ್ ರೂಂ ಸಂಪರ್ಕ ಕಡಿತಗೊಂಡ ಬೆನ್ನಲ್ಲೇ ವಿಮಾನ ಪತನಗೊಂಡಿದೆ. ಅತ್ಯಂತ ಭೀಕರ ಪತನದ ಕಾರಣ ಯಾರೂ ಬದುಕುಳಿದಿಲ್ಲ ಎಂದು ಪೆರು ಪೊಲೀಸರು ಹೇಳಿದ್ದಾರೆ.
ನಾಜ್ಕಾ ಲೈನ್ಸ್ ಅತ್ಯಂತ ಪುರಾತನ ಹಾಗೂ ಪಾರಂಪರಿಕ ತಾಣ. ಸಾವಿರ ವರ್ಷಗಳ ಹಿಂದೆ ಇಲ್ಲಿನ ಮೂಲ ನಿವಾಸಿಗಳು ಬಂಡೆ ಕಲ್ಲುಗಳ ಮೇಲೆ ಬೃಹತ್ ಆಕಾರದ ಪ್ರಾಣಿಗಳು, ಪಕ್ಷಿಗಳು ಸೇರಿದಂತೆ ಹಲವು ಆಕೃತಿಗಳ ಚಿತ್ರಗಳನ್ನು ಕೆತ್ತಲಾಗಿದೆ. ಎತ್ತರದಿಂದ ಈ ಬಂಡೆ ಕಲ್ಲುಗಳು, ಕೆತ್ತನೆಗಳನ್ನು ನೋಡಿದರೆ ಮಾತ್ರ ಈ ಚಿತ್ರಗಳ ಆಕೃತಿಗಳು ಸ್ಪಷ್ಟವಾಗಲಿದೆ. ಹೀಗಾಗಿ ನಾಜ್ಕಾ ಲೈನ್ಸ್‌ನಲ್ಲಿ ವೈಮಾನಿಕ ವೀಕ್ಷಣೆ ಸಾಮಾನ್ಯವಾಗಿದೆ. ಇಲ್ಲಿ ಹಲವು ಸಂಸ್ಥೆಗಳ ವೈಮಾನಿಕ ವೀಕ್ಷಣೆ ವಿಮಾನಗಳು ಲಭ್ಯವಿದೆ. ಪ್ರತಿ ದಿನ ಹಲವಾರು ಪ್ರವಾಸಿಗರು ಆಗಮಿಸುತ್ತಾರೆ.


