Asianet Suvarna News Asianet Suvarna News

ಉತ್ತರ ಕೊರಿಯಾದ ಹೈಡ್ರೋಜನ್‌ ಬಾಂಬ್‌ ತೀವ್ರತೆಗೆ ಬೆಟ್ಟವೇ ಸರಿದಿತ್ತು!

ಅಮೆರಿಕಕ್ಕೆ ಸಡ್ಡು ಹೊಡೆಯುವ ಸಲುವಾಗಿ 2017ರ ಸೆ.3ರಂದು ಉತ್ತರ ಕೊರಿಯಾ ನಡೆಸಿದ್ದ ಜಲಜನಕ ಬಾಂಬ್‌ ಪರೀಕ್ಷೆಯಿಂದಾಗಿ, ಪರೀಕ್ಷೆ ನಡೆಸಿದ ಸ್ಥಳದ ಮೇಲಿನ ಪರ್ವತವೇ ಸ್ಥಳಾಂತರವಾಗಿತ್ತು ಎಂಬ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ.

This Is The Effect Of North Korea hydrogen Bomb
Author
Bengaluru, First Published Nov 16, 2019, 7:36 AM IST

ನವದೆಹಲಿ [ನ.16]:  ಅಮೆರಿಕಕ್ಕೆ ಸಡ್ಡು ಹೊಡೆಯುವ ಸಲುವಾಗಿ 2017ರ ಸೆ.3ರಂದು ಉತ್ತರ ಕೊರಿಯಾ ನಡೆಸಿದ್ದ ಜಲಜನಕ ಬಾಂಬ್‌ ಪರೀಕ್ಷೆಯಿಂದಾಗಿ, ಪರೀಕ್ಷೆ ನಡೆಸಿದ ಸ್ಥಳದ ಮೇಲಿನ ಪರ್ವತವೇ ಸ್ಥಳಾಂತರವಾಗಿತ್ತು ಎಂಬ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ. ಇನ್ನೊಂದು ವಿಷಯವೆಂದರೆ ಇಡೀ ಜಗತ್ತಿಗೆ ಆತಂಕ ಹುಟ್ಟುಹಾಕಿದ್ದ ಈ ಬಾಂಬ್‌ ಸ್ಫೋಟದ ತೀವ್ರತೆಯು, 1945ರಲ್ಲಿ ಜಪಾನ್‌ನ ಹಿರೋಶಿಮಾ ನಗರದ ಮೇಲೆ ಮೇಲೆ ಅಮೆರಿಕ ಪ್ರಯೋಗಿಸಿದ್ದ ಅಣು ಬಾಂಬ್‌ಗಿಂತ 17 ಪಟ್ಟು ಶಕ್ತಿಶಾಲಿಯಾಗಿತ್ತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳ ಅಧ್ಯಯನ ವರದಿ ಹೇಳಿದೆ.

ಅಹಮದಾಬಾದ್‌ ಇಸ್ರೋ ಕೇಂದ್ರದ ಸಂಶೋಧಕರಾದ ಕೆ.ಎಂ.ಶ್ರೀಜಿತ್‌, ರಿತೇಶ್‌ ಅಗರ್‌ವಾಲ್‌ ಹಾಗೂ ಎ.ಎಸ್‌.ರಾಜಾವತ್‌ ಅವರ ತಂಡ ನಡೆಸಿದ ಅಧ್ಯಯನ ಇದಾಗಿದೆ. ಜಿಯೋಫಿಸಿಕಲ್‌ ಜರ್ನಲ್‌ ಇಂಟರ್‌ನ್ಯಾಷನಲ್‌ ಎಂಬ ಜರ್ನಲ್‌ನಲ್ಲಿ ಈ ವರದಿ ಪ್ರಕಟಗೊಂಡಿದೆ.

