ನವದೆಹಲಿ: 1971ರ ಬಳಿಕ ಇದೇ ಮೊದಲ ಬಾರಿಗೆ ಗಡಿ ನಿಯಂತ್ರಣ ರೇಖೆಯನ್ನು ದಾಟಿ ಪಾಕಿಸ್ತಾನದ ಮೇಲೆ ಭಾರತೀಯ ವಿಮಾನಗಳು ನಡೆಸಿದ ಬಾಂಬ್‌ ದಾಳಿ ಯುದ್ಧಕ್ಕೆ ವೇದಿಕೆಯಾಗಲಿದೆಯೇ?

48 ವರ್ಷಗಳ ಹಿಂದೆ ಪಾಕಿಸ್ತಾನದ ವಾಯುಸೀಮೆಯನ್ನು ಭಾರತ ಪ್ರವೇಶಿಸಿದ್ದಾಗ ಯುದ್ಧ ನಡೆಯುತ್ತಿತ್ತು. ಆಗಿನ ದಾಳಿ ಸಮರದ ಒಂದು ಭಾಗ ಆಗಿತ್ತು. ಆದರೆ ಶಾಂತಿ ಸಮಯದಲ್ಲಿ ಭಾರತ ಈ ರೀತಿ ಏಕಾಏಕಿ ನುಗ್ಗಿರುವುದು ಪಾಕಿಸ್ತಾನಕ್ಕೆ ದೊಡ್ಡ ಮುಖಭಂಗವೇ ಸರಿ. 2016ರ ಸೆಪ್ಟೆಂಬರ್‌ನಲ್ಲಿ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ ದಾಳಿ ನಡೆಸಿದ್ದ ಭಾರತ, ಈಗ ಪಾಕಿಸ್ತಾನದೊಳಕ್ಕೇ ನೇರ ಲಗ್ಗೆ ಇಟ್ಟಿದೆ. ಆದರೆ ಅದನ್ನು ಯುದ್ಧವಾಗಿ ಪರಿವರ್ತಿಸಬೇಕೋ, ಇಲ್ಲಿಗೇ ಬಿಟ್ಟುಬಿಡಬೇಕೋ ಎಂಬುದು ಪಾಕಿಸ್ತಾನದ ಕೈಯಲ್ಲಿದೆ. ಆ ದೇಶ ಮುಂದೆ ಯಾವ ಹೆಜ್ಜೆ ಇಡುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಪೆಟ್ಟು ತಿಂದರೂ ಬುದ್ಧಿ ಕಲಿಯದ ಹೇಡಿ ಪಾಕ್, ಭಾರತೀಯ ಸೇನಾ ನೆಲೆಗಳ ಮೇಲೆ ಗುಂಡಿನ ದಾಳಿ

ಪಾಕಿಸ್ತಾನದ ಭೂಭಾಗದೊಳಕ್ಕೆ ನುಗ್ಗುವಂತಹ ನಿರ್ಧಾರವನ್ನು ಭಾರತ ಕೈಗೊಂಡಿದ್ದರೆ, ಅದು ಏಕಾಏಕಿ ಅಲ್ಲ. ಮಾನಸಿಕವಾಗಿ, ರಾಜತಾಂತ್ರಿಕವಾಗಿ, ಆರ್ಥಿಕವಾಗಿ ಸಜ್ಜಾಗಿಯೇ ಇಂತಹ ಹೆಜ್ಜೆಗಳನ್ನು ಇಡಬೇಕಾಗುತ್ತದೆ, ಭಾರತ ಇಟ್ಟಿದೆ ಕೂಡ. ಆದರೆ ಪಾಕಿಸ್ತಾನ ವಿಚಾರದಲ್ಲಿ ಆ ರೀತಿ ಹೇಳಲು ಬರುವುದಿಲ್ಲ. ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತ ಹೆಚ್ಚೆಂದರೆ ಪಾಕ್‌ ಆಕ್ರಮಿತ ಕಾಶ್ಮೀರದ ಮೇಲೆ ಸರ್ಜಿಕಲ್‌ ದಾಳಿ ನಡೆಸಬಹುದು ಎಂದು ಪಾಕಿಸ್ತಾನ ಅತೀವ ‘ವಿಶ್ವಾಸ’ದಲ್ಲಿತ್ತು. ಅದಕ್ಕೆ ಭಂಗ ಉಂಟು ಮಾಡಿರುವ ಭಾರತ, ನೇರವಾಗಿ ಪಾಕಿಸ್ತಾನದೊಳಕ್ಕೇ ನುಗ್ಗಿ ಬಾಂಬ್‌ ಹಾಕಿದೆ.

