ಸಾಮಾನ್ಯವಾಗಿ ನಾಯಕರು, ಗಣ್ಯ ವ್ಯಕ್ತಿಗಳ ಮೂರ್ತಿಗಳನ್ನು ಸ್ಥಾಪಿಸುವುದು ಸಹಜ. ಆದರೆ ಲಂಡನ್‌ನಲ್ಲಿ ಸ್ಯಾಂಡ್‌ವಿಚ್ ತಿಂದ ಇಲಿಗಳ ಸ್ಮರಣಾರ್ಥವಾಗಿ ಒಂದು ಸಣ್ಣ ಮೂರ್ತಿಯನ್ನು ಸ್ಥಾಪಿಸಲಾಗಿದೆ. 1862 ರಲ್ಲಿ ಕಟ್ಟಡ ನಿರ್ಮಾಣದ ವೇಳೆ, ಸ್ಯಾಂಡ್‌ವಿಚ್‌ಗಾಗಿ ಜಗಳವಾಡಿ ಇಬ್ಬರು ಕಾರ್ಮಿಕರು ಆಯತಪ್ಪಿ ಬಿದ್ದು ಸಾವನ್ನಪ್ಪಿದರು. ಕಾರ್ಮಿಕರ ನೆನಪಿಗಾಗಿ ಈ ವಿಶಿಷ್ಟ ಮೂರ್ತಿಯನ್ನು ಸ್ಥಾಪಿಸಲಾಯಿತು. ಇದು ಲಂಡನ್‌ನ ಫಿಲ್‌ಪಾಟ್ ಲೇನ್‌ನಲ್ಲಿದೆ.

ಪ್ರತಿಮೆ ನಿರ್ಮಾಣಕ್ಕೆ ಕಾರಣಗಳೇ ಬೇಕೆಂದೇನಿಲ್ಲ. ದೇವರ ಮೂರ್ತಿಮಾಡುವುದು ಸಹಜ. ಅದೇ ರೀತಿ ಅಗಲಿದ ನಾಯಕರು, ಗಣ್ಯವ್ಯಕ್ತಿಗಳು, ಸೆಲೆಬ್ರಿಟಿಗಳಿಗಾಗಿ ಮೂರ್ತಿಮಾಡುವುದೂ ನಡೆದೇ ಇದೆ. ಕೆಲವರು ತಮ್ಮ ನೆಚ್ಚಿನ ನಟ-ನಟಿಯರ ಮೂರ್ತಿಗಳನ್ನು ದೇವರ ಗುಡಿಯಲ್ಲಿ ಇಟ್ಟು ಪೂಜಿಸುವುದೂ ನೋಡಿಯಾಗಿದೆ. ಇನ್ನು ಕೆಲವರು ತಮ್ಮ ಅಪ್ಪ-ಅಮ್ಮನ ಸ್ಮರಣಾರ್ಥ ಮೂರ್ತಿ ತಯಾರಿಸಿ ಅದನ್ನು ಭಕ್ತಿಯಿಂದ ಪೂಜಿಸುತ್ತಾರೆ. ಇವೆಲ್ಲವೂ ಸರಿ... ಆದರೆ ಇಲಿಗಳ ಮೂರ್ತಿಯನ್ನು ಎಲ್ಲಿಯಾದ್ರೂ ನೋಡಿದ್ರಾ? ನೋಡಿಯೇ ಇರುತ್ತೀರಿ... ಎಷ್ಟೆಂದರೂ ಮೂಷಕ ನಮ್ಮ ಗಣಪನ ವಾಹನ ಅಲ್ಲವೆ? ಅದಕ್ಕಾಗಿ ಗಣಪತಿ ಇರುವಲ್ಲಿ ಇಲಿಯ ಮೂರ್ತಿ ಇರಲೇಬೇಕು, ಇದರಲ್ಲೇನೂ ವಿಶೇಷವಿಲ್ಲ. 

