ಪೊಲೀಸರಿಗೆ ತಲೆನೋವಾಗಿದ್ದ ವಿಐಪಿ ಕಾರು ಕಳ್ಳನನ್ನು ಯಾವುದೇ ಕುರುಹುಗಳಿಲ್ಲದೆ ಹಿಡಿಯುವುದು ಕಷ್ಟವಾಗಿತ್ತು. ಆದರೆ, ಕದ್ದ ಕಾರಿನೊಳಗೆ ಸಿಕ್ಕ ಸತ್ತ ಸೊಳ್ಳೆಯಿಂದ  ಅಸಲಿ ಕಳ್ಳ ಸಿಕ್ಕಿಬಿದ್ದಿದ್ದಾನೆ. ಈ ರೋಚಕ ಘಟನೆ ಹೇಗೆ ನಡೆಯಿತು ಎನ್ನೋದನ್ನು ನೋಡಿ!

ಕಾರಿನ ಕಳ್ಳತನ ಮಾಡುತ್ತಿದ್ದ ಭಯಾನಕ ಖದೀಮನನ್ನು ಹಿಡಿಯುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಯಾವುದೇ ಕುರುಹು ಬಿಡದ ಈ ಕಳ್ಳ ಘಟಾನುಘಟಿಗಳ ಕಾರುಗಳನ್ನು ಕದಿಯುತ್ತಿದ್ದ. ಆದರೆ ಸಿಸಿಟಿವಿಗೂ ಚಕಮ್‌ ನೀಡಿ ಪರಾರಿಯಾಗುವಲ್ಲಿ ಯಶಸ್ವಿಯಾಗುತ್ತಿದ್ದ. ಈತನನ್ನು ಹಿಡಿಯುವುದು ಪೊಲೀಸರಿಗೆ ಬಹಳ ದೊಡ್ಡ ತಲೆನೋವಾಗಿ ಹೋಗಿತ್ತು. ಸಾಮಾನ್ಯ ಜನರ ವಾಹನ ಕಳುವಾದರೆ, ಪೊಲೀಸರು ನಡೆದುಕೊಳ್ಳುವ ರೀತಿಗೂ ಅದೇ ವಿಐಪಿಗಳ ವಾಹನ ಕಳುವಾದರೆ ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದು ಬೇರೆ ಹೇಳಬೇಕಿಲ್ಲ. ಕೆಲವೊಂದು ಪ್ರದೇಶಗಳಲ್ಲಿ ಇಂಥವರೇ ಕಳ್ಳರು ಎಂದು ಪೊಲೀಸರಿಗೆ ತಿಳಿದಿರುತ್ತದೆ. ಏಕೆಂದರೆ ಅಂಥ ಖದೀಮರನ್ನು ದಿನನಿತ್ಯವೂ ತಮ್ಮ ಏರಿಯಾದಲ್ಲಿ ಅವರು ನೋಡಿರುತ್ತಾರೆ. ಆದರೆ, ಸಾಮಾನ್ಯ ಜನರು ದ್ವಿಚಕ್ರವಾಹನವನ್ನೋ ಅಥವಾ ಅದೇ ಜಾಗದಲ್ಲಿ ಇನ್ನೇನನ್ನೋ ಕಳೆದುಕೊಂಡಿದ್ದರೆ, ಅವರ ಚಪ್ಪಲಿ ಠಾಣೆಗೆ ಅಲೆದಾಡಿ ಸವೆದರೂ ಕಳ್ಳರು ಮಾತ್ರ ಕೆಲವು ಪೊಲೀಸರಿಗೆ ಸಿಗುವುದೇ ಇಲ್ಲ, ಆದರೆ ಗಣ್ಯರ ವಸ್ತುಗಳು ಕಳುವಾದರೆ ಮಾತ್ರ ಸ್ಥಿತಿ ವಿಭಿನ್ನವಾಗಿರುತ್ತದೆ ಎನ್ನುವ ಗಂಭೀರ ಆರೋಪಗಳು ಇವೆ.

ವಿಐಪಿಗಳಿಗೆ ಟ್ರೀಟ್‌ಮೆಂಟ್‌!