ಈಗ ಭಾರತದ ಮೇಲೆ ಸೇಡು ತೀರಿಸಿಕೊಳ್ಳಬೇಕು ಎಂದಾದಲ್ಲಿ ಪಾಕಿಸ್ತಾನವೂ ಸಿದ್ಧತೆ ನಡೆಸಬೇಕಾಗುತ್ತದೆ. ಆದರೆ ಭಾರತದಷ್ಟುಅನುಕೂಲಕರ ಸ್ಥಿತಿ ಆ ದೇಶಕ್ಕೆ ಇಲ್ಲ. ಮೊದಲನೆಯದಾಗಿ, ಪಾಕ್‌ ತೀವ್ರ ಆರ್ಥಿಕ ಸಂಕಷ್ಟದಲ್ಲಿದೆ. ಭಯೋತ್ಪಾದನೆಯಿಂದ ಹೆಸರು ಕೆಡಿಸಿಕೊಂಡಿರುವ ಪಾಕಿಸ್ತಾನವನ್ನು ಚೀನಾ ಹೊರತುಪಡಿಸಿ ಬೇರಾವ ದೇಶವೂ ನಂಬುವ ಸ್ಥಿತಿಯಲ್ಲಿಲ್ಲ. ಭಾರತ ಹೊಂದಿರುವ ಶಸ್ತ್ರಾಸ್ತ್ರ, ಸೇನಾ ಬಲಕ್ಕೆ ಹೋಲಿಸಿದರೆ ಪಾಕಿಸ್ತಾನದ್ದು ಏನೇನೂ ಅಲ್ಲ.

ಪಾಕ್ ದಾಳಿಯಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿನಿ, ಅಸಲಿತನ ಬೇರೆಯೇ ಇದೆ!

ಎರಡೂವರೆ ವರ್ಷಗಳ ಹಿಂದೆ ನಡೆದಿದ್ದ ಸರ್ಜಿಕಲ್‌ ದಾಳಿ ಸಂದರ್ಭದಲ್ಲಿ ಹೇಳಿಕೆಯ ಸಮರವನ್ನು ಮಾತ್ರ ನಡೆಸಿದ್ದ ಪಾಕಿಸ್ತಾನ, ಈ ಬಾರಿಯೂ ಅದೇ ತಂತ್ರದ ಮೊರೆ ಹೋಗುವ ಸಾಧ್ಯತೆಯೂ ಇದೆ. ಆದರೆ ಆ ದಾಳಿ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ನಡೆದಿತ್ತು. ಆದರೆ ಈ ಬಾರಿಯ ದಾಳಿ ಪಾಕ್‌ ನೆಲದಲ್ಲೇ ನಡೆದಿರುವುದರಿಂದ ಪಾಕಿಸ್ತಾನಿಯರು ಕೂಡ ಭಾರತದ ವಿರುದ್ಧ ಪ್ರತೀಕಾರ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುವಂತಾಗಿದೆ.

ಆದರೆ ಪಾಕಿಸ್ತಾನ ಆ ಹೆಜ್ಜೆ ಇಡದಂತಹ ಅನಿವಾರ‍್ಯ ಸ್ಥಿತಿಯಲ್ಲಿದೆ. ಯುದ್ಧ ಸಾರದೇ ಹೋದರೆ ಸ್ವದೇಶಿಗರ ಆಕ್ರೋಶ, ವಿದೇಶದಲ್ಲಿ ಮುಖಭಂಗ ಎದುರಿಸಬೇಕು. ಯುದ್ಧ ಘೋಷಿಸಿದರೆ ಭೀಕರ ಪರಿಸ್ಥಿತಿಗೆ ಬೀಳಬೇಕು ಎಂಬಂತಹ ಅಡಕತ್ತರಿಯಲ್ಲಿದೆ ಪಾಕಿಸ್ತಾನ. ಹೀಗಾಗಿ ಪಾಕಿಸ್ತಾನ ನಿಜಕ್ಕೂ ಭಾರತದ ಮೇಲೆ ಯುದ್ಧ ಸಾರುತ್ತಾ ಎಂಬುದು ಯಕ್ಷಪ್ರಶ್ನೆಯಾಗಿದೆ.