ಆದರೆ ಇಲ್ಲಿ ಹೇಳಹೊರಟಿರುವುದು ಈ ಮೂಷಕನ ಬಗ್ಗೆ ಅಲ್ಲ. ಆದರೆ ಕುತೂಹಲದ ಕಥೆ ಇದು. ಸ್ಯಾಂಡ್​ವಿಚ್​ ತಿಂದು ಸಿಕ್ಕಿಬಿದ್ದ ಇಲಿಗಳ ಸ್ಮರಣಾರ್ಥ ಸ್ಥಾಪಿಸಲಾಗಿರುವ ಮೂರ್ತಿ ಇದು! ಅರೆರೆ... ಇದೇನು ಅಂದ್ರಾ? ಇದೇನು ಕಟ್ಟುಕಥೆ ಅಲ್ಲ. ಲಂಡನ್‌ನ ಅತ್ಯಂತ ಚಿಕ್ಕ ಸಾರ್ವಜನಿಕ ಮೂರ್ತಿ ಎಂದೇ ಇದು ಫೇಮಸ್ಸು. ಇದಕ್ಕೆ "ದಿ ಟು ಮೈಸ್ ಈಟಿಂಗ್ ಚೀಸ್" ಎಂದು ಕರೆಯಲಾಗುತ್ತದೆ. ಲಂಡನ್​ಗೆ ಹೋದರೆ ಈ ಇಲಿಯ ಮೂರ್ತಿಯನ್ನು ನೀವು ನೋಡಬಹುದಾಗಿದೆ. 1862 ರಲ್ಲಿ ಸ್ಕ್ಯಾಫೋಲ್ಡಿಂಗ್‌ ಬಿಲ್ಡಿಂಗ್​ನಿಂದ ಬಿದ್ದು ಸಾವನ್ನಪ್ಪಿರುವ ಇಬ್ಬರು ಕಾರ್ಮಿಕರ ನೆನಪಿಗಾಗಿ ಇಲಿಯ ಈ ಮೂರ್ತಿಯನ್ನು ಸ್ಥಾಪಿಸಲಾಗಿದೆ! ಕಾರ್ಮಿಕರಿಗೂ, ಈ ಇಲಿಗೂ ಏನು ಸಂಬಂಧ ಎನ್ನುವುದೇ ಇಲ್ಲಿರುವ ರೋಚಕಥೆ.

ಐನ್‌ಸ್ಟೈನ್ ಮಿದುಳು ಕದ್ದು 240 ಪೀಸ್‌ ಮಾಡಿ ಮೊಮ್ಮಗಳಿಗೆ ಗಿಫ್ಟ್‌ ಕೊಟ್ಟಿದ್ದ ವೈದ್ಯ! ವಿಜ್ಞಾನಿಯ ರೋಚಕ ಕಥೆ ಇಲ್ಲಿದೆ...

 ಸ್ಕ್ಯಾಫೋಲ್ಡಿಂಗ್‌ ಬಿಲ್ಡಿಂಗ್​ ನಿರ್ಮಾಣದ ಸಮಯದಲ್ಲಿ ನಡೆದ ಘಟನೆ ಇದಂತೆ. ಇಬ್ಬರು ಕಟ್ಟಡ ಕಾರ್ಮಿಕರು ಕಟ್ಟಡ ನಿರ್ಮಾಣದ ಸಮಯದಲ್ಲಿ ಚೀಸ್​ ಹಾಕಿದ್ದ ಸ್ಯಾಂಡ್​ವಿಚ್​ ತಂದು ಇಟ್ಟಿದ್ದರು. ಹಸಿವಾದಾಗ ಅದನ್ನು ತಿನ್ನುವುದು ಅವರ ಬಯಕೆಯಾಗಿತ್ತು. ಅಲ್ಲಿಯೇ ಒಂದು ಕಡೆ ಅದನ್ನು ಜೋಪಾನವಾಗಿ ಇಟ್ಟುಕೊಂಡಿದ್ದರು. ಬಳಿಕ ಸ್ವಲ್ಪ ಹೊತ್ತು ಬಿಟ್ಟು ನೋಡಿದಾಗ ಸ್ಯಾಂಡ್​ವಿಚ್​ ನಾಪತ್ತೆಯಾಗಿತ್ತು. ಇಬ್ಬರಿಗೂ ಒಬ್ಬರ ಮೇಲೊಬ್ಬರಿಗೆ ಡೌಟ್​ ಬಂತು. ಇಬ್ಬರೂ ಜಗಳವಾಡಿಕೊಳ್ಳಲು ಆರಂಭಿಸಿದರು. ಈ ಜಗಳದಿಂದಾಗಿ ಕೈಕೈ ಮಿಲಾಯಿಸಿಕೊಳ್ಳಲು ಶುರು ಮಾಡಿದರು. ಕೊನೆಗೆ ನೋಡಿದಾಗ ಅಲ್ಲಿಯೇ ಇಲಿ ಸ್ಯಾಂಡ್​ವಿಚ್​ ತಿನ್ನುತ್ತಿರುವುದು ಕಾಣಿಸಿತ್ತು!