ಇಲ್ಲಾಗಿದ್ದೂ ಹಾಗೆ. ವಿಐಪಿಗಳ ಕಾರು, ಬೈಕುಗಳು ಯಾವಾಗ ಕಳುವಾಗತೊಡಗಿದವೋ ಆಗ ಪೊಲೀಸರು ಈ ಖದೀಮನ ಹಿಂದೆ ಬಿದ್ದರೂ ಅವನು ಸಿಗಲೇ ಇಲ್ಲ. ಆದರೆ ಅಂಥ ಖದೀಮನನ್ನು ಹುಡುಕಿ ಕೊಟ್ಟಿದ್ದು ಒಂದು ಸೊಳ್ಳೆ, ಅದೂ ಸತ್ತು ಹೋದ ಸೊಳ್ಳೆ ಎಂದರೆ ನಂಬುವುವುದು ಕಷ್ಟವಲ್ಲವೆ? ಆದರೆ ಫಿನ್‌ಲ್ಯಾಂಡ್‌ನ ಸೀನಾಜೋಕಿ ಪಟ್ಟಣದಲ್ಲಿ ಕೆಲ ವರ್ಷಗಳ ಹಿಂದೆ ನಡೆದ ಈ ಕುತೂಹಲದ ಘಟನೆ ಇದೀಗ ಮತ್ತೊಮ್ಮೆ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಅದೇನೆಂದರೆ, ಪೊಲೀಸರಿಗೆ ಕದ್ದಿರುವ ಕಾರು ಸಿಕ್ಕಿತ್ತು. ಆದರೆ ಕಳ್ಳ ಸಿಕ್ಕಿರಲಿಲ್ಲ. ದೊಡ್ಡ ಜನರ ಕಾರನ್ನು ಕದ್ದಾಗ ಕಳ್ಳನನ್ನು ಹಿಡಿಯದೇ ಇರಲು ಆಗತ್ತಾ? ಹುಡುಕಿ ಹುಡುಕಿ ಸುಸ್ತಾದರು. ಆದರೆ ಕಾರಿನೊಳಗೆ ಸತ್ತ ಸೊಳ್ಳೆಯೊಂದು ಕಳ್ಳನನ್ನು ಹಿಡಿದು ಕೊಟ್ಟಿದೆ.

ಶಂಕಿತ ವ್ಯಕ್ತಿಗಳ ಬಂಧನ

ಹೌದು. ಒಂದಿಷ್ಟು ಶಂಕಿತ ವ್ಯಕ್ತಿಗಳನ್ನು ಪೊಲೀಸರು ಬಂಧಿಸಿದ್ದರು. ಆದರೆ ಕಳ್ಳರು ಯಾರು ಎನ್ನುವುದು ಅವರಿಗೆ ತಿಳಿಯುವುದು ಕಷ್ಟವಾಯಿತು. ಆಗ ವಶಪಡಿಸಿಕೊಂಡಿರುವ ಕಾರಿನ ಡ್ರೈವರ್‌ ಸೀಟ್‌ನಲ್ಲಿ ಸತ್ತಿರುವ ಸೊಳ್ಳೆಯ ರಕ್ತ ಪರೀಕ್ಷೆ ಮಾಡಲಾಯಿತು. ಕಳ್ಳನ ರಕ್ತವನ್ನು ಹೀರಿ ಗಡದ್ದಾಗಿ ಹೊಟ್ಟೆ ಊದಿಕೊಂಡಿದ್ದ ಸೊಳ್ಳೆಯನ್ನು ಅಲ್ಲಿ ಸತ್ತುಬಿದ್ದಿತ್ತು. ಅದು ಕೊನೆಯದಾಗಿ ಹೀರಿದ ರಕ್ತವನ್ನು ಪರೀಕ್ಷೆಗೆ ಒಳಪಡಿಸಿ, ಎಲ್ಲಾ ಕಳ್ಳರ ರಕ್ತಗಳನ್ನು ಪರೀಕ್ಷಿಸಿದಾಗ, ಒಬ್ಬ ಕಳ್ಳನ ರಕ್ತಕ್ಕೆ ಅದು ಮ್ಯಾಚ್‌ ಆಯಿತು.

ಸೊಳ್ಳೆ ರಕ್ತ ಪರೀಕ್ಷೆ

ಸೈನ್ಸ್ ಇನ್ಫೋ ಪ್ರಕಾರ, ಸೊಳ್ಳೆಯನ್ನು ಹೆಲ್ಸಿಂಕಿಯಲ್ಲಿರುವ ರಾಷ್ಟ್ರೀಯ ತನಿಖಾ ದಳಕ್ಕೆ ಈ ಪ್ರಕರಣವನ್ನು ವರ್ಗಾಯಿಸಲಾಗಿತ್ತು. ಅಲ್ಲಿ ವಿಧಿವಿಜ್ಞಾನ ತಜ್ಞರು ಅದರೊಳಗಿನ ರಕ್ತವನ್ನು ವಿಶ್ಲೇಷಿಸಿದರು. ಡಿಎನ್‌ಎ ಪರಿಚಿತ ಶಂಕಿತ ವ್ಯಕ್ತಿಗೆ ಹೊಂದಿಕೆಯಾಯಿತು, ಪೊಲೀಸರಿಗೆ ಅವನನ್ನು ಪ್ರಶ್ನಿಸಲು ಅಗತ್ಯವಿರುವ ಪುರಾವೆಗಳನ್ನು ನೀಡಿತು. ಪೊಲೀಸರು ತಮ್ಮದೇ ರೀತಿಯಲ್ಲಿ ಪ್ರಶ್ನಿಸಿದಾಗ ಆತ ಕೊನೆಗೂ ತಪ್ಪನ್ನು ಒಪ್ಪಿಕೊಂಡ. ಆದರೆ ಪಾಪ ಸಾಕ್ಷಿ ಹೇಳಿದ ಸೊಳ್ಳೆ ಮಾತ್ರ ಸತ್ತು ಹೋಗಿತ್ತು!