ಸಾಮಾನ್ಯವಾಗಿ ಪರಮಾಣು ಸ್ಫೋಟಗಳ ತೀವ್ರತೆಯ ಕುರಿತು ವಿಶ್ವದ ವಿವಿಧ ಭಾಗಗಳಲ್ಲಿ ಅಳವಡಿಸಲಾಗಿರುವ ಉಪಕರಣಗಳ ಮೂಲಕ ಮಾಹಿತಿ ಕಲೆ ಹಾಕಲಾಗುತ್ತದೆ. ಆದರೆ ಉ. ಕೊರಿಯಾ ನಡೆಸಿದ ಸ್ಫೋಟದ ಕುರಿತು ಇಂಥ ಉಪಕರಣಗಳಿಂದ ಯಾವುದೇ ಮಾಹಿತಿ ಲಭ್ಯವಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಸ್ರೋದ ವಿಜ್ಞಾನಿಗಳ ತಂಡ ಜಪಾನ್‌ನ ಎಎಲ್‌ಒಎಸ್‌-2 ಉಪಗ್ರಹದಲ್ಲಿನ ಸಿಂಥೆಟಿಕ್‌ ಅಪರ್ಚರ್‌ ರಾಡಾರ್‌ಗಳನ್ನು ಬಳಸಿಕೊಂಡು, ಸ್ಫೋಟ ನಡೆದಿದೆ ಎನ್ನಲಾದ ಸ್ಥಳಗಳ ವಿವಿಧ ಚಿತ್ರಗಳನ್ನು ಸಂಗ್ರಹಿಸಿತ್ತು. ಇದರ ಆಧಾರದಲ್ಲಿ ಪರಿಶೀಲನೆ ಮಾಡಿದಾಗ, ಸ್ಫೋಟ ನಡೆಯುವ ಮೊದಲಿಗೂ, ಸ್ಫೋಟ ನಂತರದ ಚಿತ್ರಗಳಲ್ಲಿ ಭಾರೀ ಬದಲಾವಣೆ ಕಂಡುಬಂದಿದೆ. ಉದಾಹರಣೆಗೆ ಸ್ಫೋಟ ನಡೆಸಲಾದ ಮ್ಯಾನ್‌ಟ್ಯಾಪ್‌ ಶಿಖರದ ತಳಭಾಗವು ಹಲವು ಮೀಟರ್‌ಗಳನ್ನು ಮುಂದೆ ಸರಿದಿದ್ದರೆ, ಶಿಖರದ ಪಾಶ್ರ್ವ ಭಾಗವು ಅರ್ಧ ಮೀಟರ್‌ನಷ್ಟುತಿರುಗಿರುವುದು ಕಂಡುಬಂದಿದೆ.

ಜೊತೆಗೆ ಈ ಜಲಜನಕ ಬಾಂಬ್‌ ಸ್ಫೋಟವು ಎರಡನೇ ಮಹಾಯುದ್ಧದ ವೇಳೆ ಅಮೆರಿಕವು, ಜಪಾನ್‌ನ ಹಿರೋಶಿಮಾ ನಗರದ ಮೇಲೆ ಹಾಕಿದ್ದ ಬಾಂಬ್‌ಗಿಂತ 17 ಪಟ್ಟು ಹೆಚ್ಚು ತೀವ್ರತೆಯನ್ನು ಹೊಂದಿತ್ತು. ಹಿರೋಶಿಮಾ ಬಾಂಬ್‌ 15 ಕಿಲೋಟನ್‌ ತೀವ್ರತೆ ಹೊಂದಿದ್ದರೆ, ಉ.ಕೊರಿಯಾದ ಬಾಂಬ್‌ 245 ರಿಂದ 271 ಕಿಲೋಟನ್‌ಗಳಷ್ಟುತೀವ್ರತೆಯನ್ನು ಹೊಂದಿತ್ತು ಎಂದು ವಿಜ್ಞಾನಿಗಳ ತಂಡ ಹೇಳಿದೆ.

Follow Us:
Download App:
  • android
  • ios