ಕಳ್ಳ ಇಲ್ಲಿಯೇ ಇದ್ದಾನೆ ಎಂದು ಗೊತ್ತಾದಾಗ ಕಾರ್ಮಿಕರು, ಅದನ್ನು ಕಸಿದು ತಿನ್ನಲು ಹೋದರಂತೆ. ಆಗ ಇಬ್ಬರೂ ಆಯತಪ್ಪಿ ಕೆಳಗೆ ಬಿದ್ದು ಸತ್ತುಹೋಗಿದ್ದಾರೆ. ಹೀಗೆ ಸ್ಯಾಂಡ್​ವಿಚ್​ಗಾಗಿ ಕಾರ್ಮಿಕರು ಸತ್ತು ಹೋಗಿದ್ದರಿಂದ, ಅವರ ಸ್ಮರಣಾರ್ಥ ಸ್ಯಾಂಡ್​ವಿಚ್​ ತಿನ್ನುವ ಇಲಿಯ ಮೂರ್ತಿ ಕೆತ್ತಲಾಗಿದೆ. ಕಾರ್ಮಿಕರ ಮೂರ್ತಿ ಕೆತ್ತಲು ಆಗುವುದಿಲ್ಲ ಎಂದು ಇಲಿಗಳ ಮೂರ್ತಿಯನ್ನು ಕೆತ್ತಲಾಗಿದೆ. ಕೊನೆಗೆ ಇದು ಇಲಿಗಳ ಸ್ಮರಣಾರ್ಥ ಕೆತ್ತಿರುವ ಮೂರ್ತಿಗಳು ಎಂದೇ ಫೇಮಸ್​ ಆಗಿಬಿಟ್ಟಿದೆ. ಸ್ಯಾಂಡ್​ವಿಚ್​ ತುಂಡಿಗಾಗಿ ಎರಡು ಇಲಿಗಳು ಹೋರಾಡುತ್ತಿರುವುದನ್ನು ಚಿತ್ರಿಸುವ ಸಣ್ಣ ಮೂರ್ತಿ ಇದಾಗಿದೆ. ಅಂದಹಾಗೆ ಈ ಮೂರ್ತಿಯು ಲಂಡನ್ ನಗರದ ಈಸ್ಟ್‌ಚೀಪ್ ಮತ್ತು ಫೆನ್‌ಚರ್ಚ್ ಸ್ಟ್ರೀಟ್ ಅನ್ನು ಸಂಪರ್ಕಿಸುವ ಸಣ್ಣ ಬೀದಿಯಾದ ಫಿಲ್‌ಪಾಟ್ ಲೇನ್‌ನಲ್ಲಿದೆ. 

ನಿಮ್ಮ ಕನಸಿನ ಮಗು ಹುಟ್ಟಿಸುವ ಹೊಸ ಆವಿಷ್ಕಾರವಿದು! ಮಕ್ಕಳಿಲ್ಲದವರಿಗೂ ಭರವಸೆ- ಏನಿದು ಸಂಶೋಧನೆ? ಮಾಹಿತಿ ಇಲ್ಲಿದೆ...